ಪತ್ರಿಕಾ ಧರ್ಮ ಎನ್ನುವುದು ಈಗ ಪುಸ್ತಕದಲ್ಲಿ ಮಾತ್ರ!!
ನಮ್ಮ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎನ್ನುವ ಶಬ್ದ ಇದೆ. ಅದು ಕೇವಲ ಶಬ್ದವಾಗಿ ಇರುತ್ತೆ ಮತ್ತು ಅದನ್ನು ನಿಜ ಅರ್ಥದಲ್ಲಿ ಪಾಲಿಸಲು ಆಗುವುದಿಲ್ಲ ಎನ್ನುವುದು ಪತ್ರಿಕೋದ್ಯಮದ ಎಬಿಸಿಡಿ ಕಲಿಯಲು ಶುರು ಮಾಡುವ ವಿದ್ಯಾರ್ಥಿಯಿಂದ ಹಿಡಿದು ಇಂದು ನಾಳೆ ನಿವೃತ್ತಿ ಹೊಂದಲಿರುವ ಸಂಪಾದಕನ ತನಕ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೂ ಟಿವಿ ಮಾಧ್ಯಮಗಳು ಬಂದ ನಂತರ ಪತ್ರಕರ್ತರಾಗುವ ಕ್ರೇಜ್ ಹೆಚ್ಚಾಗಿದೆ ಬಿಟ್ಟರೆ ಅದರಿಂದ ನಿಜ ಅರ್ಥದಲ್ಲಿ ಮಾಧ್ಯಮಗಳು ನೊಂದವರ, ಅಸಹಾಯಕರ ಮೇಲೆ ಆಗುವ ದೌರ್ಜನ್ಯವನ್ನು ತಡೆಗಟ್ಟುವ ಪ್ರಯತ್ನ ಮಾಡಿವೆಯಾ ಎನ್ನುವುದು ಈಗ ಮೂಡಿ ಬರುತ್ತಿರುವ ಪ್ರಶ್ನೆ.
ಅಷ್ಟಕ್ಕೂ ಪತ್ರಿಕಾ ಸ್ವಾತಂತ್ರ್ಯವನ್ನು ಮಾಧ್ಯಮ ಸಂಸ್ಥೆಗಳ ಮಾಲೀಕರು ಬಳಸುತ್ತಿಲ್ಲವಾ, ಖಂಡಿತಾ ಬಳಸುತ್ತಿದ್ದಾರೆ. ಅದರಲ್ಲಿ ಯಾವುದೇ ಸಂಶಯ ಬೇಡಾ. ಆದರೆ ಹೇಗೆ? ವಿವರಿಸುತ್ತೇನೆ. 2005 ರ ಬಳಿಕ ಇಲೆಕ್ಟ್ರಾನಿಕ್ ಮಾಧ್ಯಮಗಳು ಅದರಲ್ಲಿಯೂ ಟಿವಿಗಳ ಭರಾಟೆ ಹೆಚ್ಚಾಗುತ್ತಿದ್ದಂತೆ ಇದರ ಲಾಭವನ್ನು ಮೊದಲು ಎನ್ ಕ್ಯಾಶ್ ಮಾಡಿಕೊಂಡಿದ್ದು ರಾಜಕಾರಣಿಗಳು. ನೀವು ನಮ್ಮ ಪರವಾಗಿರುವ ಸುದ್ದಿಗಳನ್ನು ಹೈಲೈಟ್ಸ್ ಮಾಡಿ, ವಿರುದ್ಧವಾಗಿರುವ ವಿಚಾರಗಳನ್ನು ಡೆಸ್ಕ್ ನಲ್ಲಿ ಮುಗಿಸಿಬಿಡಿ ಎಂದು ಯಾವಾಗ ಅವರು ಮಾಧ್ಯಮ ಲೋಕದ ಧಣಿಗಳ ಎದುರು ಆಫರ್ ಇಟ್ಟರೋ ಅಲ್ಲಿಗೆ ಮಾಧ್ಯಮ ಅಪ್ಪಟ ಉದ್ಯಮವಾಗಿ ಬದಲಾಯಿತು. ಅದರೊಂದಿಗೆ ಬಲಿಷ್ಟ ಮಾಧ್ಯಮಗಳ ಮಾಲೀಕರಿಗೆ ರಾಜ್ಯಸಭಾ ಸ್ಥಾನ, ವಿಧಾನಪರಿಷತ್ ಸ್ಥಾನ, ಗೆಲ್ಲಬಹುದಾಗಿರುವ ಕ್ಷೇತ್ರಗಳಲ್ಲಿ ಟಿಕೆಟ್ ಕೊಡಲು ಪಕ್ಷಗಳು ತುದಿಗಾಲಲ್ಲಿ ನಿಂತವೋ ಎಲ್ಲಿ ಹೆಚ್ಚು ಲಾಭವಿದೆಯೋ ಅಲ್ಲಿ ತಮ್ಮ ಮಾಧ್ಯಮವನ್ನೇ ಈ ಮಾಲೀಕರು ಲೀಸಿಗೆ ಕೊಟ್ಟಂತೆ ವರ್ತಿಸಿದರು. ನನಗೆ ಅನುಕೂಲ ಇರುವ ತನಕ ಇಂತಿಂತಹ ಪಕ್ಷಕ್ಕೆ ನಮ್ಮ ನಿಷ್ಟೆ ಇರುತ್ತದೆ ಎಂದು ಅಲಿಖಿತವಾದ ಒಪ್ಪಂದವೊಂದು ಮೇಲಿನ ಸ್ತರದಲ್ಲಿ ನಡೆದುಹೋಯಿತು. ಆ ಮಾಧ್ಯಮ ಸಂಸ್ಥೆ ಹೊಂದಿರುವ ಪತ್ರಿಕೆ, ಟಿವಿಯಲ್ಲಿ ಯಾವ ವಿಷಯ ಹೆಡ್ಡಿಂಗ್ ಬರಬೇಕು, ಯಾವ ಸುದ್ದಿ ಬ್ರೇಕಿಂಗ್ ಆಗಬೇಕು, ಯಾರ ಇಮೇಜು ಸುಧಾರಿಸಬೇಕು, ಯಾರ ಮೈಲೇಜು ಹೆಚ್ಚಿಸಬೇಕು, ಯಾರಿಗೆ ಅದುಮಬೇಕು ಎನ್ನುವುದು ನಿರ್ಧಾರವಾಗಿ ಹೋಯಿತು. ಪತ್ರಿಕೆಗಳನ್ನು ಗಮನಿಸುವಾಗ ಅದರಲ್ಲಿ ಮೊದಲ ಪುಟವನ್ನು ನೋಡುವಾಗಲೇ ಅದು ಯಾರ ಪರವಾಗಿ ಇದೆ ಎಂದು ಗೊತ್ತಾಗುತ್ತದೆ. ಇದು ರಾಷ್ಟ್ರಮಟ್ಟದಿಂದ ಹಿಡಿದು ತಾಲೂಕು ಮಟ್ಟದಲ್ಲಿಯೂ ನಡೆದುಕೊಂಡು ಬರುತ್ತಿದೆ. ಹಿಂದೆ ರಾಜಕಾರಣಿಗಳು ಸುದ್ದಿಗೋಷ್ಟಿ ಮಾಡಿದ ನಂತರ ಅದು ಮರುದಿನ ಪತ್ರಿಕೆಯಲ್ಲಿ ಹೇಗೆ ವಿಶ್ಲೇಷಣೆಯಾಗಿ ಮೂಡಿಬರುತ್ತದೆ ಎನ್ನುವ ಆತಂಕದಲ್ಲಿ ಇರುತ್ತಿದ್ದರು. ಆದರೆ ಈಗ ಆ ರಾಜಕಾರಣಿ ಪತ್ರಕರ್ತರೊಂದಿಗೆ ಚೆನ್ನಾಗಿದ್ದಾನಾ, ಡೆಸ್ಕಿನವರೊಂದಿಗೆ ಚೆನ್ನಾಗಿದ್ದಾನಾ, ಸಂಸ್ಥೆಯ ಮಾಲೀಕರೊಂದಿಗೆ ಎಷ್ಟು ಚೆನ್ನಾಗಿದ್ದಾನೆ, ಆಗಾಗ ಜಾಹೀರಾತು ಕೊಡುವ ಗಿರಾಕಿಯಾ, ವರದಿಗಾರರ ಕಿಸೆ ಬಿಸಿ ಮಾಡುವ, ಅವರ ರಾತ್ರಿಯ ಪಾನಗೋಷ್ಟಿಯ ಬಿಲ್ ಕೊಡುವ ಗಿರಾಕಿಯಾ, ಗಿಫ್ಟ್ ಕೊಡುವ ಅಸಾಮಿಯಾ, ಪತ್ರಕರ್ತ ಮನೆ ಕಟ್ಟುವುದರಿಂದ ಹಿಡಿದು ಆ ಪತ್ರಕರ್ತನ ಮಗುವಿನ ತೊಟ್ಟಿಲು ಶಾಸ್ತ್ರಕ್ಕೆ ಧನ ಸಹಾಯ ಮಾಡುವ ವ್ಯಕ್ತಿಯಾ ಎಂಬುವುದರ ಮೇಲೆ ಸುದ್ದಿಗಳು ಹೇಗೆ, ಎಷ್ಟು ವೈಭವಿಕರಣವಾಗಿ ಬರಬೇಕು ಎನ್ನುವುದು ನಿರ್ಧಾರವಾಗುತ್ತದೆ. ಒಂದು ವೇಳೆ ಪ್ರತಿಷ್ಟಿತ ಕಾಲೇಜುಗಳು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೂ ಅದನ್ನು ಸುದ್ದಿ ಮಾಡುವ ಸ್ವಾತಂತ್ರ್ಯವನ್ನು ಆ ಊರಿನ ಪತ್ರಿಕೆಗಳು ಹೊಂದಿಲ್ಲ ಎಂದರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಅರ್ಥ ಎಲ್ಲಿಂದ ಬಂತು. ಯಾಕೆಂದರೆ ನಾಳೆ ಜಾಹೀರಾತು ಕೂಡ ಬೇಕಲ್ಲ, ನಾವು ಸಮಾಜ ಸುಧಾರಣೆಗೆ ಹೊರಟರೆ ನ್ಯೂಸ್ ಪ್ರಿಂಟ್ ನಿಂದ ಹಿಡಿದು ಸಂಬಳ, ವಿದ್ಯುತ್ ಬಿಲ್, ಕಟ್ಟಡದ ಬಾಡಿಗೆ, ಪತ್ರಕರ್ತರ ಸಂಬಳವನ್ನು ಎಲ್ಲಿಂದ ತರುವುದು ಎಂದು ಮಾಲೀಕ ಫೋನಿನಲ್ಲಿ ಅರಚುತ್ತಾನೆ. ಅಲ್ಲಿಗೆ ಅಂತಹ ನ್ಯೂಸ್ ಪತ್ರಿಕೆಗಳಲ್ಲಿ ಪ್ರಿಂಟಾಗುವುದೇ ಇಲ್ಲ. ಒಂದು ಕಾಲದಲ್ಲಿ ಪತ್ರಿಕೆ ನಡೆಸುವವರಿಗೆ ಸಮಾಜದ ಓರೆಕೋರೆ, ಅಂಕುಡೊಂಕುಗಳನ್ನು ಸರಿಪಡಿಸುವ ಕಾಳಜಿ ಇತ್ತು. ಪತ್ರಿಕೆಯಲ್ಲಿ ಲಾಭ ಏಕೈಕ ಉದ್ದೇಶ ಇರಲಿಲ್ಲ. ಸರಕಾರಕ್ಕೆ ಸರಕಾರವನ್ನೇ ಎದುರುಹಾಕಿಕೊಂಡು ಪತ್ರಿಕೆ, ಟಿವಿ ಮಾಡಿದವರೂ ಇದ್ದಾರೆ. ಆದರೆ ಅವರು ತಮ್ಮ ಪಕ್ಷದ ಸರಕಾರ ಬಂದಾಗ ಜಾಣ ಮೌನ ವಹಿಸಿರುವುದು ಇದೆ. ಇನ್ನು ಕಳೆದ ವರ್ಷ ಕೆಲವು ಆಸ್ಪತ್ರೆಗಳು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದು ನಿಮಗೆ ನೆನಪಿರಬಹುದು. ಅದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಯಿತು. ಹೆಸರು ಕೂಡ ಬಂತು. ಕೆಲವು ಪತ್ರಿಕೆಗಳು ಆಸ್ಪತ್ರೆಗಳ ಮಂಡಳಿಯೊಂದಿಗ ಚೌಕಾಶಿಗೆ ಇಳಿದುಬಿಟ್ಟವು. ಅವರ ಪತ್ರಿಕೆಯಲ್ಲಿ ಆಸ್ಪತ್ರೆಗಳ ಹೆಸರೇ ಬರಲಿಲ್ಲ. ಏಳನೇ ಪುಟದ ಮೂಲೆಯಲ್ಲಿ ಚಿಕ್ಕ ಕಾಲಂನಲ್ಲಿ ವಿಷಯ ಬಂತು. ಟಿವಿಯವರಲ್ಲಿ ಕೆಲವರು ಆಸ್ಪತ್ರೆಗಳ ಪರ ಮಾಡಿದರೆ ಇನ್ನು ಕೆಲವರು ಆಸ್ಪತ್ರೆಯ ಮಾಲೀಕ ನಮ್ಮ ಗೆಳೆಯನ ಆಪ್ತ ಮಿತ್ರ ಎನ್ನುತ್ತಾ ವಿಷಯವನ್ನು ಅಲ್ಲಿಗೆ ಬಿಟ್ಟವು. ಜಿಲ್ಲಾಡಳಿತದಿಂದ ತ್ರಿಸದಸ್ಯ ಸಮಿತಿ ಆಗಿ ವಿಚಾರಣೆ ನಡೆಯಿತು. ಅದರ ವರದಿಯನ್ನು ಯಾವ ಪತ್ರಿಕೆಯವರು ಕೇಳಲಿಲ್ಲ. ಸಮಿತಿಯವರು ಕೊಡಲಿಲ್ಲ. ಒಟ್ಟಿನಲ್ಲಿ ಪತ್ರಿಕಾ ಧರ್ಮ ಎನ್ನುವುದು ಅವರವರ ಅನುಕೂಲತೆಗೆ ತಕ್ಕಂತೆ ಬದಲಾಗಿದೆ. ಎಡಪಂಥಿಯ ಚಿಂತನೆಗಳುಳ್ಳ ಪತ್ರಕರ್ತರು ಜಾಸ್ತಿ ಇದ್ದಾರೆ ಎಂದು ಒಂದು ಕಾಲದಲ್ಲಿ ಬಿಜೆಪಿ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಈಗ ಅದೇ ಮುಖಂಡರು ಮೋದಿಯವರು ಎಲ್ಲರನ್ನು ಚೆನ್ನಾಗಿ ಇಟ್ಟುಕೊಂಡಿರುವುದರಿಂದ ನಮ್ಮ ಪಕ್ಷವನ್ನು ಹೊಗಳಿಯೇ ಸುದ್ದಿ ಬರುತ್ತದೆ, ಅದರಿಂದ ನಾವು ಬಚಾವ್. ಇಲ್ಲದಿದ್ದರೆ ದೇವರೇ ಗತಿ ಎನ್ನುತ್ತಿದ್ದಾರೆ. ಈಗ ಕಾಂಗ್ರೆಸ್ಸಿಗರು ನಮ್ಮ ಪರ ಯಾವ ಪತ್ರಿಕೆ ಮತ್ತು ಟಿವಿ ಕೂಡ ಇಲ್ಲ ಎಂದು ತಾವೇ ಟಿವಿ ವಾಹಿನಿಯನ್ನು ಶುರು ಮಾಡಲು ಹೊರಟಿದ್ದಾರೆ. ಅದಕ್ಕೆ ಕಳೆದ ತಿಂಗಳು ಮಲ್ಲಿಕಾರ್ಜುನ ಖರ್ಗೆಯವರು ಚಾಲನೆ ನೀಡಿದ್ದಾರೆ. ಹಾಗಾದರೆ ಒಂದು ಉದ್ಯಮದ ಭಾಗವಾಗಿರುವ ಪತ್ರಕರ್ತರನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವುದಕ್ಕಿಂತ ಆಯಾ ಪಕ್ಷಗಳ ಅಂಗ ಎನ್ನುವುದು ಸರಿಯಾಗುತ್ತಾ!!!
Leave A Reply