ಕೃತಕ ನೆರೆ ಬರದಂತೆ ಬಿಜೆಪಿ ಆಡಳಿತ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅಂದುಕೊಂಡಿದ್ದೆ!!

ಒಂದು ಜೋರು ಮಳೆ ಬಂದರೆ ಮಂಗಳೂರಿನಲ್ಲಿ ಏನಾಗಬಹುದು ಎನ್ನುವುದನ್ನು ನಾವು ಪ್ರತಿ ವರ್ಷ ನೋಡುತ್ತಿದ್ದೇವೆ. ಸೊಂಟದ ತನಕ ನೀರು ನಿಂತಾಗ ಅದರಲ್ಲಿ ನಡೆದುಕೊಂಡು ಹೋಗಿದ್ದೇವೆ. ಈ ಬಾರಿಯೂ ಅಂತಹ ಪರಿಸ್ಥಿತಿ ಕಣ್ಣ ಮುಂದೆ ಇದೆ. ಹಾಗಂತ ಹೀಗೆ ಆಗಬಾರದು ಎಂದು ಪಾಲಿಕೆ ಪ್ರತಿ ಬಾರಿ ಲಕ್ಷಗಟ್ಟಲೆ ಹಣವನ್ನು ವ್ಯಯಿಸುತ್ತದೆ. ಅದಕ್ಕೆ ಈ ಬಾರಿಯೂ ಹೊರತಲ್ಲ. ಪ್ರತಿ ವಾರ್ಡಿನಲ್ಲಿ ತಿಂಗಳಿಗೆ ಒಂದು ಲಕ್ಷದ ಹತ್ತು ಸಾವಿರದಂತೆ ಖರ್ಚು ಮಾಡಿ ಗ್ಯಾಂಗ್ ಎಂದು ಕರೆಯಲಾಗುವ ತಂಡಗಳನ್ನು ತಯಾರುಮಾಡಲಾಗಿದೆ. ಒಂದು ವಾರ್ಡಿಗೆ ಎರಡು ತಿಂಗಳಿಗೆ ಎರಡು ಲಕ್ಷ ಇಪ್ಪತ್ತು ಸಾವಿರದಂತೆ ಒಟ್ಟು ಅರವತ್ತು ವಾರ್ಡಿಗೆ ಎಷ್ಟು ಆಯಿತು. ಕೋಟಿ ರೂಪಾಯಿ ದಾಟುತ್ತದೆ. ಹಗಲಿಗೆ ಪ್ರತಿ ವಾರ್ಡಿಗೆ ಒಂದು ಗ್ಯಾಂಗ್, ರಾತ್ರಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಗ್ಯಾಂಗ್. ಆದರೆ ಪ್ರತಿ ಮಳೆ ಬಂದಾಗ ಮಂಗಳೂರಿನಲ್ಲಿ ಕೃತಕ ನೆರೆ ಗ್ಯಾರಂಟಿ.
ಹಾಗಾದರೆ ಇದನ್ನು ತಡೆಯುವುದು ಹೇಗೆ? ಮೊತ್ತ ಮೊದಲಾಗಿ ಪ್ರತಿ ವಾರ್ಡಿನಲ್ಲಿ ಇರುವ ಒಂದು ಮೀಟರ್ ಅಗಲದ ಪ್ರತಿ ತೋಡುಗಳನ್ನು ಕ್ಲೀನ್ ಮಾಡಲಾಗಿದೆಯಾ ಎಂದು ನೋಡಬೇಕು. ಇನ್ನು ಕೆಲವು ಕಡೆ ಈ ತೋಡುಗಳ ಗಲೀಜುಗಳನ್ನು ತೆಗೆಯಲಾಗಿದೆ. ತೆಗೆದು ಅಲ್ಲಿಯೇ ತೋಡುಗಳ ಮೇಲೆ ಹಾಕಲಾಗಿದೆ. ಇದರಿಂದ ಮಳೆಯ ನೀರು ನೆಲದ ಮೇಲೆ ಬಿದ್ದು ತೋಡಿಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಇನ್ನು ಹೆಚ್ಚಿನ ಕಡೆ ಈ ತೋಡುಗಳ ಹೂಳನ್ನು ತೆಗೆಯಬೇಕಿದ್ದ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ನವರು ಪ್ರತಿ ತಿಂಗಳು ಕೋಟಿ ರೂಪಾಯಿ ಬಿಲ್ ಮಾಡಿದರೆ ವಿನ: ತೋಡಿನ ಕಡೆ ಮುಖ ಮಾಡಿಯೂ ನೋಡಲಿಲ್ಲ. ಹಾಗಾದರೆ ಇದನ್ನು ನೋಡಬೇಕಾದವರು ಯಾರು? ಅಧಿಕಾರಿಗಳಿಗೆ ಬಿದ್ದು ಹೋಗಿಲ್ಲ. ಯಾಕೆಂದರೆ ಅವರಿಗೆ ತಿಂಗಳಾದ ಬಳಿಕ ಒಳ್ಳೆಯ ಸಂಬಳ ಬಂದೇ ಬರುತ್ತದೆ. ಅವರು ಯಾಕೆ ಕೃತಕ ನೆರೆಯ ಬಗ್ಗೆ ಯೋಚಿಸುತ್ತಾರೆ. ಆದ್ದರಿಂದ ಜನರಿಗೆ ಸಮಸ್ಯೆಯಾದಾಗ ನೋಡಬೇಕಾದವರು ಜನಪ್ರತಿನಿಧಿಗಳು. ಅದರಲ್ಲಿಯೂ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಪೋರೇಟರ್ ಗಳ ಜವಾಬ್ದಾರಿ ಹೆಚ್ಚಿರುತ್ತದೆ. ಆದರೆ ಏನು ಮಾಡುವುದು? ನಮ್ಮಲ್ಲಿ 80% ಮನಪಾ ಸದಸ್ಯರು ಹೊಸಬರು. ಅವರಿಗೆ ಈ ಬಗ್ಗೆ ಒಂದು ತರಬೇತಿ ಕಾರ್ಯಕ್ರಮ ಎನ್ನುವುದಾದರೂ ಎಲ್ಲಿ ನಡೆದಿದೆ. ಹೊಸ ಕಾರ್ಪೋರೇಟರ್ ಗಳಿಗೆ ಮೊದಲಿಗೆ ಟ್ರೇನಿಂಗ್ ಕೊಡುವವರೇ ಅವರ ವಾರ್ಡಿನ ಜೆಇ ಹಾಗೂ ಗುತ್ತಿಗೆದಾರರು. ಅವರು ಯಾವ ಕಾಮಗಾರಿಯಲ್ಲಿ ಹೇಗೆ ಹಣ ಹೊಡೆಯಬಹುದು ಎಂದು ಹೇಳಿಕೊಡುತ್ತಾರೆ ವಿನ: ಜನರ ಕೃತಕ ನೆರೆಯ ಸಮಸ್ಯೆ ಬಗ್ಗೆ ಹೇಳಿಕೊಡುವುದಿಲ್ಲ. ಮೊದಲಿಗೆ ಭಾರತೀಯ ಜನತಾ ಪಾರ್ಟಿಯ ಮುಖಂಡರು ತಮ್ಮ ಮನಪಾ ಸದಸ್ಯರಿಗೆ ಒಂದೆರಡು ದಿನಗಳ ತರಬೇತಿ ಕಾರ್ಯಕ್ರಮ ನಡೆಸಲೇಬೇಕು. ಅದರಲ್ಲಿ ನಾವು ಜನರ ತೆರಿಗೆಯ ಹಣವನ್ನು ಹೇಗೆ ಖರ್ಚು ಮಾಡುತ್ತೀದ್ದೇವೆ ಮತ್ತು ಆ ಸೌಲಭ್ಯವನ್ನು ಹೇಗೆ ಜನಪರವಾಗಿ ಬಳಸಬೇಕು ಎಂದು ಕಾರ್ಪೋರೇಟರ್ ಗಳಿಗೆ ತಿಳಿಸಿಹೇಳಿಕೊಡಬೇಕು.ಅದರಲ್ಲಿ ಹೇಗೆ ಹಣ ಹೊಡೆಯಬೇಕು ಎನ್ನುವುದನ್ನು ಅವರು ಕಲಿತುಬಿಡುತ್ತಾರೆ. ಅದರ ಟೆನ್ಷನ್ ಇಲ್ಲ. ಇನ್ನು ಪ್ರತಿಬಾರಿ ಕೃತಕನೆರೆ ಎನ್ನುವುದು ಆದ ಜಾಗದಲ್ಲಿಯೇ ಮತ್ತೆ ಆಗುವುದು. ಈ ಬಾರಿ ಕೃತಕ ನೆರೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದೇವೆ ಎಂದು ಪಾಲಿಕೆ ಹೇಳಿದೆ.
ತಮ್ಮ ವಾರ್ಡಿನಲ್ಲಿ ಕೃತಕನೆರೆಯಾಗುತ್ತದೆ ಎಂದು ವಾರ್ಡಿನ ಕಾರ್ಪೋರೇಟರ್ ಗೆ ಸುಳಿವು ಮೊದಲೇ ಸಿಕ್ಕಿರುತ್ತದೆ. ಅವರು ಅದಕ್ಕೆ ಮೊದಲೇ ಈ ಬಗ್ಗೆ ಲಿಖಿತ ಮನವಿಯನ್ನು ಆಯುಕ್ತರಿಗೆ, ಮೇಯರ್ ಅವರಿಗೆ ಕೊಡಬೇಕು. ಅದರಿಂದ ಕೃತಕ ನೆರೆ ಬರದಂತೆ ಹೂಳು ತೆಗೆದುಬಿಟ್ಟರೆ ಸಮಸ್ಯೆ ಒಂದಷ್ಟರ ಮಟ್ಟಿಗೆ ಫಿನಿಶ್. ಎಷ್ಟು ಜನ ಹೊಸ ಪಾಲಿಕೆ ಸದಸ್ಯರು ಕೊಟ್ಟಿದ್ದಾರೆ. ಮಣ್ಣಗುಡ್ಡೆ, ಭಗವತಿ ನಗರ, ಗುಜರಾತಿ ಶಾಲೆಯ ರಸ್ತೆ, ಎಂಪಾರ್ ಮಾಲ್ ರಸ್ತೆ, ಭಾರತ್ ಮಾಲ್ ಕೊಟ್ಟಾರ ಚೌಕಿ, ಜಪ್ಪಿನಮೋಗರು, ಸಹಿತ ಕೆಲವು ಶಾಶ್ವತ ಕೃತಕ ನೆರೆಯ ಜಾಗಗಳ ಕಾರ್ಪೋರೇಟರ್ ಗಳು ಇನ್ನು ಮಲಗಿಯೇ ಇದ್ದಾರಾ? ಇವರನ್ನು ಕಟ್ಟಿ ಯಾವ ರೀತಿಯ ಉತ್ತಮ ಆಡಳಿತ ನೀಡಲು ಪಾಲಿಕೆಗೆ ಸಾಧ್ಯವಿದೆ?
ನಾನು ಹೇಳುವುದಾದರೆ ಎನ್ ಐಟಿಕೆ ಅಥವಾ ನಿಟ್ಟೆಯಿಂದ ನುರಿತ ಇಂಜಿನಿಯರ್ ಗಳನ್ನು ಬಳಸಿ ಈ ಪರ್ಮನೆಂಟ್ ಕೃತಕ ನೆರೆ ಬರುವ ಪ್ರದೇಶಗಳಿಗೆ ಒಂದು ಶಾಶ್ವತ ಪರಿಹಾರ ಮಾಡಬೇಕು. ರಾಜಕಾಲುವೆಗಳ ಮೇಲೆ ಕಟ್ಟಿರುವ ಅಕ್ರಮಗಳನ್ನು ತೆರವು ಮಾಡುವ ಕೆಲವು ಮಾದರಿ ಕಾರ್ಯಗಳನ್ನು ಮೇಯರ್ ದಿವಾಕರ್ ಪಾಂಡೇಶ್ವರ್ ಮಾಡಿದ್ದಾರೆ. ಜಪ್ಪಿನಮೊಗರುವಿನಲ್ಲಿ ರಾಜ್ಯ ಕಾಲುವೆಯ ಮೇಲೆ ಕಟ್ಟಿದ್ದ ಅತಿಕ್ರಮಣಗಳನ್ನು ಕಿತ್ತು ಬಿಸಾಡಿದ್ದಾರೆ. ಉತ್ತಮ ಕಾರ್ಯ ಆಗುವಾಗ ಅವರದ್ದೇ ಪಕ್ಷದ ಮುಖಂಡರು ಒತ್ತಡ ಹಾಕಿದ್ದರೂ ಅದನ್ನು ಲೆಕ್ಕಿಸದೇ ದಿವಾಕರ್ ಮಾದರಿ ಕಾರ್ಯ ಮಾಡಿ ತೋರಿಸಿದ್ದಾರೆ. ಇನ್ನು ಕರಾವಳಿಯ ಕಾಲೇಜೊಂದರ ಬಳಿ ಅದರ ಮಾಲೀಕರು ಹೀಗೆ ತೆರವಿನ ಸುಳಿವು ಸಿಕ್ಕ ತಕ್ಷಣ ಕೂಡಲೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಕೋರ್ಟಿನಲ್ಲಿ ಸಮರ್ಥವಾಗಿ ವಾದಿಸಬೇಕಿದ್ದ ಪಾಲಿಕೆಯ ಪರ ವಕೀಲರಿಗೆ ಅಧಿಕಾರಿಗಳು ಧೃಡವಾದ ದಾಖಲೆಗಳನ್ನು ನೀಡಲೇ ಇಲ್ಲ. ಇದರಿಂದ ಆ ಕಾಲೇಜಿನ ಮಾಲೀಕರು ಗೆಲ್ಲುವಂತಾಯಿತು. ಈಗ ನಾನು ಹೇಳುವುದೇನೆಂದರೆ ಮೇಯರ್ ಅಕ್ರಮ ತೆರವಿಗೆ ಹೊರಟಿದ್ದಾರೆ ಎಂದು ಅಕ್ರಮಿಗಳಿಗೆ ಹೇಳುವವರು ಪಾಲಿಕೆಯಲ್ಲಿ ಯಾರು? ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರದಲ್ಲಿ ಇದ್ದಾಗ ಜನ ಕೃತಕನೆರೆಯನ್ನು ಐದು ವರ್ಷವೂ ಅನುಭವಿಸಿದ್ದಾರೆ. ಈಗ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರದಲ್ಲಿದೆ. ಈಗಲೂ ಹೀಗೆ ಆದರೆ ಅವರಿಗೂ ನಿಮಗೂ ಏನು ವ್ಯತ್ಯಾಸ?
Leave A Reply