ನಮ್ಮಲ್ಲಿ ಕೊರೊನಾ ಕರ್ಫ್ಯೂ ಅಗತ್ಯ ಇದೆಯಾ?
ಬೆಂಗಳೂರಿನಲ್ಲಿ ದಿನಕ್ಕೆ ಐದರಿಂದ ಆರು ಸಾವಿರದವರೆಗೆ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅದು ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಮೂರಂಕೆಯನ್ನು ಇದು ಮೀರಿಲ್ಲ. ಈಗ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೇಕಾದರೆ ತೆಗೆದುಕೊಳ್ಳೋಣ. ಇಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ತೆ ಆದ ಅತೀ ಹೆಚ್ಚು ಪ್ರಕರಣಗಳು ಎಂದರೆ ಅದು 173. ಅದು ಕೂಡ ಇಡೀ ಜಿಲ್ಲೆಯಲ್ಲಿ. ಅದನ್ನು ನಿತ್ಯ ಸರಾಸರಿ ಲೆಕ್ಕ ಹಾಕಿದರೆ ಹೆಚ್ಚೆಂದರೆ ನಿತ್ಯ 60 ರಿಂದ 65 ಸರಾಸರಿ ಎಂದು ಅಂದಾಜು ಹಾಕಬಹುದು. ಇದು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದಾಗ ಆಗುವ ಒಟ್ಟು ಸರಾಸರಿ ಮೊತ್ತ. ಈಗ ನಮ್ಮ ಬುದ್ಧಿವಂತ ರಾಜ್ಯ ಸರಕಾರ ಏನು ಮಾಡಿದರೆ ಎಂದರೆ ಕೊರೊನಾ ನಗರಗಳಲ್ಲಿ ಜಾಸ್ತಿ ಹರಡುವುದು ಎನ್ನುವ ತನ್ನದೇ ಸ್ವಂತ ಸಿದ್ಧಾಂತದ ಮೇರೆಗೆ ರಾಜ್ಯದ ಎಂಟು ನಗರದಲ್ಲಿ ರಾತ್ರಿ ಕರ್ಫ್ಯೂ ಹಾಕಿದೆ. ನಗರ ಎಂದರೆ ಒಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಳಗೆ ಬರುತ್ತದೆ. ಉಳಿದವು ಬಹುತೇಕ ಗ್ರಾಮಾಂತರ ಭಾಗಗಳು. ನಗರ ಭಾಗಗಳಲ್ಲಿ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ತನಕ ಕರ್ಫ್ಯೂ ಇರಲಿದೆ. ರಾತ್ರಿ 10 ಗಂಟೆಗೆ ಕರ್ಫ್ಯೂ ಶುರು ಅಂದುಕೊಂಡರೂ ಅಂಗಡಿ, ಹೋಟೇಲುಗಳ ಜನರು ಒಂಭತ್ತು ಗಂಟೆಗೆ ಅಂಗಡಿ, ಹೋಟೇಲುಗಳನ್ನು ಬಂದ್ ಮಾಡಿ ಹೊರಗೆ ಬಂದುಬಿಡಬೇಕಾಗುತ್ತದೆ. ಯಾಕೆಂದರೆ ಅವರು ಕೂಡ ತಮ್ಮ ವ್ಯವಹಾರ ಸ್ಥಾನದಿಂದ ಹೊರಟು ಮನೆ ಸೇರಬೇಕಲ್ಲ. ಇನ್ನು ರಾತ್ರಿ ಕರ್ಫ್ಯೂ ಎಂದರೆ ಹತ್ತು ಗಂಟೆಯಿಂದ ಎಂದು ಅಂದುಕೊಂಡರೂ ಮಂಗಳೂರು ನಗರ ಒಂಭತ್ತು ಗಂಟೆಗೆ ಮುಚ್ಚಲು ಶುರುವಾಗುತ್ತದೆ. ನಿಜ ಹೇಳಬೇಕೆಂದರೆ ಕೊರೊನಾದ ಲಾಕ್ ಡೌನ್ ನಂತರ ಜಿಲ್ಲೆಯ ವ್ಯವಹಾರಿಕ ಕೇಂದ್ರ ಮಂಗಳೂರು ಎಂಟು ಗಂಟೆಗೆಲ್ಲ ತೂಕಡಿಕೆಯ ಲೆವೆಲ್ಲಿಗೆ ಬಂದು ಬಿಡುತ್ತಿದೆ. ಯಾರು ಕೂಡ ರಾತ್ರಿ ಊಟಕ್ಕೆ ಕುಟುಂಬದೊಂದಿಗೆ ಹೊರಗೆ ಹೋಗುತ್ತಿಲ್ಲ. ಯಾಕೆಂದರೆ ಮುಕ್ತವಾಗಿ ಎಂಜಾಯ್ ಮಾಡುವಂತಹ ಮನಸ್ಥಿತಿ ಈಗ ಯಾರಿಗೂ ಇಲ್ಲ. ಶಾಂಪಿಂಗ್ ಗಾಗಿ ಏಳು ಗಂಟೆಯ ನಂತರ ಹೊರಗೆ ಹೊರಡಲು ಯಾರಿಗೂ ಅಂತಹ ಆಸಕ್ತಿ ಇಲ್ಲ. ಇದರಿಂದ ಹೋಟೇಲುಗಳಲ್ಲಿ, ಮಾಲ್ ಗಳಲ್ಲಿ ರಾತ್ರಿ ಆಗುವ ಮೊದಲೇ ವ್ಯವಹಾರ ಡಲ್ ಹೊಡೆಯುತ್ತಿದೆ. ಬೆಂಗಳೂರಿನಲ್ಲಿ ಹಾಕಿರುವ ರೂಲ್ಸ್ ಅನ್ನು ಯಥಾವತ್ತಾಗಿ ಮಂಗಳೂರಿಗೆ ಹಾಕುವ ಅವಶ್ಯಕತೆ ಇರುವುದಿಲ್ಲ. ಬೆಂಗಳೂರು ರಾತ್ರಿ ಎಂಟು ಆಗುತ್ತಿದ್ದಂತೆ ಐಟಿ, ಬಿಟಿ, ಸಾಫ್ಟ್ ವೇರ್ ಯುವ ಮುಖಗಳಿಂದ ಹೊರಗೆ ಬೇರೆಯದ್ದೇ ರೂಪ ಪಡೆದುಕೊಳ್ಳುವ ಅವಧಿ ಅದು. ಅಲ್ಲಿ ಮಧ್ಯರಾತ್ರಿಯ ತನಕ ವ್ಯವಹಾರ, ಓಡಾಟ ಹೆಚ್ಚೆ ಇರುತ್ತದೆ. ಆದರೆ ಮಂಗಳೂರು ಹಾಗಲ್ಲ. ಇಲ್ಲಿ ರಾತ್ರಿ ಎಂಟು ಗಂಟೆ ಆಗುತ್ತಿದ್ದಂತೆ ಮನೆಯ ಒಳಗೆ ಸೇರುವ ಜನ ಟಿವಿಯೋ, ಮೊಬೈಲಿನಲ್ಲಿಯೋ ಮುಳುಗಿಬಿಡುತ್ತಾರೆ. ಆದ್ದರಿಂದ ಮೋದಿಯವರು ಹೇಳಿದಂತೆ ಕೊರೊನಾ ನೆನಪು ಮನಸ್ಸಿನಲ್ಲಿ ಮರೆಯದೇ ಇರಲು ಇಂತಹ ಕೊರೊನಾ ಕರ್ಫ್ಯೂ ಬೇಕು ಎನ್ನುವುದು ಮಂಗಳೂರಿಗೆ ಅಗತ್ಯ ಇಲ್ಲ. ಹಾಗಂತ ಇಲ್ಲಿಯ ಜನ ಸ್ವಚ್ಚಂದದಿಂದ ಓಡಾಡಲು ಅವಕಾಶ ಸಿಗಬೇಕು ಎಂದು ನಾನು ಹೇಳುವುದಿಲ್ಲ. ಜನರಿಗೆ ಕೊರೊನಾ ಇಲ್ಲ ಎಂದು ಅನಿಸಬಾರದು ನಿಜ, ಆದ್ದರಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡಿಸುವ ಮತ್ತು ಬಿಸಿ ಮುಟ್ಟಿಸುವ ಕೆಲಸ ಆಗಬೇಕು. ಮಾಸ್ಕ್ ಹಾಕದೇ ಮಾಲ್, ಮಾರ್ಕೆಟ್ ಗಳಲ್ಲಿ ಸುತ್ತಾಡುವವರಿಗೆ ದಂಡ ಹಾಕುವಂತಾಗಲಿ. ಹಾಗೆ ಮಾಡಿದರೆ ದಂಡಕ್ಕಾದರೂ ಹೆದರಿ ಮಾಸ್ಕ್ ಧರಿಸುತ್ತಾರೆ. ಜಿಲ್ಲಾಧಿಕಾರಿಯವರು ಒಂದು ಸಲ ಹೋಗಿ ಬಸ್ಸುಗಳಲ್ಲಿ ಎಚ್ಚರಿಕೆ ಕೊಟ್ಟು ಬಂದರು. ನಂತರ? ಜಿಲ್ಲಾಧಿಕಾರಿಯವರು ನಿತ್ಯ ಇದೇ ಮಾಡಬೇಕು ಎಂದು ಯಾರೂ ಬಯಸುವುದಿಲ್ಲ. ಆದರೆ ಅವರ ಪರವಾಗಿ ಯಾವ ಅಧಿಕಾರಿ ಬೇಕಾದರೂ ಹೀಗೆ ಮಾಡಬಹುದಲ್ಲ. ಅದೇಕೆ ನಡೆಯುತ್ತಿಲ್ಲ. ಕೆಲವು ಕಡೆ ಮಾರ್ಶಲ್ ಗಳನ್ನು ನೇಮಿಸಿ ದಂಡ ಹಾಕಲಾಗುತ್ತಿದೆ. ಅಂತವರ ಸಂಖ್ಯೆ ಹೆಚ್ಚು ಮಾಡಿ. ಹೇಗೂ ದಂಡದ ಹಣ ಬರುತ್ತದೆಯಲ್ಲ. ಅದು ಜಿಲ್ಲಾಡಳಿತಕ್ಕೆ ಹೊರೆ ಆಗುವುದಿಲ್ಲ. ಇನ್ನು ಬೆಂಗಳೂರಿಗೆ ಮತ್ತು ಮಂಗಳೂರಿಗೆ ಹೋಲಿಸಿದರೆ ಇಲ್ಲಿ ವಿಕೆಂಡ್ ಪಾರ್ಟಿ, ಮೋಜು, ಮಸ್ತಿ ಗಲ್ಲಿಗಲ್ಲಿಯಲ್ಲಿ ಇಲ್ಲ. ಒಂದೆರಡು ಪಬ್ ಬಿಟ್ಟರೆ ಮಂಗಳೂರಿನಲ್ಲಿ ಅಂತಹ ಓಡಾಟವನ್ನು ಯಾರೂ ನೋಡುವಂತಹ ವಾತಾವರಣ ಇಲ್ಲ. ಆದರೆ ನಾವು ನಂಬುವುದು ಮೋಜಿಗಿಂತ ಹೆಚ್ಚಾಗಿ ಧಾರ್ಮಿಕ ಕಾರ್ಯಗಳನ್ನು. ಇಲ್ಲಿ ಕೋಲ, ನೇಮ, ಯಕ್ಷಗಾನ, ಬ್ರಹ್ಮಕಲಶ ಸಹಿತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆಗುವಂತಹ ಸಮಯ. ಆದ್ದರಿಂದ ನಾವು ಕಳೆದ ವರ್ಷ ಮಾಡಲು ಸಾಧ್ಯವಾಗದ ಧಾರ್ಮಿಕ ಕಾರ್ಯಕ್ರಮಗಳನ್ನು ಈ ವರ್ಷ ಮಾಡಲು ಯೋಜನೆ ಹಾಕಿಕೊಂಡಿರುತ್ತೀವಿ. ಅದು ಈ ಬಾರಿ ಆಗಬೇಕಾದರೆ ಒಂದಷ್ಟು ಕರ್ಫ್ಯೂ ವಿನಾಯಿತಿ ಬೇಕೆ ಬೇಕು. ಕೊರೊನಾ ನಿಯಮಗಳನ್ನು ಪಾಲಿಸಿಯೇ ಆಚರಣೆಗಳನ್ನು ನಡೆಸಲು ಅನುಮತಿ ಬೇಕಾಗಿದೆ. ಆದರೆ ಅಂತಹ ಅನುಮತಿ ಸಿಗಲು ಮೀನಾಮೇಶ ಎಣಿಸುವ ಜಿಲ್ಲಾಡಳಿತ ಪೀಕ್ ಅವರ್ ನಲ್ಲಿ ಬಸ್ ತುಂಬಿ ತುಳುಕುತ್ತಿದ್ದರೂ ಏನೂ ಮಾಡಲು ಹೋಗುವುದಿಲ್ಲ. ಇನ್ನು ಮುಂದಿನ ವಾರದಿಂದ ವಿಕೆಂಡ್ ಲಾಕ್ ಡೌನ್ ಆಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ. ಒಂದು ವೇಳೆ ಮಾಡುವುದೇ ಆದರೆ ಅದು ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವೇ ಎಂದು ನೋಡಿ ಮಾಡಬೇಕು. ಜನರಲ್ ಆಗಿ ತೆಗೆದುಕೊಳ್ಳುವ ಮೊದಲು ಆಯಾ ಜಿಲ್ಲೆಗಳ ವರದಿಯನ್ನು ಕೂಲಂಕುಶವಾಗಿ ನೋಡಿ ನಿರ್ಧಾರ ಮಾಡಿದರೆ ಉತ್ತಮ!
Leave A Reply