ವ್ಯಾಪಾರಿಗಳೇ, ತುಂಬಾ ಗಳಿಸುವಾಗ ಸ್ವಲ್ಪ ತ್ಯಾಗ ಬೇಕು!!

ಮಂಗಳೂರಿನಲ್ಲಿ ಸೆಂಟ್ರಲ್ ಮಾರುಕಟ್ಟೆ ಇದೆ. ತುಂಬಾ ಹಳೆಯ ಮಾರುಕಟ್ಟೆ. ಸ್ಮಾರ್ಟ್ ಸಿಟಿಯಾಗುವ ಹಂತದಲ್ಲಿರುವ ಮಂಗಳೂರು ನಗರಕ್ಕೆ ಕಪ್ಪು ಚುಕ್ಕೆಯಂತೆ ಕಾಣುತ್ತಿರುವ ಈ ಮಾರುಕಟ್ಟೆಯನ್ನು ಒಡೆದು 145 ಕೋಟಿ ವೆಚ್ಚದಲ್ಲಿ ಹೊಸ ಸುಸಜ್ಜಿತ ಮಾರುಕಟ್ಟೆ ಕಟ್ಟಡವನ್ನು ಕಟ್ಟುವ ಯೋಜನೆಗೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಲ್ಲಿರುವ ತರಕಾರಿ ಮತ್ತು ಮೀನಿನ ಮಾರುಕಟ್ಟೆ ಎರಡನ್ನೂ ಸೇರಿಸಿ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಅನುದಾನದೊಂದಿಗೆ ಹೊಸ ಕಟ್ಟಡ ಎದ್ದು ನಿಲ್ಲಲಿದೆ. ಅದನ್ನು ಈಗ ಶುರು ಮಾಡಿದರೂ ಕನಿಷ್ಟ ಮೂರರಿಂದ ಮೂರುವರೆ ವರ್ಷಗಳು ಬೇಕಾಗಬಹುದು. ಆದ್ದರಿಂದ ಅಲ್ಲಿರುವ ವ್ಯಾಪಾರಸ್ಥರಿಗೆ ಬೇರೆ ಕಡೆ ತಾತ್ಕಾಲಿಕವಾಗಿ ಮಾರುಕಟ್ಟೆಯನ್ನು ನಿರ್ಮಿಸುವ ಯೋಜನೆ ಮಾಡಲಾಗಿದೆ. ಆದರೆ ತಾತ್ಕಾಲಿಕ ಮಾರುಕಟ್ಟೆಯನ್ನು ಕಟ್ಟಿ ಮುಗಿಸಲು ಮೂರುವರೆ ತಿಂಗಳು ಬೇಕಾಗಬಹುದು. ಅದಕ್ಕಾಗಿ ಐದೂವರೆ ಕೋಟಿ ರೂಪಾಯಿ ತಗಲುತ್ತದೆ. ಆ ತಾತ್ಕಾಲಿಕ ಮಾರುಕಟ್ಟೆ ಕೇಂದ್ರ ಮೈದಾನದ ಒಳಗೆನೆ ಇರುವ ಪುಟ್ ಬಾಲ್ ಗ್ರೌಂಡಿನ ಸನಿಹದಲ್ಲಿ ನಿರ್ಮಾಣವಾಗಲಿದೆ. ಈ ಹಿಂದೆ ಬೀದಿ ಬದಿ ವ್ಯಾಪಾರಿಗಳಿಗಾಗಿ ಮೀಸಲಿಟ್ಟ ಜಾಗವೂ ತಾತ್ಕಾಲಿಕ ಮಾರುಕಟ್ಟೆಗೆ ಉಪಯುಕ್ತವಾಗಲಿದೆ. ಆದರೆ ಇಷ್ಟೊತ್ತಿಗೆ ಏನಾಯಿತು ಎಂದರೆ ಪುಟ್ ಬಾಲ್ ಎಸೋಸಿಯೇಶನ್ ನವರು ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ತಡೆಯಾಜ್ಞೆ ಕೋರಿ ಮನವಿ ಸಲ್ಲಿಸಿದರು. ಅದಕ್ಕೆ ಅವರಿಗೆ ತಡೆಯಾಜ್ಞೆ ಕೂಡ ಸಿಕ್ಕಿತು. ಯಾವಾಗ ಅವರಿಗೆ ತಡೆಯಾಜ್ಞೆ ಸಿಕ್ಕಿತೋ ಇತ್ತ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಸ್ಥರನ್ನು ಕೆಲವರು ಪುಸಲಾಯಿಸಿ ಕೋರ್ಟಿಗೆ ಹೋಗುವಂತೆ ಮಾಡಿದರು. ಮಾರುಕಟ್ಟೆಯ ಕಟ್ಟಡವನ್ನು ಒಡೆಯದಂತೆ ಸೂಚನೆ ನೀಡಬೇಕು ಎಂದು ಮನವಿ ವ್ಯಾಪಾರಿಗಳಿಂದ ಮಾಡಿಸಲಾಯಿತು. ಆ ಸಂದರ್ಭದಲ್ಲಿ ಪ್ರತಿವಾದಿ ಮಂಗಳೂರು ಮಹಾನಗರ ಪಾಲಿಕೆಯ ಬಳಿ ತಕ್ಷಣ ತಾವು ಮಾಡುತ್ತಿರುವ ಕಾರ್ಯದ ಬಗ್ಗೆ ಸಮರ್ಥನೆ ನೀಡಲು ಸೂಕ್ತ ದಾಖಲೆಯ ಸಂಗ್ರಹಣೆ ಆಗಿರಲಿಲ್ಲ. ಸಹಜ ಪ್ರಕ್ರಿಯೆ ಎನ್ನುವಂತೆ ವ್ಯಾಪಾರಸ್ಥರಿಗೆ ತಡೆಯಾಜ್ಞೆ ಸಿಕ್ಕಿದೆ. ಆದರೆ ಎರಡನೇಯ ಹಿಯರಿಂಗ್ ವೇಳೆ ಪಾಲಿಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ. ಆದರೆ ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಬೇಕಿರುವುದರಿಂದ ಅಲ್ಲಿಯವರೆಗೆ ತಡೆಯಾಜ್ಞೆ ಊರ್ಜಿತವಾಗಿರುತ್ತದೆ.
ಇಷ್ಟು ಹೊತ್ತು ನಾನು ಹೇಳಿದ್ದು ಫ್ಲಾಶ್ ಬ್ಯಾಕ್. ಬುಧವಾರ ಅಂದರೆ ನಿನ್ನೆ ಏನಾಯಿತು ಎಂದರೆ ಮಾರುಕಟ್ಟೆಯ ಒಳಗೆ ಆರು ಅಂಗಡಿಗಳ ಮಾಲೀಕರು ತಮ್ಮ ಅಂಗಡಿಯನ್ನು ತೆರೆದು ವ್ಯಾಪಾರಕ್ಕೆ ಇಳಿದಿದ್ದರು. ಪಾಲಿಕೆಯ ಅಧಿಕಾರಿಗಳು ಹೋಗಿ ಅಲ್ಲಿ ವಿಚಾರಿಸಿದಾಗ ನಮಗೆ ಕೋರ್ಟ್ ನಿಂದ ವ್ಯಾಪಾರಕ್ಕೆ ಅನುಮತಿ ಸಿಕ್ಕಿದೆ ಎನ್ನುವ ಮಾತನ್ನು ಅಂಗಡಿಯವರು ಹೇಳಿದ್ದಾರೆ. ಆದರೆ ಇಲ್ಲಿ ವಿಚಾರ ಏನೆಂದರೆ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳ ಸಂಘಕ್ಕೆ ತಡೆಯಾಜ್ಞೆ ಸಿಕ್ಕಿದ್ದು ಪಾಲಿಕೆ ಮಾರುಕಟ್ಟೆ ಕಟ್ಟಡವನ್ನು ಕೆಡವುದರ ವಿರುದ್ಧ ಮಾತ್ರವೇ ಹೊರತು ವ್ಯಾಪಾರಕ್ಕೆ ಅಲ್ಲವೇ ಅಲ್ಲ. ಇದು ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಆದರೆ ವ್ಯಾಪಾರಿಗಳು ಅಂಗಡಿ ತೆರೆದು ವ್ಯಾಪಾರ ಮಾಡುತ್ತೇವೆ ಎಂದು ಹಟ ಹಿಡಿದ ಕಾರಣ ಅನಿವಾರ್ಯವಾಗಿ ಪಾಲಿಕೆ ಅಧಿಕಾರಿಗಳು ಆ ಆರು ಅಂಗಡಿಗಳಿಗೆ ಬೀಗ ಹಾಕಿ ಬಂದಿದ್ದಾರೆ. ಕೋರ್ಟಿನಲ್ಲಿ ವಿಚಾರಣೆ ಮುಂದಿನ ಅಗಸ್ಟ್ ನಲ್ಲಿ ಇರುವುದರಿಂದ ಯಥಾಸ್ಥಿತಿಯನ್ನು ಪಾಲಿಕೆ ಮತ್ತು ವ್ಯಾಪಾರಿಗಳು ಕಾಪಾಡಿಕೊಂಡು ಬರಬೇಕಾಗುತ್ತದೆ. ಈಗ ಕೊರೊನಾ ಸಮರದಲ್ಲಿ ತಾತ್ಕಾಲಿಕ ಅಂಗಡಿಗಳ ನಿರ್ಮಾಣ ನಡೆದು ಹೋಗುವ ತನಕ ಸದ್ಯಕ್ಕೆ ಅಲ್ಲಿಯೇ ಪುರಭವನದ ಸಮೀಪದಲ್ಲಿ ಶೆಡ್ ನಿರ್ಮಿಸಿ ವ್ಯಾಪಾರಿಗಳಿಗೆ ನೀಡಲಾಗಿದೆ.
ಆದರೆ ಇದು ಮಾತ್ರ ಶುದ್ಧ ಮೂರ್ಖತನದ್ದು. ಇಂತಹ ಐಡಿಯಾ ಯಾವ ಪುಣ್ಯಾತ್ಮನಿಗೆ ಬಂತೋ ಗೊತ್ತಿಲ್ಲ. ಆ ಶೆಡ್ ನಲ್ಲಿ ಬೆಳಿಗ್ಗೆ ಸಾಮಾನು ತಂದು ಇಟ್ಟರೆ ಸಂಜೆ ತೆಗೆದುಕೊಂಡು ಹೋಗಬೇಕು. ಅಲ್ಲಿಯೇ ಬಿಟ್ಟರೆ ಮರುದಿನ ವ್ಯಾಪಾರಿ ಬರುವಾಗ ಅಂಗಡಿ ಖಾಲಿಯಿರುತ್ತದೆ. ಈ ನಡುವೆ ತಾತ್ಕಾಲಿಕ ಮಾರುಕಟ್ಟೆಯ ನಿರ್ಮಾಣಕ್ಕೆ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದರೆ ಕೆಲಸ ಬೇಗ ಆಗುತ್ತಿತ್ತು. ಅದೇ ರೀತಿಯಲ್ಲಿ ಇವರೆಲ್ಲ ಈ ಕೋರ್ಟ್ ಮೆಟ್ಟಿಲು ಹತ್ತುವ ಬದಲು ಅಭಿವೃದ್ಧಿಗೆ ಎಲ್ಲರೂ ಸಹಕರಿಸಿದರೆ ಮಂಗಳೂರಿನ ನಾಗರಿಕರಿಗೂ ಉತ್ತಮವಾಗುತ್ತಿತ್ತು. ಈಗಾಗಲೇ ಸೆಂಟ್ರಲ್ ಮಾರುಕಟ್ಟೆಯ ಕಟ್ಟಡದಲ್ಲಿ ಇದ್ದ ಮಳಿಗೆಯವರು ನಗರದ ಬೇರೆ ಬೇರೆ ಕಡೆ ಬಾಡಿಗೆಗೆ ಹೋಗಿದ್ದಾರೆ. ಅವರಿಗೆ ಲೆಕ್ಕಕ್ಕಿಂತ ಹೆಚ್ಚೇ ಬಾಡಿಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಎನ್ನುವುದು ಎಲ್ಲಾ ಕಡೆ ಮಾಮೂಲಿ. ಅಳಿಕೆ, ಉರ್ವಾ, ಕದ್ರಿಯಲ್ಲಿ ಹೊಸ ಮಾರುಕಟ್ಟೆ ನಿರ್ಮಾಣವಾದಾಗ ಅಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿ ಅಲ್ಲಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ ಫುಟ್ ಪಾತ್ ಎಸೋಸಿಯೇಶನ್ ಹಾಗೂ ಮಾರುಕಟ್ಟೆ ವ್ಯಾಪಾರಿಗಳ ಸಂಘಟನೆಗಳ ಹಟಮಾರಿ ಧೋರಣೆಯಿಂದ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮುಂದೂಡಿಕೆ ಆಗಿದೆ. ಅಭಿವೃದ್ಧಿ ವಿರೋಧಿಗಳಿಗೆ ಖುಷಿಯಾಗಿರಬಹುದು. ತುಂಬಾ ಗಳಿಸುವಾಗ ಸ್ವಲ್ಪ ತ್ಯಾಗ ಮಾಡಬೇಕು ಎನ್ನುವ ನುಡಿಮುತ್ತನ್ನು ಮರೆತ ವ್ಯಾಪಾರಿಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿ ನಿಂತಿದ್ದಾರೆ!
Leave A Reply