ಪಚ್ಚನಾಡಿಯ ಡಂಪಿಂಗ್ ಯಾರ್ಡಿಗೆ ಪರ್ಯಾಯ ಜಾಗ ಹುಡುಕುವ ನಾಟಕ ಶುರುವಾಗಲಿದೆ!!
ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ ಎನ್ ವಿಜಯಭಾಸ್ಕರ್ ಅವರು ಮಂಗಳೂರಿಗೆ ಬಂದು ಪಚ್ಚನಾಡಿಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ “ಡಂಪಿಂಗ್ ಯಾರ್ಡ್ ಗೆ ಪರ್ಯಾಯ ಜಾಗ ಹುಡುಕಿ” ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ಸೂಚಿಸಿ ಹೊರಟು ಹೋಗಿದ್ದಾರೆ. ಅವರು ಸುಲಭದಲ್ಲಿ ಹೇಳಿ ಹೋಗಿರಬಹುದು. ಆದರೆ ಒಂದು ಮಾತು ಹೇಳ್ತಿನಿ. ಇಡೀ ಜಿಲ್ಲಾಡಳಿತ, ಪಾಲಿಕೆಯ ಎಲ್ಲಾ ಅಧಿಕಾರಿಗಳು ತಲೆ ಕೆಳಗೆ ಮಾಡಿ ನಿಂತರೂ ಇವರಿಗೆ ಪರ್ಯಾಯ ಜಾಗ ಸಿಗುವುದು ಅಷ್ಟರಲ್ಲಿಯೇ ಇದೆ. ಏಕೆಂದರೆ ಪಚ್ಚನಾಡಿ, ಕುಡುಪು, ಮಂದಾರದ ಸಹಿತ ಆಸುಪಾಸಿನ ಜನರಿಗೆ ಡಂಪಿಂಗ್ ಯಾರ್ಡ್ ಕಾಲ ಬುಡದ ಕೆಳಗೆ ಇರುವುದರ ಸಂಕಷ್ಟ ಏನು ಎನ್ನುವುದರ ಅರಿವಾಗಿದೆ. ಅದನ್ನು ಮುಕ್ಕಾಲು ವರ್ಷದಿಂದ ಇಡೀ ಮಂಗಳೂರು ನೋಡಿದೆ. ಆದ್ದರಿಂದ ಡಂಪಿಂಗ್ ಯಾರ್ಡ್ ಮಾಡ್ತೀವಿ ಎಂದು ಹೊರಟರೆ ನಗರದ ಆಸುಪಾಸಿನಲ್ಲಿ 50-60 ಏಕರೆ ಜಾಗ ಏಲ್ಲಿಯೂ ಸಿಗುವುದಿಲ್ಲ. ಖಾಸಗಿ ಜಾಗವನ್ನು ಖರೀದಿಸಲು ಇವತ್ತಿನ ಮಾರುಕಟ್ಟೆ ಧಾರಣೆಯ ಪ್ರಕಾರ ಸರಕಾರಕ್ಕೆ ಸಾಧ್ಯವಿಲ್ಲ. ಅದರ ಬದಲು ನಾನು ಈಗ ಹೇಳುವ ಕೆಲವು ಸಲಹೆಗಳನ್ನು ಸರಕಾರ ಪರಾಮರ್ಶಿಸಿದರೆ ಹಿಮಾಲಯದಂತೆ ಕಾಣುತ್ತಿರುವ ಈ ಸಮಸ್ಯೆ ಕರಗಿ ನೀರಾಗಬಹುದು. ಸರಕಾರದ ಗಮನಕ್ಕೆ ತರುವ ಕೆಲಸ ಇಲ್ಲಿನ ಶಾಸಕರದ್ದು.
ಮೊದಲನೇಯದಾಗಿ ಈಗ ಸರಾಸರಿ 200 ಟನ್ ತ್ಯಾಜ್ಯ ಉತ್ಪತ್ತಿಯಾಗಿ ಪಚ್ಚನಾಡಿ ಡಂಪಿಂಗ್ ಯಾರ್ಡ್ ಸೇರುತ್ತಿದೆ. ಇನ್ನೊಂದು 15-20 ವರ್ಷಗಳಲ್ಲಿ ತ್ಯಾಜ್ಯದ ಒಟ್ಟು ಪ್ರಮಾಣ 500 ಟನ್ ಗೆ ಬಂದು ನಿಲ್ಲಬಹುದು. ಈ ತ್ಯಾಜ್ಯದಿಂದ ಡಾಮರು ಉತ್ಪಾದನೆ ಮಾಡಿ ಕೊಡ್ತಿವೆ. ಅವಕಾಶ ಮಾಡಿ ಕೊಡಿ ಎಂದು ಖಾಸಗಿ ಸಂಸ್ಥೆಗಳು ಈಗಾಗಲೇ ಮುಂದೆ ಬಂದಿವೆ. ಅದೇ ರೀತಿ ವೆಟ್ ವೇಸ್ಟ್ ನಿಂದ ಬಯೋ ಗ್ಯಾಸ್ ತಯಾರಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು. ಡ್ರೈ ವೇಸ್ಟ್ ನಿಂದ ಗೊಬ್ಬರ ತಯಾರಿಸಬಹುದು. ಗೊಬ್ಬರ ಉತ್ಪಾದನೆ ಅದೀಗ ಸರಿಯಾದ ಸಮರ್ಪಕ ಪ್ರಮಾಣದಲ್ಲಿ ಆಗುತ್ತಿಲ್ಲ. ಇದೆಲ್ಲವನ್ನು ಖಾಸಗಿಯವರಿಗೆ ವಹಿಸಿ ಕೊಡಿ. ಅವರು ಮಾಡಲು ರೆಡಿ ಇದ್ದಾರೆ.
ಎರಡನೇಯದಾಗಿ ಈಗ ಡಂಪಿಂಗ್ ಯಾರ್ಡ್ ಇರುವ ರಸ್ತೆಯ ಒಂದು ಪಾಶ್ವದಲ್ಲಿ ಸುಮಾರು 20 ವರ್ಷದಿಂದ ಹಾಕುತ್ತಿರುವ ತ್ಯಾಜ್ಯ ಗೊಬ್ಬರ ಆಗಿದೆ. ಅದನ್ನು ವಿಲೇವಾರಿ ಮಾಡಿದರೆ ಆ ಜಾಗ ಸರಕಾರಕ್ಕೆ ಸಿಗುತ್ತದೆ. ಇನ್ನು ಈಗ ಬರುವ ತ್ಯಾಜ್ಯವನ್ನು ನಾನು ಮೇಲೆ ಹೇಳಿದಂತೆ ಡಾಮರು, ಬಯೋ ಗ್ಯಾಸ್ ವಿದ್ಯುತ್, ಗೊಬ್ಬರ ಮಾಡಲು ವೈಜ್ಞಾನಿಕವಾಗಿ ಬಳಸಿದರೆ ಆಗ ಡಂಪ್ ಮಾಡುವ ಜಾಗ ಈಗ ಇರುವ ರೂಪಕ್ಕೆ ತಿರುಗುವುದಿಲ್ಲ. ಇನ್ನು ಮಂದಾರದ ಆಸುಪಾಸಿನಲ್ಲಿ ಈಗ ಸಂಕಷ್ಟ ಅನುಭವಿಸುತ್ತಿರುವ ಜನ ಜಾಗವನ್ನು ಸರಕಾರಕ್ಕೆ ಮಾರಲು ತಯಾರಾಗಿದ್ದಾರೆ. ಅದನ್ನು ಖರೀದಿಸಿದರೆ ಆಗ ಇನ್ನಷ್ಟು ಜಾಗ ಸಿಗುತ್ತದೆ. ಇದರಿಂದ ಡಂಪಿಂಗ್ ಯಾರ್ಡ್ ಅನ್ನು ಅಲ್ಲಿಯೇ ಉಳಿಸಬಹುದು. ಆದರೆ ನಮ್ಮ ಪಾಲಿಕೆ, ಜಿಲ್ಲಾಡಳಿತ ಇಂತಹ ಐಡಿಯಾಗಳನ್ನು ಅನುಷ್ಟಾನ ಮಾಡಲು ಹೋಗುವುದಿಲ್ಲ. ನನ್ನಂತವರು ಕೊಡಲು ಹೋದರೆ ನಮ್ಮ ಬಾಯಿಯನ್ನು ಕೆಲವರು ಮುಚ್ಚಿ ಹಾಕುತ್ತಾರೆ. ನಾನು ವಿಜಯ ಭಾಸ್ಕರ್, ಸಿಂಧೂ ರೂಪೇಶ್, ಅಜಿತ್ ಕುಮಾರ್ ಹೆಗ್ಡೆಯವರಷ್ಟು ವಿದ್ಯಾಭ್ಯಾಸ ಪಡೆಯದೇ ಇರಬಹುದು. ಆದರೆ ಸಮಸ್ಯೆಯನ್ನು ಹೊದ್ದುಕೊಂಡು ವರ್ಷಗಟ್ಟಲೆ ಮಲಗುವುದಕ್ಕಿಂತ ಔಟ್ ಆಫ್ ದಿ ಬಾಕ್ಸ್ ಪರಿಹರಿಸಲು ಪ್ರಯತ್ನಿಸಬಹುದಲ್ಲ.
ಆದರೆ ಸಮಸ್ಯೆ ಪರಿಹಾರ ಆಗುವುದು ಪಾಲಿಕೆಯ ಕೆಳಹಂತದ ಅಧಿಕಾರಿಗಳಿಂದ ಜಿಲ್ಲಾಡಳಿತವನ್ನು ಸೇರಿಸಿ ನಮ್ಮ ರಾಜ್ಯ ಸರಕಾರಕ್ಕೂ ಬೇಕಾಗಿಲ್ಲ. ಯಾಕೆಂದರೆ ಒಮ್ಮೆ ಸಮಸ್ಯೆ ಮುಗಿದರೆ ಇವರು ಹಬ್ಬ ಮಾಡುವುದು ಹೇಗೆ? ಇತ್ತೀಚೆಗೆ ನಾನು ಒಬ್ಬರನ್ನು ಭೇಟಿಯಾಗಿದ್ದೆ. ಅವರು ಮಂಗಳೂರಿನ ಮನೆಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ ಅದರಿಂದ ಪ್ಲಾಸ್ಟಿಕ್ ಬೇರ್ಪಡಿಸಿ ಡಾಮರು ಮಾಡಲು ಸಾಧ್ಯವಿರುವ ಟೆಕ್ನಾಲಜಿಯನ್ನು ಸಂಶೋಧಿಸಿದ್ದಾರೆ. ಒಂದು ವೇಳೆ ಜನರು ಇವರ ಘಟಕಕ್ಕೆ ತ್ಯಾಜ್ಯ ತಂದುಕೊಟ್ಟರೆ ಇವರು ತೂಕ ಹಾಕಿ ನಿಗದಿಗೊಳಿಸಲಾಗುವ ಹಣವನ್ನು ಕೂಡ ಸಂದಾಯ ಮಾಡುವ ಸಾಧ್ಯತೆ ಇದೆಯಂತೆ. ಸರಕಾರ ಇವರಿಗೆ ಪಚ್ಚನಾಡಿಯಲ್ಲಿ ಅದಕ್ಕೆ ಅವಕಾಶ ಮಾಡಿಕೊಡಬೇಕು. ಕೊಡುತ್ತದೆಯಾ? ಇಲ್ಲಾ. ಯಾಕೆ? ಮೊದಲನೇಯದಾಗಿ ಸಮಸ್ಯೆ ಎಲ್ಲರಿಗೂ ಜೀವಂತವಾಗಿರಬೇಕು. ಕಾಲಕಾಲಕ್ಕೆ ಆಂಟೋನಿಯವರ ಕಪ್ಪ ಸಂದಾಯವಾಗುತ್ತಲೇ ಇರಬೇಕು. ಇನ್ನು ಆಗಾಗ ಪಚ್ಚನಾಡಿ ಡಂಪಿಂಗ್ ಯಾರ್ಡಿಗೆ ಬೆಂಕಿ ಬೀಳುತ್ತಲೇ ಇರಬೇಕು. ಇವರು ನಂದಿಸುತ್ತಲೇ ಇರಬೇಕು. ಬಿಲ್ ದೊಡ್ಡದಾಗುತ್ತಲೇ ಇರಬೇಕು. ಇನ್ನು ಏನೇನೋ ಇದೆ. ಒಂದು ವ್ಯವಸ್ಥೆಯಲ್ಲಿ ನಾಟಕ ಮಾಡುವವರೇ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿರುವಾಗ ನಾವು ನೀವು ವಾಸ್ತವವನ್ನು ನಂಬಿ ಕಾಯುವುದೇ ದೊಡ್ಡ ತಮಾಷೆ!
Leave A Reply