ರಥೋತ್ಸವದ ಸಂಭ್ರಮದಲ್ಲಿ ಹೆರಿಟೆಜ್ ರಸ್ತೆಯ ಚೆಂದ ನೋಡಿದ್ದೀರಾ?
ಹೆರಿಟೇಜ್ ರಸ್ತೆ ಎನ್ನುವ ಶಬ್ದವೇ ಕೇಳಲು ಚೆಂದ. ಅದನ್ನು ನೋಡುವುದು ಇನ್ನು ಚೆಂದ. ಅಂತಹ ಒಂದು ರಸ್ತೆ ಮಂಗಳೂರಿನ ಹೃದಯಭಾಗದಲ್ಲಿ ಆಗುತ್ತಿದೆ ಎಂದು ಗೊತ್ತಾದಾಗ ಆ ಕುತೂಹಲವೇ ಬೇರೆ. ಹೌದು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶರವು ಗಣಪತಿ ದೇವಸ್ಥಾನದಿಂದ ರಥಬೀದಿ ಜಂಕ್ಷನ್ ತನಕದ ರಸ್ತೆಯನ್ನು ಅಭಿವೃದ್ಧಿ ಮಾಡಿ ಹೆರಿಟೇಜ್ ರಸ್ತೆಯನ್ನಾಗಿ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಾಳಿಕಾಂಬ ದೇವಸ್ಥಾನದ ತನಕದ ರಸ್ತೆಯನ್ನು ಟೆಂಪಲ್ ವ್ಯೂ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಇಂತಹ ಒಂದು ಕಲ್ಪನೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಳವಡಿಸಲಾಗುತ್ತಿದೆ. ಇದರ ಒಂದು ಸಣ್ಣ ಝಲಕ್ ನಿಮಗೆ ಕೊಡುತ್ತೇನೆ. ನೀವು ಇವತ್ತು ರಥಬೀದಿ ಜಂಕ್ಷನ್, ಮಹಾಮಾಯ ದೇವಸ್ಥಾನದಿಂದ ಶ್ರೀರಾಮ ಮಂದಿರದ ತನಕ ಅಳವಡಿಸಿರುವ ಬೀದಿ ದೀಪಗಳನ್ನು ನೋಡಬಹುದು. ಇದು ರಾತ್ರಿ ಆನ್ ಆದಾಗ ಅಪ್ಪಟ ಡೇ ಅಂಡ್ ನೈಟ್ ಕ್ರಿಕೆಟ್ ಮ್ಯಾಚಿನ ಮೈದಾನದಂತೆ ರಸ್ತೆ ಕಂಗೊಳಿಸುತ್ತದೆ.
ನಾನು ಪೋಸ್ಟ್ ಮಾಡಿದ ಫೋಟೋಗಳನ್ನು ನೀವು ನೋಡಿರಬಹುದು. ಈ ವಿದ್ಯುತ್ ದೀಪಗಳನ್ನು ನೋಡುವಾಗ ಇದನ್ನು ನಾವು ಎಲ್ಲಿಯೋ ಸಣ್ಣವರಿದ್ದಾಗ ಮನೆಯಲ್ಲಿಯೋ ಅಥವಾ ಅಜ್ಜಿಮನೆಯಲ್ಲಿಯೋ ಅಥವಾ ಯಾವುದಾದರೂ ಗೂಡಂಗಡಿಯಲ್ಲಿ ನೋಡಿದ್ದೇವಲ್ಲ ಎಂದು ಅನಿಸದೇ ಇರುವುದಿಲ್ಲ. ಹೌದು. ಹೆರಿಟೇಜ್ ಎಂದು ಹೆಸರಿಟ್ಟ ಮೇಲೆ ರಸ್ತೆಯಲ್ಲಿ ಅಳವಡಿಸಿದ ಬೀದಿ ದೀಪಗಳು ಕೂಡ ಹಾಗೆ ಇರಬೇಕಲ್ಲ. ಒಂದು ರೀತಿಯಲ್ಲಿ ಹಳೆ ಸೂಪಿನ ಬೌಲ್ ಗಳನ್ನು ಉಲ್ಟಾ ಹಾಕಿದ ರೀತಿಯಲ್ಲಿ ಇದರ ವಿನ್ಯಾಸ ಇದೆ. ಇಂತಹ ಸುಮಾರು 85 ಹೆರಿಟೇಜ್ ದೀಪಗಳನ್ನು ರಥಬೀದಿ ಆಸುಪಾಸಿನಲ್ಲಿರುವ ರಸ್ತೆಗಳಲ್ಲಿ ಅಳವಡಿಸಲಾಗಿದೆ. ಆದ್ದರಿಂದ ನಾನು ಇದು ಅನುಷ್ಟಾನಗೊಳ್ಳಲು ಕಾರಣೀಕತೃರಾಗಿರುವವರಿಗೆ ಧನ್ಯವಾದ ಅರ್ಪಿಸಬೇಕು. ಈ ಬಗ್ಗೆ ಒಂದು ಸಣ್ಣ ಹಿನ್ನಲೆಯನ್ನು ನಿಮಗೆ ತಿಳಿಸಲೇಬೇಕು. ಮಂಗಳೂರು ಸ್ಮಾರ್ಟ್ ಸಿಟಿಯ ಯೋಜನೆಗಳು ಕಾನೂನಿನ ಅಡಕತ್ತರಿಯಲ್ಲಿ ಸಿಲುಕಿ ಕಾಮಗಾರಿಗಳಿಗೆ ತಡೆಯಾಜ್ಞೆ ಬಂದಿರುವುದು ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿರುವ ವಿಷಯ.
ಮಂಗಳೂರಿನ ಅಭಿವೃದ್ಧಿ ಕಾಮಗಾರಿಯ ಡೆಬ್ರೀಸ್ ಎಲ್ಲಿ ಹಾಕುತ್ತೀರಿ ಎಂದು ನ್ಯಾಯಾಲಯ ಒಂದು ವಾಕ್ಯದಲ್ಲಿ ಕೇಳಿದ ಪ್ರಶ್ನೆಗೆ ಮಾಹಿತಿಯ ಕೊರತೆಯಿಂದ ಆವತ್ತು ಪಾಲಿಕೆಯ ಕಮೀಷನರ್ ಸೂಕ್ತ ಉತ್ತರ ಕೊಡದೇ ಇದ್ದಾಗ ನ್ಯಾಯಾಲಯದಿಂದ ಕಾಮಗಾರಿಗಳಿಗೆ ತಡೆಯಾಜ್ಞೆ ಸಿಕ್ಕಿದೆ. ಅದರಂತೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಸದ್ಯ ನಿಂತಿವೆ. ಅದರಲ್ಲಿ ರಥಬೀದಿ ಕೂಡ ಸೇರುವಂತಾಯಿತು. ಪರಿಸ್ಥಿತಿ ಹೀಗಿರುವಾಗ ಇವತ್ತಿನಿಂದ ಕೊಡಿಯಾಲ್ ತೇರು ಶುರುವಾಗುತ್ತಿದೆ. ಕೊಡಿಯಾಲ್ ತೇರು ಎಂದರೆ ರಥಬೀದಿಯಲ್ಲಿ ಒಂದು ವಾರದಲ್ಲಿ ಕನಿಷ್ಟ 25 ಸಾವಿರದಿಂದ 30 ಸಾವಿರದವರೆಗೆ ಜನ ಸೇರುತ್ತಾರೆ. ಹೀಗಿರುವಾಗ ಕಾಮಗಾರಿ ನಿಂತಿರುವಾಗ ಡ್ರೈನೇಜ್, ಮ್ಯಾನ್ ಹೋಲ್ ಒಪನ್ ಆಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದವು. ಅದರೊಂದಿಗೆ ಬೀದಿದೀಪ ಕೂಡ ಇಲ್ಲದೆ ಪರಿಸ್ಥಿತಿ ಶೋಚನೀಯವಾಗಿತ್ತು. ಇಷ್ಟು ದೊಡ್ಡ ಜಾತ್ರೆಯಾಗುವಾಗ ಅಲ್ಲಿ ರಸ್ತೆಯಲ್ಲಿ ಬೀದಿದೀಪ ಇಲ್ಲದಿದ್ದರೆ ಆಗುತ್ತಾ? ಇಂತಹ ಒಂದು ಸಂದರ್ಭದಲ್ಲಿ ಜನಪ್ರತಿನಿಧಿಯೊಬ್ಬರ ನಿಜವಾದ ಸಾಮರ್ತ್ಯ ಬೆಳಕಿಗೆ ಬರುತ್ತದೆ. ಈ ಭಾಗದ ಶಾಸಕರಾದ ವೇದವ್ಯಾಸ ಕಾಮತ್ ಅವರು ಈ ವಿಷಯದಲ್ಲಿ ಒಂದು ಕ್ಷಣವೂ ತಡ ಮಾಡಲಿಲ್ಲ. ತಕ್ಷಣ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರನ್ನು ಭೇಟಿಯಾಗಿ ಈ ಉತ್ಸವದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಮನಸ್ಸಿಗೆ ಮುಟ್ಟುವಂತೆ ವಿವರಿಸಿದರು. ವೇದವ್ಯಾಸ ಕಾಮತ್ ಒಂದು ಕೆಲಸಕ್ಕೆ ಕೈ ಹಾಕಿದರೆ ಅದು ಎದುರಿನವರಿಗೆ ಮನವರಿಕೆ ಆಗುವ ತನಕ ಬಿಡುವುದಿಲ್ಲ. ವಿಷಯ ಅರಿತುಕೊಂಡ ಜಿಲ್ಲಾಧಿಕಾರಿಯವರು ಆ ಬಳಿಕ ಟ್ರಾಫಿಕ್ ಡಿಸಿಪಿ, ಪಾಲಿಕೆಯ ಕಮೀಷನರ್ ಹಾಗೂ ಎಡೋಂಮೆಂಟ್ ಎಸಿಯವರನ್ನು ಕರೆದು ಅವರಿಗೆ ಈ ಬಗ್ಗೆ ಕೂಲಂಕೂಶವಾಗಿ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ಅವರು ವರದಿ ನೀಡಿದರು. ಆದರೆ ಇಲ್ಲಿ ಆಗಬೇಕಾದ ಕಾರ್ಯಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಲಾಗುವುದಿಲ್ಲ. ಏಕೆಂದರೆ ಪ್ರಕರಣ ನ್ಯಾಯಾಲಯದಲ್ಲಿದೆ. ಆದ್ದರಿಂದ ಈ ಯೋಜನೆಗಳನ್ನು ಪಾಲಿಕೆಯ ಕಡೆಯಿಂದ ಮಾಡಲು ಅವರು ಆದೇಶ ನೀಡಿದರು. ಜಿಲ್ಲಾಧಿಕಾರಿಯವರ ಆದೇಶ ಬರುತ್ತಿದ್ದಂತೆ ಸಮರೋಪಾದಿಯಲ್ಲಿ ಕೆಲಸ ಆರಂಭಗೊಂಡು ಮುಕ್ತಾಯವಾಗಿದೆ. ಇಲ್ಲಿ ಇರುವ ಇನ್ನೊಂದು ವಿಶೇಷವೆನೆಂದರೆ ಇಲ್ಲಿ ವಿದ್ಯುತ್ ವೈಯರ್ ಗಳು ರಸ್ತೆಯ ಅಡಿಯಲ್ಲಿ ಇರುತ್ತವೆ ವಿನ: ಲೈಟ್ ಕಂಬದಿಂದ ಕಂಬಕ್ಕೆ ಇರುವುದಿಲ್ಲ. ಹಿಂದೆ ನಮ್ಮ ಮನೆಗಳಿಗೆ ವಿದ್ಯುತ್ ತಂತಿಗಳನ್ನು ಎಳೆಯಲು ಹತ್ತಿರದಲ್ಲಿಯೇ ಇರುವ ವಿದ್ಯುತ್ ಕಂಬಗಳನ್ನು ಬಳಸಲಾಗುತ್ತಿತ್ತು. ಈಗ ಹಾಗಲ್ಲ. ರಸ್ತೆಯ ಅಡಿಯಲ್ಲಿಯೇ ಎಲ್ಲವೂ ಯೋಜಿತಬದ್ಧವಾಗಿ ನಡೆಯುತ್ತದೆ. ಒಟ್ಟಿನಲ್ಲಿ ರಥೋತ್ಸವದ ಮೊದಲು ಜನರ ಅನುಕೂಲತೆಗಾಗಿ ಆಗಬೇಕಾದ ಕಾರ್ಯಗಳನ್ನು ಶಾಸಕ ವೇದವ್ಯಾಸ ಕಾಮತ್ ಸತತ ಪ್ರಯತ್ನದಿಂದ ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ಈ ಕಾರ್ಯ ಸುಗಮವಾಗಿ ನಡೆಯಲು ಸೂಕ್ತ ಕ್ರಮ ಕೈಗೊಂಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪಾಲಿಕೆಯ ಕಮೀಷನರ್ ಅಕ್ಷಯ್ ಶ್ರೀಧರ್, ಎಂಡೋಮೆಂಟ್ ಎಸಿ ವೇಂಕಟೇಶ್ ಎಲ್ಲರಿಗೂ ನಾನು ವೈಯಕ್ತಿಕ ನೆಲೆಯಾಗಿ, ಆ ರಸ್ತೆಯನ್ನು ನಿತ್ಯ ಉಪಯೋಗಿಸುವವನಾಗಿ ಧನ್ಯವಾದ ಅರ್ಪಿಸುತ್ತೇನೆ. ಇನ್ನು ಈ ಕೆಲಸವನ್ನು ಕ್ಷಿಪ್ತವಾಗಿ ಮಾಡಿಕೊಟ್ಟಿರುವ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಜನರು, ಈ ರಥೋತ್ಸವದಲ್ಲಿ ಭಾಗವಹಿಸುವ ಭಕ್ತರು ಕೂಡ ಋಣಿಯಾಗಿರುತ್ತಾರೆ. ಅದರೊಂದಿಗೆ ಇದೇ ವೇಗವನ್ನು ತಮ್ಮ ವಿಧಾನಸಭಾ ಕ್ಷೇತ್ರದ ಬೇರೆ ಕಡೆಗಳಲ್ಲಿಯೂ ಅವರು ಮಾಡುವಂತಾಗಲಿ ಅವರ ಕ್ಷೇತ್ರದ ನಾಗರಿಕರ ಅಪೇಕ್ಷೆ!!
Leave A Reply