ಆದಾಯ 57 ಲಕ್ಷ, ಸ್ವಚ್ಚತೆಗೆ 62 ಲಕ್ಷ. ಇದು ಮಂಗಳೂರಿನಲ್ಲಿ ಮಾತ್ರ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಜನರ ತೆರಿಗೆಯ ಹಣ ಪೋಲಾಗದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕೆಲವು ಕಾರ್ಪೋರೇಟರ್ ಗಳು ಹಾಗೂ ಅವರ ಆಪ್ತ ಗುತ್ತಿಗೆದಾರರು ನೀರಿನಿಂದ ಹೊರಗೆ ತೆಗೆದ ಮೀನುಗಳಂತೆ ಚಡಪಡಿಸುತ್ತಿದ್ದಾರೆ.
ಇಲ್ಲಿಯ ತನಕ ಏನಾಗುತ್ತಿತ್ತು ಎಂದರೆ ಪಾಲಿಕೆಯ ಹಣ ಎಂದರೆ ಅದು ಕೊಳ್ಳೆ ಹೊಡೆಯುವುದಕ್ಕೆಂದೇ ಇಡಲಾಗಿದೆ ಎಂದು ಇವರೆಲ್ಲಾ ಭಾವಿಸಿದ್ದರು. ಬೇಕಾದರೆ ಉದಾಹರಣೆ ಕೊಡುತ್ತೇನೆ. ಪಾಲಿಕೆಯಲ್ಲಿ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಎಂದಿದೆ. ಇದರ ಅಡಿಯಲ್ಲಿ ಪಾಲಿಕೆಯ ಕಟ್ಟಡ ಮತ್ತು ಅದರ ಪಕ್ಕದ, ಲಾಲ್ ಭಾಗ್ ಬಸ್ ಸ್ಟಾಪ್ ಹಿಂದಿರುವ ಕಟ್ಟಡ ಮತ್ತು ಪುರಭವನ ಮತ್ತು ಮಿನಿ ಪುರಭವನವನ್ನು ಸ್ವಚ್ಚ ಮಾಡುವ ಕಾರ್ಯ ಬರುತ್ತದೆ. ಇಷ್ಟು ಓದಿದಾಗ ನಿಮಗೆ ಅದರಲ್ಲಿ ಏನು ಭ್ರಷ್ಟಾಚಾರ ಬರುತ್ತದೆ ಎಂದು ಅನಿಸಬಹುದು. ವಿಷಯ ಇರುವುದು ಇಲ್ಲಿ. ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡ ಮತ್ತು ಪಕ್ಕದ ಪಾಲಿಕೆ ಒಡೆತನದ ವಾಣಿಜ್ಯ ಕಟ್ಟಡವನ್ನು ಸ್ವಚ್ಚ ಮಾಡಲು ವರ್ಷಕ್ಕೆ ಹೆಚ್ಚೆಂದರೆ ಎಷ್ಟು ಹಣ ಖರ್ಚಾಗಬಹುದು ಎಂದು ನಿಮಗೆ ಅನಿಸುತ್ತದೆ. ಜಾಸ್ತಿ ಎಂದರೆ ಹತ್ತು ಲಕ್ಷ ಎಂದು ನೀವು ನಿಮ್ಮದೇ ಒಂದು ಅಂದಾಜು ಮಾಡಿಕೊಂಡು ಹೇಳಬಹುದು. ಆದರೆ 50 ಲಕ್ಷ ರೂಪಾಯಿ ಇವರು ಕ್ಲೀನಿಂಗ್ ಗಾಗಿ ಖರ್ಚು ಮಾಡುತ್ತಿದ್ದರು ಎಂದರೆ ಶಾಕ್ ಆಗಲ್ವಾ? ಅಷ್ಟಕ್ಕೂ 50 ಲಕ್ಷ ಖರ್ಚು ಮಾಡಿ ಕ್ಲೀನ್ ಮಾಡುವಂತದ್ದು ಏನಿದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲಿ ನಿಮಗೆ ಇನ್ನೊಂದು ವಿಷಯ ಹೇಳುತ್ತೇನೆ. ಲಾಲ್ ಭಾಗ್ ಬಸ್ ಸ್ಟಾಪ್ ವಾಣಿಜ್ಯ ಕಟ್ಟಡದಿಂದ ಪಾಲಿಕೆಗೆ ಬರುವ ಆದಾಯ ವರ್ಷಕ್ಕೆ 20 ಲಕ್ಷದ 52 ಸಾವಿರದ 947 ರೂಪಾಯಿ ಮಾತ್ರ. ಇನ್ನು ಆ ಕಟ್ಟಡದ ಹೊರಗಿನ ವಿದ್ಯುತ್ ಬಿಲ್, ಸೆಕ್ಯೂರಿಟಿ ವೇತನ ಪ್ರತ್ಯೇಕವಾಗಿ ಖರ್ಚು ಪಾಲಿಕೆಗೆ ಇದ್ದೇ ಇದೆ.
ಇನ್ನೊಂದು ನಿಮಗೆ ಪಾಲಿಕೆಯ ಬಗ್ಗೆ ಅಸಹ್ಯವಾಗುವ ವಿಷಯ ಪುರಭವನದ ಸ್ವಚ್ಚತೆಗೆ ಇವರು ಕೊಡುವ ಮೊತ್ತ. ನಿಮಗೆಲ್ಲಾ ಗೊತ್ತಿರುವ ಹಾಗೆ ನಮ್ಮ ಪುರಭವನದಲ್ಲಿ ಇಡೀ ವರ್ಷ 365 ದಿನವೂ ಕಾರ್ಯಕ್ರಮಗಳು ಇರುವುದಿಲ್ಲ. ಹೆಚ್ಚೆಂದರೆ ವರ್ಷಕ್ಕೆ ನೂರು ಕಾರ್ಯಕ್ರಮಗಳು ಇದ್ದರೆ ಅದೇ ಹೆಚ್ಚು. ಈ ವರ್ಷ ಬಿಡಿ, ಕೊರೊನಾದಿಂದ ಕಾರ್ಯಕ್ರಮಗಳೇ ಇಲ್ಲ. ನಾನು ಅದನ್ನು ಮಾತನಾಡುವುದಿಲ್ಲ. ನಾವು ಹಿಂದಿನ ವರ್ಷದ ಲೆಕ್ಕಾಚಾರ ನೋಡೋಣ. ಇವರು ಪುರಭವನ ಮತ್ತು ಅದರದ್ದೇ ಆವರಣದಲ್ಲಿರುವ ಮಿನಿ ಸಭಾಂಗಣದ ಸ್ವಚ್ಚತೆಗೆ ವರ್ಷಕ್ಕೆ 12.50 ಲಕ್ಷ ರೂಪಾಯಿ ವ್ಯಯಿಸುತ್ತಿದ್ದಾರೆ. ವ್ಯಯಿಸುತ್ತಿದ್ದಾರೆ ಎಂದರೆ ಅರ್ಥ ಇಷ್ಟು ಹಣದಲ್ಲಿ ಯಾರಿಗೆ ಎಷ್ಟು ಹೋಗುತ್ತದೆ ಎನ್ನುವುದು ತಿಂದವರಿಗೆ ಮಾತ್ರ ಗೊತ್ತು. ಅದರಲ್ಲಿ ಗುತ್ತಿಗೆದಾರ, ಕಾರ್ಪೋರೇಟರ್, ಅಧಿಕಾರಿಗಳಿಗೆ ಪಾಲು ಇದ್ದೇ ಇರುತ್ತದೆ. 2019-20 ರಲ್ಲಿ ಪುರಭವನದಿಂದ ಪಾಲಿಕೆಗೆ ಬಂದ ಆದಾಯ 30 ಲಕ್ಷದ 20 ಸಾವಿರ. ಅದರ ಮಿನಿ ಸಭಾಂಗಣದಿಂದ ಬಂದ ಆದಾಯ 6 ಲಕ್ಷದ 40 ಸಾವಿರದ 900 ರೂಪಾಯಿಗಳು. ಇನ್ನು ಪುರಭವನ ಮತ್ತು ಮಿನಿಪುರಭವನದ ಕರೆಂಟ್ ಬಿಲ್, ಸಿಬ್ಬಂದಿಯ ವೇತನವನ್ನು ಪಾಲಿಕೆಯೇ ಕಟ್ಟುವುದು. ಇದೆಲ್ಲ ಖರ್ಚು ಪ್ರತ್ಯೇಕ. ಹಾಗಾದರೆ ಸ್ವಚ್ಚತೆಯ ಹೆಸರಿನಲ್ಲಿ ಇಷ್ಟು ವರ್ಷ ನಡೆದುಕೊಂಡು ಬಂದಿರುವುದು ಅಪ್ಪಟ ಲೂಟಿಯಲ್ಲದೇ ಮತ್ತೇನು? ಹಾಗಾದರೆ ಇವರನ್ನು ಇಲ್ಲಿಯ ತನಕ ಕೇಳುವವರೇ ಇರಲಿಲ್ಲವಾ? ನಾನು ಈ ವಿಷಯವನ್ನು ಮೇಯರ್ ದಿವಾಕರ ಪಾಂಡೇಶ್ವರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಅವರ ಗಮನಕ್ಕೆ ತಂದೆ. ಅವರು ಸ್ಥಾಯಿ ಸಮಿತಿ ಸಭೆಯಲ್ಲಿ ಇಷ್ಟು ಖರ್ಚಾಗುವುದನ್ನು ತಡೆದಿದ್ದಾರೆ.
ಪಾಲಿಕೆಯಲ್ಲಿ ಒಟ್ಟು 17 ಜನ ಸ್ವಚ್ಚತೆಯ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸರಿಯಾಗಿ ನೋಡಿದರೆ ಅಷ್ಟು ಜನ ಬೇಡವೇ ಇಲ್ಲ. ಹೆಚ್ಚೆಂದರೆ 10 ಜನ ಇದ್ದರೆ ಸಾಕು. ಅವರಿಗೆ ಇಡೀ ದಿನ ಪಾಲಿಕೆಯ ಕಟ್ಟಡವನ್ನು ಸ್ವಚ್ಚಗೊಳಿಸುವ ಕಾರ್ಯ ಇರುವುದಿಲ್ಲ. ಅವರು ಬೆಳಿಗ್ಗೆ ಪಾಲಿಕೆಯಲ್ಲಿ ಕೆಲಸ ಮಾಡಿ ಮಧ್ಯಾಹ್ನದ ಬಳಿಕ ಪಕ್ಕದ ವಾಣಿಜ್ಯ ಕಟ್ಟಡ ಸ್ವಚ್ಚ ಮಾಡಬಹುದು. ಹೀಗೆ ಮಾಡಿದರೆ 50 ಲಕ್ಷ ರೂಪಾಯಿ ಜನರ ತೆರಿಗೆ ಹಣವನ್ನು ಉಳಿಸಬಹುದು. ಪಾಲಿಕೆಯ ಪಕ್ಕದ ವಾಣಿಜ್ಯ ಕಟ್ಟಡ, ಪುರಭವನ ಮತ್ತು ಮಿನಿ ಸಭಾಂಗಣ ಒಟ್ಟು ಸೇರಿಸಿದರೆ ಬರುವ ಆದಾಯ 57 ಲಕ್ಷ. ಅದೇ ಕ್ಲಿನಿಂಗ್ ಖರ್ಚು 62 ಲಕ್ಷ. ಲೈಟ್ ಬಿಲ್, ಸೆಕ್ಯೂರಿಟಿ ಬೇರೆ. ಇಲ್ಲಿಯ ತನಕ ಹೀಗೆ ಬಿಳಿಯಾನೆಯನ್ನು ಸಾಕಿಕೊಂಡು ಬರಲಾಗುತ್ತಿತ್ತು. ಯಾರ್ಯಾರೋ ತಿಂದು ತೇಗಿದ್ದರು. ಇನ್ನು ಸಾಧ್ಯವೇ ಇಲ್ಲ. ಮೊದಲ ಅವಧಿಯಲ್ಲಿ ದಿವಾಕರ್ ಮೇಯರ್ ಆಗಿರುವುದರಿಂದ ಈಗಲೇ ಉತ್ತಮ ಮಾದರಿ ಇಟ್ಟುಕೊಂಡು ಬಿಟ್ಟರೆ ಉಳಿದ ನಾಲ್ಕು ಅವಧಿಯ ಮೇಯರ್ ಗಳು ಅದನ್ನೇ ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ. ಕಾರ್ಪೋರೇಟರ್ ಆಗುವುದು ತಿನ್ನಲು ಅಲ್ಲ. ನನ್ನ ಪಾಲಿಗೆ ದಿವಾಕರ್ ಪಾಂಡೇಶ್ವರ್ ಅವರ ಅವಧಿಯ ಒಂದೊಂದು ದಿನವೂ ಪ್ರಮುಖವಾದದು. ಅವರಲ್ಲಿ ಜನರ ತೆರಿಗೆಯ ಹಣ ಲೂಟಿ ಮಾಡುವವರಿಗೆ ತಕ್ಕ ಶಾಸ್ತ್ರಿ ಮಾಡುವ ಮನಸ್ಸಿದೆ. ಸಲಹೆ ಕೊಟ್ಟರೆ ಕೇಳುವ ವ್ಯವಧಾನವಿದೆ. ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊಳ್ಳುವ ತಾಳ್ಮೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತನಗೆ ಎಲ್ಲವೂ ಗೊತ್ತಿದೆ ಎನ್ನುವ ಧಿಮಾಕು ಇಲ್ಲ. ಅದಕ್ಕೆ ಅವರು ಇಷ್ಟವಾಗುತ್ತಾರೆ!
Leave A Reply