ಮದುವೆ ಸಿಂಪಲ್ ಮಾಡಿ, ಆ ಹಣವನ್ನು ದಾನ ಮಾಡಿ!
ಶುಕ್ರವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಿಷ್ಟು ಕಠಿಣ ನಿಯಮಗಳನ್ನು ತರಲು ಜಿಲ್ಲಾಡಳಿತ ಸಜ್ಜಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಮೂರು ಗಂಟೆಯ ಅವಧಿಗೆ ಜನರಿಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಒಂಭತ್ತು ಗಂಟೆಗೆ ಅಂಗಡಿಯವರು ವ್ಯಾಪಾರ ಮುಗಿಸಿ ಹತ್ತು ಗಂಟೆಯ ಒಳಗೆ ಮನೆಯನ್ನು ಸೇರಲು ನಿಯಮ ತರಲಾಗಿದೆ. ಸದ್ಯಕ್ಕಂತೂ ಇದಕ್ಕಿಂತ ಟಫ್ ರೂಲ್ ಬೇರೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇಡೀ ದಿನ ಬಂದ್ ಮಾಡಿ ಹೊರಗೆ ಬರಬೇಡಿ ಎಂದರೆ ಅಗತ್ಯ ವಸ್ತುಗಳು ಬೇಕಲ್ಲ ಎಂದು ಜನರೇ ಬೊಬ್ಬೆ ಹೊಡೆಯುತ್ತಾರೆ. ಅಷ್ಟಕ್ಕೂ ಅಗತ್ಯ ವಸ್ತುಗಳು ಯಾವುವು ಎನ್ನುವುದಕ್ಕೆ ಪ್ರತಿಯೊಬ್ಬರ ಬಳಿಯೂ ಬೇರೆ ಬೇರೆ ಮಾನದಂಡಗಳಿವೆ.
ಕೆಲವರು ಪಿಸ್ತಾ, ಗೊಡಂಬಿ, ಬಾದಾಮು ತೆಗೆದುಕೊಳ್ಳಲು ಕೂಡ ಹೊರಗೆ ಬರುವವರಿದ್ದಾರೆ. ಅಕ್ಕಿ, ಬೇಳೆ, ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕಾಗುವಷ್ಟು ತೆಗೆದುಕೊಂಡು ಮನೆಯ ಒಳಗೆ ಹೋದರೆ ಐದಾರು ಬಗೆಯ ತರಕಾರಿಗಳನ್ನು ವಾರಕ್ಕೆ ಬೇಕಾದಷ್ಟು ಖರೀದಿಸಿ ಫ್ರಿಡ್ಜ್ ನಲ್ಲಿ ತುಂಬಿಸಿದರೆ, ಮಾಂಸಹಾರಿಗಳು ಮೊಟ್ಟೆ, ಒಣಮೀನು, ಒಂದಿಷ್ಟು ಹಸಿ ಮೀನು ತೆಗೆದುಕೊಂಡು ಬಿಟ್ಟರೆ ಒಂದು ವಾರಕ್ಕೆ ಹೊರಗೆ ಬರುವಂತಹ ಅಗತ್ಯವೇ ತುಂಬಾ ಜನರಿಗೆ ಇರುವುದಿಲ್ಲ. ಆದರೂ ನಿತ್ಯ ಹೊರಗೆ ಬರುವವರು ಇದ್ದಾರೆ. ಅವರಿಗೆ ನಿತ್ಯ ತೆಗೆದುಕೊಳ್ಳುವಂತದ್ದು ಏನೂ ಇರುತ್ತೋ, ಗೊತ್ತಿಲ್ಲ. ಎಷ್ಟೋ ಜಿನಸಿ ಅಂಗಡಿಗಳಲ್ಲಿ ಬಿಸ್ಕಿಟ್ ಖರೀದಿಸಲು ಹೋದವರಿಗೆ ಡೇಟ್ ಬಾರ್ ಆದ ಬಿಸ್ಕಿಟ್ ಕೊಟ್ಟಿರುವುದು ಉಂಟು. ಯಾಕೆಂದರೆ ಹೊಸ ಉತ್ಪತ್ತಿ ಆಗುತ್ತಿಲ್ಲ. ಈಗ ಹೇರಳವಾಗಿ ಪೂರೈಕೆಯಾಗುತ್ತಿರುವುದು ಅಕ್ಕಿ ಮತ್ತು ಸಾಂಬಾರು ಪದಾರ್ಥ ಮಾತ್ರ. ಅದಕ್ಕೆ ನಿತ್ಯ ಹೊರಗೆ ಬರುವ ಅಗತ್ಯ ಏನಿದೆ? ಇನ್ನು ನಗರ ಪ್ರದೇಶಗಳಲ್ಲಿ ಪ್ರತಿ ರಸ್ತೆಯಲ್ಲಿ ಕನಿಷ್ಟ ಒಂದು ಜಿನಸಿ ಅಂಗಡಿಯಾದರೂ ಇದ್ದೇ ಇರುತ್ತೆ. ಒಂದು ರಸ್ತೆಯಲ್ಲಿ ಇಲ್ಲದಿದ್ದರೆ ಪಕ್ಕದ ರಸ್ತೆಯಲ್ಲಾದರೂ ಇದ್ದೇ ಇರುತ್ತದೆ.
ಮನೆಯಲ್ಲಿ ಕುಳಿತು ದೇಹ ದಂಡಿಸಲು ಆಗದವರು ಕನಿಷ್ಟ ನಡೆದುಕೊಂಡಾದರೂ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿಸಿ ಮನೆಗೆ ಮರಳಬಹುದು. ಆದರೆ ಅದಕ್ಕೂ ಬೈಕ್ ನಲ್ಲಿ ಬರುವವರು ಇದ್ದಾರೆ. ತಪ್ಪಿದರೆ ಕಾರು ಹೊರಗೆ ತೆಗೆಯುವವರು ಇದ್ದಾರೆ. ಇನ್ನು ಈ ಬಾರಿಯೂ ಕಿಟ್ ವಿತರಿಸಿ ಆ ಹೊರೆಯನ್ನು ಹೊರಲು ಆಗುವುದಿಲ್ಲ ಎಂದುಕೊಂಡಿರುವ ಜನಪ್ರತಿನಿಧಿಗಳು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೆಲಸ ಮಾಡಲು ಅನುಮತಿ ನೀಡಿದ್ದಾರೆ. ಯಾಕೆಂದರೆ ಕಟ್ಟಡ ಕಾರ್ಮಿಕರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರು. ಅವರು ಕೆಲಸ ಇಲ್ಲ ಎಂದು ಜಿಲ್ಲೆಯಿಂದ ಹೊರ ನಡೆದರೆ ಅವರನ್ನು ಮತ್ತೆ ತರಿಸುವುದು ಕಷ್ಟ. ಇನ್ನು ಅವರನ್ನು ಇಲ್ಲಿಯೇ ಇಟ್ಟುಕೊಂಡರೆ ಸಾಕುವುದು ಕಷ್ಟ ಎನ್ನುವುದು ಗೊತ್ತಿರುವುದರಿಂದ ಅವರು ದುಡಿಯಲಿ ಮತ್ತು ತಿನ್ನಲಿ ಎಂದು ಸರಕಾರ ತೀರ್ಮಾನಿಸಿದೆ. ಇನ್ನು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಹಾಯಕವಾಗಿ ದುಡಿಯುವ ಕಾರ್ಮಿಕರಿಗೂ ತಡೆ ಒಡ್ಡಿಲ್ಲ. ಯಾಕೆಂದರೆ ಅವರು ಕೂಡ ಅಗತ್ಯ ಮತ್ತು ಅನಿವಾರ್ಯ. ಇನ್ನು ವೈನ್ ಶಾಪ್ ಸರಕಾರಕ್ಕೆ ಅನಿವಾರ್ಯ. ಅದು ಬಂದ್ ಮಾಡಿದರೆ ಕುಡುಕರು ಸ್ಯಾನಿಟೈಸರ್ ಕುಡಿದು ಸಾಯುತ್ತಾರೆ ಎನ್ನುವುದು ನೆಪ. ಖಜಾನೆ ತುಂಬಿಸಲು ಇವರು ಬೇಕು. ಇನ್ನು ಆನ್ ಲೈನ್ ಫುಡ್ ಸಪ್ಲೈ ಇರಲಿದೆ. ಯಾಕೆಂದರೆ ಮನೆಯಲ್ಲಿ ಅಡುಗೆ ಮಾಡಲು ಸಮಯವಿಲ್ಲದಷ್ಟು ಬ್ಯುಸಿ(!) ಇರುವವರಿಗೆ ಅದು ಬೇಕು. ಅವರು ಇರುತ್ತಾರೆ. ಮೀಡಿಯಾ ಇದ್ದೇ ಇರುತ್ತದೆ.
ಇನ್ನು ಮೇ 15 ರ ಒಳಗೆ ಏನೇ ಶುಭ ಸಮಾರಂಭ ಇದ್ದರೂ ಐವತ್ತು ಜನರೊಳಗೆ ಮಾಡಿ ಮುಗಿಸಬೇಕು ಎನ್ನುವ ನಿಯಮ ಇದೆ. ನಂತರ ಯಾವುದೇ ಶುಭ ಸಮಾರಂಭ ಇಟ್ಟುಕೊಳ್ಳಬೇಡಿ. ಇಟ್ಟರೂ ಅದನ್ನು ಮುಂದೂಡಿ, ಎಲ್ಲವೂ ಸರಿ ಆದ ಮೇಲೆ ಮಾಡುವಿರಂತೆ ಎಂದು ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿನಂತಿಸಿದ್ದಾರೆ. ಮೇಯಲ್ಲಿ ಅನೇಕ ಶುಭ ಸಮಾರಂಭಗಳು ಇದ್ದವು. ಅವುಗಳನ್ನು ಸದ್ಯ ಮುಂದಕ್ಕೆ ಹಾಕುವುದು ಸೂಕ್ತ. ಆಗುವುದೇ ಇಲ್ಲ. ಮುಹೂರ್ತ ಇನ್ನು ಎಷ್ಟೋ ವರ್ಷಗಳ ತನಕ ಇಲ್ಲ ಎಂದರೆ ಪುರೋಹಿತರು ಆ ಮನೆಯ ಬೆರಳೆಣಿಕೆಯ ಸದಸ್ಯರನ್ನು ಮುಂದಿರಿಸಿ ಚಿಕ್ಕ ಆಚಾರ, ಸಂಪ್ರದಾಯ ಮಾಡಿ ಮುಗಿಸಿ ನಂತರ ಎಲ್ಲವೂ ಸರಿ ಆದ ನಂತರ ಅದ್ದೂರಿಯಾಗಿ ಮಾಡಬೇಕೆನಿಸಿದವರು ಗೆಟ್ ಟು ಗೆದರ್ ಮಾಡಬಹುದು. ಎಲ್ಲರನ್ನು ಕರೆದೇ ಮಾಡಬೇಕು ಎಂದು ಅಂದುಕೊಂಡವರು ಸಿಂಪಲ್ ಆಗಿ ಮನೆಯ ಆವರಣದಲ್ಲಿಯೇ ಮುಗಿಸಿ ಆ ಹಣವನ್ನು ಕೋವಿಡ್ ನಿಂದ ಒದ್ದಾಡುತ್ತಾ, ಹೊಟ್ಟೆಬಟ್ಟೆಗೆ ಕಷ್ಟ ಇರುವವರಿಗೆ ದಾನ ಮಾಡಿದರೆ ಅದಕ್ಕಿಂತ ಪುಣ್ಯ ಬೇರೆ ಏನಿದೆ. ಇನ್ನು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಎಲ್ಲೆಲ್ಲಿ ಅರ್ಧ ಬಿಡಲಾಗಿದೆಯೋ ಅದನ್ನು ಈ ಸಮಯದಲ್ಲಿಯೇ ಮಾಡುವುದು ಒಳ್ಳೆಯದು. ಯಾಕೆಂದರೆ ಟ್ರಾಫಿಕ್ ತೊಂದರೆ ಇರಲ್ಲ. ಆರಾಮವಾಗಿ ಕಾಮಗಾರಿಯನ್ನು ಮಾಡಿ ಮುಗಿಸಬಹುದು. ಕಾಮಗಾರಿಗಳು ಇರುತ್ತಾ ಎನ್ನುವುದು ಮಾತ್ರ ಇನ್ನು ಗ್ಯಾರಂಟಿ ಆಗಿಲ್ಲ. ಒಂದು ವೇಳೆ ಇದ್ದರೆ ಅದರ ಮೇಲ್ವಿಚಾರಣೆ ವಹಿಸಿಕೊಂಡವರು ತಮ್ಮ ಕಾರ್ಮಿಕರಿಗೆ ಗುರುತು ಪತ್ರ ಅಥವಾ ಚೀಟಿ ಕೊಟ್ಟರೆ ಒಳ್ಳೆಯದು. ಆ ಕಾಮಗಾರಿ ನಿಲ್ಲಬೇಕು ಎಂದು ನಾವು ಬಯಸುವುದಿಲ್ಲ. ಈ ಲಾಕ್ ಡೌನ್ ಸಮಯದಲ್ಲಿಯೇ ಮುಗಿಸಿದರೆ ಒಳ್ಳೆಯದು. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿ ಎನ್ನುವ ಹೆಸರಿನಲ್ಲಿ ಕಾರ್ಮಿಕರು ಓಡಾಡುತ್ತಾ ಇದ್ದರೆ ಅದರಿಂದ ಏನೂ ಪ್ರಯೋಜನವಿಲ್ಲ!
Leave A Reply