ಮುಖ್ಯಮಂತ್ರಿ ಯಡಿಯೂರಪ್ಪನವರು ಎತ್ತಿನಹೊಳೆ ತಿರುವು ಯೋಜನೆಯ ಕಾಮಗಾರಿಗೆ ಈ ಬಜೆಟಿನಲ್ಲಿ 1500 ಕೋಟಿ ರೂಪಾಯಿ ಇಟ್ಟಿದ್ದಾರೆ. ಈ ಮೂಲಕ ತಾವು ಆ ಯೋಜನೆಯ ಪರ ಇದ್ದೇವೆ ಎಂದು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾರತೀಯ ಜನತಾ ಪಾರ್ಟಿಯ ಏಳು ಜನ ಶಾಸಕರು ಗೆದ್ದು ವಿಧಾನಸಭೆಯಲ್ಲಿ ಇದ್ದರೂ ಬಯಲುಸೀಮೆಯ ಶಾಸಕರ ಪವರ್ ಏನೆಂದು ಇವತ್ತು ಮತ್ತೆ ಗೊತ್ತಾಗಿದೆ. ಹಾಗೆಂದು ನೇತ್ರಾವತಿಯಿಂದ ಬೇರೆ ಜಿಲ್ಲೆಯವರಿಗೆ ಕುಡಿಯುವ ನೀರು ಕೊಡುವುದು ತಪ್ಪು ಎಂದು ನಾವ್ಯಾರು ಹೇಳುತ್ತಿಲ್ಲ. ಆದರೆ ಮಂಗಳೂರಿಗೆ ಸಾಕಷ್ಟು ನೀರಿನ ಕೊರತೆ ಮುಂದಿನ ದಿನಗಳಲ್ಲಿ ಕಂಡುಬರುವ ಸಂಭವ ಮತ್ತು ಎಪ್ರಿಲ್-ಮೇ ತಿಂಗಳ ಮೊದಲೇ ನಾವು ಕುಡಿಯುವ ನೀರನ್ನು ಬಂಗಾರದ ಹನಿಗಳಂತೆ ಬಳಸಬೇಕಾದ ಪರಿಸ್ಥಿತಿಯ ನಡುವೆ ಎತ್ತಿನಹೊಳೆ ತಿರುವಿನ ಬದಲಿಗೆ ಪರ್ಯಾಯ ಏನಾದರೂ ಚಿಂತಿಸಬಹುದಿತ್ತು ಎನ್ನುವುದು ನನ್ನ ವೈಯಕ್ತಿಕ ಸಲಹೆ. ಮಳೆಗಾಲದಲ್ಲಿ ಮಾತ್ರ ನೀರನ್ನು ತೆಗೆದುಕೊಂಡು ಹೋಗಲಾಗುವುದು ಎಂದು ಎಷ್ಟೇ ಇವರು ಹೇಳಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಪರಿಸರ ಪ್ರೇಮಿಗಳು ಇಲ್ಲ. ಸ್ವತ: ಮಾಜಿ ಸ್ವೀಕರ್ ರಮೇಶ್ ಕುಮಾರ್ ಅವರೇ ಬಂದು ನೇತ್ರಾವತಿ ಮತ್ತು ಎತ್ತಿನಹೊಳೆ ತಿರುವಿನ ಸ್ಥಿತಿಗತಿ ವೀಕ್ಷಿಸಿ ಇದು ಹಣ ಮಾಡುವ ಯೋಜನೆ ಎಂದು ಹೇಳಿ ಹೋಗಿದ್ದಾರೆ.
ಇನ್ನು ಬಯಲುಸೀಮೆಯಲ್ಲಿ ನೀರಿನ ಸಮಸ್ಯೆಗೆ ಮುಖ್ಯ ಕಾರಣ ಅಲ್ಲಿ ಮುಚ್ಚಿ ಹೋಗಿರುವ ನೀರಿನ ಮೂಲ. ಕೆರೆ, ಕೊಳ್ಳ, ನದಿದಡ ಸಹಿತ ಹೆಚ್ಚಿನ ನೀರಾವರಿ ಪ್ರದೇಶಗಳು ಈಗಾಗಲೇ ಅಲ್ಲಿ ಒತ್ತುವರಿಯಾಗಿ ಮುಚ್ಚಿಹೋಗಿವೆ. ಅದಕ್ಕೆ ಪುನರುಜ್ಜೀವನ ಕೊಟ್ಟರೆ ಮಾತ್ರ ಅಲ್ಲಿಯೇ ನೀರಿನ ಸೆಲೆಯನ್ನು ಕಾಣಬಹುದು. ಆ ಜವಾಬ್ದಾರಿ ಯಾರದ್ದು? ಸಂಶಯವೇ ಇಲ್ಲ. ರಾಜ್ಯ ಸರಕಾರದ್ದು. ಹಾಗಾದರೆ ಈ ಬಜೆಟಿನಲ್ಲಿ ರಾಜ್ಯ ಸರಕಾರ ಏನು ಮಾಡಬಹುದಿತ್ತು? ಎತ್ತಿನಹೊಳೆ ತಿರುವಿಗೆ ಇಟ್ಟ 1500 ಕೋಟಿ ರೂಪಾಯಿಯನ್ನು ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ. ಕೋಲಾರದಲ್ಲಿ ಕೆರೆಗಳ ಪುನರುತ್ಥಾನಕ್ಕೆ ಬಳಸಬಹುದಿತ್ತು. ಈ ಮೂಲಕ ಎರಡೂ ಕಡೆ ನ್ಯಾಯ ಸಲ್ಲಿಸಬಹುದಿತ್ತು. ಪಶ್ಚಿಮ ಘಟ್ಟಗಳನ್ನು ನಿರ್ದಾಕ್ಷಿಣ್ಯವಾಗಿ ತುಂಡರಿಸುವುದರಿಂದ ನಾವು ಅಮೂಲ್ಯ ನೈಸರ್ಗಿಕ ಸಂಪತ್ತನ್ನು ಕಳೆದುಕೊಂಡು ಅದು ಭವಿಷ್ಯದಲ್ಲಿ ಮಾರಕ ತೊಂದರೆ ನೀಡುವುದು ಗ್ಯಾರಂಟಿ ಎಂದು ಆ ಖಾತೆಯ ಸಚಿವರಾದರೂ ಹೇಳಬಹುದಿತ್ತು. ಆದರೆ ಎತ್ತಿನಹೊಳೆಗೆ ಹಣ ಇಡದಿದ್ದರೆ ಅದು ಭವಿಷ್ಯದಲ್ಲಿ ತಮಗೆ ಮುಳ್ಳಾಗಬಹುದು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಅನಿಸಿದೆ. ಅದಕ್ಕಾಗಿ 1500 ಕೋಟಿ ಇಟ್ಟಿದ್ದಾರೆ. ಎತ್ತಿನಹೊಳೆಯ ಮೇಲಿರುವ ಪ್ರೀತಿಯಲ್ಲಿ ಹತ್ತು ಶೇಕಡಾವನ್ನಾದರೂ ಅವರು ನಮ್ಮ ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಂಡ್ ಡ್ಯಾಂಗೆ ಇಟ್ಟಿದ್ದರೆ ಮಂಗಳೂರು ವರ್ಷವೀಡಿ ಯಡಿಯೂರಪ್ಪನವರಿಗೆ ಅಭಾರಿಯಾಗುತ್ತಿತ್ತು. ಅಷ್ಟೇ ಅಲ್ಲದೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ವಿಜಯವನ್ನು ಬಿಜೆಪಿ ಹರಿವಾಣದಲ್ಲಿ ಹಾಕಿ ಹಾರೈಸಿರುವ ಮತದಾರನಿಗೂ ಕೃತಜ್ಞತೆ ಸಲ್ಲಿಸಿದಂತೆ ಆಗುತ್ತಿತ್ತು. ಆದರೆ ಸಿಎಂ ಹಾಗೆ ಮಾಡಿಲ್ಲ. ನಾನು ಬಜೆಟ್ ಭಾಷಣ ಕೇಳಿದಾಗ ನನಗೆ ತುಂಬೆಯ ವೆಂಟೆಂಡ್ ಡ್ಯಾಂ ಬಗ್ಗೆ ಅಪ್ಪಿತಪ್ಪಿಯೂ ಸಿಎಂ ಒಂದಕ್ಷರ ಹೇಳಿರುವುದು ಗೊತ್ತಾಗಿಲ್ಲ.
ಇನ್ನು ಓವರ್ ಆಲ್ ಆಗಿ ಹೇಳಬೇಕಾದರೆ ಎಲ್ಲರನ್ನು ಖುಷಿಪಡಿಸಲು ಅನುದಾನವನ್ನು ಇಟ್ಟಿರುವುದು ಸ್ಪಷ್ಟ. ಆದರೆ ಅದು ಎಷ್ಟು ಸರಿ ಎನ್ನುವುದು ಅವರ ರಾಜಕೀಯ ನಡೆಗೆ ಬಿಟ್ಟಿದ್ದು. ಕ್ರೈಸ್ತರ ಅಭಿವೃದ್ಧಿಗೆ 200 ಕೋಟಿ ಸಹಿತ ವಿವಿಧ ಜಾತಿ, ಧರ್ಮ, ಪಂಗಡಗಳ ಅಭಿವೃದ್ಧಿಗೆ ಹಣ ಇಡುವ ಮೂಲಕ ಬಿಎಸ್ ವೈ ಏನು ಸಾಧಿಸಲು ಹೊರಟಿದ್ದಾರೆ. ಹಾಗಂತ ಹೀಗೆ ಹಣ ಮೀಸಲಿಡುವ ಸಂಪ್ರದಾಯ ಇವರೇ ಮೊದಲು ಆರಂಭಿಸಿದ್ದಲ್ಲ. ಆದರೆ ಇವರು ಮುಂದುವರೆಸಿಕೊಂಡು ಹೋಗಿರುವುದು ನಿಜ. ಇನ್ನು ಮೀನುಗಾರರಿಗೆ ದ್ವಿಚಕ್ರ ವಾಹನ, ಮರ್ತ್ಯ ವಿಕಾಸ ಯೋಜನೆ, ಕುಳಾಯಿ ಬಂದರು, ಮೂಲ್ಕಿಯಲ್ಲಿ ಹಿನ್ನೀರು ಅಭಿವೃದ್ಧಿ ಯೋಜನೆ, ಕಟ್ಟಡ ಕಾರ್ಮಿಕರಿಗೆ ಹೆಲ್ತ್ ಕಾರ್ಡ್, ಪತ್ರಕರ್ತರ ಅಭಿವೃದ್ಧಿಗೆ 5 ಕೋಟಿ, ಮಹಿಳಾ ಗಾರ್ಮೆಂಟ್ ಕೆಲಸಗಾರರಿಗೆ ಉಚಿತ ಬಸ್ ಪಾಸ್, ಸರಕಾರಿ ಶಾಲೆಗಳ ಕೊಠಡಿಗಳ ನಿರ್ಮಾಣ, ಡಯಾಲೀಸಿಸ್ ರೋಗಿಗಳಿಗಾಗಿ ಸೆಂಟರ್ ಸಹಿತ ಪ್ರವಾಸೋದ್ಯಮಕ್ಕೂ 500 ಕೋಟಿ ಇಟ್ಟಿದ್ದಾರೆ. ಆ 500 ಕೋಟಿಯಲ್ಲಿ ಮಂಗಳೂರಿನ ಪಾಲು ಎಷ್ಟು? ಇಲ್ಲಿನ ಶಾಸಕರು, ಸಚಿವರು ಹೇಳಬೇಕು!!
Leave A Reply