ಪಕ್ಷಾಂತರಿಗಳು ತಮ್ಮ ಚುನಾವಣಾ ಖರ್ಚನ್ನು ತಾವೇ ಭರಿಸಲಿ!!
ಕರ್ನಾಟಕ ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಇದರಲ್ಲಿ ಬೆಳಗಾವಿಯ ಸಂಸದರಾಗಿದ್ದ ಹಾಗೂ ಕೇಂದ್ರ ಸಚಿವರೂ ಆಗಿದ್ದ ಸುರೇಶ್ ಅಂಗಡಿ ಹಾಗೂ ಬಸವಕಲ್ಯಾಣದ ಶಾಸಕರಾಗಿದ್ದ ನಾರಾಯಣ ರಾವ್ ಅವರನ್ನು ಕೋವಿಡ್ 19 ವೈರಸ್ ಬಲಿ ಪಡೆದುಕೊಂಡಿತ್ತು. ಅಲ್ಲಿ ಚುನಾವಣೆ ಆಗಲೇಬೇಕು. ಆದರೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಪ್ರತಾಪ ಗೌಡ ಪಾಟೀಲ್ ಅವರ ಕ್ಷೇತ್ರಕ್ಕೆ ಚುನಾವಣೆ ಯಾಕೆ? ಅವರು ಗಟ್ಟಿಮುಟ್ಟಾಗಿದ್ದಾರಲ್ಲವೇ? ಹೌದು, ಮಸ್ಕಿ ಅಲ್ಲಿನ ಶಾಸಕರ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡರು ಭಾರತೀಯ ಜನತಾ ಪಾರ್ಟಿಗೆ ಹಾರಿದ ಕಾರಣ ಅಲ್ಲಿ ಉಪಚುನಾವಣೆ ನಡೆಯುತ್ತಿದೆ. ಇದನ್ನೇ ನಾನು ವಿರೋಧಿಸುತ್ತಿರುವುದು. ಒಂದು ಕ್ಷೇತ್ರದ ಶಾಸಕರೋ, ಸಂಸದರೋ ಸತ್ತರೆ ಅಲ್ಲಿ ಚುನಾವಣೆ ನಡೆಯಬೇಕು, ಅದು ಮಾಮೂಲಿ.
ಆದರೆ ಕೋತಿಗಳು ಮರದಿಂದ ಮರಕ್ಕೆ ಹಾರಿದಂತೆ ಈ ಶಾಸಕರು ಹಾರಿದರೆ ಅದು ಅವರ ಸಮಸ್ಯೆ. ಅದಕ್ಕೆ ನಮ್ಮ ತೆರಿಗೆಯ ಹಣ ಯಾಕೆ ವ್ಯರ್ಥ ಮಾಡಬೇಕು. ಒಬ್ಬ ಶಾಸಕ ಒಂದು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಹಾರಿದರೆ ಅದು ಕೇಳುವಾಗ ಅಥವಾ ಓದುವಾಗ ಸುಲಭ ಅನಿಸಬಹುದು. ಆದರೆ ಆತನ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತದೆಯಲ್ಲ, ಅದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಇದೆ. ಆ ಹೊರೆಯನ್ನು ಆ ಜಂಪಿಂಗ್ ಶಾಸಕ ತನ್ನ ಕಿಸೆಯಿಂದ ಕೊಡಬೇಕು. ಯಾಕೆಂದರೆ ಅವನಿಗೆ ಆ ಪಕ್ಷ ಬಿಟ್ಟು ಈ ಪಕ್ಷ ಬರಲು ಎಷ್ಟು ಸಿಕ್ಕಿದೆಯೋ ಅಥವಾ ಇಲ್ವೋ ದೇವರಿಗೆ ಮತ್ತು ಕೊಟ್ಟವರಿಗೆ ಹಾಗೂ ಇಸ್ಕೊಂಡವರಿಗೆ ಮಾತ್ರ ಗೊತ್ತು. ಕೆಲವರು ಆ ಪಕ್ಷದಲ್ಲಿ ಇದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಈ ಪಕ್ಷಕ್ಕೆ ಬಂದೆ ಎಂದು ಫಿಕ್ಸಡ್ ಡೈಲಾಗ್ ಹೇಳಿ ಬಂದುಬಿಡುತ್ತಾರೆ. ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿರುವುದು ಅವರ ವೈಯಕ್ತಿಕ ಅಭಿವೃದ್ಧಿಯೋ ಅಥವಾ ತಮ್ಮ ಕ್ಷೇತ್ರದ ಅಭಿವೃದ್ಧಿಯೋ ಎನ್ನುವುದನ್ನು ಅಲ್ಲಿನ ಮತದಾರರು ನಿರ್ಧರಿಸುತ್ತಾರೆ. ಆದರೆ ಹಾಗೆ ಅವಧಿ ಮುಗಿಯುವ ಮೊದಲೇ ಒಬ್ಬ ಶಾಸಕ ಪಕ್ಷಾಂತರ ಮಾಡಿದರೆ ಅದರಿಂದ ಉಂಟಾಗುವ ವ್ಯರ್ಥ ಖರ್ಚನ್ನು ನಾವೇಕೆ ಹೊರಬೇಕು ಎನ್ನುವುದನ್ನು ಈಗ ನಾವು ತೆರಿಗೆದಾರರು ಕೇಳಬೇಕಾದ ಪ್ರಶ್ನೆ. ನಾನು ಹೇಳುವುದೇನೆಂದರೆ ಮೋದಿಯವರು ಕೇಂದ್ರ ಮಟ್ಟದಲ್ಲಿ ಒಂದು ನಿಯಮ ಮಾಡಬೇಕು. ಅದೇನೆಂದರೆ ಅಕಾಲಿನ ನಿಧನದಿಂದ ತೆರವಾಗುವ ಸ್ಥಾನಗಳನ್ನು ಬಿಟ್ಟು ಬೇರೆ ಎಲ್ಲ ಸಂದರ್ಭದಲ್ಲಿ ಶಾಸಕರು ಪಕ್ಷಾಂತರ ಮಾಡಿದರೆ ಅಲ್ಲಿ ಉದ್ಭವಿಸುವ ಉಪಚುನಾವಣೆಯ ಖರ್ಚನ್ನು ಆ ಶಾಸಕನೇ ಮಾಡಬೇಕು. ಅವನು ಚುನಾವಣಾ ಆಯೋಗ ನಿಗದಿಪಡಿಸುವ ಮೊಬಲಗನ್ನು ಕಟ್ಟಿ ನಂತರ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕು ಎಂದು ನಿಯಮ ತರಲಿ. ಆಗ ನೋಡಿ ಎಷ್ಟು ಮಂದಿ ಪಕ್ಷಾಂತರ ಮಾಡುತ್ತಾರೆ? ಒಂದು ವೇಳೆ ಆ ಶಾಸಕ ತಾನು ಸೇರುವ ಪಕ್ಷದವರು ತನ್ನ ಪರ ಹಣ ಕಟ್ಟುತ್ತಾರೆ ಎಂದು ಹೇಳಿದರೂ ಓಕೆ. ಆ ಪಕ್ಷದವರು ಕಟ್ಟಲಿ. ಆದರೆ ಯಾವುದೇ ಕಾರಣಕ್ಕೂ ನಮ್ಮ ತೆರಿಗೆಯ ಹಣ ಪೋಲು ಮಾಡುವಂತಿಲ್ಲ. ಈಗೀಗ ಅಧಿಕಾರಕ್ಕೆ ಬರಲು ಏನೆಲ್ಲ ಮಾಡಲು ತಯಾರಿರುವ ಪಕ್ಷಗಳು ಆಪರೇಶನ್ ಮಾಡಿ ತಾವು ತರುವ ಶಾಸಕರ ಚುನಾವಣಾ ಸಂದರ್ಭದ ಖರ್ಚನ್ನು ತಾವೇ ಭರಿಸುತ್ತಿವೆ. ಒಂದು ಚುನಾವಣೆ ನಡೆದರೆ ಒಬ್ಬ ಅಭ್ಯರ್ಥಿಗೆ ಇವತ್ತಿನ ದಿನಗಳಲ್ಲಿ ಮೂರರಿಂದ ನಾಲ್ಕು ಕೋಟಿಗಳಷ್ಟು ಮಿನಿಮಮ್ ಖರ್ಚು ಇದ್ದೇ ಇರುತ್ತದೆ. ಚುನಾವಣಾ ಆಯೋಗ 65 ಲಕ್ಷದೊಳಗೆ ಮುಗಿಸಿ ಎನ್ನುತ್ತದೆ. ಆಯೋಗಕ್ಕೆ ಅಷ್ಟೇ ತೋರಿಸಲಾಗುತ್ತದೆ. ಆದರೆ ವಾಸ್ತವ ಬೇರೆ ಇರುತ್ತದೆ. ಆ ಖರ್ಚಿನ ವಿಷಯ ನಾನು ಹೇಳಿದ್ದಲ್ಲ. ನಾನು ಹೇಳಿದ್ದು ಮತದಾನ ಮತ್ತು ಮತ ಎಣಿಕೆ ಮತ್ತು ಇದರ ನಡುವೆ ಸರಕಾರಕ್ಕೆ ಕೂಡ ಸಾಕಷ್ಟು ಹಣ ಖರ್ಚಾಗಿ ಹೋಗುತ್ತದೆ. ಹಾಗಿರುವಾಗ ಚುನಾವಣಾ ಆಯೋಗಕ್ಕೆ ಇಂತಿಷ್ಟು ಕೋಟಿ ಫೀಸ್ ಕಟ್ಟಿ ಎಂದು ಹೇಳಿದರೆ ಆಗಲ್ಲ ಎಂದು ಜಂಪಿಂಗ್ ಅಭ್ಯರ್ಥಿ ಹಾಗೂ ಆತನ ಪಕ್ಷ ಹೇಳಲಾರರು. ಯಾಕೆಂದರೆ ಸರಕಾರ ಇನ್ನಷ್ಟು ಗಟ್ಟಿಯಾದರೆ ಅದರಿಂದ ನಂತರ ಎಷ್ಟು ಬೇಕಾದರೂ ದುಡಿಯಬಹುದಲ್ಲ ಎನ್ನುವ ನಿಲುವು ಅವರದ್ದು ಇರುತ್ತದೆ. ಅದರ ಬದಲು ಇನ್ನೊಂದು ಕೂಡ ಮಾಡಬಹುದು. ಅದೇನೆಂದರೆ ಚುನಾವಣೆಯನ್ನು ಗೆದ್ದ ಅಭ್ಯರ್ಥಿ ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯ ತನಕ ಪಕ್ಷಾಂತರ ಮಾಡುವಂತಿಲ್ಲ. ಯಾಕೆ ಮಾಡಬಾರದು? ಈಗ ಒಬ್ಬ ಶಾಸಕ ನಮಗೆ ಒಪ್ಪಿಗೆ ಇಲ್ಲದೇ ಹೋದರೆ ನಾವು ಅವನನ್ನು ಐದು ವರ್ಷಗಳ ತನಕ ಹಿಂದಕ್ಕೆ ಕರೆಸಿಕೊಳ್ಳಲು ಆಗುತ್ತಾ? ಇಲ್ಲವಲ್ಲ. ಹಾಗಿರುವಾಗ ಆತ ನಮ್ಮ ಅಭಿಪ್ರಾಯ ಕೇಳದೆ ಹೇಗೆ ತಾನೆ ರಾಜೀನಾಮೆ ಕೊಟ್ಟು ಹೋಗುತ್ತಾನೆ. ಕೆಲವರು ತಾನು ಕ್ಷೇತ್ರದ ಜನರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ರಾಜೀನಾಮೆ ನೀಡುವ ಮೊದಲು ಬಂಡಲ್ ಬಿಡುತ್ತಾರೆ. ಆದರೆ ಅವರು ಕೇಳುವುದೇನಿದ್ದರೂ ಅವರ ಕೆಲವು ಬೆಂಬಲಿಗರ ಮಾತುಗಳನ್ನು ಮಾತ್ರ. ಅವರು ತಮ್ಮ ಕ್ಷೇತ್ರದ ಒಟ್ಟು ಮತದಾರರ ಮೂರನೇ ಒಂದು ಭಾಗದಷ್ಟು ಮತದಾರರನ್ನು ಕೇಳುತ್ತಾರಾ, ಇಲ್ವಲ್ಲ. ಹಾಗಿದ್ದ ಮೇಲೆ ಅವರು ಅದೇಕೆ ಬೆಡ್ ರೂಂನಿಂದ ಅಡುಗೆ ಕೋಣೆಗೆ ಹೋದಷ್ಟು ಸಲೀಸಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುತ್ತಾರೆ. ಇಷ್ಟೆಲ್ಲ ಆಗಿಯೂ ಒಬ್ಬ ಪಕ್ಷಾಂತರಿ ಚುನಾವಣೆಗೆ ನಿಲ್ಲುತ್ತಾರೆ ಎಂದರೆ ಅವರಿಗೆ ಮತ ನೀಡದೆ ಸೋಲಿಸಬೇಕಾಗಿರುವುದು ಆ ಕ್ಷೇತ್ರದ ಮತದಾರರ ಕರ್ತವ್ಯ. ಯಾಕೆಂದರೆ ಒಬ್ಬ ವ್ಯಕ್ತಿ ಐದು ವರ್ಷ ತನ್ನ ಪಕ್ಷಕ್ಕೆ ನಿಷ್ಟನಾಗಿರುವುದಿಲ್ಲ ಎಂದಾದರೆ ಅವನು ತನ್ನ ಕ್ಷೇತ್ರದ ಮತದಾರರಿಗೆ ಎಷ್ಟು ನಿಷ್ಟನಾಗಿರಬಲ್ಲ..
Leave A Reply