ರಸ್ತೆಉಬ್ಬುಗಳಿಗೆ ಪೆಂಟ್ ಹೊಡೆದ ಕಾರ್ಪೋರೇಟರ್ ಗೆ ನಮೋ ನಮ!!
ಒಬ್ಬ ಕಾರ್ಪೋರೇಟರಿಗೆ ಇಚ್ಚಾಶಕ್ತಿ ಇದ್ದರೆ ಅವರು ಏನು ಮಾಡಬಹುದು ಎನ್ನುವ ಪಾಸಿಟಿವ್ ಸ್ಟೋರಿಯನ್ನು ಇವತ್ತು ನಿಮ್ಮ ಮುಂದಿಡುತ್ತಿದ್ದೇನೆ. ಈ ಕಥೆ ಪಾಲಿಕೆಯ ಬೇರೆ ಸದಸ್ಯರಿಗೆ ಪ್ರೇರಣೆ ಆದರೆ ನಮ್ಮ ಪ್ರಯತ್ನ ಸಾರ್ಥಕ. ಯಾವುದೇ ರಸ್ತೆಯಲ್ಲಿ ಹಂಪ್ಸ್ ಮಾಡಬೇಕಾದರೂ ಬೇಕಾಬಿಟ್ಟಿ ಎತ್ತರ, ಅಗಲ, ಇಷ್ಟಬಂದ ಕಡೆ ಮಾಡಿಬಿಡುವಂತಿಲ್ಲ. ಅದಕ್ಕೆ ಇಂತದೇ ಎನ್ನುವ ನೀತಿನಿಯಮಾವಳಿಗಳು ಇವೆ. ಅದನ್ನು ಇಂಡಿಯನ್ ರೋಡ್ ಕಾಂಗ್ರೆಸ್ ಎನ್ನುವ ಗೈಡ್ ಲೈನ್ಸ್ ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ಅದನ್ನು ಗಣನೆಗೆ ತೆಗೆದುಕೊಳ್ಳದೇ ಎಷ್ಟೋ ರಸ್ತೆ ಉಬ್ಬುಗಳು ನಿರ್ಮಾಣವಾಗುತ್ತದೆ. ಯಾವುದಕ್ಕೂ ವೈಜ್ಞಾನಿಕ ತಳಹದಿ ಇರುವುದಿಲ್ಲ. ಹೀಗೆ ಅವೈಜ್ಞಾನಿಕವಾಗಿ ನಿರ್ಮಿಸುವ ರಸ್ತೆ ಉಬ್ಬುಗಳು ವಾಹನ ಸಂಚಾರರಿಗೆ ಎಷ್ಟರಮಟ್ಟಿಗೆ ಅಪಾಯ ಎನ್ನುವುದು ಗೊತ್ತಾದರೆ ನಿಮಗೆ ಹಂಪ್ಸ್ ಮೇಲೆ ವಾಹನ ತೆಗೆದುಕೊಂಡು ಹೋಗಲು ಹೆದರಿಕೆ ಆಗಬಹುದು. ಹಂಪ್ಸ್ ಗಳ ಎತ್ತರ, ಅಗಲ ಮತ್ತು ಸಮತಟ್ಟು ಅಸಮತೋಲನದಲ್ಲಿ ಇದ್ದರೆ ಹಲವು ಬಾರಿ ದ್ವಿಚಕ್ರ ಸವಾರರು ಅಥವಾ ಅವರ ಹಿಂದೆ ಕುಳಿತಿರುವ ಸವಾರರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದ ಉದಾಹರಣೆಗಳು ಇವೆ. ಹಾಗೆ ಅವೈಜ್ಞಾನಿಕ ಹಂಪ್ಸ್ ಗಳಲ್ಲಿ ಆಗಾಗ ಸಂಚರಿಸುವುದರಿಂದ ಸವಾರರಿಗೆ ಹೃದಯಕ್ಕೂ ಸಮಸ್ಯೆ ಬರುವುದು ಇದೆ.
ಆದ್ದರಿಂದ ಮಂಗಳೂರು ಮಹಾನಗರ ಪಾಲಿಕೆ ಕೂಡ ಇಂಡಿಯನ್ ರೋಡ್ ಕಾಂಗ್ರೆಸ್ಸ್ ಕೊಟ್ಟ ನಿರ್ಭಂಧನೆಗಳನ್ನು ಅನುಸರಿಸಿಯೇ ಹಂಪ್ಸ್ ನಿರ್ಮಿಸಬೇಕಾಗುತ್ತದೆ. ಪಾಲಿಕೆಯ ವ್ಯಾಪ್ತಿಯಲ್ಲಿ ನೂರಾರು ಹಂಪ್ಸ್ ಗಳಿವೆ. ಇದರಲ್ಲಿ ಎಷ್ಟು ವೈಜ್ಞಾನಿಕವಾಗಿದೆ ಎಂದು ಯಾರಾದರೂ ಗಮನಿಸಿದ್ದಾರಾ?
ವೈಜ್ಞಾನಿಕವಾಗಿರುವ ಹಂಪ್ಸ್ ಗಳನ್ನು ಸರಿಯಾಗಿ ಗಮನಿಸಿ. ಎತ್ತರ ನಂತರ ಅಲ್ಲಿ ಒಂದಿಷ್ಟು ಸಮತಟ್ಟು ನಂತರ ಇಳಿಮುಖವಾಗಿ ಇರುತ್ತವೆ. ಅವುಗಳಿಗೆ ಜೀಭ್ರಾ ಕ್ರಾಸ್ ಪೇಂಟ್ ಕೂಡ ಹೊಡೆಯಲಾಗುತ್ತದೆ. ಹಾಗೆ ಪೇಂಟ್ ಹೊಡೆಯುವುದರಿಂದ ದೂರದಿಂದಲೇ ಬರುವ ವಾಹನ ಸವಾರರಿಗೆ ಅದು ತೋರುತ್ತದೆ. ಇದು ವೇಗವನ್ನು ತಗ್ಗಿಸಲು ಮತ್ತು ನಿಧಾನವಾಗಿ ಹಂಪ್ಸ್ ಪಾಸಾಗಲು ಸಹಾಯಕಾರಿ. ಹಿಂದೆ ಪಾಲಿಕೆಯಲ್ಲಿ ಏನು ಆಗುತ್ತಿತ್ತು ಎಂದರೆ ಹಂಪ್ಸ್ ಆಗಬೇಕು ಎಂದು ಇದ್ದರೆ ಒಂದು ಎಸ್ಟಿಮೇಟ್ ಮಾಡುವುದು ಮತ್ತು ಯಾರಿಗಾದರೂ ಗುತ್ತಿಗೆ ಕೊಡುವುದು. ಅಲ್ಲಿಗೆ ಮುಗಿಯಿತು. ನಂತರ ಅದನ್ನು ಯಾರೂ ನೋಡುವುದಿಲ್ಲ. ಯಾಕೆಂದರೆ ಅಧಿಕಾರಿಗಳಿಗೂ ಇದು ತುಂಬಾ ಚಿಕ್ಕ ವಿಷಯ ಎಂದು ಮನಸ್ಸಿನಲ್ಲಿ ಇರುತ್ತದೆ. ಇನ್ನು ಹಂಪ್ಸ್ ಗಳಿಗೆ ಪೆಂಟ್ ಹೊಡೆಯದೇ ಇದ್ದರೂ ಪಾಲಿಕೆಯಲ್ಲಿ ಅದನ್ನು ಕೇಳುವವರಿಲ್ಲ. ಈಗ ಕೂಡ ಹಾಗೆ ಆಗಿದೆ. ಲೇಡಿಹಿಲ್ ನಿಂದ ಕೊಟ್ಟಾರದವರೆಗೆ ಮೂರು ಹಂಪ್ಸ್ ಗಳ ರಚನೆಯಾಗಿದೆ. ಅದರಲ್ಲಿ ಎರಡು ಗಣೇಶ್ ಕುಲಾಲ್ ಎನ್ನುವ ಪಾಲಿಕೆ ಸದಸ್ಯರ ವಾರ್ಡಿಗೆ ಬರುತ್ತದೆ. ಅದು ಮುಖ್ಯ ರಸ್ತೆಯಲ್ಲಿದೆ. ಇನ್ನೆರಡು ಚಿಲಿಂಬಿಯಲ್ಲಿ ಮಲರಾಯ ಧೂಮಾವತಿ ದೈವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಬರುತ್ತದೆ. ಈ ನಾಲ್ಕು ರಸ್ತೆ ಉಬ್ಬುಗಳಿಗೂ ಬಣ್ಣ ಸುಣ್ಣ ಏನೂ ಇಲ್ಲ. ಇದರಿಂದ ಜನರಿಗೆ ಸಹಜವಾಗಿ ತೊಂದರೆಯಾಗುತ್ತಿತ್ತು.
ಅದನ್ನು ಜನರು ವಾರ್ಡಿನ ಕಾರ್ಪೋರೇಟರ್ ಗಣೇಶ್ ಕುಲಾಲ್ ಅವರ ಗಮನಕ್ಕೆ ತಂದರು. ಪಾಲಿಕೆಯನ್ನು ನಂಬಿದರೆ ತಮ್ಮ ಈ ಅವಧಿಯಲ್ಲಿ ಸುಣ್ಣ ಕಾಣುವ ಯೋಗ ಹಂಪ್ಸ್ ಗಳಿಗೆ ಸಿಗಲಿಕ್ಕಿಲ್ಲ ಎಂದು ಖಾತ್ರಿ ಇದ್ದ ಗಣೇಶ್ ಅವರು ತಮ್ಮದೇ ಹಣದಲ್ಲಿ ಪೇಂಟ್ ಖರೀದಿಸಿದರು. ಹೇಗೂ ಈಗ ಜನತಾ ಕರ್ಫ್ಯೂ. ಲೇಡಿಹಿಲ್ ನಿಂದ ಕೊಟ್ಟಾರದ ತನಕ ವಾಹನಗಳ ಸಂಚಾರ ಕಡಿಮೆ ಇರುತ್ತದೆ. ಅದರಲ್ಲಿಯೂ ರಾತ್ರಿಯ ನಂತರ ವಾಹನ ಓಡಾಟ ಬಹುತೇಕ ಇರುವುದಿಲ್ಲ. ಆ ಸಮಯವನ್ನು ನೋಡಿ ಅವರು ಸ್ವತ: ಪೆಂಟ್ ಡಬ್ಬ ಹಿಡಿದು ಹಂಪ್ಸ್ ಗಳಿಗೆ ಬಣ್ಣ ಬಳಿಯಲು ಮುಂದಾದರು. ನಾವು ಸೇವಾಂಜಲಿ ಚಾರೀಟೆಬಲ್ ಟ್ರಸ್ಟ್ ನಿಂದ ಪೊಲೀಸರಿಗೆ, ರಸ್ತೆ ಬದಿ ಆಹಾರ ಸಿಗದೇ ತೊಂದರೆಗೆ ಒಳಗಾಗುವವರಿಗೆ ಆಹಾರದ ವ್ಯವಸ್ಥೆ ಮಾಡಲು ಮೊನ್ನೆ ರಾತ್ರಿ ಓಡಾಡುತ್ತಿರುವಾಗ ಗಣೇಶ್ ಕುಲಾಲ್ ಅವರ ಈ ಕಾರ್ಯ ಗಮನಕ್ಕೆ ಬಂದಿದೆ. ನಾನು ಆವತ್ತೆ ಅದರ ಫೋಟೋ ತೆಗೆದು ನನ್ನ ಫೇಸ್ ಬುಕ್ಕಿನಲ್ಲಿ ಹಾಕಿದ್ದೆ. ಯಾಕೆಂದರೆ ಪಾಲಿಕೆ ಸದಸ್ಯರು ಭ್ರಷ್ಟಾಚಾರ ಮಾಡಿದಾಗ, ಅಭಿವೃದ್ಧಿ ಹೆಸರಿನಲ್ಲಿ ಅಕ್ರಮಗಳಿಗೆ ಕೈ ಹಾಕಿದಾಗ ಮುಖಕ್ಕೆ ಹೊಡೆದ ಹಾಗೆ ಬರೆಯುವಷ್ಟೇ ವೇಗವಾಗಿ ಅವರು ಮಾದರಿ ಕಾರ್ಯ ಮಾಡುವಾಗ ಬೆನ್ನು ತಟ್ಟುವ ಕೆಲಸ ಕೂಡ ಮಾಡಬೇಕು. ಆದರೆ ಉತ್ತಮ ಮಾದರಿ ಕಾರ್ಯ ಮನಪಾ ಸದಸ್ಯರಿಂದ ನಡೆಯುವುದೇ ಕಡಿಮೆಯಾಗಿರುವಾಗ ನನಗೆ ಅಂತಹ ಅವಕಾಶ ಸಿಕ್ಕಿದ್ದು ಕಡಿಮೆ. ಈಗ ಗಣೇಶ್ ಕುಲಾಲ್ ಮಾಡಿರುವ ಕೆಲಸ ಬೇರೆಯವರಿಗೆ ಪ್ರೇರಣೆಯಾಗಲಿ ಎನ್ನುವ ಕಾರಣಕ್ಕೆ ಬರೆದಿದ್ದೇನೆ. ಇದನ್ನು ಉಳಿದವರು ಕೂಡ ಅನುಸರಿಸಲಿ. ಎಲ್ಲರೂ ನಾಳೆಯಿಂದ ನಿಮ್ಮ ವಾರ್ಡಿನ ಹಂಪ್ಸ್ ಗಳಿಗೆ ಪೇಂಟ್ ಹೊಡೆಯಲು ಹೋಗಿ ಎಂದು ನಾನು ಹೇಳುವುದಿಲ್ಲ. ಒಂದು ವೇಳೆ ನಿಮ್ಮ ವಾರ್ಡಿನಲ್ಲಿ ಪೆಂಟ್ ಹೊಡೆಯದ ಹಂಪ್ಸ್ ಗಳಿದ್ದರೆ ಪೆಂಟ್ ಹೊಡೆದರೆ ಒಳ್ಳೆಯದು. ಯಾಕೆಂದರೆ ಇದರಿಂದ ನಿಮ್ಮದೇ ವಾರ್ಡಿನ ಜನರಿಗೆ ಅನುಕೂವಾಗುತ್ತದೆ.
ಒಂದು ವೇಳೆ ಮಹಿಳಾ ಕಾರ್ಪೋರೇಟರ್ ಗಳಿಗೆ ಹೀಗೆ ರಾತ್ರಿ ಹೊತ್ತು ಕೆಲಸ ಮಾಡಿಸುವುದು ಕಷ್ಟವಾದರೆ ಅವರು ತಮ್ಮ ಗಂಡದಿರ, ಸಹೋದರರ ಸಹಾಯ ಪಡೆಯಬಹುದು. ತಮ್ಮ ಕ್ಷೇತ್ರದ ಯುವಮೋರ್ಚಾ ಕಾರ್ಯಕರ್ತರ, ಅಧ್ಯಕ್ಷರ ಸಹಾಯ ಪಡೆಯಬಹುದು. ಇನ್ನು ಪೆಂಟಿಗೆ ಹಣ ಎಲ್ಲಿಂದ ತರುವುದು ಎನ್ನುವ ಸಮಸ್ಯೆ ಇದ್ದರೆ ಕಾರ್ಪೋರೇಟರಿಗೆ ಎರಡು ಡಬ್ಬಿ ಪೇಂಟ್ ಕೊಡಲ್ಲ ಎನ್ನುವಷ್ಟು ಜಿಪುಣರು ಯಾವುದೇ ವಾರ್ಡಿನಲ್ಲಿ ಯಾರೂ ಇರಲಿಕ್ಕಿಲ್ಲ. ಹಿಂದೆ ಹಂಪ್ಸ್ ಗುತ್ತಿಗೆದಾರರು ಹಂಪ್ಸ್ ಗಳಿಗೆ ಬಣ್ಣ ಬಳಿಯಲೇಬೇಕು ಎಂಬ ಕಡ್ಡಾಯವಿರಲಿಲ್ಲ. ಆದರೆ ಈಗ ರಸ್ತೆ ಉಬ್ಬುಗಳನ್ನು ನಿರ್ಮಿಸುವ ಗುತ್ತಿಗೆದಾರರು ಜೀಭ್ರಾ ಕ್ರಾಸ್, ಕತ್ತಲೆಯಲ್ಲಿ ಹೊಳೆಯಲು ರಿಫ್ಲೆಕ್ಟರ್ಸ್ ಹಾಗೂ ಅನತಿ ದೂರದಲ್ಲಿ ಹಂಪ್ಸ್ ಇದೆ ಎನ್ನುವ ಬೋರ್ಡ್ ಅಳವಡಿಸಲೇಬೇಕು. ಆದರೆ ಗುತ್ತಿಗೆದಾರರು ನಿರ್ಮಿಸದಿದ್ದರೆ ಪಾಲಿಕೆಯಿಂದ ಕೇಳುವವರು ಇರುತ್ತಾರೋ, ಇಲ್ಲವೋ, ಆದರೆ ಜನರ ತೊಂದರೆಯನ್ನು ಗಣೇಶ್ ಕುಲಾಲ್ ಕೇಳಿದ್ದಾರೆ. ತಾವೇ ಪೆಂಟ್ ಡಬ್ಬ ಹಿಡಿದು ಕೆಲಸಕ್ಕೆ ಇಳಿದಿದ್ದಾರೆ. ಅದು ಕಾರ್ಪೋರೇಟರ್ ಗಳ ನಿಜವಾದ ಕರ್ತವ್ಯ. ಶುಭವಾಗಲಿ ಗಣೇಶ್ ಕುಲಾಲ್!
Leave A Reply