ಕೊರೊನಾ ನಿತ್ಯ ಹೆಚ್ಚಾಗುತ್ತಿದೆ ವಿನ: ಕಡಿಮೆಯಾಗುತ್ತಿಲ್ಲ. ಸೊಂಕಿತರ ಸಂಖ್ಯೆ ಇವತ್ತು ಎಷ್ಟಾಗುತ್ತೋ ಎನ್ನುವ ಆತಂಕ ಪ್ರತಿ ದಿನ ಬೆಳಿಗ್ಗೆ 11 ಗಂಟೆ ಮತ್ತು ಸಂಜೆ 4 ಗಂಟೆಗೆ ಶುರುವಾಗುತ್ತದೆ. ಯಾಕೆಂದರೆ ಅದು ಹೆಲ್ತ್ ರಿಪೋರ್ಟ್ ಬರುವ ಹೊತ್ತು. ಜಿಲ್ಲಾಡಳಿತ ಬಿಡುಗಡೆಗೊಳಿಸುವ ಆ ಅಂಕಿಸಂಖ್ಯೆಗಳನ್ನು ನೋಡಿ ನಿಟ್ಟುಸಿರು ಬಿಡುವ ನಮ್ಮ ಜನರು ಇವತ್ತು ಪಕ್ಕದ ಊರಿನಲ್ಲಿರುವುದು ನಾಳೆ ನಮ್ಮ ಮನೆಯ ಅಂಗಳಕ್ಕೂ ಬರುತ್ತದೆ ಎನ್ನುವ ಟೆನ್ಷನ್ ಮಾತ್ರ ಮಾಡುತ್ತಿಲ್ಲ. ಬೇಕಾದರೆ ಇದನ್ನು ನೋಡಲು ನೀವು ಒಂದು ಸುತ್ತು ಮಂಗಳೂರಿನಲ್ಲಿ ತಿರುಗಿ ಬರಬಹುದು. ಎಷ್ಟು ಜನ ಮಾಸ್ಕ್ ಧರಿಸಿದ್ದಾರೆ ಎನ್ನುವುದು ನೋಡುವಾಗ ಗೊತ್ತಾಗುತ್ತದೆ. ಅದರಲ್ಲಿ ಎಷ್ಟು ಜನ ಸರಿಯಾಗಿ ಧರಿಸಿದ್ದಾರೆ ಎನ್ನುವುದನ್ನು ಗಮನಿಸಿ. 25 ರಿಂದ 30 ಶೇಕಡಾ ಜನರು ಮಾಸ್ಕ್ ಧರಿಸುತ್ತಿಲ್ಲ. ಇನ್ನು ಕೆಲವರು ಕುತ್ತಿಗೆಗೆ ಮಾತ್ರ ಕೊರೊನಾ ಬಂದು ಕಚ್ಚುತ್ತದೋ ಎಂದು ಕಿವಿಗೆ ನೇತಾಡಿಸಿ ಕುತ್ತಿಗೆಗೆ ಇಳಿಸಿಬಿಟ್ಟಿರುತ್ತಾರೆ. ಅವರಿಗೆ ಮುಖದ ರಂಧ್ರಗಳಿಂದ ಕೋವಿಡ್ 19 ಎನ್ನುವ ವೈರಾಣು ದೇಹ ಪ್ರವೇಶಿಸುತ್ತದೆ ಎನ್ನುವುದೇ ಗೊತ್ತಿಲ್ಲದಿದ್ದರೆ ಅವರು ಮಾಸ್ಕ್ ಧರಿಸಿ ಏನು ಪ್ರಯೋಜನ. ಅದರಲ್ಲಿಯೂ ನೀವು ಬಸ್ಸುಗಳಲ್ಲಿ ನೋಡಬೇಕು. ಸಾಮಾಜಿಕ ಅಂತರ ಬಿಡಿ, ಅದನ್ನು ಪರಿಪಾಲಿಸಲು ಆಗಲ್ಲ ಎಂದು ಬಸ್ಸಿನ ಮಾಲೀಕರು ಬಹಿರಂಗವಾಗಿ ಒಪ್ಪಿಕೊಂಡಿರುವುದರಿಂದ ಅವರಿಗೆ ಈ ಬಗ್ಗೆ ಪಾಠ ಮಾಡುವುದು ವೇಸ್ಟ್. ಆದರೆ ಕನಿಷ್ಟ ಕಂಡಕ್ಟರ್ ಮಾಸ್ಕ್ ಸರಿಯಾಗಿ ಧರಿಸಬಹುದಲ್ಲ. ಹೆಚ್ಚಿನವರಿಗೆ ಅದೊಂದು ಕುಶಾಲ್ ಆಗಿಬಿಟ್ಟಿದೆ. ಇನ್ನು ಮಾರ್ಗದ ಬದಿಯಲ್ಲಿ ಮಾಸ್ಕ್ ಮಾರುವುದು ಶುರುವಾಗಿದೆ. ಆ ಬೀದಿಬದಿ ಮಾಸ್ಕ್ ಗಳನ್ನು ಧರಿಸುವುದರಿಂದ ನಾವು ಸೇಫಾ? ಧರಿಸದವರ ಲಕ್ ಸರಿಯಿದ್ರೆ ಪಾಸ್. ಇಲ್ಲದಿದ್ದರೆ ಪಾಸಿಟಿವ್. ಹೀಗೆ ಬೀದಿಬದಿಯಲ್ಲಿ ಮಾಸ್ಕ್ ಮಾರುವ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ. ಇನ್ನು ಆಶ್ಚರ್ಯ ಎಂದರೆ ಆ ಮಾಸ್ಕ್ ಮೇಲೆ ಎಂಆರ್ ಪಿ 99 ರೂಪಾಯಿ ಎಂದು ಬರೆದಿರುತ್ತಾರೆ. ಆದರೆ ಅದನ್ನು ನೀವು ಕೇಳಿದ ಬೆಲೆಗೆ ಕೊಡುತ್ತಾರೆ. ಎಷ್ಟೋ ಜನ ಅದನ್ನು 50-60 ರೂಪಾಯಿಗೆ ಖರೀದಿಸುತ್ತಾರೆ. ಹಾಗಾದರೆ ಅದರ ನಿಜವಾದ ಬೆಲೆ ಎಷ್ಟು? 20, 30, 40 ರೂಪಾಯಿ? ಇಂತಹ ವ್ಯಾಪಾರ ಮಾಡುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಇದೆಯಾ? ಹೊಟ್ಟೆಪಾಡಿಗೆ ಮಾಡುತ್ತಾರೆ ಎಂದು ಹಾಗೆ ಬಿಡಲೂ ಇದು ಆರೋಗ್ಯದ ಪ್ರಶ್ನೆ ಅಲ್ವಾ? ಮೊನ್ನೆಯಿಂದ ದೆಹಲಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ಶಾಲೆ ಶುರುವಾದ ಮೇಲೆ ಕ್ಲಾಸಿನಲ್ಲಿ ಧರಿಸಲು ಮಾಸ್ಕ್ ಅನ್ನು ಶಾಲೆಯಿಂದಲೇ ಖರೀದಿಸಬೇಕು ಎನ್ನುವ ನಿಯಮ ಮಾಡಲಾಗಿದೆಯಂತೆ. ಪ್ರತಿ ಮಾಸ್ಕ್ ಗೆ 400 ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ ಎಂದು ಸುದ್ದಿ. ಇದು ಎಷ್ಟು ನಿಜ, ಸುಳ್ಳು ಎನ್ನುವುದು ಬೇರೆ ವಿಷಯ. ಆದರೆ ಇಂತಹುದೊಂದು ಐಡಿಯಾವನ್ನು ಸೋಶಿಯಲ್ ಮೀಡಿಯಾ ಮೂಲಕ ಕೆಲವರು ಎಲ್ಲ ಶಾಲೆಯವರಿಗೆ ಕೊಟ್ಟಿದ್ದಾರೆ ಎನ್ನುವುದು ನಿಜ. ಇವತ್ತಿನ ದಿನಗಳಲ್ಲಿ ಬಹುತೇಕ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಪುಸ್ತಕಗಳನ್ನು, ಸ್ಕೂಲ್ ಬ್ಯಾಗ್, ಯೂನಿಫಾರ್ಮಂ ಸಹಿತ ಶೂ ನಿಂದ ಹಿಡಿದು ಪೆನ್ಸಿಲ್ ತನಕ ಶಾಲೆಯಲ್ಲಿಯೇ ಖರೀದಿಸಬೇಕು ಎಂದು ಹೇಳುತ್ತಿವೆ. ಅದಕ್ಕೆ ಈ ಬಾರಿ ಮಾಸ್ಕ್ ಕೂಡ ಸೇರಲಿದೆ. ಮಾಸ್ಕ್ ಗೆ ದೆಹಲಿಯಲ್ಲಿ 400 ಇದ್ದರೆ ಇಲ್ಲಿ 250 ಎಂದು ಹಾಕಿ ಮಾರಿದರೂ ಯಾವ ಪೋಷಕ ಕೂಡ ಮಾತನಾಡಲಿಕ್ಕಿಲ್ಲ.
ಇನ್ನು ರಿಕ್ಷಾಗಳಲ್ಲಿ ಇಬ್ಬರೇ ಪ್ರಯಾಣಿಕರು ಹಾಕಿ ಹೋಗಬೇಕು ಎನ್ನುವ ನಿಯಮ ಗಾಳಿಗೆ ತೂರಿ ಹೋಗಿದೆ. ದ್ವಿಚಕ್ರ ವಾಹನಗಳಲ್ಲಿ ಮೂವರು ಪ್ರಯಾಣಿಸುತ್ತಿದ್ದಾರೆ. ಮೂವರಲ್ಲಿ ಇಬ್ಬರಿಗೆ ಮಾಸ್ಕೇ ಇರುವುದಿಲ್ಲ. ಇವರಿಗೆಲ್ಲಾ ಬುದ್ಧಿ ಬರುವುದು ಯಾವಾಗ? ಮಾಸ್ಕ್ ಹಾಕದೇ ಹೋಗುವವರಿಗೆ 200 ರೂಪಾಯಿ ದಂಡ ಎಂದು ಹೇಳಲಾಗಿದೆ. ಆದರೆ ಹಾಕುವುದು ಯಾರು? ಮಂಗಳೂರಿನಲ್ಲಿ ಎಷ್ಟು ಮಂದಿಗೆ ದಂಡ ಹಾಕಲಾಗಿದೆ. ಇನ್ನು ನಾಳೆಯಿಂದ ಹೋಟೇಲ್, ಮಾಲ್ ಗಳು ತೆರೆಯುತ್ತಿವೆ. ಈಗಾಗಲೇ ತೆರಿದಿರುವ ಮಾರ್ಕೆಟಿನಲ್ಲಿ ಸಾಮಾಜಿಕ ಅಂತರ ಇಲ್ಲವೇ ಇಲ್ಲ. ನನಗೊಬ್ಬನಿಗೆ ಏನೂ ಆಗುವುದಿಲ್ಲ ಎನ್ನುವ ಭಂಡತನ ಎಲ್ಲರಲ್ಲಿಯೂ ಇದೆ. ಆದ್ದರಿಂದ ಇದು ನಿರ್ಲಕ್ಷ್ಯದ ಹಂತಕ್ಕೆ ಬಂದು ತಲುಪಿದೆ. ಇನ್ನು ದಂಡ ಹಾಕಲಾಗುತ್ತದೆ ಎಂದು ಪ್ರಚಾರ ಆದರೆ ಪೊಲೀಸರು ದೂರದಲ್ಲಿ ಕಾಣಿಸುವಾಗ ಸರಕ್ಕನೆ ಮಾಸ್ಕ್ ಕುತ್ತಿಗೆಯಿಂದ ಮೂಗಿನ ತನಕ ತಂದು ಹಾಕಬಹುದೇನೋ. ಕೋವಿಡ್ 19 ನಮ್ಮ ಪಕ್ಕದಲ್ಲಿ ಕುಳಿತು ಉಸಿರಾಡುತ್ತಿದೆ ಎನ್ನುವುದು ನಮಗೆ ಗೊತ್ತಿದೆ. ಆದರೂ ಕಣ್ಣಿಗೆ ಕಾಣದನ್ನು ನಾವು ನಂಬುವುದಿಲ್ಲ ಎಂದು ಸಾಬೀತು ಪಡಿಸುತ್ತಿದ್ದೇವೆ. ಯಾಕೋ ಕೊರೊನಾ ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಹೋಗುವ ಲಕ್ಷಣ ಇಲ್ಲ. ಉಳಿದ ಕಥೆ ದೇವರಿಗೆ ಗೊತ್ತು!!
- Advertisement -
Leave A Reply