ರೈಲಿನ ವಿಷಯ ಬಂದಾಗ ಅಲ್ಲಿ ಆಗುವ ಸಣ್ಣ ಬದಲಾವಣೆಗೂ ಮೈಯೆಲ್ಲ ಕಿವಿಯಾಗಿ ಎಚ್ಚರವಾಗಿರಬೇಕು. ಯಾಕೆಂದರೆ ನಾವು ಸ್ವಲ್ಪ ಮೈಮರೆತರೂ ಪಕ್ಕದ ಕೊಂಕಣ್ ರೈಲು ನಮ್ಮ ರೈಲುಗಳನ್ನೇ ನುಂಗಿ ನೀರು ಕುಡಿದು ಬಿಡುವ ಎಲ್ಲಾ ಸಾಧ್ಯತೆ ಇದೆ. ಈಗಾಗಲೇ ಮಂಗಳೂರು-ಮಡಗಾಂ ಇಂಟರ್ ಸಿಟಿ ಮತ್ತು ಮಂಗಳೂರು- ಜಮ್ಮುತವಿ ನವಯುಗ್ ರದ್ದಾಗಿದ್ದು, ವೈಷ್ಣವಿದೇವಿ ಯಾತ್ರೆಗೆ ಹೋಗುವವರಿಗೆ ತೊಂದರೆಯಾಗಿರುತ್ತದೆ. ಇದಕ್ಕೆ ಈಗ ಅಂತಹ ಇನ್ನೊಂದು ಸಂದರ್ಭ ಸೃಷ್ಟಿಯಾಗಿದೆ. ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ ಎರಡು ರೈಲುಗಳು ಮಡಗಾಂ ಕಡೆ ಹೋಗುತ್ತವೆ. ಒಂದು ಮಂಗಳೂರು-ಮಡಗಾಂ ಡೆಮು ಮತ್ತೊಂದು ಪ್ಯಾಸೆಂಜರ್. ಈಗ ಈ ಎರಡೂ ರೈಲುಗಳನ್ನು ಕೇರಳ ಲಾಬಿ ಆಹುತಿ ತೆಗೆದುಕೊಂಡು ತಮ್ಮ ಕೇರಳದಿಂದ ಗೋವಾ ಕಡೆ ಹೋಗುವ ರೈಲುಗಳ ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಅದು ಹೇಗೆ?
ಮೊದಲನೇಯದಾಗಿ ಮುಂದಿನ ದಿನಗಳಲ್ಲಿ ಬರುತ್ತೆ ಎಂದು ಹೇಳಲಾಗುತ್ತಿರುವ ಹೊಸ ನಿಯಮದ ಪ್ರಕಾರ 200 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸುವ ಎಲ್ಲಾ ರೈಲುಗಳನ್ನು ಇನ್ನು ಮುಂದೆ ಎಕ್ಸಪ್ರೆಸ್ ಮಾಡಲಾಗುವುದು ಎನ್ನುವ ಸುದ್ದಿ ಇದೆ. ಒಂದು ವೇಳೆ ಇದು ಆದರೆ ಮಂಗಳೂರು-ಮಡಗಾಂ ಎರಡೂ ರೈಲುಗಳು ಎಕ್ಸಪ್ರೆಸ್ ಆಗಲೇಬೇಕಿದೆ. ಯಾಕೆಂದರೆ ಇವು ಕ್ರಮಿಸುವ ದೂರ ಇಲ್ಲಿಂದ ಅಲ್ಲಿಗೆ 430 ಕಿ.ಮೀ ಆಗುತ್ತದೆ. ಎಕ್ಸಪ್ರೆಸ್ ಆದರೆ ನಮಗೆ ಏನು ತೊಂದರೆ ಎಂದು ಹೇಳಬಹುದು. ಮೊದಲನೇಯದಾಗಿ ಟಿಕೆಟ್ ದರ ಜಾಸ್ತಿಯಾಗುತ್ತದೆ. ರೈಲು ಇರುವುದೇ ಮಧ್ಯಮ ವರ್ಗದವರು, ಕೆಳ ಮಧ್ಯಮದವರ ಅನುಕೂಲತೆಗಾಗಿ. ಪ್ಯಾಸೆಂಜರ್ ರೈಲಿನ ದರಕ್ಕೂ ಎಕ್ಸಪ್ರೆಸ್ ರೈಲಿನ ದರಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇದು ನೂರು ರೂಪಾಯಿ ಇದ್ರೆ ಅದು 300 ಆಗುವ ಸಾಧ್ಯತೆ ಇದೆ. ಎರಡನೇಯದಾಗಿ ನೀವು ಈ ರೈಲುಗಳಲ್ಲಿ ಪ್ರಯಾಣಿಸಿದರೆ ಒಂದು ಗಮನಿಸುತ್ತೀರಿ, ಏನೆಂದರೆ ಈ ಪ್ಯಾಸೆಂಜರ್ ರೈಲಿಗೆ ಅಲ್ಲಲ್ಲಿ ಸ್ಟಾಪ್ ಇದೆ. ಇದರಿಂದ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಪಾಪದವರಿಗೆ ಈ ಪ್ಯಾಸೆಂಜರ್ ರೈಲು ತುಂಬಾ ಪ್ರಯೋಜನವಾಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಕುಮುಟಾದಿಂದ ಅಂಕೋಲಕ್ಕೆ ಹೋಗಬೇಕಾದರೆ ಇಂತಹ ರೈಲಿನಲ್ಲಿ ಮಾತ್ರ ಸಾಧ್ಯ. ಬಸ್ಸಿಗಿಂತ ಎಷ್ಟೋ ಪಟ್ಟು ಕಡಿಮೆ ದರದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿ ಕೆಲಸ ಮುಗಿಸಿ ಬರಲು ಈ ರೈಲುಗಳೇ ಆಧಾರ. ಭಟ್ಕಳದ ಒಬ್ಬ ಸಣ್ಣ ವ್ಯಾಪಾರಿ ಬೈಂದೂರಿಗೆ ಹೋಗಿ ಬರಲು ಈ ರೈಲು ಇದ್ದರೆ ಮಾತ್ರ ಆಗುತ್ತದೆ. ನಿತ್ಯ ನೂರಾರು ಜನರು ಹೀಗೆ ಒಂದು ಪ್ರದೇಶದಿಂದ ಮತ್ತೊಂದಕ್ಕೆ ಹೋಗಿ ಅಲ್ಲಿ ಕೆಲಸ ಮುಗಿಸಿ ಮತ್ತೆ ಇದೇ ರೈಲಿನಲ್ಲಿ ಬರುತ್ತಾರೆ. ಇನ್ನು ಕರಾವಳಿಯ ಅನೇಕ ಜನರ ಕುಲದೇವರ ದೇವಸ್ಥಾನಗಳು ಇರುವುದು ಇದೇ ಕೊಂಕಣ ರೈಲು ಹಾದು ಹೋಗುವ ಪ್ರದೇಶದಲ್ಲಿದೆ. ತಿಂಗಳಿಗೊಮ್ಮೆ ಹೋಗಿ ಬರುವ ಅಸಂಖ್ಯಾತ ಭಕ್ತರು ಇದ್ದಾರೆ. ಅವರಿಗೆಲ್ಲ ಈ ರೈಲು ಎಕ್ಸಪ್ರೆಸ್ ಆದರೆ ಹೋಗಿ ಬರಲು ಹೇಗೆ ಸಾಧ್ಯ. ಇದರಿಂದ ಏನಾಗುತ್ತದೆ? ಪ್ರಯಾಣದರ ಹೆಚ್ಚಳ, ಇಳಿಯುತ್ತಿರುವ ಪ್ರಯಾಣಿಕರ ಸಂಖ್ಯೆಯಿಂದ ಈ ರೈಲುಗಳೆರಡು ನಷ್ಟಕ್ಕೆ ಬೀಳುತ್ತವೆ. ನಷ್ಟಕ್ಕೆ ಬಿದ್ದ ಮೇಲೆ ಕೇಳಲೇಬೇಡಿ. ಕೇರಳದವರು ಈ ಎರಡೂ ರೈಲುಗಳನ್ನು ಮುಚ್ಚಲು ತುದಿಗಾಲಲ್ಲಿ ನಿಂತುಬಿಡುತ್ತಾರೆ. ನಂತರ ನಾವು ಅವಲಂಬಿತರಾಗಬೇಕಾಗಿರುವುದು ಕೇರಳದಿಂದ ಗೋವಾ ಕಡೆ ಹೋಗುವ ರೈಲುಗಳಿಗೆ. ಅವು ಕೂಡ ನಮಗೆ ಬೇಕಾದ ಸಮಯದಲ್ಲಿ ಇಲ್ಲ ಮಾತ್ರವಲ್ಲ ಅವು ಮಂಗಳೂರು ನಗರದಿಂದ ಹೊರಗೆ ಕಂಕನಾಡಿ ರೈಲು ನಿಲ್ದಾಣಕ್ಕೆ ಬಂದು ಹೋಗುತ್ತವೆ. ನೀವು ಕಂಕನಾಡಿಯಿಂದ ಮಂಗಳೂರಿನ ಯಾವುದೇ ನಗರ ಪ್ರದೇಶಕ್ಕೆ ಹೋಗಬೇಕಾದರೆ 300 ರೂಪಾಯಿ ಆಟೋಗೆ ತೆಗೆದು ಇಡಬೇಕು. ಟ್ರೇನ್ ಟಿಕೆಟಿಗಿಂತ ಇದು ಜಾಸ್ತಿಯಾಗಿರುತ್ತದೆ. ಇನ್ನು ಮಧ್ಯರಾತ್ರಿ ಕಂಕನಾಡಿ ರೈಲು ನಿಲ್ದಾಣದಲ್ಲಿ ಇಳಿದರೆ ನಿಮಗೆ ಹೊರಗೆ ಬಂದು ನಿಂತರೆ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಬಂದ ಹಾಗೆ ಆಗುತ್ತದೆ. ಆದ್ದರಿಂದ ವೃದ್ಧರು, ಮಕ್ಕಳು ಕಂಕನಾಡಿ ಸ್ಟೇಶನ್ ನಿಂದ ಸರಹೊತ್ತಿನಲ್ಲಿ ಬರುವುದೆಂದರೆ ಅದು ಕಷ್ಟಸಾಧ್ಯದ ಮಾತು.
ಈಗ ನಮ್ಮ ಜನಪ್ರತಿನಿಧಿಗಳು ಈ ಎರಡು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಯಾಕೆಂದರೆ ನಿಯಮ ಬದಲಾವಣೆಯ ನಂತರ ಹೆಚ್ಚು ಕಡಿಮೆಯಾಗಿ ಟ್ರೇನು ನಿಂತು ಹೋದರೆ ಆ ಬಳಿಕ ಮನವಿ, ಆಗ್ರಹ, ಬೇಡಿಕೆ ಎಲ್ಲ ಶಬ್ದಗಳು ನಮ್ಮ ಜನಪ್ರತಿನಿಧಿಗಳ ಬಾಯಿಯಿಂದ ಪುಂಖಾನುಪುಂಖವಾಗಿ ಬರುತ್ತದೆ. ಪತ್ರಿಕೆಗಳಲ್ಲಿ ಹೇಳಿಕೆ ಬರುತ್ತದೆ. ಅವರನ್ನು ಭೇಟಿಯಾದೆ, ಇವರಿಗೆ ಮನವಿ ಸಲ್ಲಿಸಿದೆ ಎಂದು ಫೇಸ್ ಬುಕ್, ಟ್ವೀಟರ್ ನಲ್ಲಿ ಬರುತ್ತದೆ. ಆದರೆ ಯಾವ ಜನಪ್ರತಿನಿಧಿ ತೊಂದರೆ ಆಗುವ ಮೊದಲೇ ಎಚ್ಚೆತ್ತುಕೊಳ್ಳುತ್ತಾನೋ ಅವನೇ ನಿಜವಾದ ಜನನಾಯಕ. ಇನ್ನು ಜನರ ಪರ ಇರುವ ರೈಲ್ವೆಯಾತ್ರಿ ಸಂಘಟನೆಗಳು ಪ್ರತ್ಯೇಕವಾಗಿ ಹೋರಾಟ ಮಾಡಿದರೆ ಇವರಲ್ಲಿ ಒಗ್ಗಟ್ಟಿಲ್ಲ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಧರಿಸಿ ತುಂಬಾ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಅದರ ಬದಲು ರೈಲ್ವೆ ಯಾತ್ರಿಗಳ ಪರ ಇರುವ ಎಲ್ಲಾ ವ್ಯಕ್ತಿಗಳನ್ನು, ಸಂಘಟನೆಗಳನ್ನು ಒಟ್ಟಾಗಿ ತೆಗೆದುಕೊಂಡು ಹೋದರೆ ಆಗ ಹೋರಾಟಕ್ಕೆ ಜಯ ಸಿಗುತ್ತದೆ. ಜನರಿಗೂ ನ್ಯಾಯ ಸಿಗುತ್ತದೆ!!
Leave A Reply