ಮೇಯರ್ ನಿಮ್ಮ ಚೇಂಬರ್ ಬಿಟ್ಟು ಆರೋಗ್ಯ ವಿಭಾಗಕ್ಕೆ ಹೋಗಿ ಬನ್ನಿ!!
ಈ ಭಾನುವಾರ ಮಂಗಳೂರಿನಲ್ಲಿ ಅಸಂಖ್ಯಾತ ಮದುವೆಗಳು ನಡೆಯಲಿವೆ. ಅದರೊಂದಿಗೆ ಉಪನಯನ, ಗೃಹಪ್ರವೇಶ, ಮೆಹಂದಿ ಸಹಿತ ಅನೇಕ ಇತರ ಕಾರ್ಯಕ್ರಮಗಳು ನಡೆಯಲಿವೆ. ಇದೆಲ್ಲ ಮೂರ್ನಾಕು ತಿಂಗಳ ಮೊದಲೇ ಆಗಿರುವ ಪ್ಲಾನ್. ಒಂದು ಮದುವೆ ಎಂದರೆ ಆ ಮನೆಯವರಿಗೆ ಒಂದೊಂದು ಬ್ರಹ್ಮಕಲಶ ಮಾಡಿದಷ್ಟೇ ಸಿದ್ಧತೆ ಇರುತ್ತದೆ. ಮನೆಯೊಳಗೆ, ಹೊರಗೆ ಮನೆಯವರು ಅನೇಕ ಬಾರಿ ಸೇರಿ ಸಭೆಗಳನ್ನು ಮಾಡಿರುತ್ತಾರೆ. ವರನ ರಜೆಯಿಂದ ಹಿಡಿದು ವಧುವಿನ ಸಮ್ಮತಿಯನ್ನು ಸೇರಿ ಪುರೋಹಿತರ ಮುಹೂರ್ತ, ಕ್ಯಾಟರಿಂಗ್, ಛತ್ರ, ವಾಲಗ, ಫೋಟೋಗ್ರಾಫರ್, ಆಕೆಸ್ಟ್ರಾ, ವಿಡಿಯೋ, ಬಂಗಾರ ಆಭರಣ, ವಸ್ತ್ರ, ಉಡುಗೆ, ತೊಡುಗೆಯಿಂದ ಹಿಡಿದು ಬ್ಯೂಟಿಶೀಯನ್ ತನಕ ಪ್ರತಿಯೊಂದು ಸಿದ್ಧತೆ ಆಗಿರುತ್ತದೆ. ಮದುವೆಯ ಆಮಂತ್ರಣ ಪತ್ರಿಕೆ ತಯಾರು ಮಾಡಿಕೊಂಡು ಪೋಸ್ಟ್, ಮೇಲ್, ವಾಟ್ಸಪ್ ಹಾಗೂ ವೈಯಕ್ತಿಕವಾಗಿ ಕೊಟ್ಟು ಇನ್ನೇನೂ ಮದುವೆಗೆ ಹೊರಡಲು ತಯಾರಾಗುವ ಸಮಯ ಬಂದಾಗ ಐವತ್ತು ಮಂದಿ ಮಾತ್ರ ಮದುವೆಯ ಹಾಲ್ ನಲ್ಲಿ ಇರಬೇಕು ಎಂದು ನಿಯಮ ಬಂದರೆ ಮದುವೆ ಮನೆಯವರು ಏನು ಮಾಡಬೇಕು. ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗುತ್ತದೆಯಲ್ಲವೇ? ಅದರೊಂದಿಗೆ ಐವತ್ತು ಜನರ ಪಟ್ಟಿ ಮಾಡಿ ಅದನ್ನು ಅಪ್ರೂವಲ್ ತೆಗೆದುಕೊಳ್ಳಿ ಎಂದರೆ ಆಗ ನಿಜಕ್ಕೂ ಇನ್ನು ಸಂಕಟ ಜಾಸ್ತಿ ಆಗುತ್ತದೆ. ಮಂಗಳೂರಿನಲ್ಲಿ ಮದುವೆ ಇದ್ರೆ ಅದಕ್ಕೆ ಅನುಮತಿ ಕೊಡಬೇಕಾಗಿರುವವರು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು. ಸದ್ಯ ಪಾಲಿಕೆಯ ಆರೋಗ್ಯ ವಿಭಾಗ ಎಂದರೆ ಅದೊಂದು ಸಣ್ಣ ಮಾರ್ಕೆಟ್ ತರಹ ಆಗಿದೆ. ಕಾರ್ಪೋರೇಟರ್ ಗಳದ್ದೇ ಒಂದಿಷ್ಟು ಕಾರುಬಾರು ನಡೆಯುತ್ತದೆ. ತಮ್ಮ ವಾರ್ಡಿನ ಜನರ ಮದುವೆ ಪಟ್ಟಿ ಹಿಡಿದು ಕೆಲಸ ಮಾಡಿಸಿಕೊಳ್ಳಲು ಅಲ್ಲಿಯೇ ಬೀಡುಬಿಟ್ಟಿರುತ್ತಾರೆ.
ಯಾಕೆಂದರೆ ಅವರಿಗೆ ಇದೊಂದು ರೀತಿಯಲ್ಲಿ ಮೈಲೇಜ್ ವೃದ್ಧಿಸುವ ಕಾಲ. ನೀವೆ ಹೋಗಿ ಮಾಡಿಸಿಕೊಂಡು ಬನ್ನಿ ಎಂದು ಯಾವುದಾದರೂ ಕಾರ್ಪೋರೇಟರ್ ತನ್ನ ವಾರ್ಡಿನಲ್ಲಿ ಯಾರಿಗಾದರೂ ಹೇಳಿದರೆ ಮುಂದಿನ ಬಾರಿ ಅವನು ಅಥವಾ ಅವಳು ಗೆಲ್ಲುವುದು ಕಷ್ಟವಾಗುತ್ತದೆ. ಅದಕ್ಕಾಗಿ ಕಾರ್ಪೋರೇಟರ್ ಗಳು ಸ್ವತ: ಆರೋಗ್ಯ ವಿಭಾಗಕ್ಕೆ ಹೋಗಿ ಅಲ್ಲಿ ತಮ್ಮ ವಶೀಲಿಬಾಜಿ ಶುರುಮಾಡಿಕೊಂಡಿರುತ್ತಾರೆ. ಇನ್ನು ಜನಸಾಮಾನ್ಯರು ಹೆಚ್ಚಾಗಿ ಬರುತ್ತಾ ಇರುವುದರಿಂದ ಅಲ್ಲಿ ಸಾಮಾಜಿಕ ಅಂತರವನ್ನು ಮರೆತು ಗುಂಪುಕೂಡಿರುತ್ತಾರೆ. ನೀವು ಕಾರ್ಪೋರೇಟರ್ ಗಳ ಕೈಯಲ್ಲಿ ಪಟ್ಟಿ ಕೊಟ್ಟರೆ ಅಲ್ಲಿ ಬೇಗ ಕೆಲಸ ಆಗುತ್ತದೆ. ಅದೇ ನೀವೇ ಸ್ವತ: ಹೋದರೆ ಅಲ್ಲಿ ನಾಳೆ ಬನ್ನಿ, ನಾಡಿದ್ದು ಬನ್ನಿ ಎನ್ನುವ ಮಾತುಗಳನ್ನು ಕೇಳಬೇಕಾಗುತ್ತದೆ. ಮೊದಲೇ ಈ ಹೊಸ ನಿಯಮಗಳಿಂದ ಟೆನ್ಷನ್ ನಲ್ಲಿರುವ ಜನರಿಗೆ ಅಧಿಕಾರಿಗಳು ಹೀಗೆ ಸತಾಯಿಸಿದರೆ ಹೇಗೆ? ಅದಕ್ಕಾಗಿ ನಾನು ಹೇಳುವುದೆನೆಂದರೆ ಕಾಮನ್ ಸೆನ್ಸ್ ಇದ್ದವರಿಗೆ ಇಂತಹ ಸಮಸ್ಯೆ ಆಗುತ್ತದೆ ಎಂದು ಮೊದಲೇ ಗೊತ್ತಿರುತ್ತದೆ. ಅದಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾದ ಅಗತ್ಯ ಇತ್ತು. ಆದರೆ ಅತೀ ಬುದ್ಧಿವಂತರು ಇರುವ ಪಾಲಿಕೆಯಲ್ಲಿ ಇದೆಲ್ಲ ಮಾಡುವಂತಹ ಬುದ್ಧಿವಂತಿಕೆ ಬೇಕಲ್ಲ. ಕನಿಷ್ಟ ಮೇಯರ್ ಮತ್ತು ಪಾಲಿಕೆ ಕಮೀಷನರ್ ಅವರು ತಮ್ಮ ಚೇಂಬರ್ ನಿಂದ ಹೊರಗೆ ಬಂದು ನೋಡಿದರೂ ಸಾಕಿತ್ತು. ಇಂತಹುದನ್ನೆಲ್ಲ ನೋಡಲು ಆಗದಿದ್ದರೆ ನೀವು ಅದೆಷ್ಟು ಮೀಟಿಂಗ್ ಮಾಡಿದರೆ ಪ್ರಯೋಜನ?ಇಷ್ಟೇ ಅಲ್ಲ, ಪಾಲಿಕೆಯಲ್ಲಿ ಟ್ರೇಡ್ ಲೈಸೆನ್ಸ್ ನವೀಕರಣ ಮಾಡುವ ಪ್ರಕ್ರಿಯೆಯಂತೂ ಆಮೆಗಿಂತ ನಿಧಾನವಾಗಿ ತೆವಳಿಕೊಂಡು ಸಾಗುತ್ತಿದೆ. ನವೀಕರಣಕ್ಕೆ ಅರ್ಜಿ ಕೊಟ್ಟು ಎರಡು ತಿಂಗಳು ಕಳೆದರೂ ಇನ್ನು ಚಲನ್ ಸಿಗುತ್ತಿಲ್ಲ. ಒಂದು ವೇಳೆ ಆನ್ ಲೈನ್ ನಲ್ಲಿ ಪೇಮೆಂಟ್ ಮಾಡಿದರೆ ಟ್ರೇಡ್ ಲೈಸೆನ್ಸ್ ಇದರ ಪ್ರಿಂಟ್ ಔಟ್ ತೆಗೆಯಲು ಆಗುತ್ತಿಲ್ಲ. ಇದನ್ನು ಕೇಳುವವರೇ ಇಲ್ಲ. ಒಂದು ವೇಳೆ ಈ ಬಗ್ಗೆ ಹೆಲ್ತ್ ಇನ್ಸಪೆಕ್ಟರ್ ಅವರನ್ನು ಕೇಳಲು ಹೋದರೆ ಅವರು ಅಂಗಡಿ ನೋಡಲು ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತದೆ. ಸರಿಯಾಗಿ ನೋಡಿದರೆ ಪಾಲಿಕೆ ಅಧಿಕಾರಿಗಳು ಬೆಳಿಗ್ಗೆ ಮಾತ್ರ ಫೀಲ್ಡ್ ನಲ್ಲಿ ಇರಬೇಕು. ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಕಚೇರಿಗೆ ಬಂದು ಬಿಡಬೇಕು. ಆದರೆ ಆಗಲೂ ಇವರು ಫೀಲ್ಡಿಗೆ ಹೋಗಿದ್ದಾರೆ ಎನ್ನುವ ಮಾತು ಕೇಳುತ್ತದೆ. ಲೆಕ್ಕ ಪ್ರಕಾರ ಹೊಸ ಕಾನೂನು ಬಂದ ಕಾರಣ ಈ ವಿಳಂಬ ಆಗುತ್ತಿದೆ. ಇದೆಲ್ಲ ಮಾರ್ಚ್ 15 ರ ಒಳಗೆ ಆಗಿಹೋಗಬೇಕಿತ್ತು. ಒಬ್ಬೊಬ್ಬ ಇನ್ಸಪೆಕ್ಟರ್ ಅಧೀನದಲ್ಲಿ ಪಾಲಿಕೆಯ 3-4 ವಾರ್ಡುಗಳು ಬರುತ್ತವೆ. ಅವರು ಓಕೆ ಮಾಡಿದರೆ ಮಾತ್ರ ಪ್ರಕ್ರಿಯೆ ಮುಂದುವರೆಯುತ್ತದೆ. ಇನ್ನು ಎಲ್ಲಿಯ ತನಕ ಈ ಸಮಸ್ಯೆಯ ಬ್ರಹ್ಮಾಂಡ ರೂಪ ಇದೆ ಎಂದರೆ ಒರ್ವ ಮಹಿಳಾ ಹೆಲ್ತ್ ಇನ್ಸಪೆಕ್ಟರ್ ಬಳಿ 900 ನವೀಕರಣವಾಗಬೇಕಾದ ಮಳಿಗೆಗಳ ಅರ್ಜಿ ಇದೆ. ಅದೆಲ್ಲ ಸರಿಯಾಗಬೇಕಾದರೆ ಅದೆಷ್ಟು ಸಮಯ ಬೇಕೋ? ಇದರಿಂದ ತಮ್ಮ ಉದ್ದಿಮೆಯ ಟ್ರೇಡ್ ಲೈಸೆನ್ಸ್ ನವೀಕರಣ ಆಗಬೇಕಾದರೆ ಆಗಾಗ ಬಂದು ಪಾಲಿಕೆಯಲ್ಲಿ ನಾಗರಿಕರು ವಿಚಾರಿಸಬೇಕಾಗುತ್ತದೆ. ಆದರೆ ಅಲ್ಲಿ ಸರಿಯಾದ ಉತ್ತರ ಸಿಗುತ್ತಿಲ್ಲ. ಇದೆಲ್ಲ ಸರಿ ಮಾಡಬೇಕಾಗುವ ಜವಾಬ್ದಾರಿಯೂ ಮೇಯರ್ ಹಾಗೂ ಕಮೀಷನರ್ ಮೇಲಿದೆ. ಅದು ಬಿಟ್ಟು ಮೇಯರ್ ತಾವು ಐದು ಸಲ ಕಾರ್ಪೋರೇಟರ್ ಆಗಿದ್ದೇನೆ ಎಂದು ತಲೆಯಲ್ಲಿ ಮಾತ್ರ ಇಟ್ಟುಕೊಂಡರೆ ಹಾಗೂ ಕಮೀಷನರ್ ತಾವು ಐಎಎಸ್ ಎಂದು ಡಿಗ್ರಿ ಹೊತ್ತುಕೊಂಡರೆ ಪ್ರಯೋಜನವಿಲ್ಲ. ಜನರ ಕೆಲಸ ಆಗಬೇಕು. ಅದು ಮುಖ್ಯ!!
Leave A Reply