ಕೋವಿಶೀಲ್ಡ್ ಮೊದಲ ಡೋಸ್ ತೆಗೆದುಕೊಂಡವರಿಗೂ ಮೇಸೆಜ್ ಕಳುಹಿಸಿ!!
ನಮ್ಮ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಲಸಿಕೆ ವಿತರಣೆಯಲ್ಲಿ ಸೂಕ್ತವಾಗಿರುವ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಇದು ಜಿಲ್ಲೆಯ ಜನಪ್ರತಿನಿಧಿಗಳಿಗೆ ದೊಡ್ಡ ಹಿನ್ನಡೆ ಆಗಲಿದೆ. ಮೊದಲಿಗೆ ದೇಶದ ವಿಚಾರ ತೆಗೆದುಕೊಳ್ಳೋಣ. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆಯ ಎರಡು ಡೋಸುಗಳನ್ನು ಕೊಡಲಾಗುವುದು ಎಂದು ಘೋಷಣೆ ಮಾಡಲಾಯಿತು. ಆ ಹಂತದಲ್ಲಿ ಯಾರೂ ಮುಂದೆ ಬರಲಿಲ್ಲ. ಕಾಂಗ್ರೆಸ್ ಆಡಳಿತ ಇರುವ ರಾಜ್ಯದ ಮುಖ್ಯಮಂತ್ರಿಯೊಬ್ಬರು ಇದು ಮೋದಿ ಲಸಿಕೆ ಎಂದು ಟೀಕೆ ಮಾಡಿದರು. ಅಪಪ್ರಚಾರದ ಕಥೆಗಳನ್ನು ಕಟ್ಟಲಾಯಿತು. ಏನೇನೋ ಮಾಡಿ ಹೆದರಿಸಲಾಯಿತು. ಅದನ್ನೆಲ್ಲಾ ನಾನು ನಿನ್ನೆಯ ಜಾಗೃತ ಅಂಕಣದಲ್ಲಿ ಬರೆದಿದ್ದೇನೆ. ನಂತರ ಜನರಿಗೆ ಜಾಗೃತಿ ಉಂಟಾಯಿತು. ಹಿರಿಯ ನಾಗರಿಕರು ಲಸಿಕೆ ತೆಗೆದುಕೊಳ್ಳಲು ಶುರು ಮಾಡಿದರು. ಅಲ್ಲಿಯ ತನಕ ಎಲ್ಲವೂ ಓಕೆ. ಆ ಬಳಿಕ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಎಂದು ಹೇಳಲಾಯಿತು.
ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎನ್ನುವ ಎರಡು ಕಂಪೆನಿಯ ವ್ಯಾಕ್ಸಿನ್ ಗಳಿವೆ. ಯಾವ ಕಂಪೆನಿಯ ಮೊದಲ ಡೋಸ್ ತೆಗೆದುಕೊಳ್ಳುತ್ತೀರೋ ಅದೇ ಕಂಪೆನಿಯ ಎರಡನೇ ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳಲಾಯಿತು. ಈ ನಡುವೆ ಯಾರೋ ಕೋವಿಶೀಲ್ಡ್ ಗಿಂತ ಕೋವ್ಯಾಕ್ಸಿನ್ ಒಳ್ಳೆಯದು ಎಂದು ಸುಳ್ಳುಸುದ್ದಿ ಹಬ್ಬಿಸಿದರು. ಎಲ್ಲರೂ ಕೋವ್ಯಾಕ್ಸಿನ್ ಬೇಕು ಎಂದು ಅದನ್ನೇ ಕೇಳಿ ಪಡೆದುಕೊಂಡರು. ಆ ಬಳಿಕ ಏನು ಆಯಿತೋ, ಜಿಲ್ಲಾ ಕೇಂದ್ರಗಳಿಗೆ ಕೋವ್ಯಾಕ್ಸಿನ್ ಬರುವುದು ನಿಂತುಹೋಗಿದೆ. ಕೋವಿಶೀಲ್ಡ್ ಮಾತ್ರ ಇದೆ ಎಂದು ಹೇಳಲಾಗುತ್ತದೆ. ಮೊದಲ ಡೋಸ್ ಕೋವ್ಯಾಕ್ಸಿನ್ ತೆಗೆದುಕೊಂಡವರು ನಾವು ತೆಗೆದುಕೊಂಡ ವಾರಗಳ ಲೆಕ್ಕ ಹಾಕಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ಮಧ್ಯೆ ಕೋವಿಶೀಲ್ಡ್ ತೆಗೆದುಕೊಂಡವರಿಗೆ ಮೊದಲು 45 ದಿನಗಳ ಅಂತರದಲ್ಲಿ ಮತ್ತೊಂದು ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳಲಾಗಿತ್ತು. ಈಗ ಅದು ಎಂಟು ವಾರಕ್ಕೆ ಹೋಗಿ ಮತ್ತೆ ಹನ್ನೆರಡು ವಾರಕ್ಕೆ ವಿಸ್ತರಿಸಿ ಕೊನೆಗೆ 16 ವಾರಗಳ ಅಂತರದಲ್ಲಿ ತೆಗೆದುಕೊಂಡರೂ ಸಾಕು ಎಂದು ಹೇಳಲಾಗುತ್ತದೆ. ಕೆಲವು ದಿನ ಕಳೆದರೆ ಆರು ತಿಂಗಳು ಬಿಟ್ಟು ತೆಗೆದುಕೊಳ್ಳಿ ಎಂದು ಇವರು ಘೋಷಿಸಿದರೂ ಆಶ್ವರ್ಯವಿಲ್ಲ. ಈಗ ಸದ್ಯ ನಮ್ಮ ಜಿಲ್ಲೆಯಲ್ಲಿ ಯಾರು ಕೋವ್ಯಾಕ್ಸಿನ್ ಮೊದಲ ಡೋಸ್ ತೆಗೆದುಕೊಂಡಿದ್ದಾರೋ ಅವರಿಗೆ ಮೇಸೆಜ್ ಅಥವಾ ಕರೆ ಮಾಡಿ ಎರಡನೇ ಡೋಸ್ ಬಂದಿದೆ. ಇಂತಿಂತಹ ದಿನ ಬಂದು ತೆಗೆದುಕೊಳ್ಳಿ ಎಂದು ಹೇಳಲಾಗುತ್ತದೆ. ಆದರೆ ಕೋವ್ಯಾಕ್ಸಿನ್ ಬರುವ ಸ್ಟಾಕ್ ಕಡಿಮೆ ಇದ್ದರೆ ಅದು ಇಡೀ ಜಿಲ್ಲೆಗೆ ಹಂಚುವುದು ಹೇಗೆ ಎನ್ನುವ ಪ್ರಶ್ನೆ ಜಿಲ್ಲಾಡಳಿತದ ಮುಂದೆ ಇದೆ. ಇನ್ನೊಂದು ಸಂಗತಿ ಏನೆಂದರೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಹೆಚ್ಚು ಮುತುವರ್ಜಿಯಿಂದ ಹೆಚ್ಚು ಡೋಸ್ ಕಳುಹಿಸಿಕೊಡಲಾಗುತ್ತದೆ ಎನ್ನುವ ಸುದ್ದಿ ಇದೆ. ಶಿವಮೊಗ್ಗ, ಚಿಕ್ಕಬಳ್ಳಾಪುರ, ಬೆಂಗಳೂರಿನ ಕೆಲವು ಭಾಗಗಳಿಗೆ ಹೋಗುವಷ್ಟು ಕೂಡ ನಮ್ಮ ಜಿಲ್ಲೆಗೆ ಬರುವುದಿಲ್ಲ ಎನ್ನುವುದು ನಿಜವಾದರೆ ಇಂತಹ ಮಲತಾಯಿ ಧೋರಣೆ ಯಾಕೆ? ನಾವು ನಮ್ಮ ಪಾಲನ್ನು ಕೇಳುವುದಿಲ್ಲ ಎನ್ನುವುದೇ ತತ್ಸಾರವೇ?ಈಗ ಏನು ಮಾಡಬಹುದು ಎಂದರೆ ಹೇಗೆ ನಿಮ್ಮ ಕೋವ್ಯಾಕ್ಸಿನ್ ತೆಗೆದುಕೊಂಡವರ ಫೋನ್ ನಂಬರ್ ಇದೆಯೋ ಅದೇ ರೀತಿ ಕೋವಿಶೀಲ್ಡ್ ತೆಗೆದುಕೊಂಡವರ ಫೋನ್ ನಂಬರ್ ಕೂಡ ಇರುತ್ತೆ.
ಉದಾಹರಣೆಗೆ ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಡೋಸ್ ಕೋವಿಶೀಲ್ಡ್ ಬಂತು ಎಂದು ಇಟ್ಟುಕೊಳ್ಳೋಣ. ಆಗ ಮೊದಲು ಯಾರು ಪ್ರಥಮ ಡೋಸ್ ತೆಗೆದುಕೊಂಡಿದ್ದಾರೋ ಅವರಿಗೆ ಮೇಸೆಜ್ ಅಥವಾ ಕರೆ ಮಾಡಿ ನೀವು ಇಂತಹ ದಿನ ಇಷ್ಟು ಹೊತ್ತಿಗೆ ಬರಬೇಕು ಎಂದು ಮಾಹಿತಿ ತಲುಪಿಸಿದರೆ ತುಂಬಾ ಒಳ್ಳೆಯದು. ಬೆಳಿಗ್ಗೆ ಪ್ರತಿ ಗಂಟೆಗೆ ಇಷ್ಟಿಷ್ಟು ಜನ ತೆಗೆದುಕೊಳ್ಳಬೇಕು ಎಂದು ಪ್ಲಾನ್ ಮಾಡಿಕೊಂಡರೆ ಆಗ ಎಲ್ಲವೂ ಸಲೀಸಾಗಿ ನಡೆದುಹೋಗುತ್ತದೆ. ಈಗ ಏನಾಗಿದೆ ಎಂದರೆ ಯಾವಾಗ ಎಷ್ಟು ಡೋಸ್ ಬರುತ್ತದೆ ಎಂದು ಜನರಿಗೆ ಗೊತ್ತಿರುವುದಿಲ್ಲ. ಎಲ್ಲಿಯಾದರೂ ಬಂದಿದೆ ಎಂದು ಸುದ್ದಿ ಸಿಕ್ಕಿದ ಕೂಡಲೇ ಕೋವಿಶೀಲ್ಡ್ ಮೊದಲ ಡೋಸ್ ತೆಗೆದುಕೊಂಡವರು ಓಡಿ ಹೋಗುತ್ತಾರೆ. ಅಲ್ಲಿ ರಶ್ ಆಗುತ್ತೆ. ಅದರಿಂದಲೇ ಕೊರೊನಾ ಹರಡುವ ಸಾಧ್ಯತೆ ಕೂಡ ಇರುತ್ತದೆ. ಇನ್ನು ಮೇ ಒಂದರಿಂದ ಹದಿನೆಂಟು ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕೊಡಲಾಗುವುದು ಎಂದು ಘೋಷಣೆ ಮಾಡಿದ ರಾಜ್ಯ ಸರಕಾರ ಆನ್ ಲೈನ್ ಮೂಲಕ ರಿಜಿಸ್ಟ್ರಾರ್ ಮಾಡಿ ಎಂದು ಹೇಳಿತ್ತು. ಜನ ಯಾವ ಪ್ರಮಾಣದಲ್ಲಿ ರಿಜಿಸ್ಟಾರ್ ಮಾಡಿದ್ರು ಎಂದರೆ ಸರ್ವರ್ ಕ್ರಾಶ್ ಆಗಿಹೋಗಿತ್ತು. ಅದರ ನಂತರ ಈಗ 18 ವರ್ಷದವರಿಗೂ ಸದ್ಯ ಲಸಿಕೆ ಇಲ್ಲ ಎಂದು ಹೇಳಲಾಗುತ್ತದೆ. ಇದು ಒಂದು ರೀತಿಯಲ್ಲಿ ಸರಕಾರಕ್ಕೂ ಮುಜುಗರ ತರುವ ವಿಷಯ. ಈಗ ಎರಡನೇ ಡೋಸ್ ಕೊಡುವುದಕ್ಕೆ ಆದ್ಯತೆ ಎಂದು ಹೇಳಲಾಗುತ್ತದೆ. ಮೊದಲಿಗೆ ಕೊರೊನಾ ವಾರಿಯರ್ಸ್ ಗಳಿಗೆ ಆದ್ಯತೆ ಎಂದು ಹೇಳಲಾಗುತ್ತಿತ್ತು. ಅಲ್ಲಿಂದ ಹದಿನೆಂಟು ವರ್ಷದವರಿಗೂ ಕೊಡಲಾಗುತ್ತೆ ಎನ್ನುವ ತನಕ ಅಧ್ವಾನಗಳದ್ದೇ ಸಂತೆ. ಭಾರತದಂತಹ 130 ಕೋಟಿ ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಇದು ಅಷ್ಟು ಸುಲಭ ಅಲ್ಲ. ಆದರೆ ಸರಿಯಾದ ರೂಪುರೇಶೆ ಹಾಕಿಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ!
Leave A Reply