ನಿಮ್ಮ ಫ್ಲಾಟ್ ದೊಡ್ಡದಾಗಿರಬಹುದು, ಆದರೆ ನೀವು ಕೊಟ್ಟ ಹಣ ಪಾಲಿಕೆ ಸೇರಿರುವುದಿಲ್ಲ.. ಬಿಲ್ಡರ್ ಗುಳುಂ!
ಕೆಲವು ಬಾರ್ ಎಂಡ್ ರೆಸ್ಟೋರೆಂಟಿನವರು ಕಡಿಮೆ ಜಾಗದ ಲೆಕ್ಕವನ್ನು ದಾಖಲೆಗಳಲ್ಲಿ ತೋರಿಸಿ ಹೇಗೆ ಆರಾಮವಾಗಿ ತಮ್ಮ ಜೋಳಿಗೆ ತುಂಬಿಸುತ್ತಾರೆ, ಅವರು ಬಿಸಾಡುವ ತಂಗಳನ್ನು ತಿಂದು ಹೇಗೆ ಅಧಿಕಾರಿಗಳು ಸುಮ್ಮನೆ ಕುಳಿತುಕೊಳ್ಳುತ್ತಾರೆ ಎಂದು ನಿನ್ನೆ ವಿವರವಾಗಿ ತಿಳಿಸಿದ್ದೇನೆ. ಇವತ್ತು ನೀವು ಖರೀದಿಸುವ ಫ್ಲಾಟ್ ನ ಬಿಲ್ಡರ್ ಹೇಗೆ ಇದೇ ರೀತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ವಂಚಿಸುತ್ತಾರೆ ಎಂದು ಹೇಳುತ್ತೇನೆ. ಪುನ: ಮೇಲಿನ ವಾಕ್ಯ ಓದಿ. ಮನಪಾಗೆ ವಂಚಿಸುತ್ತಿದ್ದಾರೆ ವಿನ: ಅಲ್ಲಿನ ಕಂದಾಯ ಅಧಿಕಾರಿಗಳಿಗಲ್ಲ. ಅಧಿಕಾರಿಗಳು ತಮ್ಮ ಪಾಲಿಗೆ ಬರುವ ಕಲ್ಲು, ಮಣ್ಣು ತಿಂದು ಚೆನ್ನಾಗಿರುತ್ತಾರೆ.
ಯಾವುದೇ ವಸತಿ ಸಮುಚ್ಚಯ ಕಟ್ಟುವ ಮೊದಲು ಅನುಮತಿ (ಲೈಸೆನ್ಸ್) ಪಡೆದುಕೊಳ್ಳಲು ಆ ಕಟ್ಟಡದ ಬಿಲ್ಡರ್ ಮನಪಾಗೆ ಹೋಗಬೇಕು. ಅಲ್ಲಿ ತಾನು ಕಟ್ಟಲಿರುವ ಕಟ್ಟಡದಲ್ಲಿ ಒಟ್ಟು ಎಷ್ಟು ಮನೆಗಳು ಇರುತ್ತವೆ. ಒಂದೊಂದು ಮನೆ ಕೂಡ ಎಷ್ಟು ಚದರ ಅಡಿ ದೊಡ್ಡದಿರುತ್ತದೆ, ಹೋಗಿ ಬರುವ ಪ್ಯಾಸೇಜ್ ಎಷ್ಟು ಅಗಲ ಇರುತ್ತದೆ, ಮೆಟ್ಟಿಲುಗಳ ಉದ್ದ, ಅಗಲ, ವರಾಂಡ, ಬಾಲ್ಕನಿ ಇದ್ದಲ್ಲಿ ಅದು ಎಲ್ಲ ಎಷ್ಟು ಅಳತೆಯದ್ದು ಎಂದು ಸರಿಯಾಗಿ ಮಾಹಿತಿಯನ್ನು ನಾಕಶೆಯಲ್ಲಿ ತೋರಿಸಬೇಕು. ಪ್ರತಿಯೊಬ್ಬ ಬಿಲ್ಡರ್ ಕೂಡ ಈ ಅಳತೆಗಳನ್ನು ಸರಿಯಾಗಿ ತೋರಿಸುತ್ತಿದ್ದಲ್ಲಿ, ಈ ಬಗ್ಗೆ ಬರೆಯುವ ಅವಶ್ಯಕತೆನೆ ಇರಲಿಲ್ಲ. ಇಲ್ಲಿ ಹೇಗೆ ಮೋಸ ಮಾಡಿ ಹಣ ಮಾಡುತ್ತಾರೆ ಎಂದು ತಿಳಿಸುತ್ತೇನೆ. ಬಿಲ್ಡರ್ ತಾನು ಮನಪಾಗೆ ಕೊಡುವ ದಾಖಲೆಯಲ್ಲಿ ಒಟ್ಟು ಮೂವತ್ತು ಮನೆಗಳನ್ನು ಕಟ್ಟಲಾಗುತ್ತದೆ ಎಂದು ಬರೆದಿರುತ್ತಾನೆ. ಒಂದೊಂದು ಮನೆ ಕೂಡ ಇಂತಿಷ್ಟು, ಉದಾಹರಣೆ 900 ಚದರ ಅಡಿ ಇರುತ್ತದೆ ಎಂದು ನಮೂದಿಸಿರುತ್ತಾನೆ ಎಂದೇ ಇಟ್ಟುಕೊಳ್ಳೋಣ. ಆದರೆ ಅದೇ ಕಟ್ಟಡ ಸಂಪೂರ್ಣವಾಗಿ ಕಟ್ಟಿ ಮುಗಿದ ಬಳಿಕ ಒಂದೊಂದು ಮನೆ ಕೂಡ ಕನಿಷ್ಟ 50 ರಿಂದ 150 ಚದರ ಅಡಿ ದೊಡ್ಡದಿರುತ್ತದೆ. ಅದರಿಂದ ಪಾಲಿಕೆಗೆ ಏನು ನಷ್ಟ ಎಂದು ನೀವು ಕೇಳಬಹುದು. ವಸತಿ ಸಮುಚ್ಚಯ ಇರಲಿ, ವ್ಯವಹಾರದ ಕಟ್ಟಡ ಇರಲಿ ಒಂದೊಂದು ಚದರ ಅಡಿಗೂ ಇಂತಿಷ್ಟು ಸಾವಿರ ರೂಪಾಯಿ ಬೆಲೆ ಇರುತ್ತದೆ. ನಗರದಲ್ಲಂತೂ 50 ರಿಂದ 150 ಚದರ ಅಡಿ ಜಾಗಕ್ಕೆ ಪ್ರದೇಶದ ಪ್ರಾಮುಖ್ಯತೆಯ ಮೇಲೆ ಸಾವಿರಾರು, ಕೆಲವೊಮ್ಮೆ ಲಕ್ಷಗಳಲ್ಲಿ ಬೆಲೆ ಆಗುತ್ತದೆ.
ಒಂದೊಂದು ಮನೆಯಿಂದ ಒಂದೊಂದು ಲಕ್ಷ ರೂಪಾಯಿ ಹೆಚ್ಚು ಹಣ ನಿರ್ಮಣಕಾರನಿಗೆ ಬರುತ್ತೆ ಎಂದಾದರೆ ಆ ಬಿಲ್ಡಿಂಗ್ ನಲ್ಲಿ 50 ರಿಂದ 75 ಫ್ಲಾಟ್ ಇದ್ದರೆ ಬರುವ ನಿವ್ವಳ ಲಾಭ ಎಷ್ಟು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಿಲ್ಡರ್ ಒಂದೊಂದು ಫ್ಲಾಟ್ ಗೆ ಹೋಗಿ ಬರುವ ಪ್ಯಾಸೇಜ್ ಅಥವಾ ಮೆಟ್ಟಿಲುಗಳ ದಾರಿ, ಪಾರ್ಕಿಂಗ್, ಅಗ್ನಿ ಶಾಮಕ ದಳದ ವಾಹನ ಆವರಣದೊಳಗೆ ಬರಲು ಅಗತ್ಯವಿರುವ ಸೆಟ್ ಬ್ಯಾಕ್ ಸ್ಥಳ ಮುಂತಾದವುಗಳೆದರಲ್ಲಿ ಜಾಗವನ್ನು ನುಂಗಿ ಹಾಕಿರುತ್ತಾರೆ. ಇದರಿಂದ ಮನೆಗಳು ದೊಡ್ಡದಾಗಿರುತ್ತದೆ, ನಿಮಗೆ ಖಷಿಯಾಗಿರಬಹುದು, ಬಿಲ್ಡರ್ ಒಳ್ಳೆಯ ದುಡ್ಡು ಮಾಡುತ್ತಾನೆ, ಆದರೆ ದಾಖಲೆಗಳಲ್ಲಿ ಮಾತ್ರ ಸುಳ್ಳಿನ ಸರಮಾಲೆಯನ್ನೆ ಬರೆಯಲಾಗಿರುತ್ತದೆ.
ಮನೆಯ ಡೋರ್ ನಂಬ್ರ ಕೊಡುವಾಗಲೂ ಎಂಭತ್ತು ಮನೆಗಳಿಗೂ ಡೋರ್ ನಂಬರ್ ಸಿಕ್ಕಿರುತ್ತದೆ. ಆದರೆ 99% ದಷ್ಟು ಸಂದರ್ಭದಲ್ಲಿ ಮನಪಾಗೆ ಸಲ್ಲಿಸಿರುವ ದಾಖಲೆಯಲ್ಲಿ ಇರುವ ಅಳತೆಗೂ, ನೈಜವಾಗಿ ಇರುವ ಮನೆಯ ವಿಸ್ತ್ರೀಣಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ಕಂದಾಯ ಅಧಿಕಾರಿಗಳು ಎನು ಮಾಡುತ್ತಾರೆ, ಅವರು ತಮಗೆ ಸಲ್ಲಿಸಿರುವ(?) ದಾಖಲೆಗಳಲ್ಲಿ ಎಷ್ಟು ಮನೆಯ ವಿರ್ಸ್ತಿಣ ಎಂದು ಬರೆಯಲಾಗಿದೆಯೋ ಅದಕ್ಕೆ ಸರಿಯಾಗಿ ಎಷ್ಟು ತೆರಿಗೆಯನ್ನು ಸ್ವೀಕರಿಸಬಹುದೊ ಅಷ್ಟನ್ನು ಮಾತ್ರ ತೆಗೆದುಕೊಂಡಿರುತ್ತಾರೆ. ಅವರಿಗೆ ತಮ್ಮ ಕೆಲಸ ಸುಲಭವಾಗಿ ಆದರೆ ಆಯಿತು ಮತ್ತು ತಮಗೆ ಬರಬೇಕಾದ ಆದಾಯ ಬಂದರೆ ಮುಗಿಯಿತು. ಫ್ಲಾಟ್ ನ ದಾಖಲೆಗಳಲ್ಲಿ ಬಿಲ್ಡರ್ ಏನು ಬೇಕಾದರೂ ಮಾಡಿಕೊಳ್ಳಲಿ, ತಮಗೇನೂ ಎನ್ನುವ ಮನೋಭಾವ ಇರುತ್ತದೆ. ನಿಜವಾಗಿ ನೋಡಬೇಕಾದರೆ ನಗರ ಯೋಜನ ಅಧಿಕಾರಿಗಳು ತಮ್ಮ ಕೊಠಡಿಯೊಳಗೆ ಕುಳಿತುಕೊಂಡು ದಾಖಲೆ ಗಳನ್ನು ಕಣ್ಣುಮುಚ್ಚಿ ಸಹಿ ಮಾಡುವುದಲ್ಲ, ಅವರು ಆ ಕಟ್ಟಡಕ್ಕೆ ಹೋಗಿ ಅಲ್ಲಿ ಅಳತೆಯ ಟೇಪ್ ಹಿಡಿದುಕೊಂಡು, ಬಿಲ್ಡರ್ ಸುಳ್ಳು ಹೇಳಿದ್ದಾನಾ ಎಂದು ಪರೀಕ್ಷಿಸಿ ನಂತರ ಅದಕ್ಕೆ ಕಟ್ಟಡ ಪ್ರವೇಶ ಅನುಮತಿ ಪತ್ರ ನೀಡಬೇಕು. ಅದರ ಬಳಿಕ ಅದಕ್ಕೆ ಡೋರ್ ನಂಬ್ರ ನೀಡಬೇಕು. ಆಗ ಅದಕ್ಕೆ ಲೆಕ್ಕ ಪ್ರಕಾರವಾಗಿ ಎಷ್ಟು ತೆರಿಗೆ ಬೀಳುತ್ತೊ, ಅಷ್ಟು ತೆರಿಗೆ ಕಟ್ಟಿಸಿಕೊಳ್ಳಬೇಕು. ಆದರೆ ಪಾಲಿಕೆಗೆ ಹೆಚ್ಚು ಆದಾಯ ಬಂದರೆ ತನಗೆ ಏನೂ ಲಾಭ. ತಾನು ಇದ್ದಷ್ಟು ದಿನ ತನ್ನದು ಗಟ್ಟಿ ಮಾಡಿಕೊಳ್ಳುವ ಎನ್ನುವ ಧೋರಣೆ ಇರುವುದರಿಂದ ಪಾಲಿಕೆಗೆ ಬರುವ ಆದಾಯ ಈ ಪ್ರಮಾಣದಲ್ಲಿ ಸೋರಿಕೆ ಆಗುತ್ತಲೇ ಇರುತ್ತದೆ. ಇನ್ನೂ ಅಧಿಕಾರಿಗಳಿಗೆ “ನೀವು ಮಾಡಿ, ಏನು ಆಗುವುದಿಲ್ಲ, ನಾವಿದ್ದೇವೆ” ಎಂದು ಧೈರ್ಯ ಕೊಡಲು ಪಾಲಿಕೆಯಲ್ಲಿಯೇ ಪೂರ್ಣಕಾಲೀನ ಬಿಲ್ಡರ್ ಸ್ನೇಹಿ ಕೆಲವು ಮನಪಾ ಸದಸ್ಯರು ಇದ್ದಾರೆ. ಅವರು ಯಾವುದೇ ಪಕ್ಷದವರು ಇರಬಹುದು. ತಪ್ಪು ತಪ್ಪೇ. ಯಾವುದೇ ಹೊಸ ವಸತಿ ಸಮುಚ್ಚಯದ ಶಿಲಾನ್ಯಾಸದಿಂದ ಹಿಡಿದು ಅದು ಸಂಪೂರ್ಣವಾಗಿ ಕೊನೆಯ CR ದಾಖಲೆ ಪತ್ರ ಬಿಲ್ಡರ್ ಕೈ ಸೇರುವವರೆಗೂ ಅಂತಹ ಬಿಲ್ಡರ್ಸ್ ಪ್ರಿಯ ಸದಸ್ಯರು ತಮ್ಮ ತನು, ಮನ ವನ್ನು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಂಡಿರುತ್ತಾರೆ. ಧನ ಮಾತ್ರ ಪಡೆದುಕೊಂಡಿರುತ್ತಾರೆ. ಇದು ಪಾಲಿಕೆಗೆ ಮೋಸ ಮಾಡುವ ಒಂದು ಶೈಲಿ. ಇಂತಹ ಮತ್ತೊಂದು ಪ್ರಕಾರ ಇದೆ. ಅದು ಚಾಪೆ, ರಂಗೋಲಿ ಎಲ್ಲ ಬಿಟ್ಟು ಇನ್ಯಾವುದರ ಕೆಳಗೆ ನುಗ್ಗಿದಂತೆ. ಮೆಸ್ಜನ್ಯನ್ ಎನ್ನುವ ಶಬ್ದ ಕೇಳಿದವರಿಗೆ ನಾನು ಏನು ಹೇಳಲು ಹೊರಟಿದ್ದೇನೆ ಎಂದು ಗೊತ್ತಾಗಿರುತ್ತದೆ! ಮುಂದಿನ ಬಾರಿ ನೀವು ಹೊಟೇಲಿಗೆ ಹೋದಾಗ ಮೆಸ್ಜನ್ಯನ್ ಬಗ್ಗೆ ನಾನು ಹೇಳುವುದು ನೆನಪಾಗಲಿದೆ.
Leave A Reply