ಪಾಲಿಕೆಯಲ್ಲಿ ಯಾರೋ ಮಾಡಿದ ತಪ್ಪಿಗೆ ಬಿನೋಯ್ ದೃಷ್ಟಿಯಲ್ಲಿ ನಾವು ಕಳ್ಳರಾಗಬೇಕೆ?
ನಮ್ಮ ಮಂಗಳೂರಿನಲ್ಲಿ ಒಬ್ಬ ಸಾಮಾನ್ಯ ನಾಗರಿಕನಿಗೆ ಇ-ಖಾತಾ ಮಾಡಿಸಲು ಕನಿಷ್ಟ 50 ದಿನಗಳು ಬೇಕಾಗುತ್ತವೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಬ್ಬ ಮಹಾನುಭಾವರು ಬಂದು ಕುಳಿತುಕೊಂಡಿದ್ದಾರೆ. ಅವರು ಕರ್ನಾಟಕ ಸ್ಟೇಟ್ ಇಂಡಸ್ಟ್ರೀಯಲ್ ಡೆವಲಪಮೆಂಟ್ ಕಾರ್ಪೋರೇಷನ್ (ಕೆಎಸ್ ಐಡಿಸಿ) ಇದರ ಅಧಿಕಾರಿಯಾಗಿದ್ದು, ಪಾಲಿಕೆಯಲ್ಲಿ ಹೆಚ್ಚುವರಿ ಕಂದಾಯ ಉಪ ಆಯುಕ್ತರಾಗಿ ಬಂದಿದ್ದಾರೆ. ಇವರಿಂದ ನಾಗರಿಕರಿಗೆ ಎಷ್ಟು ತೊಂದರೆಯಾಗುತ್ತಿದೆ ಎನ್ನುವುದನ್ನು ಇವತ್ತಿನ ಜಾಗೃತ ಅಂಕಣದಲ್ಲಿ ವಿವರಿಸುತ್ತೇನೆ. ಆದಷ್ಟು ಬೇಗ ಇವರನ್ನು ಪಾಲಿಕೆಯಿಂದ ಗೌರವಯುತವಾಗಿ ಕಳುಹಿಸಿಕೊಡದಿದ್ದರೆ ಮುಂದಿನ ಚುನಾವಣೆಯ ಹೊತ್ತಿಗೆ ಬೇಸತ್ತಿರುವ ಜನರು ಜನಪ್ರತಿನಿಧಿಗಳ ಗೌರವವನ್ನು ಕಳೆದುಬಿಡುವ ಸಾಧ್ಯತೆ ಇದೆ. ಈ-ಖಾತಾ ತಯಾರಾಗಿರಬಹುದು ಎಂದು ಅಂದುಕೊಂಡು ನೀವು 50 ದಿನಗಳ ನಂತರ ಪಾಲಿಕೆಯ ಕಟ್ಟಡ ಒಳಪ್ರವೇಶಿಸಿ ಈ ಬಿನೋಯ್ ಅವರ ಬಳಿ ಹೋದರೆ “ನೀವು ಕಡಿಮೆ ಕಟ್ಟಿದ್ದೀರಿ, ಮತ್ತೆ ಹೋಗಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕ ಬರೆಸಿಕೊಂಡು ಬನ್ನಿ” ಎಂದು ಹೇಳುತ್ತಾರೆ. ಅಷ್ಟಕ್ಕೂ ಇಲ್ಲಿ ಸಮಸ್ಯೆ ಎಲ್ಲಿ ಶುರುವಾಗುತ್ತದೆ ಎನ್ನುವುದನ್ನು ಹೇಳುತ್ತೇನೆ. ಪಾಲಿಕೆಯ ಕಟ್ಟಡದ ನೆಲ ಅಂತಸ್ತಿನ ಮೂಲಕ ಕಟ್ಟಡ ಪ್ರವೇಶಿಸುವಾಗ 15 ಮಂದಿಗೆ ಟೇಬಲ್ ಮತ್ತು ಕುರ್ಚಿ ಹಾಕಿ ಕುಳ್ಳಿರಿಸಲಾಗಿದೆ. ಅವರಿಗೆ ನೀವು 25 ರೂಪಾಯಿ ಕೊಟ್ಟರೆ ಅವರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕದಲ್ಲಿ ನಿಮ್ಮ ದಾಖಲೆಗಳನ್ನು ಗಮನಿಸಿ ಕೆಲವು ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಾರೆ. ಅವರು ನಮೂದಿಸಿದ ಮೊತ್ತವನ್ನು ನೀವು ಬ್ಯಾಂಕಿನಲ್ಲಿ ಕಟ್ಟಬೇಕಾಗುತ್ತದೆ. ಒಂದು ಮನೆಯಲ್ಲಿ ನೆಲ ರೆಡ್ ಆಕ್ಸೈಡ್ ಆದರೆ ಅದಕ್ಕೆ ಒಂದು ತೆರಿಗೆದರ, ಟೈಲ್ಸ್ ಆದರೆ ಇನ್ನೊಂದು, ಗ್ರಾನೈಟ್ ಆದರೆ ಮತ್ತೊಂದು ದರ ಇರುತ್ತದೆ. ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಯಾವುದೇ ಮನೆ ಟೈಲ್ಸ್ ಆಗಿರುತ್ತದೆ. ಆದರೆ ಆ ಪುಸ್ತಕದಲ್ಲಿ ರೆಡ್ ಆಕ್ಸೈಡ್ ದರ ನಮೂದಿಸಿದರೆ ತೆರಿಗೆದರ ಕಡಿಮೆಯಾಗಬಹುದು. ಹಾಗಂತ ನೀವು ಅದನ್ನು ಹೇಳಿ ಬೇಕೆಂದೆ ಹಾಗೆ ಮಾಡಿಸುವುದಿಲ್ಲ. ನೀವು ಅದನ್ನು ಬಿನೋಯ್ ಅವರ ಬಳಿ ತೋರಿಸಿದಾಗ ಅವರು ನೀವು ಮೋಸ ಮಾಡಿದ್ದೀರಿ ಎನ್ನುವಂತೆ ನಿಮ್ಮನ್ನು ಬಿಂಬಿಸುತ್ತಾರೆ. ಯಾವುದೇ ತಪ್ಪು ಇಲ್ಲದ ನೀವು ಅವರ ದೃಷ್ಟಿಯಲ್ಲಿ ಸಣ್ಣವರಾಗುವಂತೆ ಅವರು ವರ್ತಿಸುತ್ತಾರೆ. ನೀವು ಸರಕಾರಕ್ಕೆ ವಂಚಿಸಿದ್ದಿರಿ ಎನ್ನುವ ಭಾವನೆ ನಿಮ್ಮಲ್ಲಿ ಮೂಡುವಂತೆ ಅವರ ಶೈಲಿ ಇರುತ್ತದೆ. ಹಾಗಂತ ನಿಮಗೆ ಸರಕಾರಕ್ಕೆ ಒಂದು ರೂಪಾಯಿ ತೆರಿಗೆ ವಂಚಿಸುವ ಐಡಿಯಾ ಇರುವುದಿಲ್ಲ. ಅಂತಹ ಮನಸ್ಥಿತಿಯ ಜನರು ನೂರರಲ್ಲಿ ಒಬ್ಬರು, ಇಬ್ಬರು ಇರಬಹುದು. ಹಾಗಂತ ಇಲ್ಲಿ ಪುಸ್ತಕ ಬರೆದವರ ತಪ್ಪು ಅಥವಾ ನಿರ್ಲಕ್ಷ್ಯ ಇರುತ್ತದೆ ವಿನ: ಒಬ್ಬ ಜವಾಬ್ದಾರಿಯುತ ನಾಗರಿಕರಾದ ನಿಮಗೆ ಅಂತಹ ಯೋಚನೆ ಇರುವುದಿಲ್ಲ. ಸರಿ, ನಾವು ವ್ಯತ್ಯಾಸವಾಗಿರುವ ಹಣವನ್ನು ಇಲ್ಲಿ ಕಟ್ಟುತ್ತೇವೆ, ನಮಗೆ ಚಲನ್ ನೀಡಿ ಎಂದು ನೀವು ಬಿನೋಯ್ ಅವರಿಗೆ ಹೇಳಿದರೆ ಅವರು ಸುತಾರಾಂ ಅದಕ್ಕೆ ಒಪ್ಪುವುದಿಲ್ಲ. ನೀವು ಮತ್ತೆ ನೆಲ ಅಂತಸ್ತಿಗೆ ಹೋಗಿ ಅಲ್ಲಿ ಬೇರೆ ಪುಸ್ತಕ ಮಾಡಿಸಿ ತಂದು ಸರಿ ಮಾಡಲು ಹೇಳುತ್ತಾರೆ. ಇಲ್ಲಿ ಮುಖ್ಯವಾಗಿ ನಿಮ್ಮ ಶ್ರಮ ವ್ಯರ್ಥ, ಮತ್ತೆ ಹಣ ವ್ಯರ್ಥ ಹಾಗೂ ಸಮಯ ಕೂಡ ವ್ಯರ್ಥ. ಮೊದಲೇ 50 ದಿನಗಳು ಈ-ಖಾತಾ ಮಾಡಿಸಲು ಕಳೆದುಹೋಗಿರುತ್ತವೆ. ಅದರ ನಂತರ ಇವರು ಮತ್ತೊಮ್ಮೆ ಸರಿ ಮಾಡಿಸಿಕೊಂಡು ಬನ್ನಿ ಎಂದು ಹೇಳಿದರೆ ಅದಕ್ಕೆ ವಾರಗಟ್ಟಲೆ ವ್ಯರ್ಥವಾಗುತ್ತದೆ.
ಪ್ರಾರಂಭದಲ್ಲಿ ಮಾಡಿಸುವಾಗ ಮಾತ್ರ ಆಸ್ತಿ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ನಂತರ ಪ್ರತಿ ಬಾರಿ ಅದೇ ಪುನರಾವರ್ತನೆ ಆಗುತ್ತದೆ. ಆದ್ದರಿಂದ ಇಲ್ಲಿ ಮೋಸ ಮಾಡುವ ಪ್ರಕ್ರಿಯೆ ಎಲ್ಲಿಂದ ಬರುತ್ತದೆ? ಸರಿಯಾಗಿ ಅಲ್ಲಿ ಕೆಳಗೆ ಕುರ್ಚಿ, ಟೇಬಲ್ ಹಾಕಿಕೊಂಡು ಕುಳಿತು ಇದನ್ನು ಬರೆಯುವ ವ್ಯಕ್ತಿಗಳು ಏನು ಬರೆದುಕೊಡುತ್ತಾರೆ ಎನ್ನುವುದು ಕೂಡ ನಮಗೆ ಗೊತ್ತಿರುವುದಿಲ್ಲ. ಅವರು ಬರೆದುಕೊಟ್ಟರು, ನಾವು ಚಲನ್ ಕಟ್ಟಿದ್ದೆವು. ಒಂದು ವೇಳೆ ನಾವು ಯಾರದ್ದೋ ತಪ್ಪಿನಿಂದ ಸ್ವಲ್ಪ ಕಡಿಮೆ ಕಟ್ಟಿದ್ದೇವೆ ಎಂದು ನಿಮಗೆ ಅನಿಸಿದರೆ ಒಂದು ಚಲನ್ ಮಾಡಿ ಕೊಟ್ಟರೆ ಆಯಿತು. ಅದಕ್ಕೆ ರಂಪರಗಳೆ ಯಾಕೆ? ಅದನ್ನು ಬಿಟ್ಟು ಈಗ ಜನರನ್ನು ಸತಾಯಿಸುವಂತೆ ಮುಂದೆ ಇದನ್ನೇ ಮುಂದುವರೆಸಿದರೆ ಹಾಳಾಗುವುದು ಜನ ಪ್ರತಿನಿಧಿಗಳ ಹೆಸರು. ನಾನು ಪಾಲಿಕೆ ಆಯುಕ್ತರಲ್ಲಿ ವಿನಂತಿಸುವುದೇನೆಂದರೆ ನಮ್ಮ ತಪ್ಪಿನಿಂದ ಅಲ್ಲದೇ ನೀವು ಕುಳ್ಳಿರಿಸಿದ ಪುಸ್ತಕ ಬರೆಯುವವರು ಮಾಡಿದ ತಪ್ಪಿನಿಂದ ಆದ ತೊಂದರೆಗೆ ನಾಗರಿಕರನ್ನು ಕರೆದು ಮೋಸಗಾರರೆಂದು ಹೇಳುವ ಬದಲಿಗೆ ಪುಸ್ತಕ ಬರೆದವರನ್ನು ಕರೆದು ಕ್ರಮ ಜರುಗಿಸಿ. ನಾವು ಈ-ಖಾತಾ ಅರ್ಜಿ ಸಲ್ಲಿಸುವಾಗಲೇ ಈ-ಖಾತಾಗೆ ಬೇಕಾದ ದಾಖಲೆಗಳಿವೆಯೇ, ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಿದೆಯೇ ಎಂದು ಪರಿಶೀಲಿಸಿ, ಇಲ್ಲದ ದಾಖಲೆಗಳನ್ನು ಸೇರಿಸುವಂತೆ ಮತ್ತು ವ್ಯತ್ಯಾಸ ಮೊತ್ತಕ್ಕೆ ಚಲನ್ ನೀಡಿ ಅದನ್ನು ಪಾವತಿಸಿ ಅದರ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಪಡೆದುಕೊಳ್ಳುವಂತೆ ಆದೇಶ ನೀಡಬೇಕಾಗಿ, ತೆರಿಗೆ ಪಾವತಿ ಪುಸ್ತಕ ಬರೆಯುವವರು ಮಾಡಿರುವ ತಪ್ಪಿಗೆ ನಾಗರಿಕರನ್ನು ಮೋಸ ಮಾಡಿದ್ದಾರೆ ಎಂದು ಇನ್ನು ಮುಂದೆ ಬಿನೋಯ್ ಅವರು ನಾಗರಿಕರಿಗೆ ಹೇಳದಂತೆ ಅವರಿಗೆ ತಿಳಿ ಹೇಳಬೇಕಾಗಿ ಹೇಳುತ್ತೇನೆ!
Leave A Reply