ವ್ಯಾಪಾರಿಗಳಿಗೆ ಇನ್ನೆಷ್ಟು ದಾರಿ ತಪ್ಪಿಸುತ್ತೀರಿ?
ಕೊರೊನಾದಿಂದ ಎಪ್ರಿಲ್ 4 ರ ಬಳಿಕ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಬಂದ್ ಆಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದು ಮೊನ್ನೆ ಅಗಸ್ಟ್ 13 ರಂದು ಮಂಗಳೂರು ಮಹಾನಗರ ಪಾಲಿಕೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ನಿರ್ಬಂಧಿಸಿ ಏನು ನೋಟಿಸು ಕೊಟ್ಟಿತ್ತೋ ಅದನ್ನು ಹಿಂದಕ್ಕೆ ಪಡೆದುಕೊಂಡಿತ್ತು. ನ್ಯಾಯಾಲಯ ಏನು ಹೇಳಿತ್ತು ಎಂದರೆ ಪಾಲಿಕೆ ನೋಟಿಸು ಕೊಟ್ಟ ರೀತಿ ಸರಿಯಿರಲಿಲ್ಲ. ಪ್ರತಿಯೊಬ್ಬ ವ್ಯಾಪಾರಿಗೂ ಪ್ರತ್ಯೇಕವಾಗಿ ನೋಟಿಸು ನೀಡಬೇಕು. ಅದಕ್ಕೆ ಸರಿಯಾಗಿ ಪಾಲಿಕೆ ನೋಟಿಸು ಹಿಂದಕ್ಕೆ ಪಡೆದ ತಕ್ಷಣ ವ್ಯಾಪಾರಿಗಳು ಮತ್ತೆ ವ್ಯಾಪಾರಕ್ಕೆ ಕುಳಿತುಕೊಂಡು ಬಿಟ್ಟರು. ನಮಗೆ ವ್ಯಾಪಾರ ಮಾಡಲು ಅವಕಾಶ ಕೊಡಲಾಗಿದೆ ಎಂದು ಅವರ ವಾದ ಇತ್ತು. ಆದರೆ ನ್ಯಾಯಾಲಯ ಯಾವುದೇ ಕಾರಣಕ್ಕೂ ಅಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿರಲಿಲ್ಲ. ಕೇವಲ ನೋಟಿಸು ಕೊಟ್ಟ ರೀತಿ ಮಾತ್ರ ತಪ್ಪು ಎಂದು ಹೇಳಿತ್ತು. ಆದರೆ ವ್ಯಾಪಾರಿಗಳು ಅದನ್ನು ಅರ್ಥ ಮಾಡಿಕೊಂಡದ್ದು ತಪ್ಪಾಗಿತ್ತು. ಆದ್ದರಿಂದ ಬಂದ್ ಮಾಡಿಸಲು ಪಾಲಿಕೆ ಅಧಿಕಾರಿಗಳು ಹೋಗಿದ್ದಾರೆ. ಆದರೆ ಅವರು ಹೋಗುವಾಗ ಜಿಲ್ಲಾಡಳಿತದ ಕಡೆಯಿಂದ ಪೊಲೀಸರ ರಕ್ಷಣೆ ಕೊಡಬೇಕಿತ್ತು. ಆದರೆ ಕೊಡಲಿಲ್ಲ. ಇಲ್ಲಿ ಪಾಲಿಕೆ ಏನು ಮಾಡಬೇಕಿತ್ತು ಎಂದರೆ ನೋಟಿಸು ಹಿಂದಕ್ಕೆ ಪಡೆದುಕೊಂಡ ತಕ್ಷಣ ಹೊಸದಾಗಿ ಅದೇ ಸಮಯದಲ್ಲಿ ಪ್ರತಿ ವ್ಯಾಪಾರಿಗೂ ಪ್ರತ್ಯೇಕವಾಗಿ ನೋಟಿಸನ್ನು ಕೊಟ್ಟಿದ್ದರೆ ಏನು ಸಮಸ್ಯೆಯಾಗುತ್ತಿರಲಿಲ್ಲ. ನಂತರ ಜಿಲ್ಲಾಧಿಕಾರಿಗಳು ಬಂದ್ ಆದೇಶ ಮಾಡಿದರು. ಇದರಿಂದಲೇ ಅಷ್ಟು ಗೊಂದಲ ಏರ್ಪಡಲು ಕಾರಣವಾಗಿದೆ.
ಆದರೆ ನಿನ್ನೆ ಮಂಗಳೂರಿನ ಖಾಸಗಿ ಚಾನೆಲ್ ನಲ್ಲಿ ಪ್ಯಾನೆಲ್ ಡಿಸ್ಕಷನ್ ನಲ್ಲಿ ಕುಳಿತಿದ್ದ ಕಾಂಗ್ರೆಸ್ ಕಾರ್ಪೋರೇಟರ್, ವಕೀಲ ವಿನಯರಾಜ್ ಹಸಿಹಸಿ ಸುಳ್ಳನ್ನು ಹೇಳುವಾಗ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಅವರು ಸೆಂಟ್ರಲ್ ಮಾರುಕಟ್ಟೆಯಲ್ಲಿ 597 ಚಿಲ್ಲರೆ ಮಾರಾಟಗಾರರು ಬೀದಿಗೆ ಬಿದ್ದು ಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳುತ್ತಿದ್ದರು. ನನ್ನ ಬಳಿ ಇರುವ ದಾಖಲೆಯ ಪ್ರಕಾರ ತರಕಾರಿ ಮತ್ತು ಪಕ್ಕದ ಚಿಕನ್ ಮತ್ತು ಮಟನ್ ಅಂಗಡಿಯವರು ಒಟ್ಟು ಸೇರಿ ಇರುವುದೇ 358. ಅದರಲ್ಲಿ ತರಕಾರಿ ಅಂಗಡಿಗಳು 106. ಸುತ್ತಲೂ ಇರುವ ಅಂಗಡಿ 132. ಪಕ್ಕದಲ್ಲಿ ಚಿಕನ್ ಮಟನ್ ಅಂಗಡಿಗಳು 28. ಅದರ ಸುತ್ತಲೂ ಇರುವ ಅಂಗಡಿಗಳು 92. ಹೀಗಿರುವಾಗ ಕಾಂಗ್ರೆಸ್ ಇದರಲ್ಲಿಯೂ ಯಾಕೆ ವೈಭವೀಕರಣ ಮಾಡುತ್ತದೆ ಎನ್ನುವುದು ಅವರ ರಾಜಕೀಯಕ್ಕೆ ಬಿಡೋಣ. ಇನ್ನು ವಿನಯರಾಜ್ ಹೇಳಿದ್ರು ” ಅಮೃತ ಟಾಕೀಸಿನ ಎದುರಿಗೆ ಅರ್ಧ ಏಕರೆ ಜಾಗ ಇದೆ. ಅಲ್ಲಿ ಮಾರುಕಟ್ಟೆ ಮಾಡಬಹುದಿತ್ತು. ಅದು ಬಿಟ್ಟು ನೆಹರೂ ಮೈದಾನದಲ್ಲಿ ಮಾಡಿದ್ದು ತಪ್ಪು” ಎಂದಿದ್ದಾರೆ. ವಿನಯರಾಜ್ ಹೇಳಿದ ತಕ್ಷಣ ವೀಕ್ಷಕರಿಗೆ ಹೌದಲ್ಲ ಎನಿಸಬಹುದು. ಆದರೆ ವಿಷಯ ಇರುವುದು ಅಮೃತ ಟಾಕೀಸಿನ ಎದುರು ಅರ್ಧ ಏಕರೆ ಜಾಗ ರಸ್ತೆಬದಿಯಲ್ಲಿ ಇಲ್ಲ. ಅದು ಸಾಕಷ್ಟು ಒಳಗೆ ಇದೆ. ಅದಲ್ಲದೆ ಅದು ಜನವಸತಿ ಇರುವ ಜಾಗ. ಅಲ್ಲಿ ಇವರ ಮಾತು ಕೇಳಿ ಮಾರುಕಟ್ಟೆ ತೆರೆಯಲು ಹೋದರೆ ಇತ್ತ ವ್ಯಾಪಾರಿಗಳು ಅಲ್ಲಿ ಒಳಗೆ ಯಾಕೆ ಮಾಡಿದ್ರಿ ಎಂದು ಬೊಬ್ಬೆ ಹೊಡೆಯುತ್ತಾರೆ. ಇನ್ನು ಜನವಸತಿ ಇರುವ ಜಾಗದಲ್ಲಿ ಮಾರುಕಟ್ಟೆ ತೆರೆದರೆ ಸ್ಥಳೀಯರ ವಿರೋಧವೂ ಬರುತ್ತದೆ. ಹಾಗಂತ ನೆಹರೂ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ತೆರೆದರೆ ಈಗ ಕ್ರೀಡಾಪ್ರೇಮಿಗಳಿಗೆ ಏನೂ ತೊಂದರೆ ಇರುವುದಿಲ್ಲ. ಅದನ್ನು ಅಲ್ಲಿನ ಕ್ರೀಡಾಳುಗಳು ಒಪ್ಪುತ್ತಾರೆ. ಆದರೆ ಸುಮ್ಮನೆ ಹಾಗೇ ಬಿಟ್ಟರೆ ಸೆಂಟ್ರಲ್ ಮಾರುಕಟ್ಟೆ ಹೊಸ ಕಟ್ಟಡ ಆಗುತ್ತದೆ ಎಂದು ಗೊತ್ತಿರುವುದರಿಂದ ವಿಘ್ನ ಸಂತೋಷಿಗಳ ಪ್ರೇರಣೆಯಿಂದ ಕೆಲವರು ಕೋರ್ಟಿಗೆ ಹೋದರು.
ಆದರೆ ಇಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡುವುದನ್ನು ಮುಂದುವರೆಸಿದ್ದಲ್ಲಿ ಸಂಶಯವೇ ಇಲ್ಲ, ಅವರು ಕೋರ್ಟಿನ ಆದೇಶವನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಆದರೆ ಕೆಲವರು ನಾವು ಸಂಸದರ, ಶಾಸಕರ ಪಾರ್ಟಿ ಫಂಡಿಗೆ 2 ಕೋಟಿ ಕೊಟ್ಟಿದ್ದೇವೆ ಎಂದು ಹೇಳಿ ವಿಷಯವನ್ನು ಬೇರೆ ದಿಕ್ಕಿನತ್ತ ತಿರುಗಿಸುತ್ತಾರೆ. ಇಲ್ಲೊಂದು ಲಾಜಿಕ್ ಇದೆ. ಒಂದು ವೇಳೆ 2 ಕೋಟಿ ಕೊಟ್ಟಿದ್ದರೆ ಪ್ರತಿಭಟನೆ ಮಾಡುವ ಅಗತ್ಯ ಏನಿತ್ತು? ಅಲ್ಲಿ ಶಾಸಕ ಯು.ಟಿ.ಖಾದರ್ ಬರುವ ಅಗತ್ಯ ಏನಿತ್ತು? ಅಷ್ಟಕ್ಕೂ 12 ವರ್ಷಗಳಿಗೊಮ್ಮೆ ವ್ಯಾಪಾರಿಗಳ ಲೈಸೆನ್ಸ್ ನವೀಕರಣ ಮಾಡಲೇಬೇಕೆಂದು ನಿಯಮ ಇದೆ. ಆದರೆ ಪಾಲಿಕೆಯಲ್ಲಿ ಮಾಡಲೇ ಇಲ್ಲ. ಅದೇನೂ ಮಾನವೀಯತೆ ಅಲ್ಲ.
Leave A Reply