ಮಂಗಳೂರಿನ ಕೊರೊನಾ ಟೆಸ್ಟಿಂಗ್ ಲ್ಯಾಬ್ ಸರಿಯಿಲ್ಲವೇ?!
ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಕೇರಳದ ನಾಲ್ವರು ರೋಗಿಗಳು ಬಂದಿದ್ದರು. ಅದರಲ್ಲಿ ಬಂದ ಮೊದಲನೇಯ ವ್ಯಕ್ತಿ ತಲೆ ನೋವು ಎಂದು ಮಂಗಳೂರಿಗೆ ಕಾಲಿಟ್ಟಿದ್ದು. ಅದು ಕೂಡ ಎಂಬ್ಯುಲೆನ್ಸ್ ನಲ್ಲಿ. ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರೊಬ್ಬರ ಪ್ರಕಾರ ತಲೆನೋವಿಗೆ ಅಂಬ್ಯುಲೆನ್ ನಲ್ಲಿ ಬರುವುದು ಫಸ್ಟ್ ಟೈಮ್.
ಬಂದ ವ್ಯಕ್ತಿ ತಲೆಗೆ ಸ್ಕ್ಯಾನ್ ಮಾಡಲು ಹೇಳಿದ್ದಾನೆ. ಆಯಿತು, ಮಾಡೋಣ, ಅಡ್ಮಿಟ್ ಆಗಿ ಎಂದದ್ದಕ್ಕೆ ನಿರಾಕರಿಸಿದ್ದಾನೆ. ನಂತರ ಸೀದಾ ಅದೇ ಅಂಬ್ಯುಲೆನ್ಸ್ ನಲ್ಲಿ ಕುಳಿತು ಮತ್ತೆ ಕಾಸರಗೋಡುವಿಗೆ ಹಿಂತಿರುಗಿದ್ದಾನೆ. ಅವನಿಗಾಗಿಯೇ ಕೇರಳ ಗಡಿಯಲ್ಲಿ ನಿಂತ ಕೇರಳ ಮಾಧ್ಯಮಗಳು ಆತನ ಬೈಟ್ ತೆಗೆದುಕೊಂಡು ಒಂದೂವರೆ ಗಂಟೆಯ ಎಪಿಸೋಡ್ ಮಾಡಿವೆ. ಒಬ್ಬ ವ್ಯಕ್ತಿ ಆಸ್ಪತ್ರೆಯಿಂದ ಹೊರಗೆ ಹೋಗಿ ಕೆಲವೇ ನಿಮಿಷಗಳ ಒಳಗೆ ಕೇರಳ ಇಡೀ ಸುದ್ದಿಯಾಗಿದ್ದಾನೆ. ಕರ್ನಾಟಕದಲ್ಲಿ ಕೇರಳದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಡುತ್ತಿಲ್ಲ ಎಂದು ಸುದ್ದಿ ಮಾಡಿದ್ದಾರೆ. ಅದರೊಂದಿಗೆ ಆಸ್ಪತ್ರೆಯವರು 25 ಸಾವಿರ ರೂಪಾಯಿ ಕೇಳಿದ್ರು, ಕೊಡಲು ಹಣ ಇಲ್ಲ ಎಂದದ್ದಕ್ಕೆ ಹೋಗಲು ಹೇಳಿದ್ರು ಎಂದು ಉಪ್ಪು, ಖಾರ ಹಾಕಿ ಮಂಗಳೂರಿನ ಆಸ್ಪತ್ರೆಗಳನ್ನು ವಿಲನ್ ಆಗಿ ಚಿತ್ರೀಕರಿಸಿದ್ದಾರೆ. ಒಂದು ಮಾಹಿತಿಯ ಪ್ರಕಾರ ಹಣ ಕೇಳಿದ್ದು ಹೌದು. ಆದರೆ ಹಣ ಇಲ್ಲ ಎಂದದ್ದಕ್ಕೆ ಹೊರಗೆ ಹಾಕಿಲ್ಲ ಎನ್ನುವುದು ಆಸ್ಪತ್ರೆಯ ಪರವಾಗಿರುವವರ ಹೇಳಿಕೆ. ಆದರೆ ನಂತರ ಇನ್ನೊಂದು ಕೇಸ್ ಬಂದಿದೆ. ಅದರಲ್ಲಿ ಹೆಂಡತಿಗೆ ಎರಡು ವರ್ಷಗಳ ಹಿಂದೆ ಮಂಗಳೂರಿನ ಬೇರೆ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಆಗಿತ್ತು. ಅವರಿಗೆ ಏನೋ ಹೊಟ್ಟೆ ನೋವಾಗಿ ಅವರು ಚಿಕಿತ್ಸೆ ಬಂದಿದ್ದಾರೆ. ಜೊತೆಗೆ ಗಂಡನು ಬಂದಿದ್ದ ಕಾರಣ ಹೆಂಡತಿಗೆ ಚಿಕಿತ್ಸೆ ಕೊಡುವಾಗ ಗಂಡನನ್ನು ನಿಯಮಗಳ ಪ್ರಕಾರ ಮತ್ತು ಕಾಸರಗೋಡಿನವರಾದ ಕಾರಣ ಐಸೋಲೇಶನ್ ಗೆ ಹಾಕಿದ್ದಾರೆ. ಆದರೆ ತನಗೆ ಗಂಡನನ್ನು ನೋಡಲು ಬಿಟ್ಟಿಲ್ಲ ಎಂದು ಆಕೆ ವರಾತ ತೆಗೆದು ಅದರಿಂದ ರಂಪಾಟ ಆಗಿ ಅವರು ಕೂಡ ಹಿಂದಕ್ಕೆ ಹೋಗಿದ್ದಾರೆ. ಮೂರನೇ ರೋಗಿಯಲ್ಲಿ ಒಂದಿಷ್ಟು ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದವಾ?
ಆ ರೋಗಿಯ ಗಂಟಲದ್ರವವನ್ನು ತೆಗೆದು ವೆನಲಾಕ್ ನಲ್ಲಿರುವ ಕೋವಿಡ್ 19 ಟೇಸ್ಟಿಂಗ್ ಲ್ಯಾಬ್ ಗೆ ಕಳುಹಿಸಲಾಗಿದೆ.
ಹಿಂದೆ ಇಂತಹ ಟೆಸ್ಟಿಂಗ್ ಲ್ಯಾಬ್ ಹಾಸನ ಮತ್ತು ಶಿವಮೊಗ್ಗದಲ್ಲಿ ಇದ್ದ ಕಾರಣ ವರದಿ ಬರಲು ಎರಡು ದಿನಗಳು ತಗಲುತ್ತಿದ್ದವು. ಆದರೆ ಈಗ ವೆನಲಾಕ್ ಆಸ್ಪತ್ರೆಯಲ್ಲಿಯೇ ಇರುವುದರಿಂದ ಕನಿಷ್ಟ 6 ಗಂಟೆ ಅಥವಾ ಗರಿಷ್ಟ 8 ಗಂಟೆ ಸಾಕು. ಆದರೆ 48 ಗಂಟೆ ಕಳೆದರೂ ಆ ವರದಿ ಬರಲಿಲ್ಲ ಎನ್ನುವ ವಿಚಾರ ನನ್ನ ಗಮನಕ್ಕೆ ಬಂತು. ಜಿಲ್ಲಾಡಳಿತ ಏನಾದರೂ ಮುಚ್ಚಿಡುತ್ತಿದೆಯಾ ಎನ್ನುವ ಆತಂಕ ಶುರುವಾಯಿತು. ನಾನು ನಿನ್ನೆ ಎರಡು ಬಾರಿ ಡಿಎಚ್ ಒ ಅವರಿಗೆ ಕರೆ ಮಾಡಿದೆ. ಅವರ ಸಹಾಯಕರು ಫೋನ್ ಎತ್ತಿ “ಸಾಹೇಬ್ರು, ಮೀಟಿಂಗ್ ನಲ್ಲಿ ಇದ್ದಾರೆ” ಎಂದು ಹೇಳಿದರೆ ವಿನ: ಫ್ರೀ ಆದ ನಂತರ ಮಾಡಿ ಎಂದದ್ದಕ್ಕೆ ಉತ್ತರವೇ ಸಿಗಲಿಲ್ಲ. ಇವರು ಹೀಗೆ ಮಾಡಿದರೆ ಮೊದಲೇ ಜನ ಕೊರೊನಾದಿಂದ ಹೆದರಿ ಬಿಟ್ಟಿರುವುದರಿಂದ ಮಂಗಳೂರಿಗೆ ಇನ್ನೊಂದು ಸೊಂಕೀತ ಅದು ಕೂಡ ಕಾಸರಗೋಡಿನಿಂದ ಬಂದು ಬಿಟ್ಟಿದ್ದು ಗೊತ್ತಾದರೆ ಇನ್ನಷ್ಟು ಗಲಿಬಿಲಿಗೆ ಒಳಗಾಗುತ್ತಾರೆ.
ಇನ್ನು ಬಂದವರು ಸೊಂಕೀತರಾಗಿದ್ದಲ್ಲಿ ಏನಾಗುತ್ತೆ ಎಂದರೆ ಅವರೊಂದಿಗೆ ಬಂದ ಸಂಬಂಧಿಕ, ಪ್ಯಾರಾ ಮೆಡಿಕಲ್ ಅಸಿಸ್ಟೆಂಟ್, ಅಂಬ್ಯುಲೆನ್ಸ್ ಚಾಲಕ ಸಹಿತ ಎಲ್ಲರನ್ನು ಕ್ಯಾರಂಟೈನ್ ಮಾಡಬೇಕು. ಅದರೊಂದಿಗೆ ಮುಂದೆ ಬರುವ ಕೇರಳದ ಇತರ ರೋಗಿಗಳ ಬಗ್ಗೆ ಕೂಡ ನಂಬಿಕೆ ಹೊರಟು ಹೋಗುತ್ತದೆ. ಈಗ ಸಿಗುತ್ತಿರುವ ಮಾಹಿತಿಯ ಪ್ರಕಾರ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಎಮರ್ಜೇನ್ಸಿ ಅಲ್ಲದ ಕೇಸ್ ಬಂದರೆ ಗಡಿಯಲ್ಲಿಯೇ ಇರುವ ವೈದ್ಯರು ಅವರನ್ನು ಪರೀಕ್ಷಿಸಿ ಅಲ್ಲಿಂದಲೇ ಹೊರಗೆ ಕಳುಹಿಸುತ್ತಿದ್ದಾರೆ. ಎಮರ್ಜೇನ್ಸಿ ಇದ್ದರೆ ಮಾತ್ರ ಅಂತವರನ್ನು ನೇರವಾಗಿ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆದರೆ ಈಗ ಮಂಗಳೂರಿನ ಉಳಿದ ಆಸ್ಪತ್ರೆಯವರು ಕೂಡ ಕೆಎಸ್ ಹೆಗ್ಡೆ ಆಸ್ಪತ್ರೆ ಮಾತ್ರ ಯಾಕೆ ನಮಗೂ ಅವಕಾಶ ಮಾಡಿಕೊಡಿ ಎಂದು ಎಲ್ಲಾ ಕಡೆಯಿಂದ ಒತ್ತಡ ತರುತ್ತಿದ್ದಾರೆ. ಸದ್ಯಕ್ಕೆ ಇಲ್ಲಿನ ಖಾಸಗಿ ಆಸ್ಪತ್ರೆಗಳು ಓಡುವುದೇ ಕೇರಳದ ರೋಗಿಗಳಿಂದ. ಪ್ರಖ್ಯಾತ ಆಸ್ಪತ್ರೆಗಳಲ್ಲಿ 40% ರೋಗಿಗಳು ಕಾಸರಗೋಡಿನವರು. ಅವರು ಇಲ್ಲಿ ಬರಲು ಈಗ ಅಲ್ಲಿನ ವೈದ್ಯಾಧಿಕಾರಿಗಳಿಗೆ ದಂಬಾಲು ಅಥವಾ ಒತ್ತಡ ಹಾಕಿ ಪ್ರಮಾಣಪತ್ರ ತೆಗೆದುಕೊಂಡು ಇಲ್ಲಿ ಹೊರಡುತ್ತಿದ್ದಾರೆ. ಇಲ್ಲಿನ ಕೆಲವು ಗಡಿ ಪ್ರದೇಶದ ರಾಜಕೀಯ ನಾಯಕರು ಅವರನ್ನು ಹೇಗಾದರೂ ಒಳಗೆ ತರಲು ಪ್ರಯತ್ನ ಹಾಕುತ್ತಿದ್ದಾರೆ. ಸದ್ಯ ಸಂಖ್ಯೆ ನಿಯಂತ್ರಣದಲ್ಲಿದೆ. ಆದರೆ ಮುಂದೆ ಹೇಗೆ ಗೊತ್ತಾಗುತ್ತಿಲ್ಲ!!
Leave A Reply