ಬೀದಿ ಬದಿ ವ್ಯಾಪಾರಿಗಳು ಇರುವುದೇ 592, ಅಂತವರಿಗೆ ಮೋದಿ ಯೋಜನೆ ಸಿಕ್ಕಿದರೆ ಸಾಕು!!
ಮೋದಿ ಯಾವ ಉದ್ದೇಶ ಇಟ್ಟು ಯೋಜನೆಗಳನ್ನು ಮಾಡುತ್ತಾರೋ, ಅಖಂಡ ಭಾರತದಲ್ಲಿ ಅದನ್ನು ಅನುಷ್ಟಾನಗೊಳಿಸುವ ಕರ್ತವ್ಯ ಆಯಾ ಅಧಿಕಾರಿಗಳದ್ದು. ಆದರೆ ಕೆಲವು ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಇವತ್ತಿನ ಜಾಗೃತ ಅಂಕಣದ ವಸ್ತು ವಿಷಯ. ಕೊರೊನಾ ಬಂದಿತ್ತಲ್ಲ. ಎಲ್ಲಾ ಜನಸಾಮಾನ್ಯರಂತೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುವವರು ಕೂಡ ತುಂಬಾ ಕಷ್ಟ ಅನುಭವಿಸಿದರು. ಇವರಲ್ಲಿ ಬಹುತೇಕ ಜನರಿಗೆ ಆವತ್ತಿನ ದುಡಿಮೆಯಿಂದಲೇ ಜೀವನ ಹೋಗಬೇಕು. ಒಂದು ವಾರ ವ್ಯಾಪಾರ ಮಾಡದಿದ್ರೆ ಹೊಟ್ಟೆಗೆ ನೀರೆ ಗತಿ. ಹೀಗಿರುವಾಗ ಯಾರು ಎಷ್ಟು ಪ್ಯಾಕೇಜು ಕೊಟ್ಟರೂ, ಅಕ್ಕಿ ಅದು ಇದು ಕೊಟ್ಟರೂ ವ್ಯಾಪಾರಕ್ಕೆ ಹೊಸದಾಗಿ ಈಗ ಶುರು ಮಾಡಿಕೊಳ್ಳುವಾಗ ಕೈಯಲ್ಲಿ ಒಂದಿಷ್ಟು ಹಣ ಬೇಡವೇ? ಕೈಯಲ್ಲಿ ಚಿಕ್ಕಾಸು ಇಲ್ಲದೇ ಬಂಡವಾಳ ಇಲ್ಲದೆ ಮಾಲುಗಳನ್ನು ತರುವುದು ಹೇಗೆ? ಬೀದಿ ಬದಿ ವ್ಯಾಪಾರಿಗಳ ಈ ಸಂಕಷ್ಟವನ್ನು ಅರಿತಿರುವ ಮೋದಿಯವರು ಇಂತವರಿಗಾಗಿಯೇ ಒಂದು ಯೋಜನೆ ತಂದಿದ್ದಾರೆ. ಆ ಮೂಲಕ ಬ್ಯಾಂಕುಗಳು ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಜಾಮೀನು ಇಲ್ಲದೆ 10 ಸಾವಿರ ರೂಪಾಯಿಗಳನ್ನು ಸಾಲವಾಗಿ ನೀಡಬಹುದು. ನಮ್ಮ ಪಾಲಿಕೆ ಸೇರಿ ಆಯಾ ಒಂದೊಂದು ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಗರಿಷ್ಟ 5 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಈ ಸೌಲಭ್ಯ ನೀಡಬಹುದು ಎಂದು ಸೂಚಿಸಲಾಯಿತು. ಸರಿ, ಮೋದಿಯವರು ಹೇಳಿದ್ದಾರಲ್ಲ, ಕೊಡೋಣ. ಆದರೆ ನಾವು ನಾಲ್ಕು ವರ್ಷಗಳ ಹಿಂದೆ ಬೀದಿ ಬದಿ ವ್ಯಾಪಾರಿಗಳ ಒಂದು ಸರ್ವೆ ಮಾಡಿದ್ದೇವಲ್ಲ. ಆ ಪ್ರಕಾರ ಮುಂದುವರೆಯೋಣ ಎಂದು ಅಧಿಕಾರಿಗಳು ಅಂದುಕೊಂಡಿದ್ದರೆ ಪರವಾಗಿರಲಿಲ್ಲ. ಆದರೆ ಆದದ್ದೇನು?
ಪಾಲಿಕೆಯಲ್ಲಿ ನಾಲ್ಕು ವರ್ಷಗಳ ಹಿಂದೆನೆ ಬೀದಿ ಬದಿ ವ್ಯಾಪಾರಿಗಳ ನಿಖರ ಲೆಕ್ಕ ಗೊತ್ತಾಗಲು ಒಂದು ಸರ್ವೆ ಮಾಡಲಾಗಿತ್ತು. ಯಾಕೆಂದರೆ ಕೇಂದ್ರದ ನಿಯಮ ಪ್ರಕಾರ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರಕ್ಕೆ ಒಂದು ಸೂಕ್ತ ಸ್ಥಳ ಗುರುತಿಸಬೇಕು. ಅಲ್ಲಿ ಅವರಿಗೆ ಎಷ್ಟು ಜಾಗದಲ್ಲಿ ವ್ಯಾಪಾರ ಮಾಡಬೇಕು ಎಂದು ಸೂಚಿಸಿ ಒಂದು ಕಾರ್ಡ್ ಕೊಟ್ಟು ಅವರು ಅಧಿಕೃತ ಬೀದಿ ಬದಿ ವ್ಯಾಪಾರಿ ಎಂದು ಸರಕಾರದಿಂದ ಗುರುತಿಸುವಂತ ಕಾರ್ಯ ಆಗಬೇಕು ಎನ್ನುವುದು ಅದರ ಉದ್ದೇಶವಾಗಿತ್ತು. ಇಲ್ಲದಿದ್ದರೆ ಈ ವ್ಯಾಪಾರಿಗಳು ತಮಗೆ ಖುಷಿ ಇರುವ ಕಡೆ ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಾರೆ. ಇಂತಹ ಸರ್ವೆಗಳಿಂದ ಸ್ಥಳೀಯ ಸಂಸ್ಥೆಯ ಆಡಳಿತ ಇರುವ ಪ್ರದೇಶವಾದರೆ ಅಲ್ಲಿ ಎಷ್ಟು ಬೀದಿ ಬದಿ ವ್ಯಾಪಾರಿಗಳು ಇದ್ದಾರೆ. ಅವರಿಗೆ ಯಾವ ಸ್ಟ್ರೀಟ್ ವೆಂಡರ್ಸ್ ಸ್ಟ್ರೀಟ್ ಮಾಡಬಹುದು. ಅಲ್ಲಿ ಎಲ್ಲಿ ಶೌಚಾಲಯ, ಬಾತ್ ರೂಂ ಕಟ್ಟಬಹುದು ಎಂದು ಅಂದಾಜು ಸಿಗುತ್ತದೆ. ಈ ಬೀದಿ ಬದಿ ವ್ಯಾಪಾರಿಗಳಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನು, ಪುಸ್ತಕಗಳನ್ನು ಮಾರುವವರು ಬರುವುದಿಲ್ಲ. ಜಿಎಸ್ ಟಿ ಉತ್ಪನ್ನಗಳನ್ನು ಮಾರುವವರು ಬರುವುದೇ ಇಲ್ಲ. ಇದು ಏನಿದ್ದರೂ ತರಕಾರಿ, ಹಣ್ಣು, ಹಂಪಲು ಮಾರುವವರಿಗೆ ಮಾತ್ರ. ಆದರೆ ನಮ್ಮ ಪಾಲಿಕೆಯಲ್ಲಿ ಏನು ಮಾಡಿದರೂ 592 ಜನರಿಗಿಂತ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಇಲ್ಲವೇ ಇಲ್ಲ ಎಂದು ಅಧಿಕಾರಿಗಳಿಗೆ ಗ್ಯಾರಂಟಿ ಇತ್ತು. ಆದರೆ ಮೋದಿಯವರ ಸ್ಕೀಮ್ ನಲ್ಲಿ 5000 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಕೊಡಬಹುದು ಎನ್ನುವ ಅವಕಾಶ ಇದೆಯಲ್ಲ. ನಮ್ಮ ಅಧಿಕಾರಿಗಳು ಸಿಕ್ಕಿದವರನ್ನು ಸೇರಿಸುತ್ತಾ ಹೋದರು. ಹೇಗೂ ಸರಕಾರದ ಹಣ, 10000 ಸಿಗಲಿ ಎಂದು ಪ್ರತಿಯೊಬ್ಬರು ತಾವು ಬೀದಿ ಬದಿ ವ್ಯಾಪಾರಿ ಎಂದು ಸೇರುತ್ತಾ ಹೋದರು.
ನಮ್ಮ ಪಾಲಿಕೆಯಲ್ಲಿ ಜಂಟಿ ಆಯುಕ್ತರಾಗಿ ಸಂತೋಷ್ ಕುಮಾರ್ ಇದ್ದಾರೆ. ಅವರು ಇದನ್ನೆಲ್ಲಾ ನೋಡಬೇಕಿತ್ತು. ಆದರೆ ಎಷ್ಟೋ ಜನ ಸುಮ್ಮನೆ ಬೀದಿ ಬದಿ ವ್ಯಾಪಾರಿಗಳು ಎಂದು ಹೇಳಿ ಶಿಫಾರಸ್ಸು ಮೂಲಕ ಸೇರಿದ್ದಾರೆ. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಸಂಸದರ, ಶಾಸಕರ ಉಪಸ್ಥಿತಿಯಲ್ಲಿ ಡಿಸಿ ಸಭೆ ಮಾಡಿದ್ದಾರೆ. ಅದರಲ್ಲಿ ಡಿಸಿ ಹೇಳಿದ್ದಾರೆ. ಬೇಗ ಅನುಷ್ಟಾನ ಮಾಡಬೇಕು. ಆದರೆ ವಿಷಯ ಏನೆಂದರೆ ಮೋದಿ ಒಂದು ಪ್ರದೇಶದಲ್ಲಿ ಗರಿಷ್ಟ 5000 ಜನರಿಗೆ ಕೊಡಬಹುದು ಎಂದು ಹೇಳಿದ ಅರ್ಥ, 5000 ಮಂದಿ ಇಲ್ಲದಿದ್ರೂ ಯಾರನ್ನಾದರೂ ಕರೆದು ಸೇರಿಸಿ ಪಟ್ಟಿ ದೊಡ್ಡದು ಮಾಡಿ ಎಂದಲ್ಲ. ನಮ್ಮಲ್ಲಿ ನೈಜವಾಗಿ 592 ಜನ ಮಾತ್ರ ಬೀದಿ ಬದಿ ವ್ಯಾಪಾರಿಗಳು ಇದ್ರೆ ಅವರಿಗೆ ಮಾತ್ರ ಕಾರ್ಡ್ ಮಾಡಿಸಿ ನಂಬರ್ ಕೊಟ್ಟು ಕೇಂದ್ರದ ಹಣ ಸಾಲವಾಗಿ ಸಿಗುವಂತೆ ಮಾಡಿ. ಅದು ಬಿಟ್ಟು ಎಲ್ಲರನ್ನು ಸೇರಿಸಿದರೆ ಅದರ ಉದ್ದೇಶವೇ ಹಾಳಾಗುತ್ತದೆ. ಅರ್ಹರಿಗಿಂತ ಅನರ್ಹರೇ ತುಂಬಿಕೊಂಡರೆ ಸರಕಾರಕ್ಕೂ ಹೊರೆಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಯೋಜನೆಯೇ ಬಿಟ್ಟು ಹೋಗಬಹುದು. ಇನ್ನು ಹೆಚ್ಚೆಚ್ಚು ಜನ ಪಟ್ಟಿಯಲ್ಲಿ ಅನಧಿಕೃತವಾಗಿ ಇದ್ರೆ ಮಂಗಳೂರಿನಲ್ಲಿ ಗರೀಬಿ ಪ್ರಮಾಣ ಹೆಚ್ಚಿದೆ ಎಂದು ಕೇಂದ್ರ ನಿರ್ಧರಿಸಬಹುದು. ಇದರಿಂದ ಊರಿಗೂ ಶೋಭೆಯಲ್ಲ. 5000 ಜನರ ತನಕ ಕೊಡಬಹುದು ಎಂದು ಪುರಭವನದ ಬಳಿ ಮೈಕ್ ಹಾಕಿ ಘೋಷಣೆ ಮಾಡುತ್ತಾ ಇದ್ದಬದ್ದವರನ್ನಾ ಪಟ್ಟಿಯಲ್ಲಿ ಸೇರಿಸಲು ಹೋದರೆ ಅನರ್ಥ ಆಗುತ್ತದೆ. ಯಾವುದೇ ಪ್ರಚಾರವಿಲ್ಲದೆ ಸರ್ವೆ ಮಾಡಿದಾಗ 592 ಜನ ಅರ್ಹರು ಸಿಕ್ಕಿದ್ದಾರಲ್ಲ, ಅಷ್ಟು ಸಾಕು!
Leave A Reply