ಕೆಸರಿನಲ್ಲಿ ಕಮಲ ಅರಳಬಹುದು, ಪ್ರಾಪರ್ಟಿ ಕಾರ್ಡ್ ಅಲ್ಲ!!
ಪ್ರಾಪರ್ಟಿ ಕಾರ್ಡ್ ಈ ಶಬ್ದವನ್ನು ಮಂಗಳೂರು ನಗರದಲ್ಲಿ ವಾಸಿಸುವ ಜನರು ಕೇಳಿದ್ದೀರಿ ಮತ್ತು ಅನೇಕರು ಮಾಡಿದ್ದೀರಿ ಕೂಡ. ನೀವು ಪ್ರಾಪರ್ಟಿ ಕಾರ್ಡ್ ಮಾಡಿಸಲು ಮೊದಲು ಹೊರಟಾಗ ಅದು ಎಲ್ಲಿ ಮಾಡಿಸುವುದು ಎಂದು ಈಗಾಗಲೇ ಮಾಡಿಸಿಕೊಂಡ ಯಾರಿಗಾದರೂ ಕೇಳಿ ಕೂಡ ಇರುತ್ತೀರಿ. ಅದು ಎಲ್ಲಿ ಅಂದರೆ “ಮಂಗಳೂರಿನ ಪುರಭವನದ ಎದುರು ಮಿನಿ ವಿಧಾನಸೌಧದ ಹಿಂದೆ ಒಂದು ಕಟ್ಟಡ ಇದೆ. ಅಲ್ಲಿ ಹೋಗಲು ಸಪೂರ ದಾರಿ ಇದೆ. ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ಆ ಕಟ್ಟಡದ ಮೇಲೆ ಹೊಸದಾಗಿ ಎರಡು ಫ್ಲೋರ್ ಗಳನ್ನು ಕಟ್ಟುತ್ತಿದ್ದಾರೆ. ಮೇಲೆಯಿಂದ ಕೆಳಗೆ ನೀರು ಬೀಳುತ್ತಾ ಇರುತ್ತದೆ. ಕಟ್ಟಡ ಒಳಗೆ ಪ್ರವೇಶಿಸುವಾಗ ಅಲ್ಲಿ ಕೆಸರು ನೀರು ನಿಂತಿರುತ್ತದೆ. ಆ ನೀರಿನಲ್ಲಿ ಕಾಲಿಟ್ಟರೆ ಡೆಂಗ್ಯೂ, ಮಲೇರಿಯಾ ಫ್ರೀ. ನಿಮಗೆ ಡೆಂಗ್ಯೂ, ಮಲೇರಿಯಾ ಬೇಡ ಎಂದಾದರೆ ಅಲ್ಲಿ ಕಬ್ಬಿಣದ ಪೈಪುಗಳನ್ನು ಇಟ್ಟಿರುತ್ತಾರೆ. ಅದರ ಮೇಲೆ ನಿಧಾನವಾಗಿ ಕಾಲಿಟ್ಟು ಹೋಗಬೇಕು” ಎಂದು ಇಷ್ಟು ವಿಷಯವನ್ನು ನೀವು ಯಾರ ಬಳಿ ಕೇಳಿದ್ದಿರೋ ಅವರು ಹೇಳಿರಬಹುದು. ಇದು ಮಂಗಳೂರಿನಲ್ಲಿ ಪ್ರಾಪರ್ಟಿ ಕಾರ್ಡ್ ಮಾಡಿಸಲು ಇರುವ ಕಟ್ಟಡದ ಇವತ್ತಿನ ಪರಿಸ್ಥಿತಿ. ಇವತ್ತು ಅಂತ ಅಲ್ಲ, ಒಂದು ವರ್ಷದಿಂದ ಇದು ಹೀಗೆ ಇದೆ.
ಇಲ್ಲಿ ಪ್ರಾಪರ್ಟಿ ಕಾರ್ಡ್ ಮಾಡಿಸಲು ನಿತ್ಯ ನೂರಾರು ಜನ ನಾಗರಿಕರು ಬರುತ್ತಾರೆ. ಅದರಲ್ಲಿ 60% ಗಿಂತಲೂ ಹೆಚ್ಚು ಜನ ಹಿರಿಯ ನಾಗರಿಕರು. ಅವರು ಕೆಸರಲ್ಲಿ ಕಾಲು ಹಾಕಿ ಇಲ್ಲಿ ಒಳಗೆ ಬರಬೇಕು. ಕಟ್ಟಡದ ಮೇಲಿನಿಂದ ಏನಾದರೂ ಭಾರವಾದ ವಸ್ತು ಆಕಸ್ಮಿಕವಾಗಿ ಕೆಳಗೆ ಬಿದ್ದರೆ ಕೆಳಗೆ ನಡೆದುಕೊಂಡು ಹೋಗುವವರು ಸೀದಾ ಮೇಲೆ ಪ್ರಯಾಣ ಮಾಡುವುದು ಮಾತ್ರ ಬಾಕಿ. ಮೇಲಿನಿಂದ ಯಾವುದೇ ವಸ್ತು ಕೆಳಗೆ ಬೀಳದ ಹಾಗೇ ಯಾವುದೇ ಸುರಕ್ಷಾ ವ್ಯವಸ್ಥೆ ಮಾಡಿಲ್ಲ. ಇದರಷ್ಟು ಡೇಂಜರ್ ಬೇರೆ ಯಾವುದೂ ಇಲ್ಲ. ಒಂದು ನೆಟ್ ತರಹದ್ದು ಕಟ್ಟಿದರೆ ಅದು ಸ್ವಲ್ಪ ಮಟ್ಟಿಗೆ ಸೇಫ್. ಆದರೆ ಆ ಬಗ್ಗೆ ಗುತ್ತಿಗೆದಾರರಿಗೆ ಏನೂ ಬಿದ್ದು ಹೋಗಿಲ್ಲ. ಜನ ಸರ್ಕಸ್ ಮಾಡಿ ಒಳಗೆ ಹೋಗಬೇಕು, ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು.
ಇನ್ನು ಕಟ್ಟಡದ ಒಳಗೆ ಹೋಗುವ ಸಂಕಷ್ಟವೇ ಬೇರೆ. ಈ ಜಾತ್ರೆಯಲ್ಲಿ ಎರಡು ಕಂಬ ಇಟ್ಟು ಹಗ್ಗದ ಮೇಲೆ ಬ್ಯಾಲೆನ್ಸ್ ಮಾಡುತ್ತಾರಲ್ಲ, ಹಾಗೆ ಹಿರಿಯ ನಾಗರಿಕರು ಹೋಗಬೇಕು. ಮಿಸ್ ಆಗಿ ಬಿದ್ದದ್ದೇ ಆದರೆ ಮೈಕೈಗೆ ರಂಗೋಲಿ. ಕೆಲವರು ಈಗಾಗಲೇ ಬಿದ್ದು ನೋವು ಅನುಭವಿಸಿದ್ದಾರೆ.ಇದನ್ನೆಲ್ಲಾ ನೋಡಿ ನೋಡಿ ಸಾಕಾಗಿ ಒಂದು ತಿಂಗಳ ಮೊದಲು ಒಮ್ಮೆ ಹೇಳಿದ್ದೆ. ಆದರೆ ಅದರಿಂದ ಏನೂ ಪ್ರಯೋಜನವಾಗಿಲ್ಲ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಮೇಲೆ ಎರಡು ಅಂತಸ್ತು ಕಟ್ಟುತ್ತಿದ್ದಾರೆ. ತಳಪಾಯ ಎಷ್ಟು ಗಟ್ಟಿಯಾಗಿದೆಯೋ ಎನ್ನುವುದು ದೇವರಿಗೆ ಗೊತ್ತು. ಇದೆಲ್ಲವನ್ನು ಸ್ಮಾರ್ಟ್ ಸಿಟಿಯ ನಿವಾಸಿಗಳಾದ ನಾವು ಅನುಭವಿಸಬೇಕು. ಇನ್ನು ಹೊರಗೆ ಬಂದರೆ ಕಟ್ಟಡದ ಲಾರಿ, ಟೆಂಪೋ ಅಡ್ಡ ನಿಂತಿರುತ್ತವೆ. ಅವರ ಕಟ್ಟಡ ಸಾಮಾಗ್ರಿಗಳ ರಾಶಿ ಬಿದ್ದಿರುತ್ತದೆ. ಅದನ್ನು ಅಲ್ಲಿಂದ ಸಾಗಿಸುವುದು, ರಾಶಿ ಹಾಕುವುದು ನಡೆಯುತ್ತಲೇ ಇರುತ್ತದೆ. ನಾನು ಹೇಳುತ್ತಿರುವುದು ಒಂದೇ. ನೀವು ಬಹಳ ಪ್ರಮುಖವಾಗಿರುವ ನಿರ್ಮಾಣಗಳನ್ನು ಬಹಳ ವೇಗವಾಗಿ ಮುಗಿಸಬೇಕು. ಆಮೆಗತಿಯಲ್ಲಿ ಮಾಡುತ್ತಾ ಕುಳಿತುಕೊಳ್ಳುವುದಲ್ಲ. ಮೊದಲಿಗೆ ಅಲ್ಲಿ ಕೆಳಗೆ ಹಾಕಿರುವ ಕಟ್ಟಡ ಸಾಮಾಗ್ರಿಗಳನ್ನು ಖಾಲಿ ಮಾಡಬೇಕು. ನೀರು ಕಾಲುದಾರಿಯಲ್ಲಿ ಎಲ್ಲಿಯೂ ಕೂಡ ನಿಲ್ಲದಂತೆ ನೋಡಿಕೊಳ್ಳಬೇಕು. ಮೇಲೆ ನೆಟ್ ಹಾಕಿ ಕೆಳಗೆ ಓಡಾಡುವ ಜನರಿಗೆ ರಕ್ಷಣೆ ಕೊಡಬೇಕು. ನಿರ್ಮಾಣದ ಕೆಲಸ ಬೇಗ ಮುಗಿಯಬೇಕು. ಇವತ್ತು ಇವರ ಅವಸ್ಥೆಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದೇನೆ. ಇವರಿಗೆ ಹೇಳಬೇಕಾಗಿರುವ ಜಿಲ್ಲಾಧಿಕಾರಿ ಹಾಗೂ ಜನರ ಸಮಸ್ಯೆಗಳನ್ನು ಕೇಳಬೇಕಾದ ಶಾಸಕರುಗಳು ಇತ್ತ ಗಮನಿಸುತ್ತಾರಾ ಎನ್ನುವ ಪ್ರಶ್ನೆ ಉಳಿಯುತ್ತದೆ!!
Leave A Reply