ಫ್ಲೆಕ್ಸ್ ಹಾಕಿದವರಿಗೆ ನೋಟಿಸು ನೀಡಿ ದಂಡ ವಸೂಲಿ ಮಾಡುತ್ತಿರಾ ಮೇಯರ್!!
ಮೇಯರ್ ಹೇಳಿ ಮೂರು ದಿನ ಆಯಿತು. ಬೇಕಾದರೆ ಅವರೇ ತೆಗೆಯಲಿ ಎಂದು ಕೆಲವರು ಹಾಗೇ ಬಿಟ್ಟಿದ್ದಾರೆ. ನಾವೇ ತೆಗೆದರೆ ಫ್ರೇಮ್ ಕೂಡ ಕೊಡುವುದಿಲ್ಲ ಎಂದು ಮೇಯರ್ ಪ್ರಕಟನೆಯಲ್ಲಿ ಹೇಳಿದ್ದಾರೆ. ಫ್ರೇಮ್ ಹೆಚ್ಚೆಂದರೆ ಪಾಲಿಕೆಯ ಹಿಂದೆ ಒಟ್ಟು ಮಾಡಿ ಬಿಸಾಡಬಹುದು. ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗುವವರು ಇದ್ದಾರೆ. ಈಗ ವಿಷಯ ಇರುವುದು ಫ್ಲೆಕ್ಸ್ ತೆಗೆಯಿರಿ ಎಂದು ಹೇಳಿದ್ರೆ ಸಾಕಾ? ಅದನ್ನು ಪಾಲಿಕೆಯ ಖರ್ಚಿನಲ್ಲಿ ತೆಗೆಸಲು ಹೇಗೆ ಸಾಧ್ಯ? ಯಾಕೆಂದರೆ ಫ್ಲೆಕ್ಸ್ ಹಾಕಿದವರು ಕಡಿಮೆ ಖರ್ಚಿನಲ್ಲಿ ಒಳ್ಳೆಯ ಪಬ್ಲಿಸಿಟಿ ಸಿಗುತ್ತೆ ಎಂದು ರಸ್ತೆಗೆ ನಾಲ್ಕು ಹಾಕಿರುತ್ತಾರೆ. ಅದನ್ನು ಪಾಲಿಕೆಯ ಖರ್ಚಿನಲ್ಲಿ ಯಾಕೆ ತೆಗೆಯಬೇಕು. ಅದು ನಮ್ಮ ತೆರಿಗೆಯ ಹಣ. ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಬೇಕಾದರೆ ಅವರ ಕಿಸೆಯಿಂದ ಹಣ ಹಾಕಿ ತೆಗೆಯಲಿ. ನಮ್ಮ ಹಣದಿಂದ ಬೇಡಾ. ಒಂದು ವೇಳೆ ಪಾಲಿಕೆಯ ಖರ್ಚಿನಲ್ಲಿ ತೆಗೆಯುವುದೇ ಆದರೆ ಅದರ ಖರ್ಚಿನ ನಾಲ್ಕು ಪಟ್ಟನ್ನು ಹಾಕಿದವರಿಂದ ವಸೂಲಿ ಮಾಡಬೇಕು. ಇನ್ನು ತೆಗೆದರೆ ಮುಗಿಯಿತಾ? ಫ್ಲೆಕ್ಸ್ ಹಾಕುವುದು ಕಾನೂನು ಬಾಹಿರ ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ಫ್ಲೆಕ್ಸ್ ಹಾಕಬಾರದು ಎಂದು ಕರ್ನಾಟಕ ಸರಕಾರದ ಸೂಚನೆ ಇದೆ. ಹಾಗಿದ್ರೂ ಮಂಗಳೂರಿನಲ್ಲಿ ಪಾಲಿಕೆಯ ಕಟ್ಟಡದ ಎದುರೇ ರಾಜಾರೋಷವಾಗಿ ಹಲವು ಫ್ಲೆಕ್ಸ್ ಗಳಿವೆ. ಅದು ಕೂಡ ತಿಂಗಳು ಇಡೀ ಇರುತ್ತವೆ. ಹಾಗಾದರೆ ಇದು ಕಾನೂನಿಗೆ ವಿರುದ್ಧವಾಗಿ ಇದ್ದವು ಎಂದು ಅರ್ಥವಲ್ಲವೇ? ಅದನ್ನು ತೆಗೆಸಿದ್ರೆ ಸಾಕಾ? ಹಾಗೆ ಫ್ಲೆಕ್ಸ್ ಯಾರ ಹೆಸರಲ್ಲಿ ಇದೆಯೋ ಅವರಿಗೆ ಮತ್ತು ಅಭಿನಂದನೆಯ ಹೆಸರಿನಲ್ಲಿ ಪುಕ್ಸಟೆ ಪ್ರಚಾರದ ನಾಟಕ ಮಾಡುತ್ತಿರುವವರಿಗೆ ನೋಟಿಸು ಕೊಡಬೇಕು. ಒಳ್ಳೆಯ ಮಾತಿನಲ್ಲಿ ಪಾಲಿಕೆಗೆ ಬಂದು ದಂಡ ಕಟ್ಟಿ ಎಂದು ಹೇಳಬೇಕು. ಫ್ಲೆಕ್ಸ್ ಹಾಕಿದ್ದಕ್ಕೆ ಒಂದು ದಂಡ, ಇನ್ನೊಂದು ನಿಷೇಧಿತ ಪ್ಲಾಸ್ಟಿಕ್ ಬಳಸಿದ್ದಕ್ಕೆ ಇನ್ನೊಂದು ದಂಡ. ಹೀಗೆ ಎಷ್ಟು ಫ್ಲೆಕ್ಸ್ ಹಾಕಿದ್ದಾರೆ ಅಷ್ಟರ ದಂಡ ಒಟ್ಟಿಗೆ ವಸೂಲಿ ಮಾಡಿದರೆ ಪಾಲಿಕೆಗೂ ಆದಾಯ ಆಗುತ್ತದೆ. ಮೇಯರ್ ಅವರಿಗೆ ಸಾಮರ್ತ್ಯ ಇದೆಯಾ ಅಥವಾ ಒತ್ತಡ ಇದೆಯಾ?
ಇತ್ತೀಚೆಗೆ ಫ್ಲೆಕ್ಸ್ ಹಾಕುವುದೇ ಒಂದು ಫ್ಯಾಶನ್ ಆಗಿಬಿಟ್ಟಿದೆ. ಪಕ್ಷದಲ್ಲಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಯಾವುದೋ ಪೋಸ್ಟ್ ಕೊಟ್ಟಿರುತ್ತಾರೆ. ಇಂತವರು ಪಕ್ಷಕ್ಕಾಗಿ ಏನು ಬೆವರು ಸುರಿಸುತ್ತಾರೋ ದೇವರೇ ಬಲ್ಲ, ಫ್ಲೆಕ್ಸ್ ಹಾಕಿಸುವವರಿಗೆ ಮೊದಲೇ ಫೋನ್ ಹೋಗಿರುತ್ತದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಇನ್ನೊಂದು ಮತ್ತೊಂದು ಎನ್ನುವ ಭೇದಭಾವ ಇಲ್ಲ. ಹಿಂದೆ ಪಕ್ಷದಲ್ಲಿ ಎಲೆಮರೆಯ ಕಾಯಿಯಂತೆ ದುಡಿದು, ಪಕ್ಷ ಕಟ್ಟಿ ನಂತರ ಯಾರೋ ಶಾಸಕರು, ಸಂಸದರು ಆದಾಗ ದೂರದಿಂದಲೇ ಖುಷಿಪಡುತ್ತಿದ್ದ ಸಂಸ್ಕೃತಿ ಬಿಜೆಪಿಯಲ್ಲಿ ಇತ್ತು. ಆದರೆ ಈಗ ಅವರಲ್ಲಿಯೇ ಫ್ಲೆಕ್ಸ್ ಹಾಕುವ ಸಂಸ್ಕೃತಿ ಜಾಸ್ತಿ ಇದೆ. ಯಾರಿಂದ ಈ ಗಾಳಿ ತಾಗಿತೋ ದೇವರಿಗೆ ಗೊತ್ತು. ಅದನ್ನು ನೋಡಿ ಈ ಇಂಟಕ್, ಕಾಂಗ್ರೆಸ್ ನವರು ಸ್ಪರ್ಧೆಗೆ ಬಿದ್ದವರಂತೆ ಅವರು ನಾಲ್ಕು ಹಾಕುವಾಗ ನಾವು ಎಂಟು ಹಾಕೋಣ ಎನ್ನುವ ವಿಕೃತಿ ತೋರಿಸುತ್ತಿದ್ದಾರೆ. ಒಟ್ಟಿನಲ್ಲಿ ಯಾರದ್ದೇ ಫ್ಲೆಕ್ಸ್ ಇರಲಿ ರಸ್ತೆಯ ಒಂದು ಮೂಲೆಯಿಂದ ಮತ್ತೊಂದು ಮೂಲೆಯ ತನಕ ರಸ್ತೆ ಬದಿ ರಂಗೋಲಿ ಹಾಕಿದಂತೆ ರಾರಾಜಿಸುತ್ತದೆ. ಇವರಿಗೆ ತಾವು ಒಳ್ಳೆಯ ಕೆಲಸ ಮಾಡಿದರೆ ಸಹಜವಾಗಿ ಜನ ಗುರುತಿಸುತ್ತಾರೆ. ಅದಕ್ಕೆ ಈ ಫ್ಲೆಕ್ಸ್ ಅಗತ್ಯವೇ ಇಲ್ಲ ಎಂದು ಯಾರಾದರೂ ಪಕ್ಷದ ಹಿರಿಯರು ಕರೆದು ಬುದ್ಧಿ ಹೇಳಬೇಕು. ಇನ್ನು ಕೆಲವರು ಅಭಿನಂದನೆಯ ಹೆಸರಿನಲ್ಲಿ ತಾವು ಮೈಲೇಜ್ ಪಡೆದುಕೊಳ್ಳಲು ಹೀಗೆ ಮಾಡುತ್ತಾರೆ. ಇನ್ನು ಜನಪ್ರತಿನಿಧಿಗಳು ನಿಮ್ಮ ಏರಿಯಾದಲ್ಲಿ ಒಳ್ಳೆಯ ಅಭಿವೃದ್ಧಿ ಮಾಡಿದರೆ ಅವರನ್ನು ಒಳ್ಳೆಯ ಮನಸ್ಸಿನಿಂದ ಹರಸಿ. ಅದಕ್ಕೆ ಫ್ಲೆಕ್ಸ್ ಯಾಕೆ ಎಂದು ಜನರು ಕೂಡ ಅರ್ಥ ಮಾಡಬೇಕು. ಇನ್ನು ಇದಕ್ಕೆ ಬಳಸುವ ವಸ್ತು. ಅದು ನಿಷೇಧಿತ ಮೆಟಿರೀಯಲ್ ಆಗಿರುತ್ತದೆ. ಕೆಲವು ದಿನ ನಾವು ಬಟ್ಟೆಯದ್ದು ಹಾಕುತ್ತೇವೆ ಎಂದು ತೋರಿಸಲು ಕೆಲವರು ಅದರಲ್ಲಿಯೂ ಪ್ರಚಾರ ತೆಗೆದುಕೊಂಡರು. ನಂತರ ಬಟ್ಟೆಯದ್ದು ದುಬಾರಿಯಾಗುತ್ತದೆ, ಇದು ನಾಲ್ಕು ಹಾಕುವ ಖರ್ಚಿನಲ್ಲಿ ಅದು ಎಂಟು ಹಾಕಬೇಕು ಎಂದು ಗೊತ್ತಾಗುತ್ತಿದ್ದಂತೆ ಅದನ್ನು ಕೈಬಿಟ್ಟರು. ಬೆಂಗಳೂರಿನಲ್ಲಿ ಫ್ಲೆಕ್ಸ್ ವ್ಯಕ್ತಿಯೊಬ್ಬರ ತಲೆ ಮೇಲೆ ಬಿದ್ದು ಅಪಾಯ ಸಂಭವಿಸಿದಾಗ ಈ ಕೂಗು ಸ್ವಲ್ಪ ದೊಡ್ಡ ಧ್ವನಿಯಲ್ಲಿ ಕೇಳಿತ್ತು. ನಂತರ ಅದು ಕೂಡ ಕಡಿಮೆಯಾಯಿತು.
ಇನ್ನು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಕೂಡ ಬ್ಯಾನ್ ಆಗಿ ಕೆಲವು ವರ್ಷಗಳಾಗಿವೆ. ಸಿದ್ಧರಾಮಯ್ಯ ಸಿಎಂ ಇದ್ದಾಗ ಬ್ಯಾನ್ ಮಾಡಿದ್ದರು. ಆ ಸಮಯದಲ್ಲಿ ಪಾಲಿಕೆಯಲ್ಲಿ ಮೇಯರ್ ಆಗಿದ್ದವರು ಎರಡು ಕಡೆ ನಾಲ್ಕು ಬಟ್ಟೆಯ ಚೀಲ ಕೊಟ್ಟು ಪ್ರಚಾರ ಪಡೆದುಕೊಂಡರೇ ವಿನ: ಇದರಿಂದ ಆದದ್ದು ಏನೂ ಇಲ್ಲ. ಇವರು ತಳ್ಳುಗಾಡಿಯಲ್ಲಿ ನಾಲ್ಕು ಬಟಾಟೆ, ನೀರುಳ್ಳಿ ಮಾರುವವರ ಬಳಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಇದ್ದರೆ ಅದನ್ನು ಸೀಝ್ ಮಾಡಬೇಕು ಎಂದು ಯೋಚಿಸುವವರೇ ವಿನ: ಅದನ್ನು ಉತ್ಪಾದಿಸುವ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡುವುದಿಲ್ಲ. ಅಂತಹ ಫ್ಯಾಕ್ಟರಿಗಳಿಗೆ ಟ್ರೇಡ್ ಲೈಸೆನ್ಸ್ ಕೊಡುವವರು ಇದೇ ಪಾಲಿಕೆಯಿಂದ ಅಲ್ಲವೇ? ಹಾಗಾದರೆ ನಿಷೇಧಿತ ಪ್ಲಾಸ್ಟಿಕ್ ಎಲ್ಲಿ ತಯಾರಾಗುತ್ತದೆ ಎಂದು ಇವರಿಗೆ ಗೊತ್ತಿದೆ ಅಲ್ಲವೇ?
Leave A Reply