ಮೂರು ಲಕ್ಷದ ಬಾಂಡ್ ಜೊತೆ ಅರ್ಚಕರಿಗೆ ಒಳ್ಳೆಯ ಸಂಬಳ ನಿಗದಿಪಡಿಸಿ ಸಿಎಂ!!
ಬ್ರಾಹ್ಮಣರಲ್ಲಿರುವ ಪ್ರಮುಖ ಕುಲಕಸುಬು ಪೌರೋಹಿತ್ಯ ಮಾಡಿಕೊಂಡು ಬರುತ್ತಿರುವ, ತಲೆತಲಾಂತರದಿಂದ ಹಿರಿಯರ ವೃತ್ತಿಯನ್ನೇ ನಡೆಸಿಕೊಂಡು ಬರುತ್ತಿರುವ ಪುರೋಹಿತರಿಗೆ, ಅರ್ಚಕರಿಗೆ ವಧು ಸಿಗುವುದೇ ಒಂದು ಸವಾಲು. ಹುಡುಗ ಪುರೋಹಿತನಾ ಹಾಗಾದರೆ ಯೋಚನೆ ಮಾಡಿ ಹೇಳ್ತೇವೆ ಎಂದು ಹುಡುಗಿಯ ಮನೆಯವರೇ ಹೇಳಿಬಿಡುತ್ತಾರೆ. ಅದಕ್ಕೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯೋಚಿಸಿದ್ದೇನೆಂದರೆ ಅರ್ಚಕರು, ಪುರೋಹಿತರು ಆರ್ಥಿಕವಾಗಿ ದುರ್ಬಲರಾಗಿರುವುದರಿಂದ ಅವರನ್ನು ವರಿಸಿ ಜೀವನದಲ್ಲಿ ಆರ್ಥಿಕ ಭದ್ರತೆ ಸಿಗುವುದು ಕಷ್ಟ ಎಂದು ವಧುವಿನ ಕಡೆಯವರು ಯೋಚಿಸಿ ಹುಡುಗಿ ಕೊಡಲು ಹಿಂದು ಮುಂದೆ ನೋಡುತ್ತಾರೆ. ಆದ್ದರಿಂದ ವಧುವಿಗೆ ಭದ್ರತೆಯಾಗಿ ಮೂರು ಲಕ್ಷ ರೂಪಾಯಿಯ ಬಾಂಡ್ ಕೊಡೋಣ, ಅದಕ್ಕಾದರೂ ಆ ಹುಡುಗಿ ಅರ್ಚಕರನ್ನು ಮದುವೆಯಾಗಲು ಧೈರ್ಯ ಮಾಡಿಯಾಳು. ಬಹುಶ: ರಾಜ್ಯದಲ್ಲಿ ಹೆಚ್ಚೆಂದರೆ ಐದು ಶೇಕಡಾದಷ್ಟು ಇರುವ ಬ್ರಾಹ್ಮಣರ ಮತಗಳನ್ನು ಲೆಕ್ಕ ಹಾಕಿ ಸಿಎಂ ಯಡಿಯೂರಪ್ಪನವರು ಅದಕ್ಕೆ ಓಕೆ ಎಂದು ಹೇಳಿದ್ದಾರೆ. ಸದ್ಯ ಅದಕ್ಕೆ ಚಾಲನೆ ಕೂಡ ಸಿಕ್ಕಿದೆ.
ನಗರದಲ್ಲಿ ಪುರೋಹಿತ ವೃತ್ತಿ ಮಾಡುತ್ತಿರುವ ಅರ್ಚಕರಿಗೆ ಸಾಮಾನ್ಯವಾಗಿ ಅಂತಹ ಆರ್ಥಿಕ ಸಂಕಟಗಳು ಇಲ್ಲ. ಗಣಹೋಮ, ಶಾಂತಿ, ಗೃಹಪ್ರವೇಶ, ಮದುವೆ, ಮುಂಜಿ, ತಿಥಿಯಿಂದ ಹಿಡಿದು ಪ್ರತಿಯೊಂದಕ್ಕೂ ಕೈ ತುಂಬಾ ಕಾಸು ಸಿಗುವುದರಿಂದ ನಗರದ ಬಹುತೇಕ ಪುರೋಹಿತರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಕಡಿಮೆ ಇದ್ದ ಕಡೆ, ಸಣ್ಣ ದೇವಾಲಯಗಳನ್ನು ನಡೆಸಿಕೊಂಡು ಬರುತ್ತಿರುವ ಅರ್ಚಕರಿಗೆ ಈ ಯೋಜನೆಯ ಲಾಭ ಸಿಗಬೇಕಾಗಿರುವುದು ಅತ್ಯವಶ್ಯಕ. ಆದರೆ ಮೂರು ವರ್ಷಗಳ ನಂತರ ಸಿಗುವ ಮೂರು ಲಕ್ಷದ ಬಾಂಡ್ ಹಿಡಿದು ಯುವತಿಯರು ಮದುವೆ ಆಗಲು ಎಷ್ಟು ಧೈರ್ಯ ಮಾಡಿಯಾರು? ಸರಿಯಾಗಿ ನೋಡಿದರೆ ಗ್ರಾಮೀಣ ಭಾಗದಲ್ಲಿ ಪೌರೋಹಿತ್ಯದೊಂದಿಗೆ ಕೃಷಿಯನ್ನು ಕೂಡ ನಡೆಸಿಕೊಂಡು ಹೋಗುವ ಮನೆತನಗಳಿವೆ. ಅವರಿಗೆ ಸಾಮಾನ್ಯವಾಗಿ ದಿನ ದೂಡಲು ಕಷ್ಟ ಎನಿಸುವಂತಹ ಪರಿಸ್ಥಿತಿ ಇಲ್ಲ.
ಆದರೆ ಹಳ್ಳಿಗಳಲ್ಲಿ ಪೌರೋಹಿತ್ಯ, ಕೃಷಿ ಮಾಡುವ, ಸಾಂಪ್ರದಾಯಿಕ ಉಡುಪು ಧರಿಸುವ ಯುವಕರನ್ನು ಈಗಿನ ಹೆಚ್ಚು ಕಲಿತ ತಲೆಮಾರಿನ, ಆಧುನಿಕ ಉಡುಪು ಧರಿಸುವ ಬ್ರಾಹ್ಮಣ ಯುವತಿಯರೇ ಮದುವೆ ಆಗಲು ಒಪ್ಪಲ್ಲ. ಹಳ್ಳಿ ಯಾಕೆ ಬೇಕು, ಪಟ್ಟಣದಲ್ಲಿ ಗಮ್ಮತ್, ನಾವು ಕಲಿತ ವಿದ್ಯೆ ಕೂಡ ಉಪಯೋಗ ಬೀಳುತ್ತದೆ. ನಾಲ್ಕು ಕಾಸು ದುಡಿಯಬಹುದು. ಅರ್ಚಕ, ಪುರೋಹಿತನಾದರೂ ನಗರದಲ್ಲಿ ಅನುಕೂಲವಿದೆ ಎಂದು ಬ್ರಾಹ್ಮಣ ವಧುಗಳೇ ನಿರ್ಧರಿಸಿಬಿಟ್ಟಿರುತ್ತಾರೆ. ಆದ್ದರಿಂದ ಸರಕಾರದ ದೂರದೃಷ್ಟಿಯ ಯೋಜನೆ ಹಳ್ಳಿಗಳಲ್ಲಿ ಬಳಕೆಯಾಗದೇ, ನಗರಗಳಿಗೆ ಕೊಡಲಾಗದೇ ಅತಂತ್ರ ಸ್ಥಿತಿಗೆ ತಲುಪಲಿದೆ. ಅದರ ಬದಲು ನಾನು ಹೇಳುವುದೇನೆಂದರೆ ಧಣಿ ಕೊಟ್ಟರೆ ಮನೆತನಕ, ದೇವರು ಕೊಟ್ಟರೆ ಕೊನೆತನಕ ಎನ್ನುವ ಗಾದೆಯಂತೆ, ಮೂರು ಲಕ್ಷದ ಬಾಂಡ್ ಕೊಟ್ಟು ಕೈ ತೊಳೆಯುವ ಬದಲು ಅದೇ ಸಣ್ಣ ಪುಟ್ಟ ದೇವಾಲಯಗಳನ್ನು ನಡೆಸಿಕೊಂಡು ಬರುತ್ತಿರುವ ಅರ್ಚಕರಿಗೆ ಪ್ರತಿ ತಿಂಗಳು ಇಂತಿಷ್ಟು ಎಂದು ಸಂಬಳ ನಿಗದಿಪಡಿಸಿ. ಅದು ಶಾಶ್ವತ. ಈಗ ಸರಕಾರ ಮುಜುರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇವಾಲಯಗಳಿಗೆ ಕೆಲಸ ಮಾಡುವ ಅರ್ಚಕರಿಗೆ ಸಂಬಳ ಕೊಡುತ್ತಿದೆಯಲ್ಲ, ಅದು ಎಲ್ಲಾ ದೇವಾಲಯಗಳಿಗೂ ವಿಸ್ತರಿಸಿ. ಬೇಕಾದರೆ ನಗರದಲ್ಲಿರುವ ಅನುಕೂಲಸ್ಥ ದೇವಾಲಯಗಳ ಅರ್ಚಕರಿಗೆ ಕೊಡದೇ ಇದ್ದರೆ ತೊಂದರೆ ಇಲ್ಲ. ಆದರೆ ಹಳ್ಳಿಗಳಲ್ಲಿ ವ್ಯವಸ್ಥೆ ಮಾಡಿ. ಅದರಿಂದ ಹಳ್ಳಿಗಳ ದೇವಾಲಯಗಳ ಅರ್ಚಕರು ಕೂಡ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗುತ್ತದೆ. ಮಸೀದಿಗಳಲ್ಲಿರುವವರಿಗೆ ಸರಕಾರ ಇಂತಿಷ್ಟು ಹಣ ಸಂಬಳದ ರೂಪದಲ್ಲಿ ನೀಡುತ್ತದೆಯಲ್ಲ, ಅದೇನು ಮಸೀದಿಗಳು ಮುಜುರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆಯಾ? ಅವರಿಗೆ ಕೊಡುವ ಹಣ ನಮ್ಮ ಸಮಾಜದ್ದು. ಹಾಗಿರುವಾಗ ಅವರಿಗೆ ಕೊಡಲು ನಿಮಗೆ ಕೈ ಇರುವಾಗ ನಮ್ಮದೇ ದೇವಾಲಯಗಳಿಗೆ ಕೊಡಲು ಯಾಕೆ ಹಿಂಜರಿಕೆ?
ಇನ್ನು ಅರ್ಚಕರ, ಪುರೋಹಿತರ ಮನೆಗಳಲ್ಲಿ ಕೆಲಸ ಜಾಸ್ತಿ ಇದೆ ಎಂದು ಹೆಣ್ಣುಮಕ್ಕಳು ಮದುವೆಯಾಗಲು ಒಪ್ಪಲ್ಲ ಎನ್ನುವ ಮಾತಿದೆ. ಯಾವುದೇ ಒಂದು ವ್ಯವಸ್ಥೆ ನಾವು ಮಾಡಿಕೊಂಡ ರೀತಿಯಲ್ಲಿ ಇರುತ್ತದೆ. ಗಂಡನಿಗೆ ಕೆಲಸದಲ್ಲಿ ನೆರವಾಗುವ ಎಷ್ಟೋ ಹೆಂಡತಿಯರಿದ್ದಾರೆ. ಹಾಗಿರುವಾಗ ಪುರೋಹಿತರ ಮನೆಗಳಲ್ಲಿ ನೈವೇದ್ಯ ತಯಾರಿಸಲು ನೆರವಾದರೆ ಅದರಿಂದ ಹೆಂಡತಿ ಕಳೆದುಕೊಳ್ಳುವುದು ಏನಿದೆ? ಪುರೋಹಿತರಿಗೆ ಸರಿಯಾಗಿ ನೋಡಿದರೆ ಹಣ, ಗೌರವ, ಸ್ಥಾನಮಾನ ಎಲ್ಲವೂ ಸಿಗುತ್ತದೆ. ಅದರೊಂದಿಗೆ ಅರ್ಚಕರ ಪತ್ನಿ ಎಂದರೆ ಅವರಿಗೂ ವಿಶೇಷವಾದ ಸತ್ಕಾರವನ್ನು ಮಾಡಲಾಗುತ್ತದೆ. ಅರ್ಚಕರ ಪತ್ನಿಯ ಕಾಲಿಗೆ ನಮಸ್ಕರಿಸುವ ಸಂಪ್ರದಾಯವಿದೆ. ಇನ್ನು ಆಧುನಿಕ ಉಡುಗೆ ಹಾಕಿ, ಮೀನೂಟ ಇರುವ ಹೋಟೇಲಿಗೆ ಹೋಗಿ ಬಂದರೆ ಮಾತ್ರ ಅಂತಸ್ತು ಹೆಚ್ಚಾಗುವುದು ಎಂದು ಯಾವುದಾದರೂ ಹೆಣ್ಣುಮಕ್ಕಳು ಅರಿತರೆ ಅದು ಶುದ್ಧ ಮೂರ್ಖತನ. ಎಲ್ಲವೂ ಬ್ರಾಹ್ಮಣ ತಾಯಿ ತಂದೆಯ ಕೈಯಲ್ಲಿದೆ. ನಮ್ಮ ಸನಾತನ ಸಂಸ್ಕತಿಯನ್ನು ಮಗಳಿಗೆ ಹೇಳಿ, ಅವಳಿಗೆ ಯೋಗ್ಯ ಮಾರ್ಗದಲ್ಲಿ ಕರೆದುಕೊಂಡು ಹೋಗಿ ಅವಳು ಹುಟ್ಟಿದ, ಮದುವೆಯಾದ ಮನೆಗಳಿಗೆ ಕೀರ್ತಿ ತರಬೇಕಾದರೆ ಅವಳಿಗೆ ಯೋಗ್ಯ ಸಂಸ್ಕಾರ ನೀಡಬೇಕು. ಈಗಿನ ಹೆಣ್ಣು ಮಕ್ಕಳು ಎಲ್ಲಿ ಕೇಳುತ್ತಾರೆ ಎಂದು ಅಂದುಕೊಂಡರೋ ಯಡಿಯೂರಪ್ಪ ಮೂರು ಅಲ್ಲ ಹತ್ತು ಲಕ್ಷ ಕೊಡುತ್ತೇನೆ ಎಂದರೂ ಮದುವೆಯಾಗಲು ಬ್ರಾಹ್ಮಣ ವಧುಗಳು ಮುಂದೆ ಬರಲ್ಲ!!
Leave A Reply