ಕಾಂಗ್ರೆಸ್ ಕೈಯಲ್ಲಿ ಅಸ್ತ್ರ ಕೊಟ್ಟಿದ್ದು ಉತ್ತರಿಸುವ ಸರದಿ ಬಿಜೆಪಿಯದ್ದು!!
ಬಹುತೇಕ ಆರು ವರ್ಷಗಳ ನಂತರ ಈಗ ವಿಷಯ ಸಿಕ್ಕಿರುವುದು ಕೈ ಪಾಳಯದಲ್ಲಿ ಸಣ್ಣ ಮಟ್ಟಿಗಿನ ಆಶಾಭಾವನೆಯನ್ನು ಮೂಡಿಸಿದೆ. ಯಾಕೆಂದರೆ 2013-14 ರಲ್ಲಿ ಕಾಂಗ್ರೆಸ್ಸನ್ನು ಅಕ್ಷರಶ: ಜನರ ಮುಂದೆ ಮಂಡಿಯೂರುವಂತೆ ಮಾಡಿದ್ದ ಬಿಜೆಪಿಗೆ ಆವತ್ತು ಸಿಕ್ಕಿದ ವಿಷಯವೇ ಹಾಗಿತ್ತು. ಬಿಜೆಪಿಯ ಮುಖಂಡರು ಆವತ್ತು ಹಳ್ಳಿಯಿಂದ ದಿಲ್ಲಿಯ ತನಕ ನಡುಬೀದಿಯಲ್ಲಿ ಕುಳಿತು ಅಡುಗೆ ಮಾಡಿ ಕಾಂಗ್ರೆಸ್ಸನ್ನು ಯಾವ ಪರಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದರೆಂದರೆ ಮಹಾಮೌನಿ ಮನಮೋಹನ್ ಸಿಂಗ್ ಮುಚ್ಚಿದ್ದ ಬಾಯಿಗೆ ಹೊಲಿಗೆ ಹಾಕಿ ಬಿಟ್ಟಿದ್ದರು.
ಕಾಂಗ್ರೆಸ್ ತನ್ನ ಯುಪಿಎ 1 ಮತ್ತು 2 ಸೇರಿ ದಶಕದ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ಕೊಂಪೆಯಿಂದ ಮೇಲೆಳಲಾರದೇ ಒದ್ದಾಡುತ್ತಾ ಪೆಟ್ರೋಲ್, ಡಿಸೀಲ್ ಬೆಲೆ ಏರಿಕೆಯ ಕೂಪದಲ್ಲಿಯೂ ಬಿದ್ದು ಹೇಗೆ ಒದ್ದಾಡಿತ್ತು ಎಂದರೆ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವ ಕನಸು ಕೂಡ ಗಾಂಧಿ ಕುಟುಂಬಕ್ಕೆ ಬೀಳುವ ಚಾನ್ಸೆ ಇರಲಿಲ್ಲ. ಅದಾಗಿ ಬರೊಬ್ಬರೀ ಆರು ವರ್ಷಗಳಾಗಿವೆ. ಸದ್ಯಕ್ಕೆ ಚುನಾವಣೆ ಕೇಂದ್ರದಲ್ಲಿ ಇಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಕೈಗೆ ಸಿಕ್ಕಿದ ಸುರುಸುರಿ ಕಡ್ಡಿಯನ್ನು ಕೂಡ ಬಿಡುವ ಮನಸ್ಥಿತಿ ಇಲ್ಲ. ಬಹಿರಂಗವಾಗಿ ಹೋರಾಟಕ್ಕೆ ಇಳಿಯಲು ಸಾಮಾಜಿಕ ಅಂತರದ ಸಮಸ್ಯೆ ಅಡ್ಡಿ ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಹೋರಾಟಕ್ಕೆ ಇಳಿದಿದೆ. ಇನ್ನೊಂದು ಕಡೆ ಬಿಜೆಪಿ ಮುಖಂಡರು ಚುನಾವಣೆ ದೂರ ಇರುವುದರಿಂದ ಅಂತಹ ಉತ್ಸಾಹವನ್ನು ತೋರಿಸುವ ಮೂಡ್ ನಲ್ಲಿಲ್ಲ. ಆದರೆ ಬರುವ ದಿನಗಳಲ್ಲಿ ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ದರಕ್ಕೆ ಅಂಕುಶ ಹಾಕದಿದ್ದರೆ ಬಿಜೆಪಿ ಇಮೇಜ್ ಕಳೆದುಕೊಳ್ಳುವ ಹಾದಿಗೆ ಹೊರಳುವುದು ಖಚಿತ. ಎಷ್ಟೇ ಮೋದಿ ಮೇಲೆ ವಿಶ್ವಾಸ ಇಟ್ಟರೂ ಎದುರಿಗೆ ನಿಂತ ರಾಹುಲ್ ಗಾಂಧಿ(!) ಗೆ ಮತ ಕೊಡಲು ಮನಸ್ಸು ಇಲ್ಲದಿದ್ದರೂ 2024ಕ್ಕೆ ಇದೇ ವಿಷಯ ಉಳಿದರೆ ಜನ ಕಮಲ ಬಿಟ್ಟು ಕೈ ಹಿಡಿದರೂ ಅಚ್ಚರಿ ಪಡಬೇಕಾಗಿಲ್ಲ ಎನ್ನುವ ಸಣ್ಣ ಸತ್ಯ ಬಿಜೆಪಿ ಮುಖಂಡರ ಮನಸ್ಸಿನಲ್ಲಿ ಇದ್ದರೆ ಒಳ್ಳೆಯದು. ಅತೀ ಆತ್ಮವಿಶ್ವಾಸ ಪೆಟ್ರೋಲ್ ನಲ್ಲಿ ಕರಗಿ ಹೋಗದಿರಲಿ.
ಯಾಕೆಂದರೆ ಡಾಲರ್ ಬೆಲೆ, ಬ್ಯಾರಲ್ ಮೌಲ್ಯ, ಅಂತರಾಷ್ಟ್ರೀಯ ಮಾರುಕಟ್ಟೆ, ಗಡಿ ಅಭಿವೃದ್ಧಿ, ಸೈನ್ಯದ ಉನ್ನತೀಕರಣ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಪ್ಯಾಕೇಜುಗಳು ಎಲ್ಲವನ್ನು ಎಷ್ಟೇ ಹೇಳಿದರೂ ಕೊನೆಗೆ ಮತ ಹಾಕುವ ಶ್ರೀಸಾಮಾನ್ಯ ತನ್ನ ಟೋಮೆಟೊ, ಬಟಾಟೆ, ಬಸ್ ಟಿಕೆಟ್ ಗೆ ಎರಡು ರೂಪಾಯಿ ಜಾಸ್ತಿಯಾಗಿದೆ ಸ್ವಾಮಿ ಎಂದು ಗಟ್ಟಿಯಾಗಿ ಹಟ ಹಿಡಿದರೆ, 2024 ರಲ್ಲಿ “ನಮಗೆ ಅವಕಾಶ ಕೊಡಿ ಪೆಟ್ರೋಲ್ , ಡಿಸೀಲ್ ಬೆಲೆ 30 ರೂಪಾಯಿಗೆ ತರುತ್ತೇವೆ” ಎಂದು ರಾಹುಲ್ ತಮ್ಮ ತಂದೆ ರಾಜೀವ್ ಹೇರ್ ಸ್ಟೈಲ್ ನಲ್ಲಿ ಮತ್ತು ಪ್ರಿಯಾಂಕಾ ವಾದ್ರಾ ತಮ್ಮ ಅಜ್ಜಿ ಇಂದಿರಾ ಸೀರೆ ಉಡುವ ರೀತಿಯಲ್ಲಿ ಉಟ್ಟು ಹೇಳಿದರೆ ಜನರಿಗೆ ಪೆಟ್ರೋಲ್ , ಡಿಸೀಲ್ ಮಾರುವ ಬಂಕ್ ಗಳು ಕಣ್ಣಿನಲ್ಲಿ ಕಂಡು ಹಾದು ಹೋಗುತ್ತವೆ ವಿನ: ಬೇರೆ ಏನೂ ಕಾಣಿಸಲ್ಲ. ಡಿಸೀಲ್ ದರ ಹೆಚ್ಚಾಗುವಾಗ ಅದು ಮಾತ್ರ ಹೆಚ್ಚಾಗುವುದಿಲ್ಲ. ಅದರೊಂದಿಗೆ ಅದಕ್ಕೆ ಸಂಬಂಧಪಟ್ಟ ಇತರ ಉತ್ಪನ್ನಗಳು ಕೂಡ ಹೆಚ್ಚಾಗುತ್ತವೆ. ಉದಾಹರಣೆಗೆ 10 ಲಕ್ಷ ಟನ್ ತೊಂಡೆಕಾಯಿ ತುಮಕೂರಿನಿಂದ ಮಂಗಳೂರಿಗೆ ಲಾರಿಯಲ್ಲಿ ಬರುತ್ತೆ ಎಂದು ಇಟ್ಟುಕೊಳ್ಳೋಣ. ಅದಕ್ಕೆ ಲಾರಿ ಬಾಡಿಗೆ 12 ಸಾವಿರ ಆಗುತ್ತೆ ಎಂದು ಅಂದಾಜು ಮಾಡೋಣ. ಡಿಸೀಲ್ ಲೀಟರಿಗೆ ಇಪ್ಪತ್ತು ದಿನಗಳ ಅಂತರದಲ್ಲಿ 10 ರೂಪಾಯಿ ಜಾಸ್ತಿ ಆದರೆ ಲಾರಿಯ ಮಾಲೀಕ ಹನ್ನೆರಡರಿಂದ ಹದಿಮೂರು ಸಾವಿರ ರೂಪಾಯಿಗೆ ಏರಿಸುತ್ತಾನೆ. ಅದು ಇಲ್ಲಿ ಬಂದು ಮಾರುವ ಸಂದರ್ಭದಲ್ಲಿ ಕಿಲೋಗೆ ಎರಡು ರೂಪಾಯಿ ಏರಿಸಲಾಗುತ್ತದೆ. ಇದು ಕೇವಲ ಒಂದು ತರಕಾರಿಯ ವಿಷಯ ಅಲ್ಲ. ಪ್ರತಿ ತರಕಾರಿ, ಮಾಂಸ, ಮೊಟ್ಟೆ, ಅಡುಗೆ ಸಾಮಾನುಗಳ ಪ್ರಶ್ನೆ.
ಇನ್ನು ಕಾಂಗ್ರೆಸ್ಸಿನವರು ಅಂಕಿಅಂಶಗಳ ಜೊತೆಗೆ ವಾದ ಮಂಡಿಸುತ್ತಿದ್ದಾರೆ. ತಮ್ಮ ಎರಡು ಅವಧಿಯಲ್ಲಿ ಒಂದು ಬ್ಯಾರಲ್ ಗೆ ಇದ್ದ ದರ ಮತ್ತು ಅದನ್ನು ಜನಸಾಮಾನ್ಯರ ಮೇಲೆ ನಾವು ಹಾಕದೇ ಹೇಗೆ ರಕ್ಷಿಸಿದ್ದೇವೆ ಎನ್ನುವ ಅಂಶ ಎದುರಿಗೆ ಇಡುತ್ತಿದ್ದಾರೆ. ಈಗ ಬ್ಯಾರಲ್ ಗೆ ತುಂಬಾ ಕಡಿಮೆ ಆಗಿರುವಾಗ ಆ ಲಾಭವನ್ನು ಜನರಿಗೆ ವರ್ಗಾಯಿಸಬಹುದಲ್ಲ ಎನ್ನುತ್ತಿದ್ದಾರೆ. ಇಲ್ಲಿ ವಿಷಯ ಏನೆಂದರೆ ಯುಪಿಎ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ಯಾರಲ್ ಗೆ ದರ ಏರಿತ್ತು ನಿಜ. ಆದರೆ ಆಗ ಮನಮೋಹನ್ ಸಿಂಗ್ ಸರಕಾರ ಏನು ಮಾಡಿತ್ತು ಎಂದರೆ ಆಯಿಲ್ ಬಾಂಡ್ ಜಾರಿಗೊಳಿಸಿತ್ತು. ಇದೊಂದು ಪೆಟ್ಟು ತಪ್ಪಿಸುವ ಪ್ರಯತ್ನ. ಕೇಂದ್ರ ಸರಕಾರ ಆವತ್ತಿನ ಅಷ್ಟೂ ತೈಲ ಕಂಪೆನಿಗಳನ್ನು ಕೋಟ್ಯಾಂತರ ರೂಪಾಯಿ ಸಾಲದಲ್ಲಿ ಮುಗಿಸಿತ್ತು. ಅದನ್ನು ತುಂಬುತ್ತಿರುವುದು ಈಗಿನ ಮೋದಿ ಸರಕಾರ. ಈಗ ಬ್ಯಾರಲ್ ದರ ಇಳಿದಿರುವಾಗಲೂ ಆವತ್ತಿನಷ್ಟೇ ಹಣ ಲೀಟರ್ ಗೆ ಇರುವುದು ಸರಿಯಾ ಎನ್ನುವುದು ಕಾಂಗ್ರೆಸ್ಸಿಗರ ಪ್ರಶ್ನೆ. ಅದು ಒಂದು ವೇಳೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತರೆ ಸಮಸ್ಯೆ ಕೇಂದ್ರ ಸರಕಾರಕ್ಕೆ. ಆ ನಿಟ್ಟಿನಲ್ಲಿ ಮೋದಿ ಈ ಪರಿಸ್ಥಿತಿಯನ್ನು ಜನರಿಗೆ ವಿವರಿಸಲಿ. ಆಗಿರುವ ಲಾಭ ಮತ್ತು ಅದು ಖರ್ಚಾಗುತ್ತಿರುವ ರೀತಿಯನ್ನು ತಿಳಿಸಲಿ. ಮೋದಿಯನ್ನು ಜನ ಈಗಲೂ ನಂಬುತ್ತಾರೆ. ಹೇಳುವುದನ್ನು ಕೂಡಲೇ ಹೇಳಿಬಿಟ್ಟರೆ ಒಳ್ಳೆಯದು, ಮನ್ ಕಿ ಬಾತ್ ನಲ್ಲಿ!
Leave A Reply