ಮುಕ್ತಿ ವಾಹನ ಹೆಣಕ್ಕಾಗಿ ಕಾಯುತ್ತಿದೆ, ಹಣ ನೀರಿನಂತೆ ಖರ್ಚಾಗುತ್ತಿದೆ!
ಹುಟ್ಟಿದ ಮನುಷ್ಯ ಸಾಯಲೇಬೇಕು. ಸತ್ತ ನಂತರ ಏನಾಗುತ್ತೆ. ಅನುಕೂಲಸ್ಥರಾದರೆ ಯಾವುದಾದರೂ ಬಾಡಿಗೆ ಎಂಬ್ಯುಲೆನ್ಸ್ ಮಾಡಿ ಶವವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಂದ ನಂತರ ಸ್ಮಶಾನಕ್ಕೆ. ಆದ್ದರಿಂದ ಅದು ಒಂದು ಸಮಸ್ಯೆಯಾಗಿ ಕಾಣುವುದಿಲ್ಲ. ಆದರೆ ಎಷ್ಟೋ ಜನರಿಗೆ ಈ ಎಂಬ್ಯುಲೆನ್ಸ್ ನವರು ಚಾರ್ಜ್ ಮಾಡುವುದು ಪೇ ಮಾಡಲು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೆ ಎಷ್ಟೊ ಅನಾಥ ಹೆಣಗಳನ್ನು ವಿಲೇವಾರಿ ಮಾಡುವುದೆಂದರೆ ಅದನ್ನು ಯಾರು ನೋಡುವುದು. ಈ ತೊಂದರೆಯನ್ನು ನೋಡಿದ ಪಾಲಿಕೆಯ ಸದಸ್ಯರೊಬ್ಬರು ಪಾಲಿಕೆಯ ವತಿಯಿಂದ ಒಂದು ಎಂಬ್ಯುಲೆನ್ಸ್ ತಂದು ಇಡೋಣ ಎಂದು ಸಲಹೆ ಕೊಟ್ಟರು. ಸಲಹೆ ಒಳ್ಳೆಯದಿದ್ದ ಕಾರಣ ಪಾಲಿಕೆ ಜೈ ಎಂದಿತ್ತು. ಮತ್ತೊಂದು ಯೋಜನೆ, ಮತ್ತಿಷ್ಟು ಕಮೀಷನ್.
ಮಂಗಳೂರು ಮಹಾನಗರ ಪಾಲಿಕೆ ಏನು ಮಾಡಿತು ಎಂದರೆ ಒಂದು ಮುಕ್ತಿ ವಾಹನ ಎಂದು ಅಂಬ್ಯುಲೆನ್ಸ್ ಅನ್ನು ಖರೀದಿಸಿ ಪಾಲಿಕೆಯ ಅಂಗಣದಲ್ಲಿ ತಂದು ನಿಲ್ಲಿಸಿತು. ಅದಕ್ಕೆ ಪ್ರತಿ ತಿಂಗಳು 40,500 ರೂಪಾಯಿ ಕೊಡುವುದು, ಅದರಲ್ಲಿ ಚಾಲಕನ ಸಂಬಳ, ಡಿಸೀಲ್ ಖರ್ಚು ಎಲ್ಲಾ ಬರಬೇಕು ಎಂದು ತೀರ್ಮಾನವಾಯಿತು. ಮಾಸಿಕ ಎರಡು ಸಾವಿರ ಕಿಲೋಮೀಟರ್ ಹೋಗಬಹುದು ಎಂದು ನಿಗದಿಪಡಿಸಲಾಯಿತು. ಒಂದು ವೇಳೆ ಅದಕ್ಕಿಂತ ಜಾಸ್ತಿ ಖರ್ಚು ಬಂದರೆ ಪಾಲಿಕೆಗೆ ಬಿಲ್ ಕೊಡಬೇಕು ಎಂದು ಸೂಚಿಸಲಾಯಿತು. ಅಲ್ಲಿಗೆ ಪಾಲಿಕೆಯ ಜವಾಬ್ದಾರಿ ಮುಗಿಯಿತು ಎಂದು ಸದಸ್ಯರು ಅಂದುಕೊಂಡರು.
ಮುಕ್ತಿ ವಾಹನ ಪಾಲಿಕೆಯ ಅಂಗಣದಲ್ಲಿ ನಿಂತು ಬಂದಾಗಿನಿಂದ ಇಲ್ಲಿಯ ತನಕ ಯಾರಾದರೂ ಸಾಯ್ತಾರಾ ಎಂದು ನೋಡುತ್ತಿದೆ. ಯಾರಾದರೂ ಸತ್ತರೆ ಮಾತ್ರ ಅದಕ್ಕೆ ಕೆಲಸ. ಯಾರಾದರೂ ಕರೆಯದಿದ್ದರೆ ಅದು ಆಕಳಿಸಿ ಆಕಳಿಸಿ ಅಲ್ಲಿಯೇ ನಿದ್ರೆ ಹೋಗುತ್ತಿದೆ. ಹೀಗೆ ಮುಕ್ತಿ ವಾಹನ ಎನ್ನುವ ಎಂಬ್ಯುಲೆನ್ಸ್ 1.10.2016 ರಿಂದ 15.7.2017 ರ ತನಕ ಒಟ್ಟು 68 ಹೆಣಗಳನ್ನು ತನ್ನ ಗಾಡಿಯಲ್ಲಿ ಮಲಗಿಸಿದೆ. ಸರಾಸರಿ ತಿಂಗಳಿಗೆ 7 ಹೆಣಗಳನ್ನು ಅದು ಸಾಗಿಸಿದೆ. ಉಳಿದ ದಿನಗಳಲ್ಲಿ ಮುಕ್ತಿ ವಾಹನ ಮತ್ತು ಡ್ರೈವರ್ ಇಬ್ಬರೂ “ಆ” ಮಾಡಿ ಕಾಯುವ ಪರಿಸ್ಥಿತಿ ಇದೆ. ಇವರು ಬರಿ ಕಾಯುವುದಾಗಿದ್ದರೆ ಅದಕ್ಕೆ ತುಂಬಾ ಟೆನ್ಷನ್ ಮಾಡಿಕೊಳ್ಳಬೇಕಾಗಿರಲಿಲ್ಲ. ಆದರೆ ಇವರು ಕಾದರೂ, ಕಾಯದೆ ಹೆಣಗಳನ್ನು ಸಾಗಿಸುತ್ತಿದ್ದರೂ ಪಾಲಿಕೆಯಲ್ಲಿ ಮಾತ್ರ ಇದರ ಮೀಟರ್ ಓಡ್ತಾ ಇರುತ್ತದೆಯಲ್ಲ. ತಿಂಗಳಿಗೆ 40500 ಪ್ರಕಾರ ಹತ್ತು ತಿಂಗಳು ಎಂದರೆ ನಾಲ್ಕುವರೆ ಲಕ್ಷ ರೂಪಾಯಿ ಇಲ್ಲಿಯ ತನಕ ವ್ಯಯವಾಗಿದೆ. ಇಷ್ಟು ಹಣ ವ್ಯಯಿಸಿ ಕೇವಲ 68 ಜನರಿಗೆ ಮಾತ್ರ ಉಪಯೋಗವಾಗಿದೆಯಾ? ಇದರರ್ಥ ಮಂಗಳೂರಿನಲ್ಲಿ ಕೇವಲ 68 ಜನ ಮಾತ್ರ ಸತ್ತದ್ದಲ್ಲ, ಆದರೆ ತುಂಬಾ ಜನರಿಗೆ ಇಂತಹ ಒಂದು ವಾಹನ ಇದೆಯೆಂದೇ ಗೊತ್ತಿಲ್ಲ. ಯಾಕೆಂದರೆ ಇದರ ಪ್ರಚಾರ ಆಗಿಲ್ಲ. ತಾವು ಹೋದ ಕಡೆ ತಮ್ಮನ್ನು, ತಮ್ಮ ಪಕ್ಷವನ್ನು ಮಾತ್ರ ಹೊಗಳಿ ಮಾತನಾಡುವ ಭರದಲ್ಲಿ ಮನಪಾ ಸದಸ್ಯರು ಇದರ ಬಗ್ಗೆ ಎಲ್ಲಿಯೂ ಹೇಳುವುದಿಲ್ಲ. ಹೇಳದೆ ಇದ್ದ ಕಾರಣ ಮುಕ್ತಿ ವಾಹನ ಅಪರೂಪಕ್ಕೊಮ್ಮೆ ಶಾಪಿಂಗ್ ಗೆ ಹೋಗುವ ಗೃಹಿಣಿಯಂತೆ ಸಿದ್ಧವಾಗಿ ಪಾಲಿಕೆ ಅಂಗಣದಿಂದ ಹೊರಗೆ ಹೋಗುತ್ತದೆ. ಹೋಗಿ ಮತ್ತೆ ಬಂದು ನಿಂತರೆ ಮುಂದೆ ಯಾವಾಗ ಅದಕ್ಕೆ ಮತ್ತೊಂದು ಹೆಣ ಸಿಗುತ್ತದೆ ಎಂದು ಗೊತ್ತಿಲ್ಲ. ಮುಕ್ತಿ ವಾಹನ ಬಂದ ನಂತರ ಮಂಗಳೂರಿನಲ್ಲಿ ಸಾಯುವವರ ಸಂಖ್ಯೆ ಕಡಿಮೆಯಾಯಿತು ಎಂದು ಪುಣ್ಯಕ್ಕೆ ಯಾವ ಸದಸ್ಯ ಕೂಡ ಇಲ್ಲಿಯ ತನಕ ಹೇಳಿಲ್ಲ. ಹಣ ಮಾತ್ರ ಪಾಲಿಕೆಯ ತಿಜೋರಿಯಿಂದ ಹೋಗುತ್ತಾ ಇದೆ. ಇದನ್ನು ಸರಿಪಡಿಸುವುದು ಹೇಗೆ? ಈ ವಾಹನವನ್ನು ಸರಿಯಾಗಿ ಸದುಪಯೋಗ ಮಾಡುವುದು ಹೇಗೆ? ನಾನೊಂದು ಉಪಾಯ ಮಾಡಿದೆ. ಅದು ಏನು? ನಾಳೆ ಹೇಳ್ತೆನೆ.
Leave A Reply