ಜನರಿಗೆ ಅನುಕೂಲಕರವಾಗಿರುವುದರ ಬಗ್ಗೆ ಆಕ್ಷೇಪಣೆ ಎತ್ತುವವರನ್ನು ಸಹಿಸಿಕೊಳ್ಳಬೇಕಾ?
ಮಂಗಳೂರು ಮಹಾನಗರ ಪಾಲಿಕೆ ಇರುವುದು ಅಲ್ಲಿನ ಅರವತ್ತು ಜನ ಸದಸ್ಯರಿಗಾಗಿ ಮಾತ್ರವೇ ವಿನ: ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವ ಐದು ಲಕ್ಷ ನಾಗರಿಕರಿಗಾಗಿ ಅಲ್ಲವೇ ಅಲ್ಲ ಎನ್ನುವುದು ಸಾಬೀತು ಪಡಿಸಲು ನನ್ನ ಕೈಯಲ್ಲಿರುವ ದಾಖಲೆಗಳೆ ಸಾಕು. ಈ ಬಗ್ಗೆ ನಾನು ಬೆಂಗಳೂರಿನಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಪ್ರಶ್ನೆ ಕೇಳಿದ್ದೆ. ಅದಕ್ಕೆ ಉತ್ತರ ಬಂದಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಇರುವವರಿಗೆ ಮಂಗಳೂರು ಮಹಾನಗರ ಪಾಲಿಕೆಯನ್ನು ಮೂರು ತುಂಡುಗಳನ್ನಾಗಿ ವಿಂಗಡಿಸಿರುವುದು ತಿಳಿದಿದೆ. ಅದು ಯಾಕೆ ಎನ್ನುವುದು ಕೂಡ ಗೊತ್ತೆ ಇರುತ್ತದೆ. ಆದರೂ ಚಿಕ್ಕದಾಗಿ ಹೇಳ್ತೆನೆ.
ಈ ಅರವತ್ತು ವಾರ್ಡುಗಳು ಕಣ್ಣೂರಿನಿಂದ ಮುಕ್ಕದವರೆಗೆ ಹರಡಿಕೊಂಡಿದೆ. ಜನರು ಏನೇ ಕೆಲಸಗಳಿದ್ದರೂ ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಬರಬೇಕಾಗುತ್ತದೆ. ಅಲ್ಲಿಯೇ ಕ್ಯೂ ನಿಲ್ಲಬೇಕಾಗುತ್ತದೆ. ಏನಾದರೂ ಸಣ್ಣ ಕೆಲಸವಿದ್ದರೂ ತಮ್ಮ ಉದ್ಯೋಗಕ್ಕೆ ರಜೆ ಹಾಕಿಕೊಂಡು ಬಂದು ಮಾಡಿ ಹೋಗುವಷ್ಟರಲ್ಲಿ ಸಂಜೆಯಾಗುತ್ತದೆ. ಎಷ್ಟೋ ಸಲ, ಇವರು ಬರುವಾಗ ಅವರಿರುವುದಿಲ್ಲ. ಅವರು ಇರುವುದು ಇವರಿಗೆ ಗೊತ್ತಾಗುವುದಿಲ್ಲ. ಅದಕ್ಕಾಗಿ ಆಡಳಿತ ನಿರ್ವಹಣೆ ಸುಲಭವಾಗಲಿ ಮತ್ತು ಜನ ಸುಮ್ಮನೆ ಕಿಲೋಮೀಟರ್ ಗಟ್ಟಲೆ ಅಲೆದಾಡುವುದು ತಪ್ಪಲಿ ಎನ್ನುವ ಕಾರಣಕ್ಕೆ ಪಾಲಿಕೆಯನ್ನು ಮೂರು ತುಂಡುಗಳನ್ನಾಗಿ ಮಾಡಲಾಯಿತು. ಮೂರು ತುಂಡುಗಳನ್ನು ಮೂರು ಏರಿಯಾಗಳಲ್ಲಿ ಹಂಚಲಾಯಿತು. ಅಪ್ಪಟ ನಗರದ ಒಳಗೆ ವಾಸಿಸುವವರಿಗೆ ಲಾಲ್ ಭಾಗ್, ಮಂಗಳೂರು ಉತ್ತರದ ತುದಿಯಲ್ಲಿ ವಾಸಿಸುವವರಿಗೆ ಸುರತ್ಕಲ್ ಮತ್ತು ಹೀಗೆ ಪಾಲಿಕೆಯ ಪಾಶ್ವದಲ್ಲಿ ವಾಸಿಸುವವರು ಕದ್ರಿಯಲ್ಲಿ ಎಂದು ನಿರ್ಧರಿಸಲಾಯಿತು. ಅದರ ಪ್ರಕಾರ ಕೆಲಸಗಳು ಪ್ರಾರಂಭವಾಗಿ ಒಂದಷ್ಟರ ಮಟ್ಟಿಗೆ ನಡೆಯಲು ಶುರುವಾಗಿತ್ತು. ಹಾಗಾದರೆ ನಾನು ಪಾಲಿಕೆಯ ತಪ್ಪು ಆಡಳಿತದ ಬಗ್ಗೆ ಯಾಕೆ ಮಾಹಿತಿ ಹಕ್ಕಿನಲ್ಲಿ ಪ್ರಶ್ನೆ ಎತ್ತಬೇಕಾಯಿತು ಎನ್ನುವುದರ ಬಗ್ಗೆ ನಿಮಗೆ ಅನಿಸಬಹುದು. ಈಗ ಆ ವಿಷಯಕ್ಕೆ ಬರೋಣ.
ನಾನು ಕೇಳಿದ ಪ್ರಶ್ನೆಗಳಲ್ಲಿ ಮೊದಲನೇಯದ್ದನ್ನು ಯಥಾವತ್ತಾಗಿ ಹಾಗೆ ಬರೆಯುತ್ತಿದ್ದೇನೆ.
ಕರ್ನಾಟಕ ಸರಕಾರದ ಅಧಿಸೂಚನೆ ಸಂಖ್ಯೆ: ಯುಡಿಡಿ 156 ಎಸಿಬಿ 2009 ದಿನಾಂಕ 11-4-2011ರಲ್ಲಿ ಮಹಾನಗರ ಪಾಲಿಕೆಗಳ 2011 ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿದ್ದು, ಅದರಂತೆ ಮಂಗಳೂರು ಮಹಾನಗರ ಪಾಲಿಕೆಗೆ 1 ಕೇಂದ್ರ ಕಚೇರಿ ಹಾಗೂ 3 ವಲಯ ಕಚೇರಿಗಳನ್ನು ರಚಿಸಬೇಕಾಗಿರುತ್ತದೆ. ಈ ಅಧಿಸೂಚನೆ ಬರುವ ಮೊದಲೇ ಮಂಗಳೂರು ಮಹಾನಗರ ಪಾಲಿಕೆಯು ಕೇಂದ್ರ ಕಚೇರಿ, ಕದ್ರಿ ಉಪಕಚೇರಿ ಮತ್ತು ಸುರತ್ಕಲ್ ಉಪಕಚೇರಿ ಎಂದು ವಿಂಗಡಿಸಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಈ ವ್ಯವಸ್ಥೆಯಲ್ಲಿ ಎಲ್ಲಾ ವಾರ್ಡುಗಳ ನಿವಾಸಿಗಳಿಗೆ ಆಯಾಯ ಕಚೇರಿಗಳು ಹತ್ತಿರವಾಗಿರುವುದರಿಂದ ಜನರಿಗೆ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಸುಲಭದಲ್ಲಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಈಗ ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ತು ಮೂರು ವಲಯಗಳನ್ನಾಗಿ ವಿಂಗಡಿಸಿ ಈಗ ಇರುವ ಕದ್ರಿ ಉಪಕಚೇರಿಯನ್ನು ಬಂದ್ ಮಾಡಿ ಕದ್ರಿ ವಲಯಕ್ಕೆ ಸೇರಿರುವ ವಾರ್ಡುಗಳ ಕೆಲಸ ಕಾರ್ಯಗಳನ್ನು ಕೇಂದ್ರ ಕಚೇರಿಯ 3 ನೇ ಮಹಡಿಯಲ್ಲಿ ನಡೆಸುವುದಾಗಿ ಅನುಮೋದನೆ ಪಡೆದುಕೊಳ್ಳಲಾಗಿರುತ್ತದೆ. ಈ ರೀತಿ ಮಾಡಿದ್ದು ಕದ್ರಿ ವಲಯ ಪ್ರದೇಶದ ಕಾರ್ಪೋರೇಟರ್ ಗಳ ಒತ್ತಾಯದ ಮೇಲೆ ಮಾಡಲಾಗಿರುತ್ತದೆ. ಸರಕಾರವು ಪಾಲಿಕೆ ಕೆಲಸಗಳನ್ನು ವಿಂಗಡನೆ ಮಾಡಿ ಆಯಾಯ ಪ್ರದೇಶದ ನಾಗರಿಕರಿಗೆ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಸುಲಭದಲ್ಲಿ ಮಾಡಿಸಿಕೊಳ್ಳಲು ಒಳ್ಳೆಯ ನಿರ್ಣಯವನ್ನು ಕೈಗೊಂಡರೆ, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಗಳಿಗಾಗಿ ನಾಗರಿಕರನ್ನು ಈ ಸೌಲಭ್ಯದಿಂದ ವಂಚಿಸುವುದು ಯಾವ ನ್ಯಾಯ? ನಾಗರಿಕರಿಗೆ ತೊಂದರೆಯಾಗುವಂತಹ ಈ ನಿರ್ಣಯಕ್ಕೆ ತಾವು ಒಪ್ಪಿಗೆ ನೀಡದೆ ಕೇಂದ್ರ ವಲಯ, ಸುರತ್ಕಲ್ ವಲಯ ಮತ್ತು ಕದ್ರಿ ವಲಯ ಕಚೇರಿಯನ್ನು ಕದ್ರಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿಯೇ ಇನ್ನು ಮುಂದೆ ಕೂಡಾ ಮುಂದುವರೆಸಿಕೊಂಡು ಹೋಗುವಂತೆ ಆದೇಶ ಮಾಡಬಾರದಾಗಿ ವಿನಂತಿ.
ಅದಕ್ಕೆ ಉತ್ತರ ಏನು ಗೊತ್ತಾ? ಮಹಾನಗರ ಪಾಲಿಕೆಯ ಸದಸ್ಯರು ವಾರ್ಡು ಬದಲಾವಣೆ ಬಗ್ಗೆ ಆಕ್ಷೇಪ ಸಲ್ಲಿಸಿರುವುದರಿಂದ ಆಕ್ಷೇಪಣೆಯನ್ನು ಪರಿಗಣಿಸುವ ಸಲುವಾಗಿ ವಾರ್ಡು ಬದಲಾವಣೆ ಕುರಿತು ಮಾನ್ಯ ಮೇಯರ್ ರವರಿಗೆ ಅಧಿಕಾರ ನೀಡಲು ನಿರ್ಣಯಿಸಲಾಯಿತು ಹಾಗೂ ವಲಯ ನಂಬ್ರ 1ನ್ನು ಸುರತ್ಕಲ್ ನ್ನು ಮತ್ತು ವಲಯ ನಂಬ್ರ 2 ಮತ್ತು 3 ನ್ನು ಮನಪಾದ ಕೇಂದ್ರ ಕಚೇರಿಯಲ್ಲಿ ನಿರ್ವಹಿಸುವಂತೆ ನಿರ್ಣಯಿಸಲಾಯಿತು. ನಿಮಗೆ ಒಂದು ವಿಷಯ ಅರ್ಥವಾಯಿತಾ? ಜನರಿಗೆ ಉಪಯೋಗವಾಗುವುದು ಸದಸ್ಯರಿಗೆ ಯಾವತ್ತೂ ಆಕ್ಷೇಪಣೆಯೇ. ಇವರಿಗೆ ಜನರಿಗೆ ಸುಲಭವಾಗುವುದು ಬೇಡಾ, ಜನರ ಕಷ್ಟ ಪಡಲಿ, ನಮಗೆ ಅನುಕೂಲವಾದರೆ ಸಾಕು ಎನ್ನುವ ಧೋರಣೆ. ನನ್ನ ಇನ್ನಷ್ಟು ಪ್ರಶ್ನೆಗಳು ಕೂಡ ನಿಮಗೆ ಗೊತ್ತಾಗಬೇಕು. ಅದನ್ನು ನಾಳೆ ಹೇಳುತ್ತೇನೆ. ಸದಸ್ಯರ ಹಣೆಬರಹವನ್ನು ಒಟ್ಟಿಗೆ ಬಯಲಿಗೆ ಎಳೆಯೋಣ.
Leave A Reply