ಮಗ ಅಪ್ಪ, ಅಮ್ಮನನ್ನು ಬಿಟ್ಟು ಬರಲು ಪತ್ನಿ ಒತ್ತಾಯ ಮಾಡುವಂತಿಲ್ಲ!!
ಎರಡು ದಿನಗಳ ಹಿಂದೆ ಕೇರಳ ಉಚ್ಚ ನ್ಯಾಯಾಲಯ ತನ್ನ ಮುಂದೆ ಬಂದಿದ್ದ ವಿವಾಹ ವಿಚ್ಚೇದನ ಪ್ರಕರಣವೊಂದರ ವಿಷಯದಲ್ಲಿ ಹಿಂದೂ ವಿವಾದ ಕಾಯ್ದೆಯ ಅಡಿಯಲ್ಲಿ 2016 ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ. ಈ ಮೂಲಕ ಇವತ್ತಿನ ದಿನಗಳಲ್ಲಿ ವಯಸ್ಸಾದ ಅಪ್ಪ-ಅಮ್ಮಂದಿರ ಮೊಗದಲ್ಲಿ ನೆಮ್ಮದಿಯನ್ನು ಮೂಡಿಸಿದೆ. ವಿಷಯ ಏನೆಂದರೆ ” ನನ್ನ ವಯಸ್ಸಾದ ತಂದೆ, ತಾಯಿಯನ್ನು ನಮ್ಮೊಂದಿಗೆ ಇರಲು ನನ್ನ ಹೆಂಡತಿ ಒಪ್ಪುತ್ತಿಲ್ಲ. ತಂದೆ, ತಾಯಿಯನ್ನು ಈ ಪ್ರಾಯದಲ್ಲಿ ಬಿಟ್ಟು ವಾಸಿಸಲು ನನಗೆ ಮನಸ್ಸಿಲ್ಲ. ಆದ್ದರಿಂದ ನನಗೆ ವಿವಾಹ ವಿಚ್ಚೇದನ ಕೊಡಿ” ಎಂದು ಕೇಳುವ ಎಲ್ಲ ಅವಕಾಶವನ್ನು ಪುರುಷನೊಬ್ಬ ಹೊಂದಿದ್ದಾನೆ ಎಂದು ನ್ಯಾಯಾಲಯ ತಿಳಿಸಿದೆ.
ಇಂತಹ ಸಂದರ್ಭದಲ್ಲಿ ಅವನಿಗೆ ಅವಳಿಂದ ವಿಚ್ಚೇದನ ನೀಡಬಹುದು ಎಂದು ಕೋರ್ಟ್ ತಿಳಿಸಿದೆ. ಕೇರಳ ಹೈಕೋರ್ಟ್ ಸುಪ್ರೀಂಕೋರ್ಟಿನ 2016ರ ಅದೇ ತೀರ್ಪನ್ನು ಎತ್ತಿ ಹಿಡಿಯುತ್ತಾ, ಸಕಾರಣವಿಲ್ಲದೆ ಯಾವುದೇ ವಿವಾಹಿತ ಮಹಿಳೆ ತನ್ನ ಅತ್ತೆ, ಮಾವನೊಂದಿಗೆ ವಾಸಿಸುವುದನ್ನು ನಿರಾಕರಿಸಿ ತನ್ನ ಪತಿಯ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ತಿಳಿಸಿದೆ. ಒಬ್ಬ ಪುರುಷ ಸಾಮಾನ್ಯವಾಗಿ 30 ರ ಆಸುಪಾಸಿನಲ್ಲಿ ಮದುವೆ ಆಗುತ್ತಾನೆ ಎಂದು ಅಂದುಕೊಳ್ಳೋಣ. ಆತ ಅಂದಾಜು 23 ರ ನಂತರ ಶಿಕ್ಷಣ ಮುಗಿಸಿ ಸೂಕ್ತ ಉದ್ಯೋಗ ಪಡೆದು ತನ್ನ ಕಾಲ ಮೇಲೆ ತಾನು ನಿಲ್ಲುವಾಗ 25 ಆಗಬಹುದು. ಕೆಲವರಿಗೆ ಮೂರ್ನಾಕು ವರ್ಷ ಬೇಗನೂ ಈ ಅವಕಾಶ ಸಿಗಬಹುದು. ಆದರೆ ಏನೆಂದರೂ ಕನಿಷ್ಟ 20 ವರ್ಷಗಳ ತನಕ ಒಬ್ಬ ತಂದೆ ಮತ್ತು ತಾಯಿ ತಮ್ಮ ಮಗನನ್ನು ಸಾಕಿ, ಬೆಳೆಸಲು ಅಪಾರ ಶ್ರಮ ಪಟ್ಟಿರುತ್ತಾರೆ. ಎಷ್ಟೋ ಮಧ್ಯಮ ವರ್ಗದ ಅಪ್ಪಂದಿರು ತಾವು ಒಳ್ಳೆಯ ಬಟ್ಟೆಗಳನ್ನು ಧರಿಸದಿದ್ದರೂ ಪರವಾಗಿಲ್ಲ, ನಮ್ಮ ಮಗ ಧರಿಸಿ ಕಾಲೇಜಿಗೆ ಹೋಗಲಿ ಎಂದೇ ಆಶಿಸುತ್ತಾರೆ. ಅದಕ್ಕಾಗಿ ಹೆಚ್ಚೆಚ್ಚು ಕೆಲಸ ಮಾಡಿ ಹಣ ಒಟ್ಟು ಮಾಡುತ್ತಾರೆ. ಇನ್ನು ತಾಯಂದಿರೂ ಕೂಡ ಬಂಗಾರ ಮಾಡದಿದ್ದರೂ ಪರವಾಗಿಲ್ಲ, ಕೇವಲ ಕರಿಮಣಿ ಇದ್ದರೆ ಸಾಕು, ಮಗನಿಗೆ ಒಂದು ಬೈಕ್ ಕೊಡಿಸಿ ಎಂದು ಗಂಡನಿಗೆ ಒತ್ತಾಯ ಮಾಡುತ್ತಾರೆ. ಹೀಗೆ ಅಪ್ಪ, ಅಮ್ಮ ತಮ್ಮ ಸುಖವನ್ನು ಬದಿಗಿಟ್ಟು ಮಗನ ಏಳಿಗೆಗೆ ಕಾಳಜಿ ವಹಿಸಿ ಆತನ ಮದುವೆಯಾಗುತ್ತಿದ್ದಂತೆ ದೂರವಾಗಬೇಕು ಎಂದರೆ ಅದು ಹೇಗೆ ಸಾಧ್ಯ? ತಂದೆ, ತಾಯಿಯನ್ನು ಆಶ್ರಮಕ್ಕೆ ಸೇರಿಸುವ ಗಂಡು ಮಕ್ಕಳು ಸಮಾಜದ ದೃಷ್ಟಿಯಲ್ಲಿ ಕ್ರೂರಿಯಾಗಿ ಕಾಣುತ್ತಾರೆ. ಆದರೆ ಆ ಗಂಡಿನ ಹಿಂದೆ ಆಶ್ರಮಕ್ಕೆ ಬಿಟ್ಟು ಬನ್ನಿ ಎಂದು ಒತ್ತಾಯ ಮಾಡುವ ಹೆಣ್ಣಿನ ರೂಪದ ರಾಕ್ಷಸಿ ಇದ್ದಾಳೆ ಎಂದು ಸಮಾಜ ಒಪ್ಪುವುದಿಲ್ಲ. ನಿಮ್ಮ ಮುದಿ ತಾಯಿ, ತಂದೆಯನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಆಶ್ರಮ ಬೇಡಾ ಎಂದು ಗೃಹಿಣಿಯೊಬ್ಬಳು ಹೇಳಿದರೆ ಭಾರತದಲ್ಲಿ ಆಶ್ರಮಗಳೇ ಇರುತ್ತಿರಲಿಲ್ಲ ಎಂದು ಯಾರೂ ಯೋಚಿಸುವುದಿಲ್ಲ. ಹಾಗಂತ ಅತ್ತೆ, ಮಾವನಿಂದ ಮಾನಸಿಕ, ದೈಹಿಕ ಕಿರುಕುಳ ಅನುಭವಿಸುವ ವಿವಾಹಿತೆಯರು ಇಲ್ಲವೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಮದುವೆಯಾಗುವ ಮೊದಲೇ ನಿಮ್ಮ ಮನೆಯಲ್ಲಿ ಹಳೆ ಫರ್ನಿಚರ್ ಇದ್ದರೆ ನಮಗೆ ಸಂಬಂಧ ಬೇಡಾ. ಹಳೆ ಫರ್ನಿಚರ್ ಹೊರಗೆ ಹಾಕಿ, ನಂತರ ನೋಡೋಣ ಎಂದು ಮದುವೆಯಾಗುವ ಯುವತಿ ಮತ್ತು ಆಕೆಯ ತಂದೆ, ತಾಯಿ ಹೇಳುತ್ತಾರೆ ಎಂದರೆ ನೀವೆ ಯೋಚಿಸಿ.
ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿ ಶಾರದಾ ವಿದ್ಯಾಲಯದ ಸಮೀಪ ಒಂದು ಆಶ್ರಮ ಇದೆ. ಅನೇಕ ವೃದ್ಧರು ಅಲ್ಲಿದ್ದಾರೆ. ಒಬ್ಬೊಬ್ಬರ ಕತೆ ಕೂಡ ಕಣ್ಣಲ್ಲಿ ನೀರು ತರಿಸುವಂತದ್ದು. ಹೊಟ್ಟೆಯಲ್ಲಿ 9 ತಿಂಗಳು ಹೊತ್ತು, ನಂತರ ಅಸಾಧ್ಯ ನೋವಿನೊಂದಿಗೆ ಹೆತ್ತು, ನಿದ್ರೆಯಿಲ್ಲದೆ ರಾತ್ರಿ ಮಗು ಯಾವಾಗ ಎದ್ದು ಅಳುವುದೋ ಎಂದು ಕಾಯುತ್ತಾ ತನ್ನ ನಿದ್ರೆ ಬಿಟ್ಟು, ಅದು ಕಕ್ಕ ಮಾಡಿದಾಗ ತೆಗೆದು, ಸ್ನಾನ ಮಾಡಿಸಿ, ದೃಷ್ಟಿಬೊಟ್ಟು ಇಟ್ಟು, ಬಟ್ಟೆ ಉಡಿಸಿ, ದಿನಕ್ಕೆ ನಾಲ್ಕೈದು ಸಲ ಬಟ್ಟೆ ಬದಲಾಯಿಸಿ, ಚಂದಿರನನ್ನು ತೋರಿಸಿ ಊಟ ಮಾಡಿಸಿ, ರಾತ್ರಿ ಮಲಗಿಸಿ, ಅದರ ಆರೈಕೆ ಮಾಡುವ ತಾಯಿಗೆ ಮತ್ತು ಮಗುವಿನ ಭವಿಷ್ಯದ ಕನಸು ಈಡೇರಿಸಲು ಹೇಗೆ ಜಾಸ್ತಿ ದುಡಿದು ಹಣ ಕೂಡಿಡಬಹುದು ಎಂದು ಯೋಚಿಸುವ ತಂದೆಯಿಂದ ದೂರ ಮಾಡುವ ಮಗನ ಹೆಂಡತಿಯ ಬಗ್ಗೆ ಹೈಕೋರ್ಟ್ ಚಾಟಿ ಏಟು ಬೀಸಿದೆ. ಇದು ಸ್ವಲ್ಪ ಬುದ್ಧಿ ಇದ್ದವರಿಗೆ ನಿಜಕ್ಕೂ ದೊಡ್ಡ ಪಾಠವಾಗುತ್ತದೆ. ಇವತ್ತು ಓಲ್ಡ್ ಫರ್ನಿಚರ್ ಗಳನ್ನು ಹೊರಗೆ ಹಾಕುವವರಿಗೆ ನಾಳೆ ನಾವು ಕೂಡ ಓಲ್ಡ್ ಫರ್ನಿಚರ್ ಆಗುತ್ತೇವೆ ಎಂದು ಗೊತ್ತಿರುವುದಲ್ವಾ ಎನ್ನುವ ಪ್ರಶ್ನೆ ನನ್ನಲ್ಲಿ ಉದ್ಭವಿಸುತ್ತದೆ. ಅರ್ಥವಾದವರಿಗೆ ವಿಷಯ ಗೊತ್ತಾಗಿರುತ್ತದೆ!
Leave A Reply