ರೈಲು ಬಳಸಿ, ರೈಲು ಉಳಿಸಿ, ನಮ್ಮ ಪ್ರಯತ್ನ ಸಾರ್ಥಕಗೊಳಿಸಿ!!
ಮಂಗಳೂರು ರೈಲ್ವೆ ನಿಲ್ದಾಣ ಸಂಪೂರ್ಣ ಅಭಿವೃದ್ಧಿಯಾಗಬೇಕಾದರೆ ಅದನ್ನು ತ್ರಿಶಂಕು ಸ್ಥಿತಿಯಿಂದ ಪಾರು ಮಾಡುವ ಅವಶ್ಯಕತೆ ಈಗ ತುರ್ತಾಗಿ ಇದೆ. ಎಲ್ಲಿಯ ತನಕ ಮೂರು ವಿಭಾಗಗಳಿಗೆ ಇದು ಹಂಚಿಹೋಗಿರುತ್ತದೆಯೋ ಅಲ್ಲಿಯ ತನಕ ನಾವು ಮಲತಾಯಿ ಮಕ್ಕಳಂತೆ ಜೀವಿಸಬೇಕಾಗುತ್ತದೆ. ಬೇಕಾದರೆ ಚಿಕ್ಕ ಉದಾಹರಣೆ ಕೊಡುತ್ತೇನೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇರುವುದೇ ಮೂರು ಫ್ಲಾಟ್ ಫಾರಂಗಳು. ಇಷ್ಟು ಪ್ರಮುಖ ರೈಲು ನಿಲ್ದಾಣಕ್ಕೆ ಮೂರೇ ಫ್ಲಾಟ್ ಫಾರಂ ಮಾತ್ರ ಎನ್ನುವುದೇ ನಮ್ಮ ಜಿಲ್ಲೆಗೆ ಅವಮಾನಕರ ಸಂಗತಿ. ಹಾಗಂತ ಇದನ್ನು ಕನಿಷ್ಟ ಐದು ಮಾಡುವ ಪ್ರಕ್ರಿಯೆ ಆಗಿಲ್ಲವಾ? ಆಗಿದೆ. ಮೂರು ವರ್ಷಗಳ ಮೊದಲೇ ಆಗಿದೆ. ಅದಕ್ಕಾಗಿ ರೈಲ್ವೆ ಇಲಾಖೆಯಿಂದ ಹಣ ಕೂಡ ಬಿಡುಗಡೆಯಾಗಿದೆ. ಆದರೆ ಇಲ್ಲಿಯ ತನಕ ಕೆಲಸ ಆರಂಭವಾಗಿಲ್ಲ. ಯಾಕೆ ಕೆಲಸ ಆರಂಭ ಆಗಿಲ್ಲ? ಸಂಶಯವೇ ಬೇಡಾ. ಇದು ಪಕ್ಕಾ ಕೇರಳ ಲಾಬಿ. ಒಬ್ಬ ಸಾಮಾನ್ಯ ವ್ಯಕ್ತಿಗೆ ಹೊಟ್ಟೆಗೆ ಬೇಕಾದಷ್ಟು ಆಹಾರ ಸಿಗದೇ ಇದ್ದರೆ ಕೇವಲ ನೀರು ಕುಡಿದು ಎಷ್ಟು ದಿನ ಬದುಕಬೇಕು. ಹಾಗೆ ಆಗಿದೆ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪರಿಸ್ಥಿತಿ. ಇಲ್ಲಿ ಫ್ಲಾಟ್ ಫಾರಂ ಜಾಸ್ತಿ ಆದರೆ ಆಗ ಹೆಚ್ಚು ರೈಲುಗಳ ಓಡಾಟ ಆಗುತ್ತದೆ. ಆಗ ಸಹಜವಾಗಿ ಕೇರಳಿಗರ ಮೊದಲ ಆಯ್ಕೆಯಾದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಸೆಂಟ್ರಲ್ ಮತ್ತು ಜಂಕ್ಷನ್ ಎರಡರಲ್ಲಿಯೂ ಜಾಗ ಇಲ್ಲ ಎಂದು ಹೇಳಿ ರೈಲುಗಳನ್ನು ಕೇರಳಕ್ಕೆ ವಿಸ್ತರಿಸುವ ಫಾಲ್ಗಾಟ್ ಲಾಬಿಗೆ ತೀವ್ರ ಹಿನ್ನಡೆಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಫ್ಲಾಟ್ ಫಾರಂ ಹೆಚ್ಚಳ ಆಗಲು ಫಾಲ್ಗಾಟ್ ಬಿಡುವುದಿಲ್ಲ. ಮಂಗಳೂರಿನ ಸ್ವಲ್ಪ ಭಾಗ ಸೌತರ್ನ್ ರೈಲ್ವೆಗೆ, ಇನ್ನು ಸ್ವಲ್ಪ ಭಾಗ ನೈರುತ್ಯ ರೈಲ್ವೆಗೆ ಹಾಗೂ ಉಳಿದ ಚೂರುಪಾರು ಕೊಂಕಣ್ ರೈಲ್ವೆಗೆ ಹೋಗುತ್ತದೆ. ಇದೆಲ್ಲವೂ ಸರಿ ಆಗಬೇಕಾದರೆ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಆಗಬೇಕು. ಅದು ಯಾವಾಗ ಆಗುತ್ತದೆ ಎನ್ನುವುದು ಯಕ್ಷ ಪ್ರಶ್ನೆ. ಆದರೆ ತುರ್ತಾಗಿ ಕೆಲವು ಬದಲಾವಣೆಗಳು ಆಗಲೇಬೇಕಿದೆ. ಅದಕ್ಕಾಗಿ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ಪರವಾಗಿ ನಾವು ಸೌತರ್ನ್ ರೈಲ್ವೆ ಪಾಲ್ಗಾಟ್ ರೈಲ್ವೆ ಡಿವಿಜನ್ ಇದರ ಡಿವಿಜನ್ ರೈಲ್ವೆ ಪ್ರಬಂಧಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆವು. ಈಗ ಯಶವಂತಪುರದಿಂದ ಮಂಗಳೂರು ಜಂಕ್ಷನ್ ನಡುವೆ ಓಡಾಡುವ ರೈಲು ಪ್ರಯಾಣಿಕರಿಗೆ ಏನೂ ಉಪಯೋಗವಾಗುತ್ತಿಲ್ಲ. ಇದನ್ನು ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ 8.15 ಬಿಟ್ಟರೆ ತುಂಬಾ ಜನರಿಗೆ ಅನುಕೂಲವಾಗಲಿದೆ. ಅದೇ ರೀತಿ ಯಶವಂತಪುರದಿಂದ ಬೆಳಿಗ್ಗೆ 9.15ಕ್ಕೆ ಬಿಟ್ಟರೆ ಸಂಜೆ 6.45ಕ್ಕೆ ತಲುಪುತ್ತದೆ. ಇನ್ನು ಮಂಗಳೂರು ಜಂಕ್ಷನ್ ನಿಂದ ಬಿಜಾಪುರದ ನಡುವೆ ಲಾಕ್ ಡೌನ್ ಪೂರ್ವದಲ್ಲಿ ಒಂದು ಸ್ಪೆಶಲ್ ರೈಲು ಓಡಾಡುತ್ತಿತ್ತು. ಅದನ್ನು ಜಂಕ್ಷನ್ ನಿಂದ ಸೆಂಟ್ರಲ್ ಗೆ ಶಿಫ್ಟ್ ಮಾಡಿ ಇಲ್ಲಿಂದ ಸಂಜೆ 6.45ಕ್ಕೆ ಬಿಟ್ಟರೆ ಉತ್ತರ ಕರ್ನಾಟಕದಿಂದ ಇಲ್ಲಿ ಬಂದು ಕೆಲಸ ಮಾಡುವವರಿಗೆ ಅನುಕೂಲವಾಗುತ್ತದೆ.
ಇನ್ನು ಛತ್ರಪತಿ ಶಿವಾಜಿ ಟರ್ಮಿನಲ್ ಮುಂಬೈನಿಂದ ಮಂಗಳೂರು ಜಂಕ್ಷನ್ ನಡುವೆ ಒಂದು ರೈಲು ಓಡಾಡುತ್ತಿದೆ. ಅದು ರೈಲ್ವೆ ಬೋರ್ಡ್ ನಿಂದ ಮಂಗಳೂರು ಸೆಂಟ್ರಲ್ ಟು ಮುಂಬೈಗೆ ಮಂಜೂರಾಗಿತ್ತು. ಆದರೆ ಇದು ಮಂಗಳೂರು ಜಂಕ್ಷನ್ ನಿಂದ ಹೋಗಿ ಬರುತ್ತಿದೆ. ಇದನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ವಿಸ್ತರಿಸಬೇಕೆಂದು ನಾವು ಮನವಿ ಮಾಡಿದೆವು. ಇನ್ನು ಮಂಗಳೂರು ತಿರುಪತಿ ರೈಲನ್ನು ವಯಾ ಹಾಸನದಿಂದ ಓಡಿಸಬೇಕೆಂದು ಮನವಿ ಮಾಡಿದ್ದೇವೆ. ಈ ರೈಲನ್ನು ಮಂಗಳೂರು ಸೆಂಟ್ರಲ್ ನಿಂದ ಮಧ್ಯಾಹ್ನ 3.30 ಕ್ಕೆ ಬಿಟ್ಟರೆ ಅದು ಮರುದಿನ ಬೆಳಿಗ್ಗೆ 5.30 ಕ್ಕೆ ತಿರುಪತಿ ತಲುಪುತ್ತದೆ. ಹಾಗೆ ತಿರುಪತಿಯಿಂದ ಬೆಳಿಗ್ಗೆ 10 ಗಂಟೆಗೆ ಹೊರಟರೆ ಮರುದಿನ ಬೆಳಿಗ್ಗೆ 4 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಇನ್ನು ಈಗಾಗಲೇ ರೈಲ್ವೆ ಬೋರ್ಡ್ ಮಂಗಳೂರು ಸೆಂಟ್ರಲ್ ನಿಂದ ರಾಮೇಶ್ವರಂಗೆ ರೈಲು ಓಡಿಸಲು ಅನುಮತಿ ನೀಡಿದ್ದರೂ ಅದು ಅನುಷ್ಟಾನಕ್ಕೆ ಬಂದಿಲ್ಲ. ಅದನ್ನು ಆದಷ್ಟು ಬೇಗ ಆರಂಭಿಸಲು ಕೋರಿದ್ದೇವೆ. ಇನ್ನು ಇವರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಫಾಟ್ ಫಾರಂ ಕೊರತೆ ಇದೆ ಎಂದು ರೈಲುಗಳನ್ನು ಓಡಿಸಲು ಆಗುವುದಿಲ್ಲ ಎಂದು ಸಬೂಬು ನೀಡುವುದು ಬೇಡಾ ಎಂದು ನಾವೇ ಒಂದು ಸಲಹೆ ನೀಡಿದ್ದೇವೆ. ಅದೇನೆಂದರೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬೇ ಲೈನ್ ಎನ್ನುವ ವ್ಯವಸ್ಥೆ ಇದೆ. ನೀವು ಒಂದು ವೇಳೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಗೋವಾದ ಮಡಗಾಂವಿಗೆ ರೈಲಿನಲ್ಲಿ ತೆರಳಿದ್ದರೆ ನಿಮಗೆ ಆ ರೈಲು ಯಾವ ಫ್ಲಾಟ್ ಫಾರಂನಲ್ಲಿ ನಿಂತಿರುತ್ತಿತ್ತು ಎಂದು ನಿಮಗೆ ಅರಿವಿರುತ್ತದೆ. ಅದನ್ನು ಬೇ ಲೈನ್ ಎನ್ನುತ್ತಾರೆ. ಅಲ್ಲಿ 21 ಅಥವಾ ಅದಕ್ಕಿಂತ ಹೆಚ್ಚಿನ ಕೋಚುಗಳಿರುವ ದೊಡ್ಡ ರೈಲುಗಳು ನಿಲ್ಲಲು ಸಾಧ್ಯವಿಲ್ಲ. ಅಲ್ಲಿ ಹೆಚ್ಚೆಂದರೆ 10 ಕೋಚ್ ಗಳ ಸಣ್ಣ ರೈಲುಗಳು ತಂಗಬಹುದು. ಈಗ ಇವರು ಫ್ಲಾಟ್ ಫಾರಂ ಇಲ್ಲ ಎಂದು ರೈಲು ಓಡಿಸದೇ ಇರುವ ಬದಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹತ್ತು ಕೋಚುಗಳ ರೈಲು ತಂದರೆ ಇದರಿಂದ ಎಲ್ಲರಿಗೂ ಒಳ್ಳೆಯದು. ಒಂದನೇಯದಾಗಿ ರೈಲ್ವೆ ಇಲಾಖೆಗೆ ಲಾಭ ಆಗಲಿದೆ. ಇನ್ನೊಂದು ಆ ರೈಲು ಕೂಡ ಲಾಭಕ್ಕೆ ಮರಳಿ ದೀರ್ಘ ಲಾಭವನ್ನು ಕಂಡು ಹೆಚ್ಚು ಕಾಲ ಬಾಳಿಕೆ ಬರಲಿದೆ. ಮೂರನೇಯದಾಗಿ ಜನರಿಗೂ ಅಂದರೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಒಟ್ಟಿನಲ್ಲಿ ಒಂದು ರೈಲು ನಮಗೆ ಅನುಕೂಲವಾಗಿದ್ದರೆ ಅದನ್ನು ಹೆಚ್ಚೆಚ್ಚು ಬಳಸುವ ಮೂಲಕ ಉಳಿಸಬೇಕು. ಇನ್ನು ಉಳಿದವರಿಗೆ ಆ ರೈಲಿನ ಮಹತ್ವವನ್ನು ಹೇಳಿದರೆ ಉತ್ತಮ. ಎಲ್ಲದಕ್ಕಿಂತ ಹೆಚ್ಚಾಗಿ ನಾವು ರೈಲನ್ನು ಬಳಸಿದರೆ ಮಾತ್ರ ನಮ್ಮಂತವರ ಪ್ರಯತ್ನ, ಹೋರಾಟ ಸಫಲವಾಗುತ್ತದೆ!
Leave A Reply