ಮೂಡಾದಲ್ಲಿರುವ “ಮೆನು ಕಾರ್ಡ್”ನಲ್ಲಿ ಯಾರಿಗೆ ಎಷ್ಟು ಕೊಡಬೇಕು ಎಂದು ಇದೆ!!
ಮಂಗಳೂರಿನಲ್ಲಿ ಯಾವುದೇ ಸರಕಾರಿ ಅಧಿಕಾರಿ ಒಂದು ಹುದ್ದೆಗೆ ಬಂದರೆ ಇಲ್ಲಿಯೇ ಬೇರನ್ನು ಗಟ್ಟಿ ಮಾಡಿಕೊಳ್ಳುವುದು ಹಲವು ವರ್ಷಗಳಿಂದ ಜಾರಿಯಲ್ಲಿದೆ. ಯಾಕೆಂದರೆ ಇಲ್ಲಿನ ಹೆಚ್ಚಿನವರು ಸ್ವಭಾವತ: ಆಲಸಿಗಳಂತೆ ವರ್ತಿಸುತ್ತಾರೆ. ಅದಕ್ಕಾಗಿ ಸರಕಾರಿ ಕಚೇರಿಗಳಲ್ಲಿ ಏನಾದರೂ ಕೆಲಸ ಇದ್ದರೆ ಬ್ರೋಕರ್ ಗಳನ್ನು ಕರೆಸಿ ಅವರಿಂದಲೇ ಮಾಡಿಸಿಕೊಳ್ಳುತ್ತಾರೆ. ಆ ಮೂಲಕ ಅಧಿಕಾರಿಗಳಿಗೆ ಯಾವುದೇ ರಗಳೆ ಇಲ್ಲದೆ ಹಣ ಬಂದು ಬೀಳುತ್ತದೆ. ಅದರೊಂದಿಗೆ ನಮ್ಮಲ್ಲಿ ಬಹುತೇಕ ಜನರಿಗೆ ಸರಕಾರಿ ಉದ್ಯೋಗಿಗಳೆಂದರೆ ಲೆಕ್ಕಕ್ಕಿಂತ ಹೆಚ್ಚು ಗೌರವ.
ಒಬ್ಬ ಕಾನ್ಸಟೇಬಲ್ ನಿಂದ ಒಂದು ಸರಕಾರಿ ಆಫೀಸಿನ ಗುಮಾಸ್ತನ ತನಕ ಪ್ರತಿಯೊಬ್ಬರಿಗೂ ಯಥೇಚ್ಚ ಮರ್ಯಾದೆ ಇಲ್ಲಿ ಸಿಗುತ್ತದೆ. ನಾನು ಮರ್ಯಾದೆ ಕೊಡಬಾರದು ಎಂದು ಹೇಳುತ್ತಿಲ್ಲ. ಆದರೆ ಯಾವಾಗ ಹಣ ಮತ್ತು ಮರ್ಯಾದೆ ಒಂದೇ ಕಡೆ ಧಾರಾಳವಾಗಿ ಸಿಕ್ಕಾಗ ಬೇರೆ ಕಡೆ ಹೋಗುವ ಅನಿವಾರ್ಯತೆ ಯಾವ ಸರಕಾರಿ ಇಲಾಖೆಯ ಉದ್ಯೋಗಿಗೂ ಬರುವುದಿಲ್ಲ. ಇಲ್ಲಿ ಒಂದು ಹುದ್ದೆಯಲ್ಲಿದ್ದ ಅಧಿಕಾರಿ ಇಲ್ಲಿಂದ ಬೇರೆ ಕಡೆ ವರ್ಗವಾದರೆ ಇನ್ನೊಮ್ಮೆ ಇಲ್ಲಿಯೇ ಅವಕಾಶ ಸಿಗುತ್ತಾ ಎಂದು ನೋಡುತ್ತಿರುತ್ತಾರೆ. ಉದಾಹರಣೆಗೆ ಸೀಮಂತ್ ಕುಮಾರ್ ಸಿಂಗ್. ಇಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದವರು ಇಲ್ಲಿ ಪೊಲೀಸ್ ಕಮೀಷನರೇಟ್ ಆದ ಕೂಡಲೇ ಕಮೀಷನರ್ ಆಗಿ ಬಂದರು. ಇನ್ನು ಕೆಲವರು ಇದ್ದಾರೆ. ಉದಾಹರಣೆಗೆ ಪಾಲಿಕೆಯಲ್ಲಿ ಬಾಲಕೃಷ್ಣೇ ಗೌಡ. ಅವರು 22.7.89ರಲ್ಲಿ ಸಹಾಯಕ ನಗರ ಯೋಜನಾ ಅಧಿಕಾರಿಯಾಗಿ ಬಂದಿದ್ದರು. ನಂತರ ನಗರ ಯೋಜನಾ ಅಧಿಕಾರಿಯಾದ್ರು. ಸರಕಾರದ ನಿಯಮಗಳ ಪ್ರಕಾರ ಒಬ್ಬ ಅಧಿಕಾರಿ 31 ವರ್ಷ ಒಂದೇ ಕಡೆ ಇರಲು ಸಾಧ್ಯವಿಲ್ಲ. ಇವರು ಇನ್ನು ಇದ್ದಾರೆ. ಕಾರಣ ಇವರು ಕಾಂಗ್ರೆಸ್ಸಿಗರಿಗೂ ಬೇಕು, ಬಿಜೆಪಿಗರಿಗೂ ಬೇಕು. ಇವರು ಎರಡೂ ಪಕ್ಷಗಳ ಯಾವ ಜನಪ್ರತಿನಿಧಿಗೂ ಬೇಕಾದ ಹಾಗೆ ಕೆಲಸ ಮಾಡಿಕೊಡುತ್ತಾರೆ. ಆದ್ದರಿಂದ ಇಂತವರನ್ನು ಯಾವ ಪಕ್ಷ ಬಂದರೂ ಕಳೆದುಕೊಳ್ಳುವುದಕ್ಕೆ ಸಿದ್ಧರಿಲ್ಲ. ಹಾಗಂತ ಕೆಲವು ಪ್ರಾಮಾಣಿಕರನ್ನು ನಮ್ಮ ಜನಪ್ರತಿನಿಧಿಗಳು ಉಳಿಸಿಕೊಂಡಿಲ್ಲ, ಅದು ಬೇರೆ ವಿಷಯ. ಅವರಲ್ಲಿ ಹರೀಶ್ ಕುಮಾರ್, ಹೆಪ್ಸಿಬಾ ರಾಣಿ ಕೊರ್ಲಪಾಟಿ, ಅಜಿತ್ ಕುಮಾರ್ ಹೆಗ್ಡೆ ಮುಂತಾದವರು ಇದ್ದಾರೆ. ಕೆಲವು ಆಫೀಸರ್ ಗಳು ಎಷ್ಟು ಚಾಣಾಕ್ಷರೆಂದರೆ ಮಂಗಳೂರಿನಲ್ಲಿ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯ ಒಳಗೆನೆ ಸುತ್ತಾಡುತ್ತಾ ತಮ್ಮ ಅಧಿಕಾರಾವಧಿಯನ್ನು ಮುಗಿಸಿರುತ್ತಾರೆ. ಕೆಲವರು ಹೊರಗಿನಿಂದ ಪ್ರಾಮಾಣಿಕ “ರಾಜ” ರಂತೆ ಕಂಡರೂ ಒಳಗೆ ಕಳ್ಳರಿಗಿಂತ ಫಾಸ್ಟ್ ಆಗಿರುತ್ತಾರೆ. ಅಂತವರಿಂದಲೇ ಪೊಲೀಸ್ ಇಲಾಖೆಯ ಹೆಸರು ಹಾಳಾಗಿರುವುದೂ ಹೌದು.
ನಿಮಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಗೊತ್ತೇ ಇದೆ. ಅಲ್ಲಿ ಐಷಾರಾಮಿ ಹೋಟೇಲುಗಳಲ್ಲಿ ಇರುವಂತೆ ಮೆನು ಕಾರ್ಡ್ ಇದೆ. ಅದರಲ್ಲಿ ಯಾರಿಗೆ ಎಷ್ಟು ಕೊಡಬೇಕು ಎಂದು ಹೇಳಲಾಗಿದೆ. ಅಂತವರಿಗೆ ಅಷ್ಟನ್ನು ಕೊಟ್ಟರೆ ನಿಮ್ಮ ಕೆಲಸ ಸಲೀಸು. ಹಿಂದೆ ಅಲ್ಲಿ ಶ್ರೀಕಾಂತ್ ರಾವ್ ಎನ್ನುವ ಮೂಡಾ ಕಮೀಷನರ್ ಇದ್ರು. ಅವರ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಯಿತು. ಅವರ ಜಾಗಕ್ಕೆ ದಿನೇಶ್ ಎನ್ನುವವರು ಬಂದರು. ಶ್ರೀಕಾಂತ್ ರಾವ್ ಹೋದ ಬಳಿಕ ಮೂಡಾ ಭ್ರಷ್ಟಾಚಾರ ಮುಕ್ತ ಆಗಬೇಕಿತ್ತು. ಆದರೆ ಎಲ್ಲಿ ಆಗಿದೆ. ಜಾಸ್ತಿಯಾಗಿದೆ ಬಿಟ್ಟರೆ ಕಡಿಮೆಯಾಗಿಲ್ಲ. ಮೆನು ಕೂಡ ಬದಲಾಗಿಲ್ಲ. ಅದೇ ರೇಟಿಗೆ ಕೆಲಸಗಳು ಆಗುತ್ತಿವೆ. ಹೀಗೆ ಆಗುತ್ತಾ ಹೋದರೆ ಜನರಿಗೆ ಕಾಂಗ್ರೆಸ್ ಇದ್ದರೂ ಒಂದೇ, ಬಿಜೆಪಿ ಬಂದರೂ ಒಂದೇ ಎನ್ನುವ ಭಾವನೆ ಬರುತ್ತದೆ. ಆ ಮಟ್ಟಿಗೆ ಕಾಂಗ್ರೆಸ್ ನಲ್ಲಿ ಒಂದು ವೈಶಿಷ್ಟ್ಯ ಇದೆ. ಅವರಲ್ಲಿ ತಿನ್ನುವುದೇ ಆದರೂ ಒಬ್ಬರ ತಟ್ಟೆಗೆ ಇನ್ನೊಬ್ಬರು ಕೈ ಹಾಕಲ್ಲ. ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಜನಾರ್ಧನ ಪೂಜಾರಿ ಹಾಗೂ ರಮಾನಾಥ ರೈ ಗುಂಪುಗಳು ತುಂಬಾ ಸ್ಟ್ರಾಂಗ್ ಆಗಿದ್ದವು. ಇವರು ಪಕ್ಕಾ ಹಾವು ಮುಂಗುಸಿಯಂತೆ ಕಾದಾಡುವಷ್ಟು ಆಂತರಿಕ ವೈರಿಗಳು. ಆದರೆ ಪಾಲಿಕೆಯಲ್ಲಿ ಒಂದು ಗುಂಪಿನ ಬೇನಾಮಿ ಕೆಲಸವನ್ನು ಒಬ್ಬ ಅಧಿಕಾರಿ ಮಾಡಿಲ್ಲ ಎಂದರೆ ಆ ಗುಂಪಿನವರು ತಮ್ಮ ನಾಯಕರನ್ನು ಹಿಡಿದು ಅಂತಹ ಅಧಿಕಾರಿಯನ್ನು ಇಲ್ಲಿಂದ ಓಡಿಸುತ್ತಿದ್ದರು. ಹಾಗಂತ ಇನ್ನೊಂದು ಗುಂಪಿನ ಜನ ಅದಕ್ಕೆ ಅಡ್ಡಿ ಬರುತ್ತಿರಲಿಲ್ಲ. ಬಹುಶ: ಎತ್ತಂಗಡಿಯಾದ ಅಧಿಕಾರಿ ಆ ಗುಂಪಿಗೆ ಏನೋ ಸಹಾಯ ಮಾಡಿಲ್ಲ, ಅದಕ್ಕೆ ಎತ್ತಂಗಡಿಯಾಗಿದ್ದಾರೆ ಎಂದೇ ಅಂದುಕೊಂಡು ಪರೋಕ್ಷವಾಗಿ ಬೆಂಬಲ ಕೊಟ್ಟು ಮೌನವಾಗಿರುತ್ತಿದ್ದರು. ತಿನ್ನುವುದರಲ್ಲಿ ಒಗ್ಗಟ್ಟು ಆ ಮಟ್ಟಿಗೆ ಇತ್ತು. ಆದರೆ ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ. ಹಾಗಂತ ಕೆಲಸ ಮಾಡದ ಭ್ರಷ್ಟ ಅಧಿಕಾರಿಯನ್ನು ಓಡಿಸುವ ಗುಂಡಿಗೆಯೂ ಇಲ್ಲ.
ಇನ್ನು ಬಿಜೆಪಿಯಲ್ಲಿ ಎಂತಹ ಕೆಟ್ಟ ಸಂಪ್ರದಾಯ ಶುರುವಾಗಿದೆ ಎಂದರೆ ಒಬ್ಬ ಅಧಿಕಾರಿ ಒಬ್ಬ ಶಾಸಕರ ವಿಧಾನಸಭಾ ಕ್ಷೇತ್ರದಲ್ಲಿ ಪೋಸ್ಟಿಂಗ್ ಆಗುವ ಮೊದಲು ಆ ಸ್ಥಳೀಯ ಶಾಸಕನ ಅನುಮತಿ ಅಥವಾ ಮಿನಿಟ್ ಹಾಕುವ ಕ್ರಮ ಹಿಂದೆ ಇತ್ತು. ರಾಮಕೃಷ್ಣ ಹೆಗ್ಡೆ ಸಿಎಂ ಇದ್ದಾಗ ಜಾರಿಗೆ ಬಂದ ಕ್ರಮ ಅದು. ಆದರೆ ಈಗ ಪೊಲೀಸ್ ಇಲಾಖೆ, ಸ್ಮಾರ್ಟ್ ಸಿಟಿ ನಿರ್ದೇಶಕರು, ಮೂಡಾ, ಪಾಲಿಕೆ, ಆರ್ಟಿಒ ಸೇರಿದಂತೆ ಆಯಕಟ್ಟಿನ ಕಚೇರಿಗಳಲ್ಲಿ ಬರುವ ಅಧಿಕಾರಿಗಳ ಬಗ್ಗೆ ಶಾಸಕರಿಗೆ ನಿಯಂತ್ರಣವೇ ಇಲ್ಲ. ಯಾಕೆಂದರೆ ಬಂದವರು ಮೇಲೆ ಚಂದಾ ನೀಡಿ ಬಂದವರು. ಅವರು ಇವರ ಮಾತನ್ನು ಕೇಳುವುದೇ ಇಲ್ಲ.
Leave A Reply