ಮಾಸ್ಕ್ ಹಾಕಲ್ಲ, ಕೊರೊನಾ ಬಂದರೆ ಸರಕಾರ ವೈಫಲ್ಯ ಎನ್ನುತ್ತಾರೆ!!
ಜನತಾ ಕರ್ಫ್ಯೂ ಎಂದು ಹೆಸರಿಟ್ಟು ಮುಖ್ಯಮಂತ್ರಿ ಯಡ್ಯೂರಪ್ಪ ಕಳೆದ ವಾರ ಘೋಷಣೆ ಮಾಡಿದಾಗಲೇ ಇದು ನಿರರ್ಥಕವಾಗುತ್ತೆ ಎಂದು ಅನೇಕರಿಗೆ ಅನಿಸಿಬಿಟ್ಟಿತ್ತು. ಯಾಕೆಂದರೆ ಕರ್ಫ್ಯೂ ಶಬ್ದದ ಮುಂದೆಯೇ ಜನತಾ ಇದೆ. ಅಂದರೆ ಜನರೇ ಸ್ವಯಂ ವಿಧಿಸಿಕೊಂಡ ಕರ್ಫ್ಯೂ. ಯಾರಿಗೆ ತಮ್ಮ ಜೀವ ಇಷ್ಟವಿದೆಯೋ ಅವರು ತಮ್ಮ ಸುರಕ್ಷತೆಗಾಗಿ ಮನೆಯಲ್ಲಿ ಇರುತ್ತಾರೆ. ಯಾರಿಗೆ ಇಷ್ಟವಿಲ್ಲವೋ ಅವರು ಮನೆಯಿಂದ ಹೊರಗೆ ಇರುತ್ತಾರೆ. ಹೀಗೆ ಪರಿಸ್ಥಿತಿ ಆಗಿಬಿಟ್ಟಿದೆ. ಯಾರಿಗೂ ಕೊರೊನಾ ಹೆದರಿಕೆ ಕಾಣಿಸುತ್ತಿಲ್ಲ. ಟಿವಿಯವರು ಇಷ್ಟು ಭಯಾನಕ ದೃಶ್ಯಗಳನ್ನು ತೋರಿಸುತ್ತಿದ್ದರೂ ಯಾರು ಕೊರೊನಾವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದಾದರೆ ಇಲ್ಲಿ ಕರ್ಫ್ಯೂ ವಿಧಿಸಿರುವುದಾದರೂ ಯಾಕೆ?
ಬೇಕಾದರೆ ಬೆಳಿಗ್ಗೆ 12 ಗಂಟೆಯ ತನಕ ನೋಡಿ. ಜೀವಮಾನದ ಎಲ್ಲಾ ಅಡುಗೆಯನ್ನು ಇವತ್ತೇ ಮಾಡಿ ತಿನ್ನುತ್ತಾರೋ ಎನ್ನುವ ಹಾಗೆ ಪ್ರತಿ ಮನೆಯಿಂದ ಗಂಡ, ಹೆಂಡತಿ, ಕುಟುಂಬದವರು ಹೊರಗೆ ಬಂದು ತರಕಾರಿ ಅಂಗಡಿಗಳಿಗೆ ಹೋಗಿ ಪ್ರತಿ ತರಕಾರಿ ಮುಟ್ಟಿ ನೋಡಿ ಚೀಲಗಟ್ಟಲೆ ತೆಗೆದುಕೊಂಡು ಬರುತ್ತಾರೆ. ಮರುದಿನ ಅದೇ ಕುಟುಂಬ ಮತ್ತೆ ತರಕಾರಿ ಅಂಗಡಿ ಕಡೆ ಹೋಗುತ್ತದೆ. ಹಾಗಾದ್ರೆ ಇದು ಕೊರೊನಾ ವಿರುದ್ಧ ಸಮರ ಅಲ್ಲ, ಕೊರೊನಾ ನೀನು ಬಾ ಎಂದು ಆಮಂತ್ರಣ ನೀಡಲು ಹೋಗುವ ಪರಿಪಾಠ. ಇಲ್ಲದೆ ಹೋದ್ರೆ ಸೊಂಕಿತರ ಸಂಖ್ಯೆ ನಿತ್ಯ ಒಂದು ಸಾವಿರದ ಆಸುಪಾಸಿನಲ್ಲಿ ಇರುತ್ತಿರಲಿಲ್ಲ. ಇದು ಕೇವಲ ಒಂದೆರಡು ಊರಿನ ಕಥೆ ಅಲ್ಲ. ಎಷ್ಟೋ ಪ್ರದೇಶಗಳಲ್ಲಿ ನೀವು ಬೆಳಿಗ್ಗೆ ಹೊರಗೆ ಬಂದರೆ ಕರ್ಫ್ಯೂ ಇದೆಯೋ ಜಾತ್ರೆ ಇದೆಯೋ ಎನ್ನುವ ಸಂಶಯ ಬರುತ್ತದೆ. ನನ್ನ ಪ್ರಕಾರ ಸರಕಾರ ಕರ್ಪ್ಯೂ ಎಲ್ಲವನ್ನು ತೆಗೆದು ಜನರನ್ನು ಅವರ ಇಚ್ಚೆಗೆ ಬಿಡುವುದು ಒಳ್ಳೆಯದು. ನಿಮ್ಮ ಇಚ್ಚೆಗೆ ತಕ್ಕಂತೆ ಇರಿ ಎಂದು ಹೇಳಿಬಿಡುವುದು ಒಳ್ಳೆಯದು. ಆಗ ಕೊರೊನಾ ತಗುಲಿ ಯಾರಾದರೂ ಆಸ್ಪತ್ರೆ ಸೇರಿದರೆ ನೀವು ಕ್ಯಾರ್ ಲೆಸ್ ಮಾಡಿ ಹೀಗೆ ಸೊಂಕು ತಗಲಿಕೊಂಡಿದೆ ಎಂದು ವೈದ್ಯರು ಹೇಳಿದರೆ ಆಗ ಅದೇ ಸೊಂಕಿತ ಮತ್ತು ಅವನ ಮನೆಯವರು ಏನು ಹೇಳುತ್ತಾರೆ ಎಂದರೆ ಇದಕ್ಕೆಲ್ಲ ಸರಕಾರವೇ ಕಾರಣ.
ಹಾಗೆ ಅವರು ಹೇಳುತ್ತಿದ್ದ ಹಾಗೆ ಅದನ್ನು ವಿಡಿಯೋ ಮಾಡಲು ತಯಾರಾಗಿಯೇ ಇರುತ್ತಾರೆ. ಅದು ಟಿವಿಯಲ್ಲಿ ಬಂದೇ ಬರುತ್ತದೆ. ಈ ಸರಕಾರ ಪ್ರಯೋಜನವಿಲ್ಲ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಲೇ ಹೋಗುತ್ತವೆ. ಜನರಿಗೆ ಈ ಸರಕಾರದ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಕಿ ಮಲಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ತನ್ನ ಕುಟುಂಬದವ, ಸ್ನೇಹಿತ, ಹಿತೈಷಿ, ನೆರೆಮನೆಯವ ಯಾರೇ ಇರಲಿ ಅವರ ಈ ಪರಿಸ್ಥಿತಿಗೆ ಸರಕಾರವೇ ಕಾರಣ ಎಂದು ಜನರು ಅಂದುಕೊಳ್ಳುತ್ತಾರೆ. ಮಾಸ್ಕ್ ಹಾಕದೇ ದೈಹಿಕ ಅಂತರ ಪಾಲಿಸದೇ ಊರೀಡಿ ತಿರುಗಾಡುತ್ತಾ ಇದ್ದ ವ್ಯಕ್ತಿ ಸೋಂಕಿತ ಆಗಿ ಆಸ್ಪತ್ರೆಯಲ್ಲಿ ಮಲಗಿದ ಕೂಡಲೇ ಬೆರಳು ತೋರಿಸುವುದು ಸರಕಾರದ ಕಡೆ. ಇನ್ನು ಕೆಲವರು ತಮ್ಮದೇ ಪಕ್ಷದ ಸರಕಾರ ಇದ್ರೆ ಅಲ್ಲಿನ ಜಿಲ್ಲಾಧಿಕಾರಿ, ಆಸ್ಪತ್ರೆಯ ಅಧೀಕ್ಷಕರನ್ನು, ವೈದ್ಯರನ್ನು ದೂರುತ್ತಾ ಓಡಾಡಿಕೊಂಡಿರುತ್ತಾರೆ. ಆ ಡಿಸಿ, ಡಿಎಚ್ ಒ ಅಥವಾ ಸರಕಾರಿ ವೈದ್ಯರಿಂದ ರಾಜೀನಾಮೆ ಕೊಡಿಸಿ ಎಂದು ತನ್ನ ಜಿಲ್ಲೆಯ ಶಾಸಕರ ಮೇಲೆಯೂ, ಉಸ್ತುವಾರಿ ಸಚಿವರ ಮೇಲೆಯೋ ಒತ್ತಡ ಹಾಕಿಸಲು ಪ್ರಯತ್ನಿಸುತ್ತಾನೆ. ಎಲ್ಲಿಯಾದರೂ ಅಂತವರ ಮಾತುಗಳನ್ನು ಕೇಳಿ ಅಂತಹ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಹೋದರೆ ನಂತರ ಬೇರೆಯವರನ್ನು ತರುವುದು ಎಲ್ಲಿಂದ? ಯಾಕೆಂದರೆ ಇದು ಒಬ್ಬೊಬ್ಬರಿಂದ ಆಗುವ ಸಮಸ್ಯೆ ಅಲ್ಲ. ಮಾಸ್ಕ್ ಹಾಕಿಕೊಳ್ಳಿ ಎಂದು ನಮಗೆ ಇಲ್ಲಿಯ ತನಕ ಒಂದೂವರೆ ವರ್ಷದಲ್ಲಿ ನೂರಾರು ಮಂದಿ ಹೇಳಿರಬಹುದು. ಸಾವಿರಾರು ಬಾರಿ ನಾವು ಟಿವಿಯಲ್ಲಿ ಹೇಳುತ್ತಿರುವುದನ್ನು ಕೇಳಿರಬಹುದು. ಹತ್ತಾರು ಬಾರಿ ಪತ್ರಿಕೆಗಳಲ್ಲಿ ಬಂದಿರುವ ಜಾಗೃತಿ ಸಂದೇಶಗಳನ್ನು ಓದಿರಬಹುದು. ಇಷ್ಟಾದ್ರೂ ನಾವು ಮಾಸ್ಕ್ ಹಾಕದೇ ಉಡಾಫೆಯಿಂದ ವರ್ತಿಸಿರುತ್ತೇವೆ. ಹೀಗಿರುವಾಗ ಆಮ್ಲಜನಕದ ಸಿಲೆಂಡರ್ ಖಾಲಿಯಾಗುವಾಗುವ ಸಂದರ್ಭದಲ್ಲಿ ಆ ರೋಗಿಗೆ ಬೇರೆ ಸಿಲೆಂಡರ್ ವ್ಯವಸ್ಥೆಯಿಂದ ಹಿಡಿದು ಜಿಲ್ಲೆಯಲ್ಲಿ ಅಂತಹ ನೂರಾರು ರೋಗಿಗಳ ಜೀವ ಉಳಿಸಲು ಬೇಕಾದ ಸಿಲೆಂಡರ್ ತರಿಸುವುದರಿಂದ ಹಿಡಿದು ಅದನ್ನು ಆಯಾ ಆಸ್ಪತ್ರೆಗಳಿಗೆ ಪೂರೈಸಿ ಅಗತ್ಯವಿರುವ ರೋಗಿಗಳ ಬೆಡ್ಡಿನ ತನಕ ಅದು ತಲುಪಿ ಹಿಂದಿನ ಸಿಲೆಂಡರ್ ಖಾಲಿಯಾದಾಗ ಸಿಲೆಂಡರ್ ಬದಲಾಯಿಸುವ ತನಕ ನೂರಾರು ಕೈಗಳು, ತಲೆಗಳು ಬೇಕಾಗುತ್ತವೆ. ಇದು ಒಬ್ಬ ಅಧಿಕಾರಿಯಿಂದ ಆಗುವಂತದ್ದಲ್ಲ. ನಾನು ನಿತ್ಯ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾವಿರಾರು ಜನರಿಗೆ ಉಚಿತ ಊಟ ನೀಡಲು ಹೋಗುವಾಗ ಗಮನಿಸಿದ್ದೇನೆ. ಅಲ್ಲಲ್ಲಿ ಚೆಕ್ ಪೋಸ್ಟ್ ಇರುತ್ತದೆ. ಪೊಲೀಸರು ಕೂಡ ಇರುತ್ತಾರೆ. ಆದರೆ ಅವರು ಎಷ್ಟು ಗಂಭೀರವಾಗಿ ಅನಾವಶ್ಯಕ ತಿರುಗುವವರ ವಿರುದ್ಧ ಕ್ರಮ ತೆಗೆದುಕೊಳ್ಳತ್ತಾರೆ ಎನ್ನುವುದನ್ನು ನೋಡಬೇಕು. ಇನ್ನು ಕೊರೊನಾ ನಿಯಂತ್ರಣದಲ್ಲಿ ಸರಕಾರ ವಿಫಲವಾಗಿರುವುದರಿಂದ ರಾಜೀನಾಮೆ ಕೊಡಿ ಎಂದು ವಿಪಕ್ಷಗಳು ಕೇಳುತ್ತಿವೆ. ಮೈಸೂರಿನ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಅನೇಕರು ಪ್ರಾಣಬಿಟ್ಟಂತಹ ಘಟನೆ ನಡೆದಿದೆ. ಅಲ್ಲಿ ಉಸ್ತುವಾರಿ ಸಚಿವರು ಸುರೇಶ್ ಕುಮಾರ್. ರಾಜ್ಯದ ಮುಖ್ಯಮಂತ್ರಿ ಯಡ್ಯೂರಪ್ಪ. ಆರೋಗ್ಯ ಸಚಿವರಾಗಿರುವವರು ಸುಧಾಕರ್. ಇವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಹಾಗಾದರೆ ಅವರು ರಾಜೀನಾಮೆ ಕೊಟ್ಟರೆ ಮುಂದೆ ಯಾರು?
ಕಳೆದ ವಾರ ಬೆಳಿಗ್ಗೆ 6 ಗಂಟೆಯಿಂದ ಹತ್ತು ಗಂಟೆಯ ತನಕ ಹಣ್ಣು ಹಂಪಲು, ತರಕಾರಿ, ಮೀನು, ಮಾಂಸ ತೆಗೆದುಕೊಂಡು ಹೋಗಲು ಇದ್ದ ಅವಕಾಶ ಈಗ ಹನ್ನೆರಡು ಗಂಟೆಯ ತನಕ ವಿಸ್ತರಿಸಲಾಗಿದೆ. ಹಿಂದೆ ಎಂಟು ಗಂಟೆಗೆ ಹೊರಗೆ ಬಂದವರು ಹತ್ತು ಗಂಟೆಗೆ ಒಳಗೆ ಹೋಗುತ್ತಿದ್ದರು. ಈಗ ಅದೇ ಜನ ಹನ್ನೆರಡು ಗಂಟೆಯ ತನಕ ಹೊರಗೆ ಸುತ್ತಾಡುತ್ತಿದ್ದಾರೆ. ಮುಂದೆ ಮಧ್ಯಾಹ್ನ ಎರಡು ಗಂಟೆಯ ತನಕ ವಿಸ್ತರಿಸಿದರೆ ಇದೇ ಜನ ಎರಡು ಗಂಟೆಯ ತನಕ ಹೊರಗೆ ಸುತ್ತಾಡುತ್ತಿರುತ್ತಾರೆ. ಇನ್ನು ಮನೆಗೆ ಹೋಗಿ ಸರಕಾರ ವೈಫಲ್ಯ ಎನ್ನುತ್ತಾರೆ.!
Leave A Reply