ಮಂಗಳೂರಿನಲ್ಲಿರುವ 176 ಅಕ್ರಮ ಕಟ್ಟಡಗಳಲ್ಲಿ ಒಂದು ಕಾಂಗ್ರೆಸ್ ಶಾಸಕರದ್ದು!
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿರುವ ಅಕ್ಷಯ್ ಶ್ರೀಧರ್ ರವರೇ, 176 ಅಕ್ರಮ ಕಟ್ಟಡಗಳ ಪಟ್ಟಿ ನನ್ನ ಬಳಿ ಇದೆ. ಅದನ್ನು ನಿಮ್ಮ ಹಿಂದೆ ಆಯುಕ್ತರಾಗಿದ್ದ ಯಂಗ್ ಅಂಡ್ ಎನರ್ಜೇಟಿಕ್ ಮನುಷ್ಯ ಡಾ| ಹರೀಶ್ ಕುಮಾರ್ ಅವರು ಸಿದ್ಧಪಡಿಸಿಟ್ಟುಕೊಂಡಿದ್ದ ಲಿಸ್ಟ್ ಅದು. ಅವರು ಆವತ್ತು ಕೆಲವು ದಿನ ಹೆಚ್ಚು ಮಂಗಳೂರಿನಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ ಅದರಲ್ಲಿ ಒಂದಿಷ್ಟು ಕಟ್ಟಡಗಳನ್ನು ಧರೆಗೆ ಉರುಳಿಸಿಯೇ ಹೋಗುತ್ತಿದ್ದರು. ಆದರೆ ಏನು ಮಾಡುವುದು, ನಮ್ಮ ಮನಪಾದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಧೈರ್ಯ ಮಾಡುವ ಅಧಿಕಾರಿಗಳನ್ನು ಹೆಚ್ಚು ದಿನ ಇಲ್ಲಿ ಉಳಿಸುವುದಿಲ್ಲವಲ್ಲ, ಹಾಗೆ ಹರೀಶ್ ಕುಮಾರ್ ಒಂದಿಷ್ಟು ದಿನ ಅಧಿಕಾರದಲ್ಲಿ ಇದ್ದವರು ವರ್ಗಾವಣೆ ಆಗಿ ಹೋಗಿದ್ದರು. ಅವರೀಗ ಕಾರವಾರದಲ್ಲಿ ಜಿಲ್ಲಾಧಿಕಾರಿಗಳಾಗಿ ಅಲ್ಲಿ ಚೆನ್ನಾಗಿ ಆಡಳಿತ ಸೇವೆ ಮಾಡುತ್ತಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಅವರನ್ನು ದೇವರು ಚೆನ್ನಾಗಿ ಇಟ್ಟಿರಲಿ. ಆದರೆ ಅವರು ಹೋದಾಗ ಆ ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿರಲಿಲ್ಲ. ಅದು ಪಾಲಿಕೆಯಲ್ಲಿಯೇ ಇತ್ತು. ಈಗಲೂ ಇದೆ. ಆದರೆ ನಂತರ ಬಂದ ಯಾವ ಆಯುಕ್ತರು ಅದನ್ನು ತೆರೆದು ನೋಡಲಿಲ್ಲ. ನೋಡಲಿಲ್ಲ ಎನ್ನುವುದಕ್ಕಿಂತ ಅದರ ವಿಷಯವನ್ನು ಯಾವ ಅಧಿಕಾರಿಯೂ ಆಯುಕ್ತರ ಗಮನಕ್ಕೆ ತಂದಿರಲಿಲ್ಲ. ಅದರೊಂದಿಗೆ ಡಾ| ಹರೀಶ್ ಕುಮಾರ್ ಬಳಿಕ ಮನಪಾಗೆ ಸರಿಯಾದ ಆಯುಕ್ತರು ಸಿಕ್ಕಿರಲಿಲ್ಲ ಎನ್ನುವುದು ಕೂಡ ನಿಜ. ಬಂದವರು ಪೂರ್ಣಕಾಲೀನರಾಗಿ ಇಲ್ಲಿ ನೆಲೆ ನಿಲ್ಲಲೇ ಇಲ್ಲ. ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿರುವವರಿಗೆ ಇಲ್ಲಿ ತುಂಬಾ ದಿನ ಇರಲು ನಮ್ಮ ಸದಸ್ಯರು ಬಿಡಲಿಲ್ಲ. ಅದೇನೆ ಇರಲಿ, ಈಗ ನೀವು ಬಂದಿದ್ದೀರಿ. ತುಂಬಾ ದಿನಗಳ ತನಕ ಇರುತ್ತಿರಿ ಎನ್ನುವ ಭರವಸೆ ನನಗಿದೆ. ಯಾಕೆಂದರೆ ಈಗ ಸ್ಮಾರ್ಟ ಸಿಟಿಯ ಅನುಷ್ಟಾನದ ಸಭೆಗಳು ನಿತ್ಯ ಎನ್ನುವಂತೆ ನಡೆಯುತ್ತಿರುವಾಗ ಪಾಲಿಕೆಗೆ ಓರ್ವ ಪೂರ್ಣಕಾಲೀನ ಕಮೀಷನರ್ ಬೇಕೆ ಬೇಕು. ಹಾಗಿರುವಾಗ ನಿಮ್ಮ ಎತ್ತಂಗಡಿ ಮಾಡಲು ಯಾರೂ ಮುಂದೆ ಬರಲಾರರು ಎನ್ನುವುದು ಒಂದು ವಿಶ್ವಾಸ ಅಷ್ಟೇ. ಸ್ಮಾರ್ಟಸಿಟಿಯ ಕೆಲಸದ ಒತ್ತಡದ ನಡುವೆ ನೀವು ನಾನು ಹೇಳುವ ಅನಧಿಕೃತ ಕಟ್ಟಡಗಳ ಬಗ್ಗೆ ಒಂದಿಷ್ಟು ಗಮನ ಕೊಡುವಿರೆಂದು ನಾನು ಅಂದುಕೊಳ್ಳುತ್ತೇನೆ. ಮೊದಲು ಪಾರ್ಕಿಂಗ್ ಸ್ಥಳಗಳಲ್ಲಿ ಅಂಗಡಿ,ಪ್ಲಾಟ್ ಕಟ್ಟಿರುವುದನ್ನು ತೆರವು ಗೊಳಿಸಿ ಅದರೊಂದಿಗೆ ಈ ವಿಷಯ ಸ್ಮಾರ್ಟ ಸಿಟಿಯ ಬಗ್ಗೆ ಕೂಡ ಪರೋಕ್ಷವಾಗಿ ಸಂಬಂಧಿಸಿದೆ. ಒಂದು ನಗರ ಸ್ಮಾರ್ಟ ಸಿಟಿಯಾಗಲು ಈ ಅಕ್ರಮ ಕಟ್ಟಡಗಳು ಕೂಡ ಒಂದು ತೊಡಕು ಎನ್ನುವುದು ನಿಮಗೆ ಗೊತ್ತಿಲ್ಲದ ವಿಷಯವೇನಲ್ಲ. ಕೆಲವು ಕಟ್ಟಡಗಳು ಅಡ್ಡಾದಿಡ್ಡಿಯಾಗಿ ಬೆಳೆದಿರುವುದರಿಂದ ನಗರದ ಟ್ರಾಫಿಕ್ ಜಾಮ್ ಸಮಸ್ಯೆಯೂ ದೊಡ್ಡದಾಗುತ್ತದೆ. ಅಷ್ಟಕ್ಕೂ ಇವುಗಳನ್ನು ಕಟ್ಟಲು ಬಿಟ್ಟಿದ್ದೇ ಪಾಲಿಕೆಯ ಅಧಿಕಾರಿಗಳು. ಈಗ ತೆಗೆಯಿರಿ ಎಂದು ಹೇಳುವುದಕ್ಕೆ ಅವರಿಗೆ ನೈತಿಕತೆ ಇಲ್ಲ. ಇನ್ನೂ ಅಕ್ರಮ ಕಟ್ಟಡಗಳ ಹಿಂದೆ ಪಾಲಿಕೆಯ ಹಿರಿಯ ಸದಸ್ಯರುಗಳು ಬೆಂಗಾವಲಾಗಿ ನಿಂತಿರುವುದರಿಂದ ಆ ಕಟ್ಟಡಗಳ ಮಾಲೀಕರಿಗೂ ತಮ್ಮ ಕಟ್ಟಡಕ್ಕೆ ಏನೂ ಆಗುವುದಿಲ್ಲ ಎನ್ನುವ ಧೈರ್ಯ ಅವರಿಗಿರುತ್ತದೆ. ಯಾಕೆಂದರೆ ಆಯಾ ವಾರ್ಡಿನ ಸದಸ್ಯರಿಗೆ ಕಪ್ಪ ಕೊಟ್ಟೆ ಅವರು ಕಟ್ಟಡ ನಿರ್ಮಾಣ ಮಾಡಿರುವುದರಿಂದ ಯಾವ ಎಂಗಲ್ ನಿಂದಲೂ ಆ ಕಟ್ಟಡಗಳನ್ನು ಯಾರೂ ಕೂಡ ಮುಟ್ಟಲು ಹೋಗುವುದಿಲ್ಲ. ಆದರೂ ಭವಿಷ್ಯದಲ್ಲಿ ಏನು ಆಗುತ್ತೆ ಎಂದು ಹೇಳಲು ಆಗುವುದಿಲ್ಲವಾದ್ದರಿಂದ 176 ರಲ್ಲಿ 118 ಕಟ್ಟಡಗಳ ಮಾಲೀಕರು ಕಮೀಷನರ್ ಅವರ ಆದೇಶದ ವಿರುದ್ಧ ಮಂಗಳೂರು ಸಿವಿಲ್ ನ್ಯಾಯಾಲಯಕ್ಕೆ ಹೋಗಿದ್ದಾರೆ. ಇನ್ನೂ ಕೆಲವರು ತಮ್ಮ ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸಲು ಅಕ್ರಮ-ಸಕ್ರಮ ಸಮಿತಿಯ ಎದುರು ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ 176 ರಲ್ಲಿ 55 ಜನ ಏನೂ ಮಾಡಿಲ್ಲ!ಕೊರ್ಟ್ ಗೆ ಹೋದ ಕೆಲವು ಕೇಸ್ ಗಳಲ್ಲಿ ಪಾಲಿಕೆಗೆ ಜಯ ಲಬಿಸಿದೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿರುವ ಕಟ್ಟಡಗಳನ್ನು ನೀವು ಮುಟ್ಟುವಂತಿಲ್ಲ. ಯಾಕೆಂದರೆ ಅದು ಕಾನೂನಿಗೆ ವಿರೋಧ. ಆದರೆ ತಡೆಯಾಜ್ಞೆ ತಂದಿಲ್ಲದ 55 ಮತ್ತು ಕೋರ್ಟನಲ್ಲೀ ಪಾಲಿಕೆ ಗೆದ್ದಿರುವ ಕಟ್ಟಡಗಳು ಹಾಗೆ ಇದ್ದಾವಲ್ಲ, ಅದರ ಬಗ್ಗೆ ಯಾಕೆ ಪಾಲಿಕೆ ಗಮನ ಕೊಡುತ್ತಿಲ್ಲ. ಅಷ್ಟಕ್ಕೂ ನ್ಯಾಯಾಲಯಕ್ಕೆ ಹೋಗದ ಆ 55 ಕಟ್ಟಡಗಳ ಮಾಲೀಕರೇನು ಬಡವರಲ್ಲ.
Leave A Reply