ಟಿವಿಯಲ್ಲಿ ಮಾತನಾಡಿದರೆ, ಫೇಸ್ ಬುಕ್ಕಿನಲ್ಲಿ ಬರೆದರೆ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ!
2010 ರಿಂದ ಮೂಡಬಿದ್ರೆ ಮತ್ತು ಕಾರ್ಕಳ ಜನರ ಸರಕಾರಿ ಬಸ್ಸಿನ ಬೇಡಿಕೆ ಕೊನೆಗೂ ಈಡೇರುವ ಲಕ್ಷಣಗಳು ಕಾಣುತ್ತಿವೆ. ಈ ಮೂಲಕ ಬರುವ ದಿನಗಳಲ್ಲಿ ಮೂಡಬಿದ್ರೆ ಮತ್ತು ಕಾರ್ಕಳಕ್ಕೆ ಹೋಗಿ ಬರುವ ಜನಸಾಮಾನ್ಯರಿಗೆ ಒಂದಿಷ್ಟು ನಿಶ್ಚಿಂತೆ ಕಾಣಲಿದೆ. ಇಷ್ಟು ದಿನ ಈ ರೂಟುಗಳಲ್ಲಿ ಸರಕಾರಿ ಬಸ್ಸುಗಳನ್ನು ಓಡಿಸುವ ಜಿಲ್ಲಾಡಳಿತದ ನಿರ್ಧಾರಕ್ಕೆ ಈ ಖಾಸಗಿ ಬಸ್ಸಿನ ಮಾಲೀಕರು ಅಡ್ಡಗಾಲು ಹಾಕುತ್ತಿದ್ದರು. ಅವರು ಅಡ್ಡಗಾಲು ಇಟ್ಟರೆ ಆರ್ ಟಿಎ ಅಧಿಕಾರಿಗಳು ಮುಗ್ಗರಿಸಿ ಬೀಳುತ್ತಿದ್ದ ಕಾರಣ ಸರಕಾರಿ ಬಸ್ಸುಗಳು ಈ ರೂಟಿನಲ್ಲಿ ಓಡುವುದು ಸಾಧ್ಯವಾಗುತ್ತಿರಲಿಲ್ಲ. ಒಂದು ಧೃಡ ನಿರ್ಧಾರ ತಾಳುವ ಜಿಲ್ಲಾಧಿಕಾರಿಯ ಕೊರತೆ ಎದ್ದು ಕಾಣುತ್ತಿತ್ತು. ಅಂತಿಮವಾಗಿ ಡಾ|ಜಗದೀಶ್ ಖಾಸಗಿ ಬಸ್ಸು ಮಾಲೀಕರ ಬ್ಯಾಕ್ ಡೋರ್ ಪ್ರಯತ್ನಕ್ಕೆ ಅಡ್ಡ ನಿಂತಿದ್ದಾರೆ. ಮೂಡಬಿದ್ರೆ-ಕಾರ್ಕಳ ರೂಟಿನಲ್ಲಿ ಸರಕಾರಿ ಬಸ್ಸುಗಳು ಓಡುವ ಸಮಯ ಸದ್ಯ ಹತ್ತಿರದಲ್ಲಿದೆ.
ಆದ್ದರಿಂದ ಒಟ್ಟಿನಲ್ಲಿ ಈ ಬಾರಿಯ ಸಾರ್ವಜನಿಕರ ಕುಂದುಕೊರತೆ ಸಭೆ ಬಹುತೇಕ ಯಶಸ್ವಿಯಾಗಿ ನಡೆದಿದೆ. ಈಗ ಪ್ರಶ್ನೆ ಉಳಿದಿರುವುದು ಬಸ್ಸುಗಳಲ್ಲಿ ಪ್ರಯಾಣಿಸುವಾಗ ಎದುರಿಸುವ ಹಲವು ಸಮಸ್ಯೆಗಳನ್ನು ಯಾರಿಗೆ ಹೇಳುವುದು? ಅನೇಕರು ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ನನ್ನನ್ನು ಪ್ರಶ್ನಿಸಿದ್ದಾರೆ. ಮೊನ್ನೆ ನಾನು ಟಿವಿ ಚಾನೆಲ್ ಒಂದರಲ್ಲಿ ಕೂತಿದ್ದಾಗ ತಮ್ಮ ಅಹವಾಲುಗಳನ್ನು ಹೇಳಿದ್ದಾರೆ. ಆದರೆ ಈ ಬಸ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಮ್ಮದು ಕೂಡ ಒಂದಿಷ್ಟು ಪಾತ್ರ ಇರಲಿ ಎಂದು ಬಯಸುವವರಿಗೆ ಹೇಳುವುದೇನೆಂದರೆ ನೀವು ಕೂಡ ಇಂತಹ ಸಭೆಗಳಲ್ಲಿ ಭಾಗವಹಿಸಬೇಕು. ಅಷ್ಟಕ್ಕೂ ಈ ಸಭೆಗಳು ಪ್ರತಿವಾರ ಇರುವುದಿಲ್ಲ. ಎಲ್ಲಿಯಾದರೂ ಅಪರೂಪಕ್ಕೊಮ್ಮೆ ಮಾತ್ರ ಇರುತ್ತದೆ. ಆದರೆ ಯಾವಾಗ ಇರುತ್ತದೆಯೋ ಆಗ ಜಿಲ್ಲಾಧಿಕಾರಿಗಳು ಆ ಸಭೆಯಲ್ಲಿ ಇರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಇರುತ್ತಾರೆ. ಆರ್ ಟಿಒ ಇರುತ್ತಾರೆ. ಎಲ್ಲರೂ ಕೂಡ ನೀವು ಹೇಳಿದ್ದನ್ನು ಕೇಳುತ್ತಾರೆ. ನಿಮಗೆ ಅಲ್ಲಿಯೇ ಪರಿಹಾರ ಸಿಗುತ್ತದೆ. ನೀವು ನನ್ನ ಬಳಿ ಟಿವಿಯಲ್ಲಿ, ಫೇಸ್ ಬುಕ್ಕಿನಲ್ಲಿ ಹೇಳಿದರೂ ಎಲ್ಲ ಸಮಸ್ಯೆಗಳನ್ನು ನಾನೊಬ್ಬನೇ ಅಲ್ಲಿ ವಿವರಿಸಲು ಆಗುವುದಿಲ್ಲ. ಯಾಕೆಂದರೆ ಅಲ್ಲಿ ರಾಜಕಾರಣಿಗಳಂತೆ ಗಂಟೆಗಟ್ಟಲೆ ಭಾಷಣಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಎರಡು ಮೂರು ಸಮಸ್ಯೆಗಳನ್ನು ಸಂಕ್ಷೀಪ್ತವಾಗಿ ಹೇಳಿದ ಕೂಡಲೇ ನನಗೆ ಮಾತನಾಡುವ ಅವಕಾಶವನ್ನು ಮೊಟಕುಗೊಳಿಸಲಾಗುತ್ತದೆ. ನಂತರ ಬೇರೆಯವರಿಗೆ ಅವಕಾಶ ಸಿಗುತ್ತದೆ. ಅಷ್ಟಕ್ಕೂ ಅಲ್ಲಿ ಬರುವ ಎಲ್ಲರೂ ಕೂಡ ಜನಸಾಮಾನ್ಯರ ಪರವಾಗಿ ಮಾತನಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ. ಹೆಚ್ಚಿನವರು ಬಸ್ಸಿನ ಮಾಲೀಕರ, ಸಿಬ್ಬಂದಿಗಳ ಪರವಾಗಿ ಮಾತನಾಡುತ್ತಾರೆ. ನಾನು ಒಬ್ಬನೇ ನಿಂತು ಎಲ್ಲಾ ಸಮಸ್ಯೆಗಳನ್ನು ಅಲ್ಲಿ ಹೇಳಬೇಕು ಎಂದು ಮನಸ್ಸಿದ್ದರೂ ಅಲ್ಲಿ ಆಗುವುದಿಲ್ಲವಾದ್ದರಿಂದ ನೀವು ನನ್ನ ಜೊತೆ ಸೇರಬೇಕು. ನಿಮಗೆ ಈ ಸಭೆ ಯಾವಾಗ ಇರುತ್ತೆ ಎಂದು ನಾನು ಮೊದಲೇ ನನ್ನ ಫೇಸ್ ಬುಕ್ಕಿನಲ್ಲಿ ತಿಳಿಸುತ್ತೇನೆ. ನಿಮ್ಮ ಅಮೂಲ್ಯ ಒಂದಿಷ್ಟು ಸಮಯ ಇದಕ್ಕಾಗಿ ವಿನಿಯೋಗಿಸಿ. ಜನ ಹೀಗೆ ಸಭೆಗಳಿಗೆ ಬರುವುದಿಲ್ಲ ಎಂದು ಗೊತ್ತಿರುವುದರಿಂದ ಬಸ್ ಮಾಲೀಕರು ತಮ್ಮ ದಂಡಿನೊಂದಿಗೆ ಬಂದು ತಮ್ಮ ವಾದ ಮಂಡಿಸುತ್ತಾರೆ ಮತ್ತು ತಮ್ಮದೇ ಸರಿ ಎಂದು ವಾದಿಸುತ್ತಾರೆ.
ಇನ್ನು ನೀವು ಯಾವುದೇ ಬಸ್ಸಿನಲ್ಲಿ ಹೋಗುವಾಗ ಸಮಸ್ಯೆ ಆದರೆ ಸಮಸ್ಯೆ ಎಂದರೆ ಟಿಕೇಟ್ ಸಿಗಲಿಲ್ಲ ಎಂದೋ, ಚೆಂಜ್ ಕೊಡಲಿಲ್ಲ ಎಂದೋ, ನಿಮ್ಮ ವಿರುದ್ಧ ಕಳಪೆಯಾಗಿ ಮಾತನಾಡಿದ್ದಾರೆ ಎಂದೋ, ಇಳಿಯುವಾಗ, ಹತ್ತುವಾಗ ಹಂಗಿಸಿದರು ಎಂದೋ, ಟ್ರಿಪ್ ಕ್ಯಾನ್ಸಲ್ ಮಾಡಿದರು ಎಂದೋ, ಕ್ರಾಸಿಂಗ್ ಮಾಡಿದರು ಹೀಗೆ ಏನೇ ಆದರೂ ನೀವು ಮಾಡಬೇಕಾಗಿರುವುದು ಸಿಂಪಲ್. ಯಾವ ಬಸ್ಸಿನಲ್ಲಿ ನಿಮಗೆ ಸಮಸ್ಯೆಯಾಗಿದೆಯೋ ಆ ಬಸ್ಸಿನ ರಿಜಿಸ್ಟ್ರೇಶನ್ ನಂಬ್ರ ಅಂದರೆ ಕೆಎ-19 ,….. ಇರುತ್ತದೆಯಲ್ಲ ಅಷ್ಟು ಸಾಕು. ಅದನ್ನು ನೋಟ್ ಮಾಡಿ, ನಂತರ ಒಂದು ಪೋಸ್ಟ್ ಕಾರ್ಡ ತೆಗೆದುಕೊಳ್ಳಿ. ಅದರಲ್ಲಿ ವಿಷಯ ಬರೆದು ನಂಬ್ರ ಬರೆದು ಸ್ಥಳೀಯ ಆರ್ ಟಿಒ ಕಚೇರಿಗೆ ಕೊಟ್ಟು ಎನ್ ಕಾಲೇಜ್ ಮೆಂಟ್ ಕಾರ್ಡ ತೆಗೆದುಕೊಳ್ಳಿ. ಒಂದು ವೇಳೆ ನಿಮ್ಮ ಹತ್ತಿರದಲ್ಲಿ ಟ್ರಾಫಿಕ್ ಪೊಲೀಸ್ ಸ್ಟೇಶನ್ ಇದ್ದರೆ ಅಲ್ಲಿಗೂ ಕೊಡಬಹುದು. ಪಾಂಡೇಶ್ವರ, ಕದ್ರಿ, ಸುರತ್ಕಲ್ ನಲ್ಲಿ ಟ್ರಾಫಿಕ್ ಪೊಲೀಸ್ ಸ್ಟೇಶನ್ ಗಳಿವೆ. ನಿಮಗೆ ಮುಂದೆ ಯಾವತ್ತಾದರೂ ನೋಟಿಸ್ ಬರುತ್ತದೆ. ಆತಂಕ ಪಡುವ ಅಗತ್ಯ ಇಲ್ಲ. ನನಗೆ ಬೇಕಾದರೂ ಕಾಲ್ ಮಾಡಿ. ನಾನು ಸಲಹೆ ಕೊಡುತ್ತೇನೆ. ಒಂದು ವೇಳೆ ಫ್ರೀ ಇದ್ದರೆ ನಿಮ್ಮೊಂದಿಗೆ ಬರುತ್ತೇನೆ. ನೋಡೋಣ, ನಿಮಗೆ ಸಮಸ್ಯೆ ಮಾಡಿದವರಿಗೆ ಏನಾಗುತ್ತದೆ ಅಂತ.
Leave A Reply