ನಿನ್ನೆಯ ಸಂತೆ ಇಳಿದ ಮೇಲೆ ಕಲಿತ ಪಾಠಗಳೇನು?
ಇಂದು ರಾತ್ರಿಯಿಂದ ನಾಳೆ ಬೆಳಿಗ್ಗೆ 4 ಗಂಟೆಯವರೆಗೆ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ತೆರೆದಿರುತ್ತದೆ ಎನ್ನುವ ಮಾಹಿತಿ ಇದೆ. ಇದರಿಂದ ಏನಾಗುತ್ತದೆ? ಚಿಲ್ಲರೆ ಅಂಗಡಿಯವರು ಅಲ್ಲಿ ಬಂದು ರಖಂ ವಸ್ತುಗಳನ್ನು ಖರೀದಿಸಿ ಅದನ್ನು ತಮ್ಮ ಅಂಗಡಿಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮರುದಿನ ಮಾರುವುದಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಮಂಗಳೂರು ಇಡೀ ಸಂತೆಯ ಮೂಡಿಗೆ ಬಂದಿತ್ತು. ಜನ ಮನೆಯಲ್ಲಿ ಬೇರೆ ಕೆಲಸ ಇಲ್ಲದೆ ಇರುವುದರಿಂದ ತಿನ್ನುವುದನ್ನು ಮಾತ್ರ ಕೆಲಸ ಮಾಡಿಕೊಂಡಿದ್ದಾರೋ ಎನ್ನುವಂತೆ ಒಂದು ದಿನ ಫ್ರೀ ಕೊಟ್ಟ ಕೂಡಲೇ ಮಂಗಳೂರಿಗೆ ಮಂಗಳೂರು ರಸ್ತೆಗೆ ಬಂದಿತ್ತು. ಅನೇಕರು ಮೊದಲ ಬಾರಿ ಅಂಗಡಿಗಳನ್ನು ನೋಡುತ್ತಿದ್ದಾರೋ ಎನ್ನುವಂತೆ ಅಂಗಡಿಗಳಿಗೆ ಮುಗಿಬಿದ್ದರು. ಅಕ್ಕಿ ಮತ್ತು ಬೇಳೆ ಮನೆಯಲ್ಲಿ ಇದ್ದರೆ ಒಂದೀಡಿ ವಾರ ಕಳೆಯಬಹುದು ಎಂದು ಗೊತ್ತಿದ್ದರೂ ಅನೇಕರು ಬಾದಾಮ್, ಪಿಸ್ತಾ ಸಹಿತ ಪಿಕ್ ನಿಕ್ ಗೆ ಹೋಗುವಾಗ ಖರೀದಿಸುವಂತೆ ವಸ್ತುಗಳನ್ನು ಖರೀದಿಸಿದರು. ಅನೇಕರು ಕುಟುಂಬವನ್ನು ಕಾರಿನಲ್ಲಿ ಜಾಲಿ ರೈಡ್ ಗೆ ಕರೆದುಕೊಂಡು ಬಂದರು. ಮೀನು, ಮಾಂಸ ಸಹಿತ ಚಿಪ್ಸ್, ವ್ಯಾಪರ್ಸ್ ತುಂಬಿಕೊಂಡು ಹೋಗಲಾಯಿತು. ಒಂದು ದೊಡ್ಡ ಸಂತೆ ಮಂಗಳವಾರದ ಸೂರ್ಯ ಮುಳುಗುತ್ತಿದ್ದಂತೆ ಮುಗಿದಿತ್ತು.
ಇದರಿಂದ ಏನು ತೊಂದರೆ ಎಂದು ಅನೇಕರಿಗೆ ಗೊತ್ತಿಲ್ಲ. ಕೊರೊನಾ ನಮ್ಮ ಜಿಲ್ಲೆಗೆ ಕಾಲಿಟ್ಟಿದೆ ಎಂದು ಅನೇಕರಿಗೆ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯ ತನಕ ನೆನಪೇ ಇರಲಿಲ್ಲ. ಸೆಂಟ್ರಲ್ ಮಾರುಕಟ್ಟೆ ಮದುವೆ ಮನೆಯ ರೂಪವನ್ನು ಪಡೆದುಕೊಂಡಿತ್ತು. ಇನ್ನು ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿದ ರೀತಿ ನೋಡಿದರೆ ರಸ್ತೆಯ ಕೊನೆಯಲ್ಲಿ ಮದುವೆಯ ಪೆಂಡಾಲ್ ಹಾಕಿದಂತೆ ಭಾಸವಾಗುತ್ತಿತ್ತು. ಕೆಲವರು ಅಂಗಡಿಗಳ ಹೊರಗೆ ಹೇಗೆ ಗುಂಪುಗೂಡಿದ್ದರೆಂದರೆ ಒಳಗೆ ಸ್ಟಾರ್ ನಟನೊಬ್ಬನ ಸಿನೆಮಾ ಶೂಟಿಂಗ್ ನಡೆಯುತ್ತಿದೆ ಎಂದು ಅನಿಸುತ್ತಿತ್ತು. ಇನ್ನು ಮಂಗಳವಾರ ಮನೆಯಲ್ಲಿಯೇ ಉಳಿದವರು ಬೇರೆಯವರ ದೃಷ್ಟಿಯಲ್ಲಿ ಮೂರ್ಖರಾದರು. ಯಾಕೆಂದರೆ ” ಸಿಕ್ಕಿದ್ದೇ ಒಂದು ದಿನ, ಅದರಲ್ಲಿಯೂ ಹೊರಗೆ ಬರಲ್ವಾ?” ಎಂದು ಪಕ್ಕದ ಮನೆಯವರು ಹೀಯಾಳಿಸುವ ಮಟ್ಟಿಗೆ ನಡೆದಿತ್ತು. ಬನ್ನಿ, ಸ್ವಲ್ಪ ಸಾಮಾನು ತೆಗೆದುಕೊಂಡು ಹಾಗೆ ಒಂದು ಸುತ್ತು ಸುತ್ತಾಡಿ ಬರೋಣ ಎಂದು ಹೇಳಿದ್ದು ಎಷ್ಟೋ ಜನ. ಇದರಿಂದ ನಿಜಕ್ಕೂ ಖುಷಿ ಪಟ್ಟಿದ್ದು ಕರೋನಾ ವೈರಸ್. ಅದಕ್ಕೆ ಮಂಗಳೂರಿಗೆ ಸೆಂಟ್ರಲ್ ಮಾರ್ಕೆಟ್ ಗೆ ಬಂದದ್ದು ಬೆಕ್ಕಿಗೆ ಮೀನು ಮಾರುಕಟ್ಟೆಗೆ ಬಂದಂತೆ ಆಗಿತ್ತು. ಜನಪ್ರತಿನಿಧಿಗಳು, ವೈದ್ಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೇಳಿದರೂ ಮಂಗಳೂರಿನವರ ತಲೆಗೆ ಎಳ್ಳಷ್ಟು ಹೋಗಲ್ಲವಲ್ಲ ಎಂದು ಕೊರೊನಾ ವೈರಸ್ ಮನದಲ್ಲಿಯೇ ನಕ್ಕಿರಬಹುದು.
ಹಾಗಿದ್ದರೆ ಇದಕ್ಕೆ ಏನು ಮಾಡಬಹುದು. ಮೊದಲನೇಯದಾಗಿ ಸಾರ್ವಜನಿಕರು ಸೆಂಟ್ರಲ್ ಮಾರುಕಟ್ಟೆಗೆ ಬರಬಾರದು ಎಂದು ಕಟ್ಟುನಿಟ್ಟಾಗಿ ಮಾಡಬೇಕು. ಆದರೆ ನಿನ್ನೆ ಹಾಗೇ ಇರಲಿಲ್ಲ. ಇನ್ನು ಇವತ್ತಿನಿಂದ ಕೇವಲ ಚಿಲ್ಲರೆ ಅಂಗಡಿಯವರು ಅಥವಾ ಸೂಪರ್ ಬಜಾರ್ ನಂತರವರು ಮಾತ್ರ ಖರೀದಿಗೆ ಬರಬೇಕು ಎಂದು ಹೇಳಲಾಗಿದೆ. ಅವರಿಗೆ ಪಾಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅದರ ನಂತರ ಆ ಅಂಗಡಿಯವರು ಸಾಮಾನುಗಳನ್ನು ತೆಗೆದುಕೊಂಡು ಅವರ ಅಂಗಡಿಯಲ್ಲಿ ಮಾರಬಹುದು ಎಂದು ಸೂಚನೆ ನೀಡಲಾಗಿದೆ. ಆ ಅಂಗಡಿಗಳು ನಿತ್ಯ 7 ರಿಂದ 12 ರ ತನಕ ತೆರೆದಿದ್ದು ಜನ ಅಲ್ಲಿಗೆ ಬರಬಹುದು. ಬಂದವರು ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತರೆ ಅಲ್ಲಿಗೆ ಒಂದು ಸವಾಲು ಮುಗಿಯುತ್ತದೆ. ಅದೇ ಜನಸಿ ಅಂಗಡಿಯವರು ತರಕಾರಿ ಮಾರುವುದಿದ್ದರೆ ಒಕೆ. ಆದರೆ ಸೆಂಟ್ರಲ್ ಮಾರುಕಟ್ಟೆ ಮೊದಲೇ ಕಿಷ್ಕಿಂದೆ. ಅದನ್ನು ಚೆಂದ ಶಿಸ್ತುಬದ್ಧವಾಗಿ ಕಟ್ಟಲು ನಮ್ಮ ಜನಪ್ರತಿನಿಧಿಗಳಿಗೆ ಇನ್ನು ಎಷ್ಟು ವರ್ಷ ಬೇಕೋ ಗೊತ್ತಿಲ್ಲ. ಅಲ್ಲಿ ತರಕಾರಿ ಖರೀದಿಸಲು ಚಿಲ್ಲರೆ ಅಂಗಡಿಯವರು ಹೋದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಹಾಗಿರುವಾಗ ಸೆಂಟ್ರಲ್ ಮಾರುಕಟ್ಟೆಯನ್ನು 15 ದಿನ ನೆಹರೂ (!) ಮೈದಾನಕ್ಕೆ ಶಿಫ್ಟ್ ಮಾಡಿದ್ದರೆ ತುಂಬಾ ಉತ್ತಮ. ಅಲ್ಲಿ ಸಾಕಷ್ಟು ಅಂತರದಲ್ಲಿ ಅಂಗಡಿಗಳನ್ನು ಇಡಬಹುದು. ಬರುವವರಿಗೆ ನಿಲ್ಲಲು ಮಾರ್ಕ್ ಮಾಡಬಹುದು. ಅಲ್ಲಿಂದ ತರಕಾರಿಗಳನ್ನು ತೆಗೆದುಕೊಂಡ ಚಿಲ್ಲರೆ ಅಂಗಡಿಯವರು ತಮ್ಮ ವಾರ್ಡುಗಳ ಸಣ್ಣಪುಟ್ಟ ಮೈದಾನಗಳಲ್ಲಿ ಅಥವಾ ಸರಕಾರಿ ಶಾಲೆಗಳ ಗ್ರೌಂಡುಗಳಲ್ಲಿ ಸರಕಾರ ಮಾಡುವ ವ್ಯವಸ್ಥೆಯ ಮೂಲಕ ಮಾರಿದರೆ ಆಗ ಸಮಸ್ಯೆಯನ್ನು ಹತ್ತಿಕ್ಕಲು ಸಾಧ್ಯ. ಇದನ್ನೆಲ್ಲಾ ನೋಡಿಕೊಳ್ಳಲು ಅಲ್ಲಲ್ಲಿ ಪೊಲೀಸರು ಹಾಕುವುದು ಕೂಡ ಅತ್ಯಗತ್ಯ. ಯಾಕೆಂದರೆ ನಾವು ಎಷ್ಟೇ ಜಾಗೃತಿ ಮೂಡಿದರೂ ರಸ್ತೆಗೆ ಇಳಿದ ಮೇಲೆ ಕೊರೊನಾವನ್ನು ಮರೆತುಬಿಡುತ್ತೇವೆ!
Leave A Reply