ಈ ವರ್ಗಾವಣೆಯ ವಿಷಯದಲ್ಲಿ ಭಾರತೀಯ ಜನತಾ ಪಾರ್ಟಿಗೂ, ಕಾಂಗ್ರೆಸ್ಸಿಗೂ ಏನೂ ವ್ಯತ್ಯಾಸ ಉಳಿದಿಲ್ಲ ಎನ್ನುವುದು ಸ್ಪಷ್ಟವಾದದ್ದು ಐಪಿಎಸ್ ಅಧಿಕಾರಿ ರೂಪಾ ಅವರನ್ನು ಎತ್ತಂಗಡಿ ಮಾಡಿದ ರೀತಿಯನ್ನು ನೋಡಿದಾಗ. ತಮ್ಮ 20 ವರ್ಷದ ಅಧಿಕಾರಾವಧಿಯಲ್ಲಿ 40 ಬಾರಿ ವರ್ಗಾವಣೆ ಆಗಿರುವುದಾಗಿ ರೂಪಾ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಇದ್ದಾಗ ಅದು ಸಹಜ. ಅವರಿಗೆ ಭ್ರಷ್ಟಾಚಾರ ಸಹಿಸದ ಇಂತಹ ಅಧಿಕಾರಿಗಳನ್ನು ಕಂಡರೆ ಆಗುತ್ತಿರಲಿಲ್ಲ. ರೂಪಾ ತಾವು ಯಾವ ಹುದ್ದೆಯಲ್ಲಿದ್ದರೂ ಭ್ರಷ್ಟರಿಗೆ ಸಿಂಹಸ್ವಪ್ನರಾಗಿರುವುದರಿಂದ ಕಾಂಗ್ರೆಸ್ಸಿಗರಿಗೆ ರೂಪಾ ಅಂತವರು ಯಾವತ್ತೂ ಒಂದು ಹೊರೆಯಾಗಿಯೇ ಇದ್ದರು. ಆದರೆ ಪಾರ್ಟಿ ವಿದ್ ಡಿಫರೆನ್ಸ್ ಎಂದು ಘೋಷಣೆ ಕೂಗುತ್ತಾ ಬಿಜೆಪಿ ಬಂತಲ್ಲ, ಆಗಲಾದರೂ ರೂಪಾ ಅವರಿಗೆ ಒಂದು ಸೂಕ್ತ ಸ್ಥಾನಮಾನ ಸಿಗಬೇಕಿತ್ತು. ಇವತ್ತಿನ ಕಾಲದಲ್ಲಿ ದಕ್ಷ, ಭ್ರಷ್ಟವಿರೋಧಿ ಅಧಿಕಾರಿಗಳು ಸಿಗುವುದೇ ಅಪರೂಪ. ಬೆರಳೆಣಿಕೆಯ ಮಂದಿ ಸಿಕ್ಕಿದಾಗ ನಿಜವಾದ ಇಚ್ಚಾಶಕ್ತಿ ಇರುವ ಸರಕಾರಗಳು ಅಂತವರನ್ನು ಹುಡುಕಿ ಆಯಕಟ್ಟಿನ ಸ್ಥಾನಗಳಲ್ಲಿ ನೇಮಿಸುತ್ತವೆ. ಅದು ಸರಕಾರವೊಂದರ ನಿಜವಾದ ಕಮಿಟ್ ಮೆಂಟ್. ಆದರೆ ಬಿಜೆಪಿಯಲ್ಲಿ ಈಗ ಆ ಬದ್ಧತೆ ಕಡಿಮೆಯಾದಂತೆ ಕಾಣುತ್ತಿದೆ. ಬಹುಶ: ಸರಕಾರದ “ಇಂದ್ರಿ”ಯಗಳನ್ನು ಯಾರೋ “ವಿಜಯ” ಸ್ಥಾನದಲ್ಲಿ ಇರುವವರು ನಿಯಂತ್ರಿಸುತ್ತಿದ್ದಾರೆ ಎಂದು ಅನಿಸುತ್ತದೆ. ಅಷ್ಟಕ್ಕೂ ರಾಜ್ಯ ಗೃಹ ಕಾರ್ಯದರ್ಶಿ ಹುದ್ದೆಯಿಂದ ರೂಪಾ ಅವರನ್ನು ಯಾವುದೋ ಕರಕುಶಲ ನಿಗಮಕ್ಕೆ ವರ್ಗಾಯಿಸಲಾಗಿದೆ. ಇದು 2020ರ ಕೊನೆಯ ದಿನ ರಾಜ್ಯ ಸರಕಾರ ಮಾಡಿರುವ ಅತೀ ದೊಡ್ಡ ನಾಚಿಕೆಗೇಡಿನ ಸಂಗತಿ. ಅಷ್ಟಕ್ಕೂ ರೂಪಾ ಮಾಡಿದ್ದ ತಪ್ಪಾದರೂ ಏನು? ಅವರು ಸೇಫ್ ಸಿಟಿ ಪ್ರಾಜೆಕ್ಟ್ ಎನ್ನುವ 619 ಕೋಟಿಯ ಅನುದಾನದಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆಯುತ್ತಿದೆ ಎಂದು ಹಿಂಟ್ ಕೊಟ್ಟಿದ್ದೇ ಕಾರಣ. ಅಷ್ಟಕ್ಕೂ ಅವರು ಯಾರ ಕಡೆ ಬೆರಳು ಮಾಡುತ್ತಿದ್ದದ್ದು, ಕಾಂಗ್ರೆಸ್ ಶಾಸಕಿಯ ಗಂಡನಾಗಿರುವ ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಹೇಮಂತ್ ನಿಂಬಾಲ್ಕರ್ ಅವರ ಮೇಲೆ. ಈಗ ವಿಷಯ ಏನೆಂದರೆ ಆರೋಪ ಮಾಡಿದ ಹಾಗೂ ಆರೋಪ ಎದುರಿಸಿರುವ ಇಬ್ಬರನ್ನೂ ಸರಕಾರ ದೂರದೂರಕ್ಕೆ ಎತ್ತಂಗಡಿ ಮಾಡಿ ಈ ಬಗ್ಗೆ ತನಿಖೆ ಮಾಡಲು ನೇಮಿಸಿದ್ದು ಇದೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಕಮಲಪಂಥ್ ಅವರನ್ನು. ಆಶ್ಚರ್ಯ ಎನೆಂದರೆ ಈ ಕಮಲಪಂಥ್ ಇದೇ ಸೇಫ್ ಸಿಟಿ ಪ್ರಾಜೆಕ್ಟ್ ನ ಮಂಡಳಿಯಲ್ಲಿ ಇದ್ದಾರೆ. ಈಗ ಬೇಲಿ ಮತ್ತು ತೋಳ ಎರಡೂ ಸೇರಿ ಏನೇನೋ ಮೇಯಲು ಹೊರಟಂತೆ ಕಾಣುತ್ತದೆ. ಹಾಗಾದರೆ ಜನರ ತೆರಿಗೆಯ ಹಣಕ್ಕೆ ಏನಾದರೂ ಬೆಲೆ ಇದೆಯಾ? ಇಲ್ಲಿ ಮೀಡಿಯಾಗಳಲ್ಲಿ ಸುದ್ದಿಯಾಯಿತು, ಜನರು ಸೋಶಿಯಲ್ ಮೀಡಿಯಾಗಳಲ್ಲಿ ಮಾತನಾಡಲು ಶುರು ಮಾಡಿದರು ಎನ್ನುವ ಕಾರಣಕ್ಕೆ ಸರಕಾರ ಎತ್ತಂಗಡಿಯ ನಾಟಕ ಮಾಡಿ ವಿಚಾರಣೆಯ ಸಮಿತಿ ರಚಿಸಿ ಕೈತೊಳೆದುಕೊಂಡಿದೆ.
ಒಂದು ವೇಳೆ ಸರಕಾರಕ್ಕೆ ರೂಪಾ ಅವರು ಈ ವಿಷಯವನ್ನು ತಮ್ಮ ಟ್ವಿಟರ್ ನಲ್ಲಿ ಹಾಕುವ ಬದಲು ಸರಕಾರಕ್ಕೆ ಮಾಹಿತಿ ನೀಡಿದ್ದಲ್ಲಿ ಸರಕಾರಕ್ಕೆ ಮುಜುಗರ ಉಂಟಾಗುವುದು ತಪ್ಪುತ್ತಿತ್ತು ಎಂದು ಕೆಲವರ ಅಭಿಪ್ರಾಯ ಇರಬಹುದು. ಒಂದು ಸರಕಾರಿ ಅಧಿಕಾರಿಯಾಗಿದ್ದು, ಗೃಹ ಇಲಾಖೆಯ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿದ್ದು ತಮ್ಮದೇ ಇಲಾಖೆಯ ಅಧಿಕಾರಿಯ ಭ್ರಷ್ಟಾಚಾರದ ವಿಷಯವನ್ನು ಪರೋಕ್ಷವಾಗಿ ಟ್ವಿಟರ್ ನಲ್ಲಿ ಪ್ರಚಾರ ಮಾಡಿದ್ದು ಮೇಲ್ನೋಟಕ್ಕೆ ತಪ್ಪು ಎಂದು ರಾಜಕೀಯ ಪಂಡಿತರಿಗೆ ಅಥವಾ ಸರಕಾರದ ಪರವಾಗಿ ಇರುವವರಿಗೆ ಅನಿಸಬಹುದು. ಆದರೆ ಇದನ್ನು ವರ್ಗಾವಣೆ ಮಾಡುವ ಮೂಲಕ ಪರಿಹರಿಸುವಂತಹ ಕೆಲಸಕ್ಕೆ ಸರಕಾರ ಇಳಿಯಬಾರದು. ಈಗ ಆರೋಪ ಇರುವುದು ಯಾರ ಮೇಲೆ. ಹೇಮಂತ್ ನಿಂಬಾಳ್ಕರ್. ಅವರು ಅದೇ ಸೇಫ್ ಸಿಟಿ ಪ್ರಾಜೆಕ್ಟ್ ನಲ್ಲಿ ಮುಂದುವರೆದರೆ ಸಾಕ್ಷ್ಯ ನಾಶ ಮಾಡಬಹುದು ಎನ್ನುವ ಕಾರಣಕ್ಕೆ ವರ್ಗಾವಣೆ ಮಾಡಿದ್ದರಲ್ಲಿ ಅರ್ಥವಿದೆ. ಆದರೆ ರೂಪಾ ಆರೋಪ ಮಾಡಿದವರು. ಅವರಿಗೆ ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕಾರಣ ಸೂಕ್ತ ದಾಖಲೆಗಳು ಸಿಕ್ಕಿರಬಹುದು. ಅವರಿಗೆ ಟ್ರಾನ್ಸಫರ್ ಮಾಡಿದರೆ ಹೇಮಂತ್ ವಿರುದ್ಧ ಅವರ ಆರೋಪಕ್ಕೆ ಹಿನ್ನಡೆಯಾಗುತ್ತದೆ. ಬಹುಶ: ಸರಕಾರದ ಉದ್ದೇಶ ಕೂಡ ಇದೇ ಇರಬಹುದಾ? ತಮ್ಮ ಎಲ್ಲಾ ಗುಟ್ಟುಗಳನ್ನು ರೂಪಾ ತಿಳಿದು ತಮ್ಮ ವಿರುದ್ಧ ಟೀಕಾಸ್ತ್ರ ಮಾಡುವ ಬದಲು ಯಾವುದೇ ಪ್ರಯೋಜನ ಇಲ್ಲದ ಕರಕುಶಲ ನಿಗಮಕ್ಕೆ ಕಳುಹಿಸೋಣ ಎಂದು ಸರಕಾರದಲ್ಲಿ ಇರುವವರು ನಿರ್ಧಾರ ಮಾಡಿದ್ರಾ? ಒಂದು ವೇಳೆ ಯಾವುದೇ ಸರಕಾರ ಪ್ರಾಮಾಣಿಕ ಅಧಿಕಾರಿಯ ಕೂಗನ್ನು ಕೇಳುವ ಸಹನೆ ಇಟ್ಟುಕೊಂಡಿದ್ದರೆ ಆಗ ರೂಪಾನಂತವರು ಟ್ವಿಟರ್ ನಲ್ಲಿ ಬರೆಯುವ ಅಗತ್ಯ ಇರುವುದಿಲ್ಲ. ಅದನ್ನು ಇಟ್ಟುಕೊಂಡು ಮಾಧ್ಯಮಗಳು ಚರ್ಚೆ ಮಾಡುವ ಅಗತ್ಯ ಕೂಡ ಬರುವುದಿಲ್ಲ. ಆದರೆ ಯಾವಾಗ ಟ್ವಿಟರ್ ನಿಂದಲೇ ವಿಧಾನಸಭೆಯ ಮೂರನೇ ಮಹಡಿಯಲ್ಲಿ ಕುಳಿತಿರುವ ಕಿವಿ ಕೇಳಿಸದಿರುವ ಮಹಾನುಭಾವರಿಗೆ ತಲುಪಬೇಕಾದ ಅನಿವಾರ್ಯತೆ ಬಂದಾಗ ಹೀಗೆ ಮೀಡಿಯಾ ಸೇವಿ ಅಧಿಕಾರಿಗಳು ಇಂತಹ ಹೆಜ್ಜೆ ಇಡುತ್ತಾರೆ. ಈಗಲೂ ಕಾಲ ಮಿಂಚಿಲ್ಲ. ಗೃಹ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಪಟಾಲಂ ರೂಪಾ ಅವರನ್ನು ಕರೆದು ಪೂರ್ಣ ಮಾಹಿತಿಯನ್ನು ಪಡೆಯಬೇಕು. ಆ ಬಳಿಕ ಹೇಮಂತ್ ನಿಂಬಾಲ್ಕರ್ ಅವರನ್ನು ಕರೆದು ಅವರು ಅಧಿಕಾರದ ಪರಿಧಿಯಲ್ಲಿಯೇ ಟೆಂಡರ್ ಕರೆದಿದ್ದಾರಾ, ಟೆಂಡರ್ ಸಿಕ್ಕಿದವರು ಪಾರದರ್ಶಕವಾಗಿಯೇ ಪಡೆದುಕೊಂಡಿದ್ದಾರಾ ಎಂದು ಪರಿಶೀಲನೆ ಮಾಡಿದರೆ ಸಾಕು. ಇದೆಲ್ಲಾ ತಿಂಗಳುಗಟ್ಟಲೆ ತಗಲುವ ವಿಷಯ ಅಲ್ಲ. ಆದರೆ ಇಚ್ಚಾಶಕ್ತಿ ಬೇಕು. ತಾವು ಕೂಡ ಶುದ್ಧಹಸ್ತರು ಎಂದು ಸರಕಾರದಲ್ಲಿ ಕುಳಿತವರಿಗೆ ಗ್ಯಾರಂಟಿ ಇರಬೇಕು. ಆದರೆ ನಾವು ಮೇಲಿನವರಿಗೆ ಕೊಡಲು ಇದೆ ಎಂದೇ ಹೆಚ್ಚಿನ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಕೈ ಒಡ್ಡುತ್ತಾರೆ. ಇಲ್ಲಿಯೂ ಅದೇ ನಿಜವಾಗಿದ್ದಲ್ಲಿ ಯಾವ ಭರವಸೆ ಕೂಡ ಈ ಸರಕಾರದ ವಿಷಯದಲ್ಲಿ ಇಟ್ಟುಕೊಳ್ಳುವುದು ಬೇಡಾ!
Leave A Reply