ಪಾಲಿಕೆಗೆ ಸ್ಮಾರ್ಟ್ ಐಎಎಸ್ ಸಿಕ್ಕಿದ್ರೆ ಈ ಕೆಳಗಿನ ಕೆಲಸಗಳು ಮಾಡಲಿಕ್ಕಿದೆ!!
ಮಂಗಳೂರು ಮಹಾನಗರ ಪಾಲಿಕೆಗೆ ಅಪ್ಪ, ಅಮ್ಮ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ಒಂದು ಅನಾಥ ಮಗುವಿನ ಗತಿಯೇ ಇದಕ್ಕೆ ಆಗಿದೆ. ಮನೆಯಲ್ಲಿ ಹಿರಿಯರು ಇಲ್ಲದಿದ್ದರೆ ಆ ಮನೆ ಸೂತ್ರವಿಲ್ಲದ ಗಾಳಿಪಟ ಹೋಗುವ ಹಾಗೆ ಈಗ ನಮ್ಮ ಪಾಲಿಕೆಯ ಕಥೆ. ಸದ್ಯ ಪಾಲಿಕೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಅಧಿಕಾರಿಗಳೇ ಇಲ್ಲ. ಒಂದು ಕಡೆ ಕಮೀಷನರ್ ಅವರೇ ಇಲ್ಲಿಂದ ಎದ್ದು ಹೋಗಿದ್ದಾರೆ. ಸರಿಯಾಗಿ ನೋಡಿದರೆ ಮಂಗಳೂರಿಗೆ ಈಗ ಅರ್ಜೆಂಟಾಗಿ ಒಬ್ಬ ಐಎಎಸ್ ಶ್ರೇಣಿಯ ಅಧಿಕಾರಿ ಬೇಕಾಗಿದ್ದಾರೆ. ಹಾಗಂತ ಹೆಬ್ಸಿಬಾ ಕೊರ್ಲಪಾಟಿ ಎನ್ನುವ ಐಎಎಸ್ ಅಧಿಕಾರಿ ಹಿಂದೊಮ್ಮೆ ಇದ್ದರು. ಅವರು ದಕ್ಷರಾಗಿದ್ದರು ನಿಜ. ಆದರೆ ಅವರು ಹೇಗಿದ್ದರು ಎಂದರೆ ಅವರಿಗೆ ಜನರಿಂದ ಆಯ್ಕೆಯಾಗಿ ಬಂದ ಕಾರ್ಪೋರೇಟರ್ ಗಳಿಗೂ ಒಂದಿಷ್ಟು ಗೌರವ ಕೊಡಬೇಕಾಗುತ್ತದೆ ಎನ್ನುವುದು ಗೊತ್ತೆ ಇರಲಿಲ್ಲ. ನಾನೀಗ ಹೇಳುತ್ತೀರುವುದು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬಲ್ಲ ಒಬ್ಬ ಪ್ರಾಮಾಣಿಕ, ದೂರದೃಷ್ಟಿಯ ಐಎಎಸ್ ಕಮೀಷನರ್ ಅವರು ಮಂಗಳೂರು ಮಹಾನಗರಕ್ಕೆ ಬೇಕು. ಯಾಕೆಂದರೆ ಒಂದು ಕಡೆ ಮಂಗಳೂರು ಸ್ಮಾರ್ಟ್ ಸಿಟಿಯಾಗಲೇಬೇಕು. ಅದರ ಅಧಿಕಾರಿಯಾಗಿರುವವರು ಐಎಎಸ್ ಅಲ್ಲ. ಅವರು ಬೆಂಗಳೂರಿಗೆ ಹೋಗಿ “ವಿಜಯ”ವಾಗಿ ಬಂದು ಆ ಸ್ಥಾನದಲ್ಲಿ ಕುಳಿತಿದ್ದಾರೆ. ಅವರಿಗೆ ಸ್ಮಾರ್ಟ್ ಸಿಟಿಯ ಬಗ್ಗೆ ಎಷ್ಟು ಜ್ಞಾನ ಇದೆ ಎನ್ನುವುದು “ರಾಘವೇಂದ್ರ”ನಿಗೆ ಗೊತ್ತು. ಹೀಗಿರುವಾಗ ಕೆಎಎಸ್ ಶ್ರೇಣಿಯ ಅಧಿಕಾರಿ ಕಮೀಷನರ್ ಆಗಿ ಬಂದರೆ ಅವರು ಸ್ಮಾರ್ಟ್ ಸಿಟಿಯ ಗಾಡಿಯನ್ನು ದೂಡಿಕೊಂಡು ಹೋಗುವುದರಲ್ಲಿ ಸಮಯ ತೆಗೆದುಕೊಂಡು ಬಿಡುತ್ತಾರೆ.
ಇನ್ನು ಕೆಎಎಸ್ ಅಧಿಕಾರಿ ಕಮೀಷನರ್ ಆದರೆ ಉಳಿದ ಕೈ ಕೆಳಗಿನ ಅಧಿಕಾರಿಗಳಿಗೆ ಹೆದರಿಕೆಯೇ ಇರುವುದಿಲ್ಲ. ಒಂದು ಮನೆಯಲ್ಲಿ ಹಿರಿಯ ಸಹೋದರ ಡಿಗ್ರಿ ಪಡೆದುಕೊಂಡಿದ್ದರೆ ಚಿಕ್ಕ ತಮ್ಮಂದಿರು ಅವನಿಗೆ ಸ್ವಲ್ಪ ಹೆದರಿ ಮರ್ಯಾದೆ ಕೊಡುತ್ತಾರೆ. ದೊಡ್ಡವ ಹತ್ತನೇ ಫೇಲ್ ಎಂದಾದರೆ ಮೂರನೇ, ನಾಲ್ಕನೇ ಕ್ಲಾಸಿನಲ್ಲಿ ಕಲಿಯುವ ತಮ್ಮಂದಿರಿಗೆ ಕ್ಯಾರೇ ಇರುವುದಿಲ್ಲ. ಇನ್ನು ಬಹಳ ಮುಖ್ಯವೆನೆಂದರೆ ಪಾಲಿಕೆಗೆ ಬಾಕಿ ಇರುವ ತೆರಿಗೆ ಅಥವಾ ಶುಲ್ಕವನ್ನು ವಸೂಲಿ ಮಾಡುವುದು. ಪಾಲಿಕೆ ವ್ಯಾಪ್ತಿಯ ಕಟ್ಟಡಗಳ ತೆರಿಗೆಯ ಬಾಕಿ ಮೊತ್ತವೇ 92 ಕೋಟಿ ಇದೆ. ಇದು ಸಂಗ್ರಹವಾಗುವುದು ಯಾವಾಗ? ಐಎಎಸ್ ಇದ್ರೆ ಕೈಯಲ್ಲಿ ಬೆತ್ತ ಹಿಡಿದು ವಸೂಲಿ ಮಾಡಬಲ್ಲರು. ಯಾಕೆಂದರೆ ಅವರಿಗೆ ಯಾರ ಮುಲಾಜು ಇರುವುದಿಲ್ಲ. ಬೇರೆಯವರಾದರೆ ಆ ಜನಪ್ರತಿನಿಧಿ ಹೇಳಿದ್ರು, ಈ ರಾಜಕಾರಣಿ ಹೇಳಿದ್ರು ಅಂತ ಸುಮ್ಮನಾಗುತ್ತಾರೆ. ನಷ್ಟ ಯಾರಿಗೆ? ಪಾಲಿಕೆಗೆ ಅಲ್ಲವೇ?
ಇನ್ನು ಪಾಲಿಕೆಯ ಬಜೆಟಿಗೆ ಬರೋಣ. ಇವರು ಅಲ್ಲಿಂದ ಇಷ್ಟು ಬರುತ್ತೆ, ಇಲ್ಲಿಂದ ಅಷ್ಟು ಬರುತ್ತೆ ಎಂದು ಲೆಕ್ಕ ಹಾಕಿ ಬಜೆಟ್ ಮಂಡಿಸುತ್ತಾರೆ. ಆದರೆ ಎಲ್ಲಿ ಆದಾಯ ಇವರು ನಿರೀಕ್ಷೆ ಮಾಡಿರುತ್ತಾರೋ ಅದರ ಮೂವತ್ತು ಶೇಕಡಾ ಆದಾಯ ಪ್ರತಿ ವರ್ಷ ಬರುವುದೇ ಇಲ್ಲ. ಒಂದೊಂದು ವರ್ಷ 30 ಶೇಕಡಾ ಬರುವುದಿಲ್ಲ ಎಂದರೆ ನೀವೇ ಲೆಕ್ಕ ಹಾಕಿ. ಹತ್ತು ವರ್ಷ ಆದರೆ ಅದು ಎಷ್ಟು ಕೋಟಿಗಳಾಗಬಹುದು ಅಲ್ಲವೇ? ಹೀಗೆ ಬಾಕಿ ಆಗಿ ಆಗಿಯೇ ಈಗ ಕಟ್ಟಡ ತೆರಿಗೆ 92 ಕೋಟಿ ಬಾಕಿಯಾಗಿರುವುದು. ತಿಂಗಳೊಳಗೆ ಒಳ್ಳೆಯ ಮಾತಿನಲ್ಲಿ ತುಂಬಿ. ಇಲ್ಲ, ಕ್ರಮ ಎದುರಿಸಿ ಎಂದು ಹೇಳುವಂತಹ ಐಎಎಸ್ ಬೇಕಾಗಿದೆ. ಬೇಕಾದರೆ ನೀರಿನ ಬಿಲ್ ಬಾಕಿ ಮೊತ್ತವನ್ನೇ ತೆಗೆದುಕೊಳ್ಳಿ. ಅದೇ 25 ಕೋಟಿಯಷ್ಟು ಇದೆ. ನೀರು ಕುಡಿಯುವವರು ನೀರಿನ ಬಿಲ್ ಕಟ್ಟದಿದ್ದರೆ ನಾಳೆಯಿಂದ ಮೂತ್ರ ಕುಡಿಯಬೇಕಾದಿತು ಎಂದು ಒಂದು ಗರ್ಜಿಸಿ ನೋಡಲಿ, ಬಾಲ ಮುದುಡಿ ಬಿಲ್ ಕಟ್ಟುತ್ತಾರೆ. ಬಾಕಿ ಇರುವ ಎಲ್ಲವೂ ಒಮ್ಮೆಲ್ಲೆ ಬರುತ್ತೆ ಎಂದು ನಾನು ಅಂದುಕೊಂಡಿಲ್ಲ. ಆದರೆ ಹೀಗೆ ಬಿಟ್ಟರೆ ಆಗುವ ನಷ್ಟಕ್ಕಿಂತ ಅದು ತುಂಬಾ ಬೆಟರ್. ಇನ್ನು ಹೇಳಬೇಕಾದರೆ ಹೋರ್ಡಿಂಗ್ ಗೋಲ್ ಮಾಲ್ ತೆಗೆದುಕೊಳ್ಳಿ. ನಾನು ಈ ವಿಷಯದಲ್ಲಿ ಬರೆದಷ್ಟು ಯಾರೂ ಬರೆದಿರಲಿಕ್ಕಿಲ್ಲ. ಆದರೆ ಖ್ಯಾತ ಜಾಹೀರಾತು ಏಜೆನ್ಸಿಯೊಂದು ಕೆಎಎಸ್ ಆಗಿ ಜನಪ್ರತಿನಿಧಿಯಾಗಿದ್ದವರೊಬ್ಬರ ನೆಂಟರದ್ದು. ಇನ್ನು ಜಾಸ್ತಿ ಹೇಳಬೇಕಾಗಿಲ್ಲ. ಆದ್ದರಿಂದ ಇದೆಲ್ಲವೂ ಸರಿಯಾಗಬೇಕಾದರೆ ಒಬ್ಬ ಐಎಎಸ್ ಅಧಿಕಾರಿಯನ್ನು ನಮಗೆ ಕನಿಷ್ಟ 3 ವರ್ಷ ಕೊಟ್ಟು ನಗರಾಭಿವೃದ್ಧಿ ಇಲಾಖೆಯ ಸಚಿವರು ದೊಡ್ಡ ಮನಸ್ಸು ಮಾಡಬೇಕು. ಹೊಸದಾಗಿ ಬರುವ ಐಎಎಸ್ ಕಮೀಷನರ್ ಇದರೊಂದಿಗೆ ಕಳಪೆ ಕಾಮಗಾರಿಯಾಗದಂತೆ ನೋಡಿಕೊಂಡರೆ, ಸ್ಮಾರ್ಟ್ ಸಿಟಿಯ ಹಣ ಸಮರ್ಥವಾಗಿ ಬಳಕೆಯಾಗುವಂತೆ ಗಮನ ಹರಿಸಿದರೆ, ತೆರಿಗೆ, ಶುಲ್ಕ ಸರಿಯಾಗಿ ವಸೂಲಿ ಮಾಡಿದರೆ ನಾವು ಮೇಲೆ ಬಿದ್ದೇವು ಎಂದೇ ಅರ್ಥ. ಅಷ್ಟಕ್ಕೂ ನಮ್ಮ ಇಬ್ಬರೂ ಉತ್ತರ-ದಕ್ಷಿಣ ಶಾಸಕರು ಸಜ್ಜನರು. ಹೊಂದಿಕೊಂಡು ಹೋಗಬಲ್ಲರು. ಒಂದು ಪಾಲಿಕೆಯಲ್ಲಿ ಯುವ ಮೇಯರ್ ಎದುರುಗಿದ್ದಾರೆ, ಅವರಿಗೆ ಏನಾದರೂ ಮಾಡಬೇಕು ಎನ್ನುವ ತುಡಿತ ಇದೆ. ಆದ್ದರಿಂದ ಇದು ಸೂಕ್ತ ಸಮಯ. ಅಜಿತ್ ಹೆಗ್ಡೆಯವರು ಪ್ರಮೋಶನ್ ಆಗಿ ಹೋಗಿದ್ದಾರೆ. ಈಗ ಸೂಕ್ತ ಅಧಿಕಾರಿಗಾಗಿ ಪಾಲಿಕೆ ಕಾಯುತ್ತಿದೆ!
Leave A Reply