ನಗರದೊಳಗೆ ವಾಹನ ತಂದು ಪಾರ್ಕಿಂಗಿಗೆ ಹೆದರಿದರೆ ಎಂತಯ್ಯ!!
Posted On December 8, 2020
ಮಂಗಳೂರು ನಗರದ ಒಳಗೆ ಪ್ರಮುಖವಾದ ಸವಾಲು ಎಂದರೆ ಪಾರ್ಕಿಂಗ್ ವ್ಯವಸ್ಥೆ. ಈ ಬಗ್ಗೆ ಪತ್ರಿಕೆಗಳು, ಮಾಧ್ಯಮಗಳು ಆಗಾಗ ಸುದ್ದಿ ಮಾಡುತ್ತಲೇ ಇರುತ್ತವೆ. ಪತ್ರಕರ್ತರು ಕಾಂಗ್ರೆಸ್ಸಿನ ಮುಖಂಡರ ಬಳಿ ಅಥವಾ ಕಾರ್ಪೋರೇಟರ್ ಬಳಿ ಕೇಳಿದರೆ ಅವರ ಸಿದ್ಧ ಉತ್ತರ ” ಈಗ ಪಾಲಿಕೆಯಲ್ಲಿ ಆಡಳಿತ ಇರುವುದು ಬಿಜೆಪಿಯವರದ್ದು. ಆದ್ದರಿಂದ ಅವರು ಅದನ್ನು ಸರಿ ಮಾಡಬೇಕು” ಎನ್ನುವ ಅರ್ಥದ ಮಾತುಗಳನ್ನು ಹೇಳುತ್ತಾರೆ. ಈಗ ಆಡಳಿತ ಇರುವುದು ಬಿಜೆಪಿ ಒಕೆ. ಆದರೆ ಪಾರ್ಕಿಂಗ್ ಸಮಸ್ಯೆ ಈಗ ಆರಂಭವಾಗಿರುವುದು ಅಲ್ಲ, ಅದಕ್ಕೆ ಕಾರಣ ಒಂದು ವರ್ಷದಿಂದ ಆಡಳಿತದಲ್ಲಿ ಬಿಜೆಪಿ ಮಾತ್ರ ಅಲ್ಲ. ಯಾಕೆಂದರೆ ಪಾರ್ಕಿಂಗ್ ಸಮಸ್ಯೆ ಶುರುವಾಗುವುದೇ ಅಡ್ಡಾದಿಡ್ಡಿ ನಿರ್ಮಾಣವಾಗುವ ಕಟ್ಟಡಗಳಿಂದ. ಕಟ್ಟಡಗಳು ನಿರ್ಮಾಣವಾಗುವ ಮೊದಲೇ ಕಟ್ಟಡದಲ್ಲಿ ಇಂತಿಷ್ಟೇ ಜಾಗ ಪಾರ್ಕಿಂಗ್ ಎಂದು ಇಡಬೇಕಾಗುತ್ತದೆ. ರೂಪುರೇಶೆ ತಯಾರು ಮಾಡಿ ಪಾಲಿಕೆಯಿಂದ ಅನುಮತಿ ಎಂಬ ಲೈಸೆನ್ಸ್ ಬಿಲ್ಡರ್ ಗಳು ಪಡೆದುಕೊಳ್ಳುವಾಗ ದಾಖಲೆಯಲ್ಲಿ ಪಾರ್ಕಿಂಗ್ ಜಾಗ ಎಂದು ತೋರಿಸುತ್ತಾರೆ. ಅದು ಅಲ್ಲಿಗೆ ಮಾತ್ರ ಸೀಮಿತ. ಆದರೆ ಕಟ್ಟಡ ಕಟ್ಟಿ ಮುಗಿಸುವಾಗ ಪಾರ್ಕಿಂಗ್ ಜಾಗದಲ್ಲಿ ನಾಲ್ಕು ಮಳಿಗೆಗಳು ಅಥವಾ ಎರಡು ಮನೆಗಳು ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಪಾರ್ಕಿಂಗ್ ಜಾಗ ಇಟ್ಟರೂ ಅದು ಕೇವಲ ತೋರಿಕೆಗೆ ಮಾತ್ರ ಒಂದಿಷ್ಟು ಇಡುತ್ತಾರೆ ವಿನ: ಅದರಲ್ಲಿ ನಾಲ್ಕು ಸ್ಕೂಟರ್ ನಿಲ್ಲಿಸುವಷ್ಟರಲ್ಲಿ ಅದು ಫುಲ್ ಆಗಿರುತ್ತದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಬೃಹತ್ ಕಟ್ಟಡಗಳಲ್ಲಿ ಉಪ್ಪಿನಕಾಯಿಯಷ್ಟು ಪಾರ್ಕಿಂಗ್ ಇಟ್ಟರೆ ಸಾಕಾಗುತ್ತದಾ? ಎಲ್ಲಾ ವಾಹನಗಳು ಹೊರಗೆ ನಿಲ್ಲಿಸಬೇಕಾಗುತ್ತದೆ. ಇದರಿಂದ ಸಹಜವಾಗಿ ರಸ್ತೆ ಬ್ಲಾಕ್ ಆಗುತ್ತದೆ. ರೋಡ್ ಜಾಮ್ ಸಾಮಾನ್ಯವಾಗುತ್ತದೆ. ಹಾಗಾದರೆ ಇದನ್ನು ಸರಿಪಡಿಸುವುದು ಹೇಗೆ? ಮೊದಲನೇಯದಾಗಿ ಯಾವ ಕಟ್ಟಡದಲ್ಲಿ ಪಾರ್ಕಿಂಗ್ ಇಲ್ಲದಿರುವುದರಿಂದ ರೋಡ್ ಬ್ಲಾಕ್ ಆಗುತ್ತದೆ ಎನ್ನುವುದನ್ನು ಅಧಿಕಾರಿಗಳು ನೋಡಬೇಕು. ಆ ಕಟ್ಟಡಕ್ಕೆ ಪಾರ್ಕಿಂಗ್ ಇಲ್ಲದಿದ್ದರೂ ಕಂಪ್ಲೀಶನ್ ಸರ್ಟಿಫೀಕೇಟ್ ನೀಡಿರುವ ಅಧಿಕಾರಿಗೆ ನೋಟಿಸು ಕೊಡಬೇಕು. ವಿಚಾರಣೆ ಮಾಡಿ ಯಾವ ಕಾರ್ಪೋರೇಟರ್ ಒತ್ತಡ ಹಾಕಿ ಕಟ್ಟಡ ಪ್ರವೇಶ ಪ್ರಮಾಣ ಪತ್ರ ಕೊಡಿಸಿದ್ದು ತಿಳಿದುಕೊಂಡು ಅವರ ಹೆಸರನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಬೇಕು. ಅಷ್ಟು ಮಾಡಿದರೆ ಮುಂದಿನ ದಿನಗಳಲ್ಲಿ ಯಾವ ಮನಪಾ ಸದಸ್ಯ/ಸ್ಯೆ ಅಥವಾ ಅಧಿಕಾರಿ ಹಾಗೆ ಮಾಡುವ ಗೋಜಿಗೆ ಹೋಗುವುದಿಲ್ಲ.
ಇನ್ನು ಪೊಲೀಸ್ ಕಮೀಷನರ್ ಅವರು ನಗರದ 60 ಕಡೆಗಳಲ್ಲಿ ನೋಪಾರ್ಕಿಂಗ್ ಝೋನ್ ಮಾಡಲು ಆದೇಶ ನೀಡಿದ್ದಾರೆ. ಇದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಎಲ್ಲಿ ಪಾರ್ಕಿಂಗ್ ಮಾಡುವುದು ಎಂದು ತೋರಿಸದೇ ನಿಲ್ಲಿಸಿದ ಕಡೆಯಿಂದ ಟೋ ಮಾಡಿಕೊಂಡು ಹೋಗುವುದು ಸರಿಯಲ್ಲ ಎಂದು ನೋ ಪಾರ್ಕಿಂಗ್ ದಂಡ ಕಟ್ಟಿದವರ ಅಭಿಮತ. ನಾವು 1600 ದಂಡ ಕಟ್ಟಿ ವಾಹನವನ್ನು ಬಿಡಿಸಿಕೊಂಡು ಬರುವಾಗ ಸಾಕೋ ಸಾಕಾಗುತ್ತದೆ ಎಂದು ಹೇಳುತ್ತಾರೆ. ಮೊದಲನೇಯದಾಗಿ ಇಲ್ಲಿ ಜನ ಕೂಡ ಒಂದಿಷ್ಟು ಬದಲಾಗಬೇಕು. ಎಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಲು ಅಂದರೆ ಪಾರ್ಕಿಂಗ್ ಮಾಡಲು ಸರಿಯಾದ ವ್ಯವಸ್ಥೆ ಇಲ್ಲವೋ ಅಲ್ಲಿ ಯಾವುದನ್ನು ಖರೀದಿಸಲು ಹೋಗಲೇಬಾರದು. ಯಾವಾಗ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆಯೋ ಆಗ ಆ ಕಟ್ಟಡಗಳಲ್ಲಿರುವ ಮಳಿಗೆಗಳನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆದುಕೊಳ್ಳಲು ಯಾವ ವ್ಯಾಪಾರಿ ಕೂಡ ಮುಂದಕ್ಕೆ ಬರುವುದಿಲ್ಲ. ಯಾವಾಗ ಮಳಿಗೆಗೆ ಬಾಡಿಗೆದಾರರೇ ಮುಂದಕ್ಕೆ ಬರುವುದಿಲ್ಲವೋ ಅಂತಹ ಸಂದರ್ಭದಲ್ಲಿ ಅಂತಹ ಪಾರ್ಕಿಂಗ್ ಇಲ್ಲದ ಕಟ್ಟಡಗಳನ್ನು ಕಟ್ಟಲು ಬಿಲ್ಡರ್ಸ್ ಮುಂದೆ ಬರುವುದಿಲ್ಲ. ಇದರಿಂದ ತಕ್ಷಣಕ್ಕೆ ಅಲ್ಲವಾದರೂ ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಸಮಸ್ಯೆ ಸರಿಯಾಗುತ್ತದೆ. ಹಾಗಂತ ಇಲ್ಲಿ ಕೇವಲ ಕಾಂಗ್ರೆಸ್ ಆಡಳಿತದವರದ್ದೇ ತಪ್ಪು ಎಂದು ಹೇಳಲು ಆಗುವುದಿಲ್ಲ. ಅನೇಕ ಬಿಜೆಪಿ ಮನಪಾ ಸದಸ್ಯರು ಮತ್ತು ಮುಖಂಡರು ಅನೇಕ ಬಿಲ್ಡರ್ ಗಳೊಂದಿಗೆ “ಚೆನ್ನಾಗಿಯೇ” ಇದ್ದಾರೆ. ಅವರು ಕೂಡ ಇಂತದ್ದಕ್ಕೆ ಪ್ರೋತ್ಸಾಹ ಕೊಡದೇ ಇದ್ದಿದ್ದರೆ ಸಮಸ್ಯೆ ಉಂಟಾಗುತ್ತಲೇ ಇರಲಿಲ್ಲ. ತಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಅಡ್ಡಾದಿಡ್ಡಿ ಅನಧಿಕೃತ ಕಟ್ಟಡಗಳನ್ನು ಕಟ್ಟಲು ಮುಕ್ತ ಅವಕಾಶ ಕೊಟ್ಟ ಕಾಂಗ್ರೆಸ್ ಈಗ ಅಧಿಕಾರ ಹೋದ ಕೂಡಲೇ ತನ್ನ ತಪ್ಪನ್ನು ಬಿಜೆಪಿಯ ಮೇಲೆ ಕೈತೊಳೆದುಕೊಂಡಿದೆ. ಈಗ ಸಿಟಿ ಸೆಂಟರ್, ಭಾರತ್ ಮಾಲ್ ಗಳಲ್ಲಿ ಪಾರ್ಕಿಂಗ್ ಗಾಗಿಯೇ ಜಾಗ ಇದೆ. ಅದೇ ರೀತಿಯಲ್ಲಿ ಎಲ್ಲಾ ವಾಣಿಜ್ಯ ಕಟ್ಟಡದವರು ಕೂಡ ಪಾರ್ಕಿಂಗ್ ಜಾಗ ಯಥೇಚ್ಚವಾಗಿ ಇಡಬೇಕು. ಅವರು ಇಡದಿದ್ದರೆ ಅವರಿಂದ ತೊಂದರೆಗೆ ಒಳಗಾಗುವವರು ಗ್ರಾಹಕರು. ನೊಂದ ಗ್ರಾಹಕ ಮನಸ್ಸು ಮಾಡಿದರೆ ಒಂದು ವ್ಯಾಪಾರವನ್ನೇ ಮುಳುಗಿಸಬೇಕು. ಅಧಿಕಾರಿಗಳು ಎಂಜಿಲು ತಿಂದರೆ ಗ್ರಾಹಕರು ತಮ್ಮ ಸಾಮರ್ತ್ಯ ತೋರಿಸಬೇಕು!
- Advertisement -
Trending Now
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
ರಸ್ತೆ ಸುರಕ್ಷತೆ ಮತ್ತು ಸೈಬರ್ ಅಪರಾಧದ ಕುರಿತು ಜಾಗೃತಿ -ಅನುಪಮ್ ಅಗರ್ವಾಲ್
September 27, 2024
Leave A Reply