ನಿಮ್ಮ ವಾರ್ಡಿನಲ್ಲಿ ಪಾರದರ್ಶಕವಾಗಿ ಅಭಿವೃದ್ಧಿ ಕಾಮಗಾರಿಗಳು ಆಗಬೇಕು ಎನ್ನುವ ನಿಜವಾದ ಇಚ್ಚಾಶಕ್ತಿ ಇದ್ದರೆ ಖಂಡಿತವಾಗಿ ವಾರ್ಡ್ ಕಮಿಟಿಯಲ್ಲಿ ಸದಸ್ಯರಾಗಿ. ಅದು ಬಿಟ್ಟು “ನಾನು ವಾರ್ಡ್ ಕಮಿಟಿ ಸದಸ್ಯನಾಗಿದ್ದೇನೆ. ನನ್ನನ್ನು ಆಯ್ಕೆ ಮಾಡಿದ ಅವರಿಗೆ, ಇವರಿಗೆ ಧನ್ಯವಾದ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಕೆಟ್ ಹಿಡಿಯುವುದಕ್ಕಾಗಿ ವಾರ್ಡ್ ಕಮಿಟಿಗೆ ಸೇರಬೇಡಿ. ಕೆಲವರು ಸಂಘಟನೆಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಸೇರಿರುತ್ತಾರೆ. ಅವರು ಅದರಲ್ಲಿ ಏನು ಮಾಡುತ್ತಾರೋ ಯಾರಿಗೂ ಗೊತ್ತಿಲ್ಲ. ಕೇವಲ ನಾನು ಭಾಗವಹಿಸಿದೆ. ಇವರು ಉಪಸ್ಥಿತರಿದ್ದರು, ಇವರು ಭಾಷಣ ಮಾಡಿದರು ಎಂದು ಹಾಕುತ್ತಾರೆ. ನಾನು ಅದನ್ನು ವಿರೋಧಿಸುತ್ತಿಲ್ಲ. ಆದರೆ ಅಷ್ಟು ಮಾತ್ರ ಮಾಡಲು ವಾರ್ಡ್ ಕಮಿಟಿಯಲ್ಲಿ ಸೇರುತ್ತಿರಿ ಎಂದಾದರೆ ಸೇರಲೇಬೇಡಿ. ಯಾಕೆಂದರೆ ಆ ಕಮಿಟಿಯಲ್ಲಿ ಇರುವವರೇ ಒಟ್ಟು 10 ಮಂದಿ. 10 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಪಾಲಿಕೆ ಆಯುಕ್ತರಾಗಿದ್ದ ಮಣಿಮಣ್ಣನ್ ಅವರು ತಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಮಾಡಿದ ಆವತ್ತಿನ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದೇ. ಅವರು ಮಾಡಿದ ಪ್ರತಿ ವಾರ್ಡ್ ಕಮಿಟಿಯಲ್ಲಿ ಒಬ್ಬರು ನಿವೃತ್ತ ಸರಕಾರಿ ಇಂಜಿನಿಯರ್, ಒಬ್ಬರು ನಿವೃತ್ತ ಸರಕಾರಿ ಆಫೀಸರ್, ಒಬ್ಬರು ಹಿರಿಯ ನಾಗರಿಕರು, ಒಬ್ಬರು ಮಧ್ಯಮ ವರ್ಗದವರು ಮತ್ತೊಬ್ಬರು ಯುವಕ/ಯುವತಿ ಒಳಗೊಂಡ ಸಮಿತಿ ಇತ್ತು. ಅದು ನಿಜಕ್ಕೂ ಒಳ್ಳೆಯ ಕಾಂಬಿನೇಶನ್. ಯಾಕೆಂದರೆ ಪ್ರತಿ ವಾರ್ಡ್ ಕಮಿಟಿ ತಜ್ಞರ, ಪರಿಣಿತರ ಮತ್ತು ಕಾಮಗಾರಿಗಳ ವಿಷಯದಲ್ಲಿ ಸಾಮಾನ್ಯ ಜ್ಞಾನ ಇರುವವರ ಮಿಶ್ರಣವಾಗಿರಬೇಕು. ಇದರಲ್ಲಿ ಸರಕಾರಿ ನಿವೃತ್ತ ಇಂಜಿನಿಯರ್ ಯಾಕೆ ಇದ್ದರೆ ಒಳ್ಳೆಯದು ಎಂದರೆ ಆತ ತನ್ನ ಅಧಿಕಾರಾವಧಿಯಲ್ಲಿ ಎಷ್ಟೇ ಭ್ರಷ್ಟನಾಗಿರಲಿ, ನಿವೃತ್ತನಾದರೆ ಆತನ ಒಳಮನಸ್ಸಿನಲ್ಲಿ ಒಂದಿಷ್ಟು ಸಮಾಜಕ್ಕೆ ಒಳ್ಳೆಯದು ಮಾಡಿಯೇ ಸಾಯಬೇಕು ಎಂದು ಬಂದಿರುತ್ತದೆ. ತಮ್ಮ ವಾರ್ಡಿನಲ್ಲಿ ಕಾಮಗಾರಿ ಎಲ್ಲಿಯಾದರೂ ಕಳಪೆ ಆಗುವ ಸಾಧ್ಯತೆ ಇದ್ದರೆ ಈ ಇಂಜಿನಿಯರ್ ಗೆ ಅದು ಗೊತ್ತಾಗುತ್ತದೆ. ಗುತ್ತಿಗೆದಾರರು ಎಷ್ಟು ಸಿಮೆಂಟ್ ಹಾಕಿದ್ದಾರೆ, ಎಷ್ಟು ಮರಳು ಹಾಕಿದ್ದಾರೆ, ಎಷ್ಟು ನೀರು ಮಿಶ್ರಣ ಮಾಡಿದ್ದಾರೆ ಎಲ್ಲವು ನಿವೃತ್ತ ಇಂಜಿನಿಯರ್ ಅವರಿಗೆ ನೋಡಿದ ತಕ್ಷಣ ತಿಳಿಯುತ್ತದೆ. ಆಗ ಅಂತಹ ಕಳಪೆ ಕಾಮಗಾರಿ ತಡೆಯಬಹುದು. ಕೇವಲ ಎನ್ ಜಿಒಗಳೇ ಇದ್ದರೆ ಅವರಿಗೆ ಕೆಲವು ವಿಷಯಗಳಿಗೆ ಆ ಕ್ಷೇತ್ರದ ತಜ್ಞರಿಗೆ ಇರಬೇಕಾದ ಜ್ಞಾನ ಇರಲೇಬೇಕೆಂದೆನಿಲ್ಲ. ಇನ್ನು ಸರಕಾರಿ ನಿವೃತ್ತ ಆಫೀಸರ್ ಇದ್ರೆ ಅವರು ಯಾವ ರೀತಿಯ ಐಡಿಯಾ ಕೊಡಬಹುದು ಎಂದರೆ ಈ ಕಾರ್ಪೋರೇಟರ್ ಗಳ ಭ್ರಷ್ಟ ಮನಸ್ಸನ್ನು ಮೊದಲೇ ಅರಿತುಕೊಳ್ಳಬಹುದು. ಸಾಮಾನ್ಯವಾಗಿ ಒಂದು ವಾರ್ಡಿನಲ್ಲಿ ಒಂದು ವಸತಿ ಸಮುಚ್ಚಯ ಬರುವಾಗ ಆ ಕಟ್ಟಡದ ಎದುರಿಗೆ ಒಂದು ತೋಡು ಇದ್ದರೆ ಅದನ್ನು ಸರಿ ಮಾಡಬೇಕಾದ ಜವಾಬ್ದಾರಿ ಬಿಲ್ಡರ್ ಮೇಲಿರುತ್ತದೆ. ಆದರೆ ಬಹುತೇಕ ಬಿಲ್ಡರ್ ಗಳು ಏನು ಮಾಡುತ್ತಾರೆ ಎಂದರೆ ಆ ಇಡೀ ಚರಂಡಿಯನ್ನು ಮಾಡಬೇಕಾದರೆ ಕನಿಷ್ಟ 10 ಲಕ್ಷ ರೂಪಾಯಿ ಖರ್ಚಾಗುತ್ತದೆ. ಅದರ ಬದಲಿಗೆ ಆ ವಾರ್ಡಿನ ಕಾರ್ಪೋರೇಟರ್ ಅವರನ್ನು ಕರೆದು ನಿಮಗೆ ಎರಡು ಲಕ್ಷ ಕೊಡುತ್ತೇನೆ. ನೀವು ಅದನ್ನು ಪಾಲಿಕೆ ವತಿಯಿಂದ ಮಾಡಿ ಎಂದು ಹೇಳಿಬಿಡುತ್ತಾರೆ. ಆ ಕಾರ್ಪೋರೇಟರ್ ಪಾಲಿಕೆಯಲ್ಲಿ ಏನಾದರೂ ಮಾಡಿ ಆ ಚರಂಡಿಯನ್ನು ಸರಿ ಮಾಡಿ ಮುಗಿಸಿ ಅಲ್ಲಿಯೇ ನಿಂತು ಫೋಟೋ ತೆಗೆದು ಫೆಕ್ಸ್ ಹಾಕುತ್ತಾನೆ. ಅಸಲಿಗೆ ಎರಡು ಲಕ್ಷ ಆ ಕಾರ್ಪೋರೇಟರ್ ಕಿಸೆ ಸೇರಿರುತ್ತದೆ. ಬಿಲ್ಡರ್ ಗೆ ಎಂಟು ಲಕ್ಷ ಲಾಭ ಆಗುತ್ತದೆ. ಆದರೆ ಈ ವಾರ್ಡ್ ಕಮಿಟಿ ಆದರೆ ಅಂತಹುದಕ್ಕೆ ಬ್ರೇಕ್ ಬೀಳುತ್ತದೆ. ಆದರೆ ಕೆಲವೊಮ್ಮೆ ಹೀಗೂ ಆಗಬಹುದು, ಅದೇನೆಂದರೆ ಮೂರ್ನಾಕು ಜನ ಕಮಿಟಿಯವರೇ ಸೇರಿ ಕಾರ್ಪೋರೇಟರ್ ಅವರ ಜೊತೆ ಶಾಮೀಲಾದರೆ ಆಗ ಈ ಕಮಿಟಿಯ ಉದ್ದೇಶ ಹಾಳಾಗುತ್ತದೆ. ಒಂದು ವೇಳೆ ಕಮಿಟಿಯ ಒಳಗಿನವರೇ ಶಾಮೀಲಾದರೆ ಆಗ ಕಮಿಟಿಯಲ್ಲಿರುವ ಬೇರೆಯವರು ಅಂತವರ ವಿರುದ್ಧ ಧ್ವನಿ ಎತ್ತಬೇಕು. ಇಂತಹುದೆಲ್ಲ ಮುಂದಿನ ದಿನಗಳಲ್ಲಿ ಮಾಡಲು ಶಕ್ತರಾದವರು ಮಾತ್ರ ವಾರ್ಡ್ ಕಮಿಟಿ ಸೇರಿ.
ಸೇರಿದ ನಂತರ ನಿಮ್ಮ ಗುರಿ ಮೂರೇ ಶಬ್ದವಾಗಿರಬೇಕು. ಅದರಲ್ಲಿ ಒಂದು ವಾರ್ಡ್ ಅಭಿವೃದ್ಧಿ, ಇನ್ನೊಂದು ಸ್ವಚ್ಚತೆ ಮತ್ತೊಂದು ಸುಂದರೀಕರಣ. ಇದು ಆಗಬೇಕಾದರೆ ವಾರ್ಡ್ ಕಮಿಟಿಯ ಸದಸ್ಯರು ಯಾವುದಕ್ಕೂ ಬಗ್ಗಬಾರದು, ಸಾಕಷ್ಟು ಒತ್ತಡಗಳು ಬರುತ್ತವೆ, ಆಮಿಷಗಳು ಬರುತ್ತವೆ. ಯಾವುದಕ್ಕಾದರೂ ಬಲಿಯಾಗಿ ನಿಮ್ಮತನ ಕಳೆದುಕೊಂಡಿರೋ ನಂತರ ಆತ್ಮಸಾಕ್ಷಿಗೆ ದ್ರೋಹ ಮಾಡಿ ಕಮಿಟಿಯಲ್ಲಿ ಇರಬೇಕಾಗುತ್ತದೆ. ಹಾಗೆ ಇದ್ದರೆ ಅದು ಜೀವಂತ ಶವ ಇದ್ದ ಹಾಗೆ. ಈಗ ಅಸ್ತಿತ್ವಕ್ಕೆ ಬರಲಿರುವ ಸಮಿತಿಯಲ್ಲಿ ರಾಜಕೀಯ ನುಸುಳುವ ಸಾಧ್ಯತೆ ಇದೆ. ತಮಗೆ ಬೇಕಾದವರನ್ನು ಮಾತ್ರ ಕಮಿಟಿಯಲ್ಲಿ ಸೇರಿಸಲು ಕಾರ್ಪೋರೇಟರ್ ಪ್ರಯತ್ನ ಮಾಡಬಹುದು. ಈ ಕಮಿಟಿಯಲ್ಲಿ ಸೇರುವ ಮೊದಲು ನೀವೊಂದು ಅಫಿದಾವಿತ್ ನೀಡಬೇಕಾಗುತ್ತದೆ. ಆ ಅಫಿದಾವಿತ್ ನಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎನ್ನುವುದನ್ನು ನೀವು ಧೃಡಪಡಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಒಂದು ಮೀಟರ್ ಚರಂಡಿಯಿಂದ ಹಿಡಿದು ತ್ಯಾಜ್ಯ ಸಂಗ್ರಹ ಮಾಡುವ ವಾಹನಗಳ ತನಕ ಪ್ರತಿಯೊಂದು ಕೆಲಸ ಸಮರ್ಪಕವಾಗಿ ಆಗಿದೆಯೋ ಎಂದು ನೋಡುವ ಜವಾಬ್ದಾರಿ ಕೂಡ ಕಮಿಟಿಗೆ ಬರಬಹುದು. ಯಾಕೆಂದರೆ ಹೆಚ್ಚಿನ ಕಡೆ ಕಾರ್ಪೋರೇಟರ್ ಗಳು ವಾರ್ಡಿನ ತ್ಯಾಜ್ಯದಲ್ಲಿಯೂ ಪಾಲು ಪಡೆಯುವವರಾಗಿರುವುದರಿಂದ ಮುಂದಿನ ದಿನಗಳಲ್ಲಿ ಅದು ಕೂಡ ನಿಲ್ಲಬಹುದು. ಕಾರ್ಪೋರೇಟರ್ ಅವರು ಸರ್ವಾಧಿಕಾರವನ್ನು ಕೊನೆಗೊಳಿಸಲು ಈ ವಾರ್ಡ್ ಕಮಿಟಿ ನಿಜಕ್ಕೂ ಉತ್ತಮ ಹಾಗೆ ಭ್ರಷ್ಟಾಚಾರಕ್ಕೂ ಅಂತ್ಯ ಹಾಡಲು ಇದು ಅನಿವಾರ್ಯ. ಅದಕ್ಕೆ ವಾರ್ಡ್ ಕಮಿಟಿಯಲ್ಲಿ ಸೇರುವವರು ಸರಿ ಇರಬೇಕಷ್ಟೇ!!
Leave A Reply