ಮಂಗಳೂರು ಬಂದರಿನಲ್ಲಿ ಕೊರೊನಾ ಹಂಚುವ ಕೆಲಸ ಜೋರಾಗಿ ನಡೆಯುತ್ತಿದೆಯಾ?
ಮಂಗಳೂರು ಬಂದರು ಪ್ರದೇಶದಲ್ಲಿ ಹಳೆ ಬಂದರು ರಸ್ತೆ ಎನ್ನುವುದಿದೆ. ಅಲ್ಲಿನ ಜನರಿಗೆ ಕರೋನಾ ಎನ್ನುವುದು ಕರೀನಾ ಎಂದು ಕೇಳಿಸಿರಬೇಕು. ಅವರಿಗೆ ಸಾಮಾಜಿಕ ಅಂತರ ಎನ್ನುವ ಶಬ್ದದ ಅರ್ಥ ಏನು ಎಂದು ಗೊತ್ತಾಗಲು ಇನ್ನೊಂದು ಜನ್ಮ ಬೇಕಾಗಬಹುದು. ಅಕ್ಷರಶ: ಅಲ್ಲಿ ಮೀನು ವ್ಯಾಪಾರಕ್ಕಾಗಿ ಜನ ಒಬ್ಬರ ಮೇಲೆ ಒಬ್ಬರು ಬೀಳುತ್ತಿರುತ್ತಾರೆ. ನಾನು ಹೇಳುವುದಕ್ಕಿಂತ ರಾಷ್ಟ್ರೀಯ ವಾಹಿನಿಗಳು ಅದನ್ನು ಚಿತ್ರೀಕರಿಸಿ ನ್ಯೂಸ್ ಸ್ಟೋರಿ ಮಾಡಿರುವ ಕ್ಲೀಪಿಂಗ್ ನನ್ನ ಬಳಿ ಇದೆ. ಆಂಗ್ಲ ಭಾಷೆಯ ಟೈಮ್ಸ್ ನೌ ವಾಹಿನಿಯಲ್ಲಿ ನ್ಯೂಸ್ ಮಾಡಿದ್ದಾರೆ. ಆ ದೃಶ್ಯ ನೋಡಿದರೆ ನಿಮಗೆ ಮಂಗಳೂರಿನ ಪರಿಸ್ಥಿತಿಯ ಬಗ್ಗೆ ಆತಂಕ ಶುರುವಾಗುತ್ತದೆ. ಅದರಲ್ಲಿ ನಿರೂಪಕಿ ವರದಿಗಾರನಿಗೆ ಕೇಳುತ್ತಾರೆ. ” ಮಂಗಳೂರಿನಲ್ಲಿ ಈ ಪರಿ ಜನ ಮೀನಿಗಾಗಿ ಮುಗಿಬೀಳುತ್ತಿದ್ದಾರಲ್ಲ, ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ, ಯಾಕೆ?” ಅದಕ್ಕೆ ವರದಿಗಾರರು ” ಅದನ್ನು ಇಲ್ಲಿನ ಸ್ಥಳೀಯ ಜಿಲ್ಲಾಡಳಿತವೇ ಉತ್ತರಿಸಬೇಕು” ಎನ್ನುತ್ತಾರೆ. ಇದೆಲ್ಲಾ ಪೊಲೀಸರ ಕಣ್ಣಂಚಿನಲ್ಲಿಯೇ ನಡೆಯುತ್ತಿದೆ ಎಂದು ಕೂಡ ಆತ ಸೇರಿಸುತ್ತಾನೆ.
ನಿಮಗೆ ಗೊತ್ತಿರಲಿ, ಇದೆಲ್ಲಾ ನಡೆಯುವುದು ಮಧ್ಯರಾತ್ರಿಯಲ್ಲಿ. ರಾಶಿ ಜನರ ಮಧ್ಯೆ ಯಾವುದೇ ಚಾನಲ್ ನ ವರದಿಗಾರ ಅಥವಾ ಛಾಯಾಗ್ರಾಹಕ ಹೋಗಿ ಚಿತ್ರೀಕರಣ ನಡೆಸಲು, ವರದಿ ಮಾಡಲು ಧೈರ್ಯ ತೋರಿಸುವುದಿಲ್ಲ. ಒಂದು ಅಲ್ಲಿನವರ ಭಯ, ಎರಡನೇಯದು ಆ ನೂರಾರು ಜನರ ನಡುವೆ ಯಾರಿಗೆ ಕೋರೋನಾ ಇದೆ ಯಾರಿಗೆ ಗೊತ್ತು. ಅದರಿಂದ ಧೈರ್ಯವಾಗಿ ವ್ಯಾಪಾರ ನಡೆಯುತ್ತದೆ. ಈ ಮಧ್ಯೆ ಟೌಮ್ಸ್ ನೌ ಧೈರ್ಯ ಮೆಚ್ಚಬೇಕು. ನಮ್ಮ ಮಂಗಳೂರಿನವರ ಹೆಸರು ಹೇಗೆ ಹಾಳಾಗುತ್ತಿದೆ ಎನ್ನುವುದಕ್ಕೆ ನಿರೂಪಕಿ ಮತ್ತು ವರದಿಗಾರರ ನಡುವೆ ನಡೆಯುವ ಮುಂದಿನ ಸಂಭಾಷಣೆನೆ ಸಾಕ್ಷಿ. ಆಕೆ ಕೇಳುತ್ತಾಳೆ. ” ಅಲ್ಲಿನ ಜಿಲ್ಲಾಡಳಿತ ಪ್ರತಿ ಬಾರಿ ಮಾತನಾಡಿದರೆ ಕಾಸರಗೋಡು ಜಿಲ್ಲೆಯಿಂದ ಕೊರೋನಾ ಬರುತ್ತದೆ ಎಂದು ಅರ್ಜೆಂಟ್ಟಲ್ಲಿ ಗಡಿ ಮುಚ್ಚಿದೆ. ಮಾಜಿ ಪ್ರಧಾನಿ ದೇವೆಗೌಡರು ಗಡಿ ಮುಚ್ಚಬೇಡಿ ಎಂದು ವಿನಂತಿಸಿದರೂ ಅಲ್ಲಿನ ಜಿಲ್ಲಾಡಳಿತ ನಮ್ಮ ಜನರ ಸುರಕ್ಷೆ ಮುಖ್ಯ ಎಂದು ಹೇಳುತ್ತಾ ಬರುತ್ತಿದೆ, ಇದು ಅವರಿಗೆ ಕಾಣಿಸಲ್ವಾ” ಎನ್ನುತ್ತಾಳೆ. ಅದಕ್ಕೆ ವರದಿಗಾರ “ಹೌದು, ಇದೆಲ್ಲಾ ಜಿಲ್ಲಾಡಳಿತವೇ ನೋಡಬೇಕು” ಎಂದು ಹೇಳುತ್ತಾರೆ. ನಾನು ಈಗ ಕೇಳುತ್ತಿರುವುದು ಅದೇ ಪ್ರಶ್ನೆ. ನೀವು ತಲಪಾಡಿ ಗಡಿಯಲ್ಲಿ ಒಂದು ಕೊರೊನಾ ಸೊಂಕಿತ ನೊಣ ಒಳಗೆ ಬರುತ್ತದಾ ಎಂದು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದೀರಿ. ಅದು ತಪ್ಪು ಎಂದು ನಾನು ಹೇಳುತ್ತಿಲ್ಲ. ಹಾಗಾದರೆ ಬಂದರಿನಲ್ಲಿ ನಿಮ್ಮವರು ಬಾಯಿಗೆ ಎಣ್ಣೆ ಬಿಟ್ಟು ಮಲಗಿದ್ದಾರಾ. ಸ್ಥಳೀಯ ಜನಪ್ರತಿನಿಧಿಗಳು ಕಿಟ್ ವಿತರಣೆ, ಹೆಣ ಸುಡಲು ಜಾಗೃತಿ ಮಾಡುತ್ತಾರೆ ವಿನ: ನಾವು ಹೀಗೆ ಬರೆದು ತಿಳಿಸುವ ತನಕ ಅತ್ತ ಹೋಗುವುದೂ ಇಲ್ಲ.
ಇನ್ನು ಕೆಲವು ಸೂಪರ್ ಮಾರ್ಕೆಟ್ ಗಳಿವೆ. ಅಲ್ಲಿ 7 ರಿಂದ 12 ತನಕ ವ್ಯಾಪಾರ ನಡೆಯುತ್ತದೆ. ಅಲ್ಲಿ ನಾಗರಿಕರು ಎಷ್ಟು ಸಾಮಾಜಿಕ ಅಂತರ ಪಾಲಿಸುತ್ತಾರೆ. ಇನ್ನು ನಮ್ಮ ಜನರು ಕೂಡ ತಮ್ಮ ವಾರ್ಡಿನಲ್ಲಿಯೇ ಒಂದಲ್ಲ ಒಂದು ಜನರಲ್ ಸ್ಟೋರ್ ಇರುವಾಗ ಕಾರು ಹಿಡಿದುಕೊಂಡು ಸುತ್ತಾಡುವುದು ಏಕೆ? ಈಗ ಎಲ್ಲಿಯ ತನಕ ಪರಿಸ್ಥಿತಿ ಎಂದರೆ ಮೊದಮೊದಲು ಪೊಲೀಸರು ಕೂಡ ಕಟ್ಟುನಿಟ್ಟಾಗಿ ನಿಲ್ಲಿಸಿ ವಿಚಾರಿಸುತ್ತಿದ್ದರು. ಈಗ ಅವರು ಯಾರಿಗೆ ಕೇಳಿದರೂ ಎಲ್ಲರ ಕೈಲಿ ಪಾಸ್ ಇದೆ. ಪಾಸ್ ಎಷ್ಟು ಕಾಮನ್ ಆಗಿದೆ ಎಂದರೆ ಸುಮ್ಮನೆ ತಿರುಗಾಡುವವ ಕೂಡ ಊಟ ಹಂಚುವ ಪಾಸ್ ತೋರಿಸುತ್ತಾನೆ. ಅವರಿಗೆ ಎಲ್ಲಿಂದ ಪಾಸ್ ಸಿಗುತ್ತಿದೆ. ಇನ್ನು ಮುಡಿಪು-ಕೊಣಾಜೆ-ದೇರಳಕಟ್ಟೆ ಭಾಗದಲ್ಲಿ ಲಾಕ್ ಡೌನ್ ಖಾದರ್ ಅವರೇ ತೆಗೆದಿದ್ದಾರಾ ಎಂದು ಡೌಟು. ಅಲ್ಲಿನ ಜನ ನಿತ್ಯದಂತೆ ವಾಹನಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಬೇಕಾದರೆ ನೀವು ಅಲ್ಲಿ ನಿಮ್ಮ ಯಾವುದಾದರೂ ಮಿತ್ರರ ಬಳಿ ಕೇಳಿ ನೋಡಿ. ಹಾಗಾದರೆ ಲಾಕ್ ಡೌನ್ ಅರ್ಥ ಏನು?
ಇನ್ನು ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಒಂದೊಂದಾಗಿ ಕೋವಿಡ್ -19 ಪಾಸಿಟಿವ್ ಸೋಂಕಿತರು ಬರದಿರಲಿ ಎಂದು ನಾವೆಲ್ಲರೂ ದೇವರ ಬಳಿ ಪ್ರಾರ್ಥಿಸಬೇಕು. ಯಾವ ಕೇರಳದ ವ್ಯಕ್ತಿ ಬಂದು ಬಂಟ್ವಾಳದ ಮಹಿಳೆಗೆ ಅಂಟಿಸಿ ಹೋದನೋ ದೇವರಿಗೆ ಗೊತ್ತು. ಈಗ ಎಚ್ಚರಿಕೆಯ ಕರೆಗಂಟೆ ಹೊಡೆಯಲು ಶುರುವಾಗಿದೆ. ಕೆಲವರು ಮಾಡಿದ ನಿರ್ಲಕ್ಷ್ಯದಿಂದ ಅಮಾಯಕರು ಕೊರೊನಾ ಪೆಟ್ಟು ತಿಂದು ಮಲಗುವಂತಾಗಿದೆ. ಬಂಟ್ವಾಳದ ಆ ಇಬ್ಬರು ಮಹಿಳೆಯರು ಏನು ತಪ್ಪು ಮಾಡಿದ್ದರು. ಅತ್ತೆ ಯಾವುದೋ ಬೇರೆ ಆರೋಗ್ಯ ಸಮಸ್ಯೆಯಿಂದ ಒಂದು ತಿಂಗಳಿಗಿಂತ ಜಾಸ್ತಿ ಆ ಆಸ್ಪತ್ರೆಯಲ್ಲಿ ಇದ್ದರು. ಅವರನ್ನು ನೋಡಲು ಸೊಸೆ ಕೆಲವು ಸಲ ಬಂದಿದ್ದಾರೆ. ಅತ್ತೆಯ ಕೋಣೆಯನ್ನು ಕ್ಲೀನ್ ಮಾಡಿದ ಸಹಾಯಕಿ ಕೂಡ ಈಗ ಕೋವಿಡ್ 19 ಪಾಸಿಟಿವ್. ಈ ಮೂವರ ತಪ್ಪು ಏನು ಇತ್ತು. ಮಂಗಳೂರಿನ ಐದುವರೆ ಲಕ್ಷ ಜನರಲ್ಲಿ ಕೆಲವರ ನಿರ್ಲಕ್ಷ್ಯ ಇನ್ನೆಷ್ಟು ಜನರಿಗೆ ಉಚಿತವಾಗಿ ಈ ಕಾಯಿಲೆ ಹರಡಲಿದೆಯೋ ಭಗವಂತನೇ ಬಲ್ಲ!!
Leave A Reply