ಪಚ್ಚನಾಡಿಯ ಬೆಂಕಿಗೆ ಪಾಲಿಕೆಯ ಅಂಗಳದಲ್ಲಿ ಹೊಗೆ!!
ಮಂಗಳೂರಿನ ಪಚ್ಚನಾಡಿಯ ತ್ಯಾಜ್ಯ ಶೇಖರಣಾ ಪ್ರದೇಶ ಇದೆಯಲ್ಲ, ಅಲ್ಲಿ ಮತ್ತೊಮ್ಮೆ ಬೆಂಕಿ ಬಿದ್ದಿದೆ. ಬಿದ್ದಿರುವ ಬೆಂಕಿಗೆ ಅಗ್ನಿಶಾಮಕ ದಳದವರು ಸಮರೋಪಾದಿಯಲ್ಲಿ ಹೋಗಿ ನೀರು ಹಾಕಿದ್ದಾರೆ. ಬಿದ್ದ ಬೆಂಕಿ ನಂದಿ ಹೋಗಿದೆ. ಮುಂದಿನ ಬಾರಿ ಮತ್ತೊಮ್ಮೆ ಬೆಂಕಿ ಬೀಳುವ ತನಕ ಆ ವಿಷಯ ಹಾಗೆ ಇರುತ್ತದೆ. ಪ್ರತಿ ಬಾರಿ ಬೆಂಕಿ ಬಿದ್ದಾಗ ಜಿಲ್ಲಾಡಳಿತದಿಂ ದ ಅಧಿಕಾರಿಗಳು ಬರುತ್ತಾರೆ. ನೋಡುತ್ತಾರೆ. ಬೆಂಕಿಯ ಕೆನ್ನಾಲಗೆಯ ಜ್ವಾಲೆಗಳ ಫೋಟೋಗಳು ಪತ್ರಿಕೆಗಳಲ್ಲಿ ಬರುತ್ತವೆ. ನ್ಯಾಯಾಲಯದಿಂದಲೂ ನ್ಯಾಯಾಧೀಶರು ಅಥವಾ ಅವರು ಕಳುಹಿಸುವ ಪ್ರಮುಖರು ಬರುತ್ತಾರೆ. ಎಲ್ಲರೂ ವರದಿ ತಯಾರಿಸುತ್ತಾರೆ. ಹೀಗೆ ಆಗಾಗ ಅದರಲ್ಲಿಯೂ ಬೇಸಿಗೆ ಋತುವಿನಲ್ಲಿ ಪಚ್ಚನಾಡಿಯಲ್ಲಿ ಬೆಂಕಿಯ ಕೆನ್ನಾಲಗೆ ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲಿ ವಿಶೇಷ ಏನೂ ಇಲ್ಲ. ಅಲ್ಲಿ ಬೆಂಕಿ ಬೀಳದಿದ್ದರೆ ಆಶ್ಚರ್ಯ ಎನಿಸುವಷ್ಟು ಆ ವಿಷಯ ಸಾಮಾನ್ಯವಾಗಿದೆ. ಆದರೆ ಈ ಬಾರಿ ಅದು ಆರೋಪ ಪತ್ಯಾರೋಪಗಳ ಮೂಲಕವೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಆರೋಪಿಸುತ್ತಿರುವುದು ಏನೆಂದರೆ ಅಲ್ಲಿ ಬೆಂಕಿ ಬೀಳಲು ಪಾಲಿಕೆಯ ಆಡಳಿತದ ವೈಫಲ್ಯವೇ ಕಾರಣ ಎನ್ನುತ್ತಿದೆ. ಬಿಜೆಪಿ ಇದು ನಮ್ಮ ಸರಕಾರಿ ತ್ಯಾಜ್ಯ ಸಂಗ್ರಹಣೆಯಲ್ಲಿ ಬಿದ್ದ ಬೆಂಕಿ ಅಲ್ಲ. ಖಾಸಗಿಯವರು ನಿರ್ವಹಿಸುತ್ತಿರುವ ತ್ಯಾಜ್ಯ ವಿಲೇವಾರಿ ಸಂಗ್ರಹ ಕೇಂದ್ರದಲ್ಲಿ ಬಿದ್ದಿರುವ ಬೆಂಕಿ ಎನ್ನುತ್ತಿದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್ ಪಕ್ಕದಲ್ಲಿ ಖಾಸಗಿಯವರು ಒಂದಿಷ್ಟು ಜಾಗವನ್ನು ಸರಕಾರದಿಂದ ಪಡೆದುಕೊಂಡು ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಏನೋ ಗೊಬ್ಬರ ತಯಾರಿಸುತ್ತಿದ್ದಾರೆ. ಅವರು ಪಾಲಿಕೆಗೆ ಇಂತಿಷ್ಟು ಎಂದು ಹಣ ಕಟ್ಟುವುದರಿಂದ ಅದು ಪಾಲಿಕೆಯ ಮಟ್ಟಿಗೆ ಆದಾಯ ಕೂಡ ಹೌದು. ಅಲ್ಲಿ ಬೆಂಕಿ ಬಿದ್ದರೆ ಅದಕ್ಕೆ ಖಾಸಗಿಯವರೇ ಹೊಣೆ. ಅವರದ್ದೇ ಜಾಗದಲ್ಲಿ ಅವರು ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ಪೂರ್ವ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಈಗ ಏನಾಗಿದೆ ಎಂದರೆ ಅಲ್ಲಿರುವ ನೀರಿನ ಪಂಪ್ ಗಳನ್ನು ಹಿಂದಿನ ಕಾರ್ಪೋರೇಟರ್ ಅವರು ಬೇರೆಡೆ ಶಿಫ್ಟ್ ಮಾಡಿದ್ದಾರೆ ಎನ್ನುವುದು ಈಗ ಕೇಳಿಬರುತ್ತಿರುವ ಮಾತು. ಆರೋಪ-ಪ್ರತ್ಯಾರೋಪಗಳು ಏನೇ ಇರಲಿ, ಪಚ್ಚನಾಡಿಯ ಕಾರ್ಪೋರೇಟರ್ ಆಗಿದ್ದ ಕವಿತಾ ಸನಿಲ್ ಪಾಲಿಕೆಯ ಮೇಯರ್ ಕೂಡ ಆಗಿದ್ದರು. ಅವರು ಈ ಸಮಸ್ಯೆಗೆ ಏನು ಪರಿಹಾರ ಹುಡುಕಿದ್ದರು ಎನ್ನುವುದು ಕೂಡ ಕಾಂಗ್ರೆಸ್ಸಿಗರು ನೋಡಬೇಕಾದ ವಿಷಯ. ಇನ್ನು ಪಕ್ಕದ ಉಳ್ಳಾಲದಿಂದ ದಿನಕ್ಕೆ ನೂರು ಟನ್ ನಷ್ಟು ತ್ಯಾಜ್ಯ ಇಲ್ಲಿಗೆ ಬಂದು ಬೀಳುತ್ತದೆ. ಪಚ್ಚನಾಡಿಯ ಮಟ್ಟಿಗೆ ಇದು ದೊಡ್ಡ ಹೊರೆ. ಉಳ್ಳಾಲದ ತ್ಯಾಜ್ಯವನ್ನು ಅಲ್ಲಿಯೇ ವಿಲೇವಾರಿ ಮಾಡಲು ಅಲ್ಲಿನ ಶಾಸಕ ಹಾಗೂ ಮಾಜಿ ನಗರಾಭಿವೃದ್ಧಿ ಸಚಿವರೂ ಆಗಿರುವ ಯುಟಿ ಖಾದರ್ ಯಾಕೆ ಮನಸ್ಸು ಮಾಡಿಲ್ಲ. ಅವರ ಕೈಯಲ್ಲಿ ಅಧಿಕಾರವಿತ್ತು. ಒಂದೋ ಪಚ್ಚನಾಡಿಗೆ ಶಾಶ್ವತ ಕಾಯಕಲ್ಪ ನೀಡಬೇಕಿತ್ತು. ಆಗದೇ ಇದ್ದರೆ ತಮ್ಮ ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಮಾಡಬೇಕಿತ್ತು. ಇದು ಏನಾಗಿದೆ ಎಂದರೆ ಯಾರು ಅಧಿಕಾರಕ್ಕೆ ಬಂದರೂ ಒಂದಿಷ್ಟು ಕಾಲ ಪಚ್ಚನಾಡಿಯನ್ನು ಒಳ್ಳೆಯ ಹಳೆಪಳೆಯುಳಿಕೆಗಳನ್ನು ಹೊತ್ತು ಕೊಂಡು ಮಲಗಿರುವ ಪ್ರಾಚೀನ ಸಂಗ್ರಹಾಲಯದ ತರಹ ಬಂದು ನೋಡಲಾಗುತ್ತದೆ. ನಂತರ ಎಲ್ಲರೂ ಮರೆಯುತ್ತಾರೆ. ಹಿಂದೆ ಕಾಂಗ್ರೆಸ್ ಈಗ ಬಿಜೆಪಿ. ಅಲ್ಲಿನ ಜನರಿಗೆ ಪರಿಹಾರ ಕೊಟ್ಟರೆ ಮುಗಿಯಲ್ಲ. ಅಲ್ಲಿ ವಾಸಿಸುವ ಜನರಿಗೆ ಅಲ್ಲಿ ಶಾಶ್ವತ ವ್ಯವಸ್ಥೆ ಬೇಕು. ನಾನು ಕಳೆದ ವಾರದ ಅಂಕಣದಲ್ಲಿ ಬರೆದ ಹಾಗೆ ಪಾಲಿಕೆಗೆ ಕೇಂದ್ರದಿಂದ ಸ್ವಚ್ಚ ಭಾರತ್ ಮಿಶನ್ ನಲ್ಲಿ ಎಂಟು ನೂರು ಕೋಟಿಯಷ್ಟು ಹಣ ಬರುತ್ತದೆ. ಆ ಹಣವನ್ನು ಹಂತಹಂತವಾಗಿ ಉಪಯೋಗಿಸುತ್ತಾ ಬರಬೇಕು. ಪಚ್ಚನಾಡಿಗೆ ಈಗ ಅಗತ್ಯವಾಗಿ ದೂರದೃಷ್ಟಿಯ ಯೋಜನೆಯಾಗಿ ಬೇಕಾಗಿರುವುದು ತ್ಯಾಜ್ಯ ವಿಲೇವಾರಿ ಯಂತ್ರ. ಅದನ್ನು ಖರೀದಿಸಿದರೆ ಮತ್ತು ಆ ಪ್ರದೇಶವನ್ನು ಸ್ಮಾರ್ಟ್ ವಲಯವನ್ನಾಗಿ ಮಾಡುವ ದೂರದೃಷ್ಟಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ತ್ಯಾಜ್ಯದಿಂದ ಉತ್ಪತ್ತಿಯಾದ ಡಾಮರನ್ನು ಬಳಸಿ ರಸ್ತೆಯನ್ನು ನಿರ್ಮಿಸಬಹುದು ಎಂದು ಹೇಳಲಾಗುತ್ತೆ. ಅದು ಸಾಧ್ಯಾನಾ ಎಂದು ನೋಡಬೇಕು. ಇಲ್ಲಿ ಈಗ ಏನಾಗಿದೆ ಎಂದರೆ ರಾಜಕೀಯವೇ ಮೇಳೈಸುತ್ತಿದೆ. ಒಂದು ರಸ್ತೆಯನ್ನು ಕಾಂಕ್ರೀಟ್ ಮಾಡುವಾಗಲೇ ಇವರು ಅರ್ಧರ್ಧ ಮಾಡುತ್ತಿದ್ದಾರೆ. ಹಾಗಿರುವಾಗ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಏನಾದರೂ ಮಾಡಲು ಸಾಧ್ಯವೇ ಎಂದು ಯೋಚಿಸುವುದೇ ಭ್ರಮೆ. ಆದರೂ ಹೇಳುವುದೇನೆಂದರೆ ಪಾಲಿಕೆಯ ಇಬ್ಬರು ಯುವ ಶಾಸಕರ ನೇತೃತ್ವದಲ್ಲಿ ಪಕ್ಷಾತೀತವಾಗಿ ಪಾಲಿಕೆಯ ಹಿರಿತಲೆಗಳು ಕುಳಿತು ಮತ್ತೊಮ್ಮೆ ಅಲ್ಲಿ ಬೆಂಕಿ ಬೀಳದೆ ಇರಲು ಮತ್ತು ಆ ಪ್ರದೇಶದ ಸಮಸ್ಯೆ ವೈಜ್ಞಾನಿಕವಾಗಿ ಪರಿಹಾರವಾಗಲು ಏನು ಮಾಡಬೇಕು ಎಂದು ಯೋಚಿಸಬೇಕು. ಒಂದು ಸ್ಥಳದಲ್ಲಿ ಮೇಲಿನಿಂದ ಮೇಲೆ ನಿರಂತರವಾಗಿ ತ್ಯಾಜ್ಯದ ರಾಶಿ ಬೀಳುತ್ತಾ ಇದ್ದರೆ ಕೆಳಗಿನ ಪದರದಲ್ಲಿ ಒತ್ತಡ ಬೀಳಲು ಶುರುವಾದಾಗ ಅಲ್ಲಿ ಬೆಂಕಿ ತಕ್ಷಣ ಹೊತ್ತಿಕೊಳ್ಳುತ್ತದೆ. ಆ ಬೆಂಕಿ ಬೀಳುವುದು ಮತ್ತು ನಂದಿಸುವ ನಡುವೆ ಒಂದು ಆರೋಗ್ಯಪೂರ್ಣ ಚರ್ಚೆ ನಡೆದು ಸಮಸ್ಯೆ ಪರಿಹಾರ ಆಗುತ್ತಾ? ನೋಡಬೇಕು!
Leave A Reply