ನಿಮ್ಮ ಪಾಲು ಕೊಟ್ಟಿದ್ದೆವಲ್ಲ, ಪುನ: ತನಿಖೆ ಯಾಕೆ? ಎಂದು ಗುತ್ತಿಗೆಯವರು ಕೇಳಿದರೆ!
Posted On November 3, 2020
ನಿಮ್ಮ ಮನೆಗೆ ಯಾವುದೋ ಉತ್ಸವಕ್ಕೊ, ಜಾತ್ರೆಗೊ ಚಂದಾ ಕೇಳಿಕೊಂಡು ಒಂದಿಷ್ಟು ಪರಿಚಯವಿಲ್ಲದ ಯಾವುದೋ ಏರಿಯಾದ ಹುಡುಗರು ಬಂದಿರಬಹುದು. ನೀವು ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಲಕ್ಕಿಡಿಪ್ ತಗೊಳ್ಳಿ ಸರ್ ಎಂದು ನಿಮ್ಮಲ್ಲಿ ಅಲ್ಲಿನವರು ವಿನಂತಿ ಮಾಡಿದಾಗ ನೀವು ಹತ್ತೋ, ಐವತ್ತೊ ಕೊಟ್ಟು ತೆಗೆದುಕೊಂಡಿರಬಹುದು. ಆ ಚಂದಾ ತೆಗೆದುಕೊಂಡು ಹೋದ ಹುಡುಗರು ನಿಮಗೆ ಒಂದು ರಸೀದಿ ಕೊಟ್ಟಿರುತ್ತಾರೆ. ಆದರೆ ಅವರು ನೀವು ಕೊಟ್ಟ ಹಣವನ್ನು ಆ ಜಾತ್ರೆಯ ಕಮಿಟಿಯವರಿಗೆ ಒಪ್ಪಿಸುತ್ತಾರೆ ಎನ್ನುವ ಗ್ಯಾರಂಟಿ ನಿಮಗೆ ಇದೆಯಾ? ಕೊಡುತ್ತಾರೆ ಬಿಡು ಎಂದು ನೀವು ಮನಸ್ಸಿನಲ್ಲಿ ಸಮಾಧಾನಗೊಂಡಿರುತ್ತೀರಿ. ಹಾಗೆ ನೀವು ಖರೀದಿಸಿದ ಲಕ್ಕಿಡಿಪ್ ಅನ್ನು ಡ್ರಾ ಮಾಡುವಾಗ ನಿಮ್ಮ ಚೀಟಿ ಕೂಡ ಹಾಕಿರುತ್ತಾರೆ ಎಂದು ನೀವು ಕಣ್ಣಾರೆ ಕಂಡಿರುತ್ತೀರಾ, ಇಲ್ಲ, ಹಾಕಿರುತ್ತಾರೆ ಬಿಡು ಎಂದು ಮತ್ತೆ ನಿಮ್ಮ ಮನಸ್ಸನ್ನು ನೀವು ಸಮಾಧಾನಕ್ಕೆ ತಂದಿರುತ್ತೀರಿ. ನಿಮಗೆ ಒಟ್ಟಾರೆ ಯಾವುದೋ ಒಳ್ಳೆಯ ಕಾರ್ಯಕ್ಕೆ ಐವತ್ತೋ, ನೂರೊ ಕೊಟ್ಟ ಖುಷಿ ಇರುತ್ತದೆ. ನೀವು ಅದನ್ನು ಒಂದಿಷ್ಟು ದಿನಗಳ ಬಳಿಕ ಮರೆಯುತ್ತೀರಿ. ಮುಂದಿನ ವರ್ಷ ಅದೇ ಹುಡುಗರು ಬಂದರೂ ಬರಬಹುದು, ಆದರೆ ನೀವು ಯಾವತ್ತಿಗೂ ನೀವು ಕೊಟ್ಟ ಹಣದ ತನಿಖೆ ಮಾಡಲು ಹೋಗುವುದಿಲ್ಲ. ಆದರೆ ಸ್ವಯಂ ಘೋಷಿತ ಆಸ್ತಿಯ ವಿಚಾರ ಹಾಗಲ್ಲ.
ಇಲ್ಲಿ ನೀವು ಕಟ್ಟುವ ಹಣ ಪಾಲಿಕೆಗೆ ಕೊಡುವುದು ಪಾಲಿಕೆ ನಿಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾಡಲಿ ಎನ್ನುವ ಕಾರಣಕ್ಕೆ. ನೀವು ಹಾಗೂ ನಿಮ್ಮಂತಹ ಸಾವಿರಾರು ಜನ ಹಣ ಕಟ್ಟುವುದು ನೇರವಾಗಿ ಒಂದು ಆಡಳಿತಕ್ಕೆ. ಅದರ ಅರ್ಥ ಆ ಹಣದಿಂದಲೇ ನಿಮ್ಮ ಸುತ್ತಮುತ್ತಲೂ ಅಭಿವೃದ್ಧಿ ಆಗಬೇಕು. ಒಂದು ಸ್ಥಳೀಯಾಡಳಿತ ಅಂದರೆ ಪಾಲಿಕೆ ಸ್ಥಳೀಯ ಮಟ್ಟದಲ್ಲಿ ಒಂದು ಸರಕಾರ ಇದ್ದ ಹಾಗೆ. ಅದು ಚೆನ್ನಾಗಿ ನಡೆಯಬೇಕಾದರೆ ಜನರ ತೆರಿಗೆಯ ಹಣ ಬೇಕು. ಅದನ್ನು ನೀವು ಒಳ್ಳೆಯ ಮನಸ್ಸಿನಿಂದ ಕಟ್ಟಿರುತ್ತೀರಿ. ಆದರೆ ಆ ಹಣ ಯಾವ ತಿಜೋರಿಗೆ ಸೇರಬೇಕೊ ಅಲ್ಲಿ ಹೋಗದೆ ಯಾರದ್ದೋ ಮನೆಯ ಕಪಾಟಿಗೆ ಹೋದರೆ ಅದನ್ನು ಹಾಗೆ ಸುಮ್ಮನೆ ಬಿಡಲು ಅದೇನೂ ಯಾವುದೋ ಜಾತ್ರೆಗೆ ಕೊಟ್ಟ ಚಂದಾ ಹಣವೇ.
ಮಂಗಳೂರು ಮಹಾನಗರ ಪಾಲಿಕೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಸಹಿತ ಇತರ ಕೆಲವು ತೆರಿಗೆಗಳನ್ನು ಸ್ವೀಕರಿಸಲು ಮತ್ತು ಅದನ್ನು ಪಾಲಿಕೆಯ ಅಕೌಂಟಿನಲ್ಲಿ ಕಟ್ಟಲು ಒಂದು ಹೊರಗುತ್ತಿಗೆಯ ಆಧಾರದ ಮೇಲೆ ಮಂಗಳೂರು ಒನ್ ಎನ್ನುವ ತೆರಿಗೆ ಸ್ವೀಕೃತಿ ಕೇಂದ್ರವನ್ನು ತೆರೆದದ್ದು ನಿಮಗೆ ಗೊತ್ತೆ ಇದೆ. ಅಲ್ಲಿ ನಿಮ್ಮಲ್ಲಿ ಕೂಡ ಅನೇಕ ಜನ ಹೋಗಿ ಕಾಲಕಾಲಕ್ಕೆ ಹಣ ಪಾವತಿಸಿದ್ದೀರಿ, ಆದರೆ ನೀವು ಕೊಟ್ಟ ಹಣ ಪಾಲಿಕೆಗೆ ಹೋಗದೆ ಎಲ್ಲಿಯೋ ಸೋರಿಕೆ ಆಗುತ್ತಿದ್ದರೆ ಅದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲು ಆಗುತ್ತದಾ? ಹಾಗಾದರೆ ಇಲ್ಲಿಯ ತನಕ ಸೋರಿಕೆ ಆಗಿರುವ ಹಣವನ್ನು ಹಿಂದೆ ಪಡೆದುಕೊಳ್ಳುವುದು ಹೇಗೆ? ಇಷ್ಟು ವರ್ಷ ಆದದ್ದು ಆಗಿ ಹೋಯಿತು, ಇನ್ನು ಮುಂದಾದರೂ ಸರಿ ಮಾಡೋಣ ಎಂದು ಪಾಲಿಕೆ ಅದನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಹೋದರೂ ಹೋಗಿರಬಹುದು. ಆದರೆ ಸುಮಾರು ಮೂರು ಕೋಟಿ ಹಾಗೆ ಬಿಡಲು ನಾನು ತಯಾರಿಲ್ಲ. ಹಾಗಾದರೆ 2007 ರಿಂದ 2014 ರ ತನಕ ಒಟ್ಟು ಎಷ್ಟು ಹಣ ಸೋರಿಕೆಯಾಗಿದೆ ಎನ್ನುವ ನಿಖರ ಮಾಹಿತಿ ಪಾಲಿಕೆ ಬಳಿ ಇಲ್ಲ, ಅದರೊಂದಿಗೆ ಸೋರಿಕೆಯಾಗಿರುವ ಹಣವನ್ನು ವಾಪಾಸು ಪಡೆಯುವುದು ಹೇಗೆ ಎನ್ನುವ ಐಡಿಯಾ ಕೂಡ ಮನಪಾಗೆ ಇಲ್ಲ. ಆದರೆ ನಾನು ಒಂದು ಐಡಿಯಾ ಹೇಳುತ್ತೇನೆ. ಒಂದಿಷ್ಟು ಕೆಲಸ ನಾಗರಿಕರಿಗೂ, ಪಾಲಿಕೆಯ ಸಿಬ್ಬಂದಿಗಳಿಗೂ ಆಗಬಹುದು. ಆದರೆ ಜವಾಬ್ದಾರಿಯುತ ನಾಗರಿಕನಾಗಿ ನಾವು ಒಂದಿಷ್ಟು ಸಹಕರಿಸಿದರೆ ಯಾರದ್ದೋ ಜೇಬಿಗೆ ಹೋದ ಹಣ ವಾಪಾಸು ಬಂದೇ ಬರುತ್ತದೆ. ಹೇಗೆ, ವಿವರಿಸುತ್ತೇನೆ.
ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ wardನಲ್ಲಿರುವ ಅಷ್ಟೂ ಡೋರ್ ನಂಬರ್ ಗಳ ಲೆಕ್ಕ ಪಾಲಿಕೆಯ ಕಂಪ್ಯೂಟರಿನಲ್ಲಿ ಫೀಡ್ ಆಗಿರುತ್ತದೆ. ಅಂದರೆ ಒಟ್ಟು ಅರವತ್ತು wardನಲ್ಲಿ ಎಷ್ಟು ಡೋರ್ ನಂಬರಗಳಿವೆ ಎನ್ನುವುದು ಅಲ್ಲಿನ ಅಧಿಕಾರಿಗಳಿಗೆ ಗೊತ್ತೆ ಇರುತ್ತದೆ. ಮೊದಲಿಗೆ ವಾರ್ಡ ಒಂದರಿಂದ ಪ್ರಾರಂಭಿಸಿ ಆಯಾ wardನ ಯಾವ ಡೋರ್ ನಂಬರಿನ ಮಾಲೀಕರು 2007 ರಿಂದ 2015 ರ ತನಕ ಯಾವ ವರ್ಷ ತೆರಿಗೆ ಕಟ್ಟಿಲ್ಲ ಎನ್ನುವುದನ್ನು ನೋಡಬೇಕು. ಉದಾಹರಣೆಗೆ 12-11-1265 ನಂಬರಿನ ಮನೆಯವರು 2007 ರಲ್ಲಿ ಮತ್ತು 2011 ರಲ್ಲಿ ಕಟ್ಟಿಲ್ಲ ಎಂದು ದಾಖಲೆಯಲ್ಲಿ ಕಂಡುಬಂದರೆ ಆ ಮನೆಯವರಿಗೆ ಒಂದು “ತಿಳುವಳಿಕೆ ಪತ್ರ” ಕಳುಹಿಸಿಕೊಡಬೇಕು. ಅದರಲ್ಲಿ ವಿಷಯ ಏನೆಂದರೆ ನಮ್ಮ ದಾಖಲೆಗಳಲ್ಲಿ ನೀವು ಈ ವರ್ಷಗಳಲ್ಲಿ ತೆರಿಗೆ ಕಟ್ಟಿಲ್ಲ ಎಂದು ತೋರಿಸುತ್ತಿದೆ. ಒಂದು ವೇಳೆ ನೀವು ತೆರಿಗೆ ಕಟ್ಟಿದ್ದಲ್ಲಿ ದಯವಿಟ್ಟು ನೀವು ಕಟ್ಟಿದ ರಸೀದಿಯನ್ನು ತೆಗೆದುಕೊಂಡು ಪಾಲಿಕೆಯ ವಿಶೇಷವಾಗಿ ಅದಕ್ಕಾಗಿಯೇ ತೆರೆಯಲಾಗಿರುವ ಕೌಂಟರಿನಲ್ಲಿ ತೋರಿಸಿ, ಧೃಡಿಕರಣಗೊಳಿಸಿ ಎಂದು ಹೇಳಬೇಕು. ಒಂದು ವೇಳೆ ಆ ನಂಬರಿನ ಮಾಲೀಕ ನಿಜವಾಗಿ ಹಣ ಕಟ್ಟಿದ್ದಲ್ಲಿ ಆತ ಕಟ್ಟಿದ ರಸೀದಿಯನ್ನು ತೆಗೆದುಕೊಂಡು ಬರುತ್ತಾನೆ. ಆಗ ಅದರರ್ಥ ಇಷ್ಟೇ, ಹಣ ಮಾಲೀಕನಿಂದ ಮಂಗಳೂರು ಒನ್ ಗೆ ಬಂದಿದೆ. ಅಲ್ಲಿಂದ ಪಾಲಿಕೆಗೆ ಬಂದಿಲ್ಲ. ಅಂತಹ ಪ್ರತಿ wardನ ಪ್ರತಿ ಡೋರ್ ನಂಬರಿನ ಪ್ರತಿ ವರ್ಷದ ಲೆಕ್ಕ ತೆಗೆದರೆ ಸೋರಿ ಹೋದ ಕೋಟಿಗಟ್ಟಲೆ ಹಣದ ಲೆಕ್ಕ ನಿಮಗೆ ಸಿಗುತ್ತದೆ. ನಂತರ ನೀವು ಯಾರಿಗೆ ಗುತ್ತಿಗೆ ಕೊಟ್ಟಿದ್ದರೊ ಅವರನ್ನು ಕರೆದು ” ನೋಡಿ ಸ್ವಾಮಿ, ಇಷ್ಟು ಮಂದಿ ತೆರಿಗೆ ಕಟ್ಟಿದ್ದಾರೆ ಎಂದು ಸ್ವೀಕೃತಿ ಪತ್ರ ತಂದು ತೋರಿಸಿದ್ದಾರೆ, ನೀವು ನೋಡಿದರೆ ಅಷ್ಟು ಜನ ಕಟ್ಟಿಲ್ಲ ಎಂದು ನಮಗೆ ಹೇಳಿದ್ದೀರಿ, ಹಾಗಾದರೆ ಯಾರದ್ದು ಸುಳ್ಳು. ನಾಗರಿಕರ ಬಳಿ ನೀವು ಹಾಕಿದ ಸೀಲ್ ಇದೆ. ನೀವು ಕಟ್ಟಿಲ್ಲ ಎಂದರೆ ನಾವು ನಂಬಲ್ಲ, ಆದ್ದರಿಂದ ಆದಷ್ಟು ಬೇಗ ಆ ಹಣವನ್ನು ತಂದು ಪಾಲಿಕೆಗೆ ಜಮಾ ಮಾಡಿ ಎಂದು ಹೇಳಿದರೆ ಮುಗಿಯಿತು, ಸೋರಿಕೆಯಾದ ಪೈ ಟು ಪೈ ಹಿಂತಿರುಗಲಿದೆ. ಆದರೆ ಇಷ್ಟು ಮಾಡಲು ಪಾಲಿಕೆಗೆ ಇಚ್ಚಾಶಕ್ತಿಯ ಕೊರತೆ ಇದೆ.
ಇಲ್ಲ, ನಮಗೆ ಇಚ್ಚಾಶಕ್ತಿಯ ಕೊರತೆ ಇಲ್ಲ ಎಂದಾದಲ್ಲಿ ಮಾಡಿ ತೋರಿಸಿ. ಒಂದು ವೇಳೆ ನೀವು ಮಾಡಿಲ್ಲವಾದ್ದಲ್ಲಿ ಒಂದು ವಿಷಯವಂತೂ ಗ್ಯಾರಂಟಿ, ನಿಮಗೆ ಹೆದರಿಕೆ ಇದೆ. ” ಸರ್, ನಿಮಗೆ ಕೊಡುವ ಪಾಲು ಕೊಟ್ಟಾಗಿದೆಯಲ್ಲ, ಮತ್ತೆ ಪುನ: ತನಿಖೆ ಯಾಕೆ?” ಎಂದು ಯಾರಾದರೂ ಕೇಳಿದರೆ? ಅದಕ್ಕಾಗಿ ನೀವು ತನಿಖೆ ಮಾಡಲು ಮುಂದಾಗುವುದಿಲ್ಲ.ಕಂದಾಯ ಅಯುಕ್ತರಾಗಿರುವ ಶ್ರೀ ಬಿನೋಯಿ ಬಿ ಕೆ ಯವರು ಕಟ್ಟಡ ತೆರಿಗೆ ಪಾವತಿಯಲ್ಲಿ ಹೆಚ್ಚುಕಡಿಮೆ ಯಾಗಿದೆ ನಿಮ್ಮ ಪ್ಲಾಟಿನ ನೆಲ ಟೈಲ್ಸ್ ಅಲ್ಲವೇ ನೀವು ರೆಡ್ ಅಕ್ಕೈಡ್ ಎಂದು ತೋರಿಸಿದ್ದಿರಿ ಕಡಿಮೆ ಕಟ್ಟಿರುವ ಹಣ ಪುನಃ ಪುಸ್ತಕ ಬರೆದು ಪಾವತಿಸಿ ಎಂದು ಇ ಖಾತ ನೀಡಲು ಸತಾಯಿಸುತ್ತಾರೆ.ಚಲನ್ ಕೊಡಿ ಎಂದರೆ ನೀಡಲು ತಯಾರಿಲ್ಲ ಈ ಬಿನೋಯಿ. ಮಂಗಳೂರು 1 ನವರು ನುಂಗಿ ನೀರು ಕೂಡಿದಿರುವ 3 ಕೋಟಿ ಬಗ್ಗೆ ನಾನೆ ಸ್ವತಃ ಇವರಿಗೆ ಮಾಹಿತಿ ನೀಡಿದ್ದೆನೆ.ಅದರೆ ಈ ಬಗ್ಗೆ ಬಿನೋಯಿ ಯಾಕೆ ಸುಮ್ಮನಿದ್ದಾರೆ.ಮೇಯರ್ ರವರ ಸ್ವಲ್ಪ ಗಮನ ಹರಿಸುತ್ತಿರ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply