ಪೂಜಿಸಲೆಂದೆ ಹೂಗಳ ತಂದೆ, ನಿನ್ನ ದರ್ಶನಕ್ಕಾಗಿ ನಾ ನಿಂತೆ, ತೆರೆಯೋ ಬಾಗಿಲನ್ನು ಓ ರಾಮ ಎನ್ನುವ ಭಕ್ತಿಗೀತೆ ಇದೆ. ಹಾಗೆ ಅರ್ಜಿಯ ತಂದೆ, ಹಣ ಕಟ್ಟಲೆಂದೇ, ತೆರೆಯ ಬಾಗಿಲನ್ನು ಓ ದಿವಾಕರ ಎಂದು ಬರೆಯಬೇಕಿದೆ. ಆರಂಭದಲ್ಲಿಯೇ ಒಂದು ಮಾತು ಹೇಳುತ್ತೇನೆ. ಕೊರೊನಾ ವಿರುದ್ಧ ಎಚ್ಚರಿಕೆಯನ್ನು ತೆಗೆದುಕೊಳ್ಳಲೇಬೇಕು. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ತಲೆಬುಡವಿಲ್ಲದ ಎಚ್ಚರಿಕೆಯನ್ನು ತೆಗೆದುಕೊಳ್ಳುವುದರಿಂದ ಅದರಿಂದ ಆಗುವುದು ಏನೂ ಇಲ್ಲ. ಮಂಗಳೂರು ಮಹಾನಗರ ಪಾಲಿಕೆ ಕಳೆದ ಸೋಮವಾರದಿಂದ ಶನಿವಾರದ ತನಕ ಒಂದು ವಾರ ಬಂದ್ ಆಗಿತ್ತು. ಅದಕ್ಕೆ ಕಾರಣ ಪಾಲಿಕೆಯ ಆರೋಗ್ಯ ವಿಭಾಗದ ಹೆಲ್ತ್ ಇನ್ಸಪೆಕ್ಟರ್ ಒಬ್ಬರ ಮಗಳು ದುಬೈಯಿಂದ ಬಂದು ಕೋವಿಡ್ 19 ಪಾಸಿಟಿವ್ ಆಗಿದ್ದರೂ ಆಕೆಯ ತಾಯಿ ಪಾಲಿಕೆಗೆ ಕೆಲಸಕ್ಕೆ ಬಂದ ಕಾರಣ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಅದು ಮೊನ್ನೆ ಶನಿವಾರಕ್ಕೆ ಮುಗಿದಿದೆ. ಪಾಲಿಕೆಯ ಕಮೀಷನರ್ ಅಥವಾ ಮೇಯರ್ ಪರಸ್ಪರ ಸಮಾಲೋಚಿಸಿ ಏನು ಮಾಡಬೇಕಿತ್ತು ಎಂದರೆ ಮುಂದಿನ ಸೋಮವಾರ ಅಂದರೆ ಜುಲೈ 6 ರಿಂದ ಪಾಲಿಕೆಯನ್ನು ಸಾರ್ವಜನಿಕರಿಗೆ ತೆರೆಯಬೇಕಾ ಎನ್ನುವ ಪ್ರಶ್ನೆಗೆ ಉತ್ತರ ಕಂಡುಹಿಡಿಯಬೇಕಿತ್ತು. ನಂತರ ಮಾಧ್ಯಮಗಳಲ್ಲಿ ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕಿತ್ತು. ಆದರೆ ಏನೂ ಮಾಡಲಿಲ್ಲ. ಸೋಮವಾರ ಬೆಳಿಗ್ಗೆ ಜನರು ತಮ್ಮ ಕೆಲಸಕಾರ್ಯಗಳಿಗಾಗಿ ಪಾಲಿಕೆಗೆ ಬಂದರು. ಆದರೆ ಕಳೆದ ವಾರದ ಪರಿಸ್ಥಿತಿ ಪಾಲಿಕೆಯಲ್ಲಿ ಇತ್ತು. ಜನರಿಗೆ ಒಳಗೆ ಪ್ರವೇಶ ನಿರ್ಭಂದ ಮುಂದುವರೆದಿತ್ತು. ಇದರಿಂದ ತೊಂದರೆ ಯಾರಿಗೆ? ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಬೇರೆ ಬೇರೆ ಕಡೆಯಿಂದ ಬಂದು ಅಲ್ಲಿ ಹೊರಗೆ ದ್ವಾರದ ಬಳಿ ಕೊಟ್ಟು ಹೋಗುವುದೇ ಆದರೆ ಅದನ್ನು ಕಳೆದ ವಾರ ಮಾಡುತ್ತಿದ್ದರು. ಆದರೆ ಪಾಲಿಕೆ ಒಂದೇ ವಾರ ಬಂದ್ ಎಂದು ಹೇಳಿದ್ದು ಯಾಕೆ?
ನಿಮಗೆ ಇನ್ನೊಂದು ವಿಷಯ ಹೇಳುತ್ತೇನೆ. ಪಾಲಿಕೆಯ ಒಳಗೆ ನಾಗರಿಕರಿಗೆ ಮಾತ್ರ ಪ್ರವೇಶ ನಿರ್ಭಂಧಿಸಲಾಗಿದೆ. ಮನಪಾ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒಳಗೆ ಹೋಗಿ ಬರುತ್ತಿದ್ದಾರೆ. ಎಲ್ಲಿಯ ತನಕ ಅಂದರೆ ಗುತ್ತಿಗೆದಾರರು ಕೂಡ ಸೀದಾ ಮಾವನ ಮನೆಗೆ ನಡೆದುಬಂದ ಹಾಗೆ ಬಂದು ಪಾಲಿಕೆಯ ಒಳಗೆ ಹೋಗುತ್ತಿದ್ದಾರೆ. ಅವರನ್ನು ಸೆಕ್ಯೂರಿಟಿಯವರು ಯಾಕೆ ತಡೆಯುವುದಿಲ್ಲ. ಇದರ ಅರ್ಥ ಏನು? ಕೊರೊನಾ ಕೇವಲ ಜನಸಾಮಾನ್ಯರ ಒಳಗೆ ಮಾತ್ರ ಪ್ರವೇಶ ಮಾಡುತ್ತದೆಯಾ? ಗುತ್ತಿಗೆದಾರರು ಮತ್ತು ಅಧಿಕಾರಿಗಳು ಜನರ ರಕ್ತ ಹೀರಿ ಭ್ರಷ್ಟಾಚಾರ ಮಾಡಿರುವುದರಿಂದ ಅವರ ರಕ್ತ ಅಶುದ್ಧವಾಗಿರುತ್ತದೆ ಎಂದು ಲೆಕ್ಕ ಹಾಕಿ ಬಿಟ್ಟುಬಿಡುತ್ತದೆಯಾ? ಇನ್ನು ಯಾರ ಮಗಳಿಗೆ ಕೋವಿಡ್ 19 ಇದೆ ಎಂದು ಆ ಹೆಲ್ತ್ ಇನ್ಸಪೆಕ್ಟರ್ ಅವರ ಕಾರಣದಿಂದಾಗಿ ಪಾಲಿಕೆ ಬಂದಾಗಿದೆಯೋ ಅವರು ಕುಳಿತುಕೊಳ್ಳುವ ಕ್ಯಾಬಿನ್ ನಲ್ಲಿ ಅವರ ಸಹೋದ್ಯೋಗಿಗಳಾಗಿರುವ ಇತರ ಆರು ಜನ ಹೆಲ್ತ್ ಇನ್ಸಪೆಕ್ಟರ್ ಗಳು ಈಗಲೂ ಅಲ್ಲಿಯೇ ಕುಳಿತು ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲಿಯೇ ಪಕ್ಕದ ಕ್ಯಾಬೀನ್ ನಲ್ಲಿ ಕೂಡ ಆರೋಗ್ಯ ವಿಭಾಗದ ಎಲ್ಲಾ ಸಿಬ್ಬಂದಿಗಳು ಕೆಲಸದಲ್ಲಿ ಇದ್ದಾರೆ. ಪಾಲಿಕೆಯ ಒಳಗೆ ಕೆಲಸ ನಡೆಯುತ್ತಿದೆ. ಜನರು ಮಾತ್ರ ಮುಖ್ಯದ್ವಾರದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರಿಗೆ ತಮ್ಮ ಅರ್ಜಿ, ದಾಖಲೆ ಕೊಟ್ಟು ಹೋಗಬೇಕು. ಇನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಸಾಮಾನ್ಯವಾಗಿ ಮಾರ್ಚ್ ನಿಂದ ಜೂನ್ ಒಳಗೆ ಕಟ್ಟಬೇಕಾಗುತ್ತದೆ. ಆದರೆ ಈ ಬಾರಿ ಎಪ್ರಿಲ್, ಮೇ ತಿಂಗಳಲ್ಲಿ ಲಾಕ್ ಡೌನ್ ಇದ್ದ ಕಾರಣ ಜುಲೈ ಅಂತ್ಯದೊಳಗೆ ಕಟ್ಟಿದರೆ ಸಾಕು ಎನ್ನುವ ವಿನಾಯಿತಿಯನ್ನು ಕೊಡಲಾಗಿತ್ತು. ಜುಲೈ ಒಳಗೆ ಕಟ್ಟಿದರೆ 5% ವಿನಾಯಿತಿಯನ್ನು ಕೂಡ ನೀಡಲಾಗಿತ್ತು. ಆದರೆ ಜುಲೈಯಲ್ಲಿ ಇವರದ್ದೇ ತಪ್ಪಿನಿಂದ ಈಗಾಗಲೇ ಒಂದು ವಾರ ಬಂದ್ ಆಗಿ ಕಳೆದುಹೋಗಿದೆ. ಇನ್ನು ಯಾವಾಗ ಪಾಲಿಕೆ ಜನಸಾಮಾನ್ಯರಿಗಾಗಿ ತೆರೆಯುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಿರುವಾಗ ಇದಕ್ಕೆ ಯಾರು ಹೊಣೆ. ಒಂದು ವೇಳೆ ಮುಂದಿನ ಸೋಮವಾರದಿಂದ ಪಾಲಿಕೆ ತೆರೆದ ಕೂಡಲೇ ಜನ ಕೊನೆಯ 15 ದಿನ ಎನ್ನುವ ಗಡಿಬಿಡಿಯಲ್ಲಿ ಕಟ್ಟಲು ಓಡೋಡಿ ಬರುತ್ತಾರೆ. ಸಹಜವಾಗಿ ಪಾಲಿಕೆಯಲ್ಲಿ ರಶ್ ಆಗುತ್ತದೆ. ಆಗ ಸಾಮಾಜಿಕ ಅಂತರ ಇರುತ್ತದೆಯಾ? ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ ಎಂಭತ್ತು ಸೊಂಕೀತರು ಬರುವಷ್ಟರ ಮಟ್ಟಿಗೆ ಕೊರೊನಾ ಭೀಕರತೆ ಕಾಣಿಸಿಕೊಂಡಿದೆ. ಮೊದಲು ಸರಕಾರಿ ವ್ಯವಸ್ಥೆಯಲ್ಲಿಯೇ 14 ದಿನ ಕ್ವಾರಂಟೈನ್ ಎಂದು ಇತ್ತು. ನಂತರ ಸೊಂಕೀತರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಏಳು ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ನಂತರ ಏಳು ದಿನ ಮನೆಯಲ್ಲಿಯೇ ಕ್ವಾರಂಟೈನ್ ಎಂದು ಹೇಳಲಾಗಿತ್ತು. ಇನ್ನು ಮುಂದೆ 14 ದಿನ ಕೂಡ ಹೋಂ ಕ್ವಾರಂಟೈನ್ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಆಸ್ಪತ್ರೆಗಳ ಬೆಡ್ ಗಳು ಸಾಲುತ್ತಿಲ್ಲ. ತುಂಬಾ ಗಂಭೀರವಾದ ಸಮಸ್ಯೆಗಳಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುತ್ತೇವೆ ಎಂದೇ ಸರಕಾರ ಹೇಳುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವಂತಿಲ್ಲ ಎಂದು ಹೇಳಿದರೂ ಅಲ್ಲಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಒಟ್ಟಿನಲ್ಲಿ ಪಾಲಿಕೆಯ ಈ ಮಡ್ಡುಗಟ್ಟಿದ ವ್ಯವಸ್ಥೆ ನಮ್ಮ ಮಾನ್ಯ ಶಾಸಕರು ಮತ್ತು ಪ್ರಥಮ ಪ್ರಜೆಯ ಗಮನಕ್ಕೆ ಬಂದಿದೆಯಾ ಎನ್ನುವುದು ಪ್ರಶ್ನೆ!!
Leave A Reply