ಮನ್ ಕಿ ಬಾತ್ ನಲ್ಲಿ ಅಡುಗೆ ಅನಿಲದ ರೇಟ್ ಬಗ್ಗೆ ಮೋದಿ ಮಾತನಾಡಲಿ!!

ಕಷ್ಟವೇ ಇಲ್ಲದಿದ್ದರೆ ಮನುಷ್ಯ ಭಗವಂತನನ್ನು ಕೂಡ ಮರೆಯುತ್ತಾನೆ ಎನ್ನುತ್ತಾರೆ ತಿಳಿದವರು. ಹಾಗೆ ಸಮಸ್ಯೆಗಳೇ ಇಲ್ಲದಿದ್ದರೆ ರಾಜನಿಗೆ ಏನು ಮಹತ್ವ. ಮೋದಿ ಈಗ ಅದನ್ನೇ ಪಾಲಿಸುತ್ತಿದ್ದಾರಾ? ಪೆಟ್ರೋಲ್, ಡಿಸೀಲ್, ಗ್ಯಾಸಿನ ದರವನ್ನು ನೋಡಿದರೆ ಅದು ಇದೇ ಪ್ರಮಾಣದಲ್ಲಿ ಮುಂದಿನ ಲೋಕಸಭಾ ಚುನಾವಣೆ ತನಕ ಮುಂದುವರೆದರೆ ನಂತರ ಯಾವ ರಾಮ ಮಂದಿರವನ್ನು ತಂದು ಇಟ್ಟರೂ ಮಧ್ಯಮ ವರ್ಗದ ಮತದಾರ ಭಾರತೀಯ ಜನತಾ ಪಾರ್ಟಿಗೆ ಮತ ಕೊಡುವುದಿಲ್ಲ ಎಂದು ಗೊತ್ತಿಲ್ಲದಷ್ಟು ದಡ್ಡರಲ್ಲ ನಮ್ಮ ವಿಶ್ವಗುರು ಮೋದಿ. ಆದ್ದರಿಂದ ಅವರ ತಲೆಯಲ್ಲಿ ಏನೋ ತಿರುಗುತ್ತಿದೆ ಎನ್ನುವುದು ಮಾತ್ರ ಸತ್ಯ. ಅವರು ಜನಸಾಮಾನ್ಯರ ಎದುರು ಬೆಲೆಯೇರಿಕೆಯಂತಹ ಪೆಡಂಭೂತವನ್ನು ಸೃಷ್ಟಿಸಿ ಇನ್ನೇನೂ ಎಲ್ಲರೂ ಛೀ, ಥೂ ಎಂದು ಎನ್ನಬೇಕೆನ್ನುವಷ್ಟರಲ್ಲಿ ತಮ್ಮ ಮತದಂಡದಿಂದ ಪವಾಡ ಸೃಷ್ಟಿಸಿ ವಾ ಮೋದಿ ವಾ ಎಂದು ಹೇಳುವಂತಾಗಲಿ ಎಂದು ಅವರ ಅಪ್ಪಟ ಬೆಂಬಲಿಗರು ಕೂಡ ಆಶಿಸುತ್ತಿದ್ದಾರಾ? ಯಾಕೆಂದರೆ ಏರುತ್ತಿರುವ ಅಡುಗೆ ಅನಿಲದ ದರವನ್ನು ನೋಡಿ ಮಧ್ಯಮ ವರ್ಗದ ಗೃಹಿಣಿಯರು, ಖಾಸಗಿ ಕ್ಷೇತ್ರದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಮನೆಗೆ ಹೆಗಲು ಕೊಡುತ್ತಿರುವ ಮಹಿಳಾ ಉದ್ಯೋಗಿಗಳು ಬೆಚ್ಚಿ ಬಿದ್ದಿದ್ದಾರೆ. ನಿನ್ನೆ ತನಕ ಸಬ್ಸಿಡಿ ಗ್ಯಾಸಿನ ಬೆಲೆ ಸಿಲಿಂಡರಿಗೆ 820 ಇತ್ತು. ಐವತ್ತು ಪೈಸೆ ಹೆಚ್ಚು ಕಡಿಮೆ ಇರಬಹುದು. ಆದರೆ ಆರು ನೂರು ಕೊಟ್ಟು ಸಿಲೆಂಡರ್ ಖರೀದಿಸಿ ನೂರೈವತ್ತು, ನೂರೆಂಬತ್ತು ಸಬ್ಸಿಡಿ ರೂಪದಲ್ಲಿ ಖಾತೆಗೆ ಬರುತ್ತಿದ್ದಾಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಮಹಿಳೆಯರು ಈಗ ಎಂಟು ನೂರು ಕೊಟ್ಟು ಒಂದು ರೂಪಾಯಿ ಕೂಡ ಖಾತೆಗೆ ಬರದೇ ಇದ್ದಾಗ ಸಹಜವಾಗಿ ಟೆನ್ಷನ್ ಗೆ ಒಳಗಾಗಿದ್ದಾರೆ. ನಿಜ, ಮೋದಿ ಸರಕಾರ ಬಂದ ಬಳಿಕ ಉಜ್ಜಲ ಯೋಜನೆಯಡಿ ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಸೌಲಭ್ಯ ಕೊಡಲಾಗಿದೆ. ಲಕ್ಷಾಂತರ ಮಹಿಳೆಯರು ನಮ್ಮ ಜಿಲ್ಲೆ, ರಾಜ್ಯದಲ್ಲಿಯೇ ಇದರ ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ ಅದು ಎಲ್ಲಿಯ ತನಕ. ಕಟ್ಟಿಗೆಯ ಜಾಗದಲ್ಲಿ ಗ್ಯಾಸ್ ಉರಿಯುವ ತನಕ. ಆದರೆ ಮುಂದಿನ ಬಾರಿ ಸಿಲೆಂಡರ್ ರೇಟ್ ಕೇಳಿಯೇ ಕೈಸುಟ್ಟುಕೊಂಡರೆ ಅಥವಾ ಲಾಕ್ ಡೌನ್ ನಂತರ ಕೆಲಸ ಹೋಗಿ ಸಿಲೆಂಡರ್ ಕೈಗೆಟುಕದೇ ಹೋದರೆ ಆಗ ಉಚಿತ ಸ್ಟೌವ್ ಇಟ್ಟು ಏನು ಪೂಜೆ ಮಾಡುವುದಾ? ಮತ್ತೆ ಕಟ್ಟಿಗೆಗೆ ಹೋಗೋಣ ಎಂದು ಅಂದುಕೊಂಡು ಮೂರ್ನಾಕು ತಿಂಗಳು ಗ್ಯಾಸ್ ಸಿಲೆಂಡರ್ ಖರೀದಿ ಮಾಡದಿದ್ದರೆ ನಂತರ ಏಜೆಂಟ್ ಸಿಲೆಂಡರ್ ಕೊಡಲು ಆಡಿಸುತ್ತಾನೆ.
ಇಲ್ಲಿ ಕೆಲವು ವಿಷಯಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೇಯದಾಗಿ ಒಂದು ಸಿಲೆಂಡರಿಗೆ ಉತ್ಪಾದನಾ, ಸಾಗಣಿಕೆ, ಡೀಲರ್ ಕಮೀಷನ್ ಎಲ್ಲಾ ವೆಚ್ಚ ಸೇರಿ ಎಷ್ಟಾಗುತ್ತದೆ ಮತ್ತು ನಾವು ಎಷ್ಟು ಮೀನಿಮಮ್ ತೆರಿಗೆ ಹಾಕಿ ಕೊಡಲು ಸಾಧ್ಯ ಎಂದು ಕೇಂದ್ರ ಸರಕಾರ ನೋಡಬೇಕಾಗುತ್ತದೆ. ಅಷ್ಟಕ್ಕೆ ಕೊಟ್ಟು ಜನರನ್ನು ಸಂತೃಪ್ತಪಡಿಸಬಹುದು. ಇದು ಒಂದು ವಿಧಾನ. ಎರಡನೇಯದ್ದು ಜಿಎಸ್ ಟಿ ಒಳಗೆ ಇದನ್ನು ತಂದು ಜನರಿಗೆ ಸಿಲೆಂಡರ್ ಪೂರೈಸಿದರೆ ಆಗಲೂ ಜನರಿಗೆ ಸಮಾಧಾನ ಮಾಡಬಹುದು. ಇನ್ನು ಕೊನೆಯದಾಗಿ ಇನ್ನು ಎರಡು ವರ್ಷ ಸಬ್ಸಿಡಿ ಕೊಡಲು ಸರಕಾರಕ್ಕೆ ಸಾಧ್ಯವಿಲ್ಲ. ಪರಿಸ್ಥಿತಿ ಮುಂದೆ ಸುಧಾರಿಸಿದರೆ 2023 ಹಣಕಾಸು ವರ್ಷದಿಂದ ನೀಡಲಾಗುವುದು ಎಂದು ಮೋದಿ ಘೋಷಣೆ ಮಾಡುವುದು. ಈ ಮೂರರಲ್ಲಿ ಯಾವುದನ್ನು ಮಾಡದೇ ಅಲ್ಲಿ ಯಾರೋ ಬೀಚ್ ಕ್ಲೀನ್ ಮಾಡಿದ್ದು ಖುಷಿಯಾಯಿತು. ಇನ್ಯಾವುದೋ ಭಾಗದಲ್ಲಿ ವೈದ್ಯ ಒಂದು ರೂಪಾಯಿಗೆ ಚಿಕಿತ್ಸೆ ಕೊಡುವುದು ಖುಷಿಯಾಯಿತು ಎಂದು ಮಾತ್ರ ಮನ್ ಕಿ ಬಾತ್ ನಲ್ಲಿ ಹೇಳುತ್ತಾ ಕುಳಿತರೆ ಜನರ ಆಕ್ರೋಶ ಹೆಚ್ಚಾಗುತ್ತಾ ಹೋಗುತ್ತದೆ. ಈಗ ಕ್ರೂಡ್ ಆಯಿಲ್ ಹಣ ಕಡಿಮೆಯಾದರೂ ಆ ಉಳಿಯುತ್ತಿರುವ ಹೆಚ್ಚುವರಿ ಆದಾಯವನ್ನು ಹಿಂದೆ ಯುಪಿಎ ಮಾಡಿದ ಸಾಲವನ್ನು ಕಟ್ಟಲು ಬಳಸುತ್ತೇವೆ ಎಂದು ಹೇಳಿದರೂ ಅದು ಆವತ್ತೇ ರಿಸರ್ವ್ ಮಾಡಿಟ್ಟ ಹಣ ಇವರು ಬಿಡುಗಡೆ ಮಾಡಿದ್ದಾರೆ ವಿನ: ಅದು ಈ ಆದಾಯದಲ್ಲಿ ಕಟ್ಟಿದ್ದು ಅಲ್ಲ ಎನ್ನುವುದು ಮೋದಿ ವಿರೋಧಿಗಳ ವಾದ.
ಇನ್ನು ವಿಶೇಷ ಎಂದರೆ ಈಗ ಯಾವ ಮಧ್ಯಮ ವರ್ಗದ ನೌಕರರಿಗೂ ಸಂಬಳ ಜಾಸ್ತಿ ಆಗಿಲ್ಲ. ಅಲ್ಲಿ ಗ್ಯಾಸ್, ಡಿಸೀಲ್, ಪೆಟ್ರೋಲ್ ರೇಟ್ ಜಾಸ್ತಿಯಾದರೆ ಹೋಟೇಲಿನಿಂದ ಹಿಡಿದು ಜಿನಸಿಯಲ್ಲಿ ಅಕ್ಕಿಯ ತನಕ ಎಲ್ಲವೂ ಜಾಸ್ತಿಯಾಗುತ್ತದೆ. ಆದರೆ ಹೋಟೇಲಿನಿಂದ ಜಿನಸಿ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕನಿಗೆ ಒಂದು ರೂಪಾಯಿ ಸಂಬಳ ಜಾಸ್ತಿ ಆಗಲ್ಲ. ಬಸ್, ರಿಕ್ಷಾ ಬಾಡಿಗೆದರ ಜಾಸ್ತಿ ಆಗಲು ಜಿಲ್ಲಾಡಳಿತ ಹಿಂದೆ ಮುಂದೆ ನೋಡುತ್ತದೆ. ಅವರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಾರೆ. ಅನೇಕ ಬೋಟು ಇರುವ ಮೀನಿನವರು ಸಮುದ್ರಕ್ಕೆ ಹೋಗಲು ಬೋಟಿಗೆ ಡಿಸೀಲ್ ಹಾಕಿದರೆ ಅಸಲು ಬರುವುದಿಲ್ಲ ಎಂದು ನೀರಿಗೆ ಇಳಿಯುತ್ತಿಲ್ಲ. ಪ್ರವಾಸಕ್ಕೆ ಹೋದರೆ ಹಣ ನೀರಿನಂತೆ ಖರ್ಚಾಗುತ್ತದೆ ಎಂದು ಮಧ್ಯಮ ವರ್ಗದವರು ರಜೆಯಲ್ಲಿ ಹೊರಗೆ ಕಾಲಿಡುವುದಿಲ್ಲ. ತಿನ್ನಲು ಕಷ್ಟ ಆಗುತ್ತೆ ಬಂಗಾರ ಸದ್ಯ ಬೇಡಾ ಎಂದು ಮಹಿಳೆಯರು ಹೊಸ ಬಂಗಾರ ಖರೀದಿಸುವುದಿಲ್ಲ. ಇನ್ನು ಸ್ಕೂಲ್ ಫೀಸ್, ಅದು ಇದು ಎಂದು ಟೆನ್ಷನ್ ನಡುವೆ ಗಗನಕ್ಕೆ ಮುಖ ಮಾಡಿರುವ ಈ ಅಡುಗೆ ಅನಿಲದ ದರ ಇಳಿಯದೇ ಇದ್ದರೆ ದೇಶದಲ್ಲಿ ಕಮಲ ಪಾಳಯದವರು ಮೋದಿ ಹೆಸರು ಹಿಡಿದು ಗೆಲ್ಲುವುದು ಬಿಡಿ……..!
Leave A Reply