ಬರ್ಕೆ ಪೊಲೀಸರೇ ನೀವ್ಯಾಕೆ ಹೀಗೆ?
ಕೆಲವು ಪೊಲೀಸರಿಂದ ಮಂಗಳೂರಿನ ಇಡೀ ಪೊಲೀಸ್ ಸಮುದಾಯಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವುದರಿಂದ ನಾನು ಇವತ್ತು ಬರೆಯುತ್ತಿರುವ ಜಾಗೃತ ಅಂಕಣವನ್ನು ಮಂಗಳೂರು ಪೊಲೀಸ್ ಕಮೀಷನರ್ ಅವರು ಗಂಭೀರವಾಗಿ ತೆಗೆದುಕೊಳ್ಳಬಹುದು ಎಂದು ಅಂದುಕೊಂಡಿದ್ದೇನೆ. ಮಂಗಳೂರು ನಗರದಲ್ಲಿ ಬರ್ಕೆ ಪೊಲೀಸ್ ಠಾಣೆ ಇದೆ. ಈ ಸ್ಟೇಶನ್ ನಲ್ಲಿ ಸಂಜೆಯಾಗುತ್ತಿದ್ದಂತೆ ಆಗುತ್ತಿರುವ ಅಸಹ್ಯವನ್ನು ಇವತ್ತು ಹೇಳಲೇಬೇಕಿದೆ. ಈಗ ಲಾಕ್ ಡೌನ್ ಅವಧಿಯಾಗಿರುವುದರಿಂದ ಅನಗತ್ಯವಾಗಿ ವಾಹನವನ್ನು ಹೊರಗೆ ತೆಗೆದು ಸುತ್ತಾಡುವವರಿಗೆ ನಿರ್ಭಂದವಿದೆ. ಒಬ್ಬ ವ್ಯಕ್ತಿ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಲ್ಲಿಯಾದರೂ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ನಿಲ್ಲಿಸಿ ಎಲ್ಲಿ, ಏನು, ಎಂತ ಎಂದು ಕೇಳಿಯೇ ಕೇಳುತ್ತಾರೆ. ಆಗ ಸವಾರ ಉತ್ತರ ಕೊಡುವಾಗಲೇ ಆತ ಹೇಳುತ್ತಿರುವುದು ನೈಜವೋ ಅಥವಾ ಫೇಕೋ ಎಂದು ಪೊಲೀಸರಿಗೆ ಅರ್ಥವಾಗುತ್ತದೆ. ಆಗ ಪೊಲೀಸರು ಐಡಿ ಅದು ಇದು ಕೇಳಿ ನೈಜತೆ ಅಥವಾ ತಮ್ಮ ಅನುಮಾನವನ್ನು ಪರಿಹರಿಸಿಕೊಳ್ಳುತ್ತಾರೆ. ಇದು ನಡೆದುಕೊಂಡು ಬಂದಿರುವ ಸಂಪ್ರದಾಯ.
ಒಂದು ವೇಳೆ ಸವಾರ ಸುಳ್ಳು ಹೇಳುತ್ತಿದ್ದಾನೆ ಎಂದು ಗೊತ್ತಾದರೆ ಬುದ್ಧಿ ಬರಲಿ ಎನ್ನುವ ಕಾರಣಕ್ಕೆ ಲಾಠಿಯನ್ನು ಬೀಸಿರಲೂಬಹುದು. ಆ ವಿಡಿಯೋ ವೈರಲ್ ಆಗಲೂಬಹುದು. ಅದರಿಂದ ಅನಗತ್ಯವಾಗಿ ಹೊರಗೆ ಸುತ್ತಾಡಲು ಹೊರಡುವವರಿಗೆ ಸಣ್ಣ ಮಟ್ಟಿಗಿನ ಆತಂಕ ಎದೆಯಲ್ಲಿ ಸೃಷ್ಟಿಯಾಗಿರಲೂಬಹುದು. ಆದರೆ ಬರ್ಕೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬೇರೆಯದ್ದೇ ರೀತಿಯಲ್ಲಿ ವರಸ ತೋರಿಸುತ್ತಿರುವುದರಿಂದ ಈಗ ಜನ ಇವರಿಗೆ ಶಾಪ ಹಾಕುತ್ತಿದ್ದಾರೆ. ಬರ್ಕೆ ಠಾಣೆಯ ಪೊಲೀಸರು ಸಂಜೆಯಾಗುತ್ತಿದ್ದಂತೆ ಹೊರಗೆ ರಸ್ತೆಯ ಬದಿ ನಿಲ್ಲುತ್ತಾರೆ. ಅಲ್ಲಿ ಹೋಗುವ ದ್ವಿಚಕ್ರ ವಾಹನದವರನ್ನು ನಿಲ್ಲಿಸುತ್ತಾರೆ. ಟಕ್ಕನೆ ದಂಡದ ರಸೀದಿ ಬರೆಯುತ್ತಾರೆ. ಐನೂರು ಕೊಡಿ ಎಂದು ಕೇಳುತ್ತಾರೆ. ಐನೂರು ರೂಪಾಯಿ ದಂಡ ಹಾಕಿದ್ದಾರೆ ಎಂದುಕೊಂಡ ಗಾಡಿಯವ ಹಣ ಕೊಡುತ್ತಾನೆ ಮತ್ತು ರಸೀದಿ ತೆಗೆದುಕೊಳ್ಳುತ್ತಾನೆ. ಮನೆಗೆ ಹೋಗಿ ನೋಡಿದರೆ ರಸೀದಿಯಲ್ಲಿ ಇನ್ನೂರೈವತ್ತು ಎಂದು ಬರೆದಿರುತ್ತಾರೆ. ಒಂದು ಬ್ಯುಸಿನೆಸ್ ನಲ್ಲಿ 50% ಲಾಭ ಇರುವ ಉದ್ಯಮವನ್ನು ಈ ಪೊಲೀಸರು ಕಂಡುಕೊಂಡಿದ್ದಾರೆ. ಪೊಲೀಸರು ದಂಡದಲ್ಲಿ ಹಣ ಮಾಡುತ್ತಿದ್ದಾರೆ ಎಂದು ಈ ಮೂಲಕ ಪ್ರಪಂಚಕ್ಕೆ ಗೊತ್ತಾಗುತ್ತಿದೆ. ಇನ್ನು ಅಗತ್ಯ ಸೇವೆಗಳಿಗೆ, ಮೆಡಿಕಲ್ ಸ್ಟೋರ್ ಗಳಿಗೆ ಹೋಗುವವರಿಗೆ ಹಾಗೂ ಆಸ್ಪತ್ರೆಗಳಿಗೆ ತೆರಳುವವರಿಗೆ ವಿನಾಯಿತಿ ಕೊಡಬೇಕೆಂದು ಸರಕಾರವೇ ಹೇಳಿದೆ. ಆದರೆ ಬರ್ಕೆ ಪೊಲೀಸರಿಗೆ ಅದು ಅನ್ವಯವಾಗುವುದೇ ಇಲ್ಲ. ಯಾಕೆಂದರೆ ಅವರಿಗೆ ಸಂಜೆ 4 ಗಂಟೆಯಿಂದ 8 ಗಂಟೆಯ ಒಳಗೆ ಎಷ್ಟಾಗುತ್ತದೋ ಅಷ್ಟು ಬಾಚಿಕೊಳ್ಳುವ ಅವಸರ. ಆದ್ದರಿಂದ ಒಬ್ಬ ವ್ಯಕ್ತಿ ಮೆಡಿಕಲ್ ಸ್ಟೋರಿನ ಪಾಸು ಹೊಂದಿದ್ದರೂ ಇವರು ನಂಬುವುದಿಲ್ಲ. ಯಾಕೆಂದರೆ ಇವರಿಗೆ ಲಾಭದ ಇನ್ನೂರೈವತ್ತು ಹೋಗುತ್ತೋ ಎನ್ನುವ ಹೆದರಿಕೆ. ಇಂತಹ ಅನುಭವ ಕೆಲವರಿಗೆ ಆಗಿದೆ.
ಮೊನ್ನೆ ಏನಾಯಿತು ಎಂದರೆ ಓರ್ವ ಹೆಣ್ಣುಮಗಳು ಇದೇ ರಸ್ತೆಯಲ್ಲಿ ವಾಹನದಲ್ಲಿ ಹೋಗುವಾಗ ಆಕೆಯನ್ನು ಇದೇ ಠಾಣೆಯ ಪೊಲೀಸರು ನಿಲ್ಲಿಸಿದ್ದಾರೆ. ತಮ್ಮ ಮನೆಯಲ್ಲಿ ಗರ್ಭಿಣಿ ಒಬ್ಬರು ಇದ್ದಾರೆ. ಅವರಿಗೆ ಮೆಡಿಸಿನ್ ತರಲು ಹೊರಗೆ ಬಂದಿದ್ದೇನೆ ಎಂದು ಆ ತಾಯಿಜೀವ ಎಷ್ಟು ಹೇಳಿದರೂ ಇವರು ಕೇಳುವ ಸ್ಥಿತಿಯಲ್ಲಿಲ್ಲ. ಆ ಗರ್ಭಿಣಿಯನ್ನು ಸ್ಟೇಶನಿಗೆ ಕರೆಸಿ ಎಂದು ಒಂದೇ ವಾದ. ಗರ್ಭಿಣಿಯನ್ನು ಸ್ಟೇಶನಿಗೆ ಕರೆಯಲು ಅದೇನೂ ಆಸ್ಪತ್ರೆಯಾ? ಆದರೆ ಪೊಲೀಸರು ಬಿಡುತ್ತಿಲ್ಲ. ಅತ್ತರೂ ಪೊಲೀಸರ ಹೃದಯ ಕರಗಲೇ ಇಲ್ಲ. ನಂತರ ಈ ಮಹಿಳೆ ಮನೆಗೆ ಫೋನ್ ಮಾಡಿದ ಬಳಿಕ ಆ ತುಂಬು ಬಸುರಿ ಠಾಣೆಗೆ ಬಂದು ಇಲ್ಲಿ ಅತ್ತು ಕರೆದು ರಂಪಾಟ ಆದ ನಂತರವೇ ಪೊಲೀಸರಿಗೆ ಗ್ಯಾರಂಟಿಯಾಯಿತು. ಅಷ್ಟೊತ್ತಿಗೆ ಈ ವಿಷಯ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಗಮನಕ್ಕೆ ಬಂದಿದೆ. ಅವರು ತಕ್ಷಣ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಷ್ಟೊತ್ತಿಗೆ ಹೆಣ್ಣುಮಗಳು ಮತ್ತು ಆಕೆ ಕಣ್ಣೀರು ಹಾಕುತ್ತಿದ್ದರು. ಕೂಡಲೇ ಅವರಿಗೆ ಧೈರ್ಯ ತುಂಬಿ ಗೌರವಯುತವಾಗಿ ಅವರಿಬ್ಬರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಇದರಿಂದ ಬರ್ಕೆ ಪೊಲೀಸರ ಅಷ್ಟೂ ರೋಲ್ ಕಾಲ್ ವ್ಯವಹಾರ ಹೊರಗೆ ಬಂದಿದೆ. ಗರ್ಭಿಣಿಯ ವಿಷಯಕ್ಕೆ ಕೈ ಹಾಕಿ ಈಗ ಒದೆಸಿಕೊಳ್ಳುವ ಬಾರಿ ಪೊಲೀಸರದ್ದು.
ಪೊಲೀಸರು ಹೀಗೆ ಮಾಡಿದರೆ ಹೇಗೆ? ನಿಜ, ಕೆಲವರು ಅನಗತ್ಯವಾಗಿ ಸುತ್ತಾಡಲು ಹೊರಗೆ ಬಂದಿರಬಹುದು. ನೀವು ಅವರಿಗೆ ದಂಡ ಹಾಕಿ 250 ಲಾಭ ಮಾಡಿಕೊಳ್ಳುತ್ತಾ ಇರಬಹುದು. ಆದರೆ ನೈಜವಾಗಿ ಅಗತ್ಯ ಕಾರ್ಯಗಳಿಗೆ ಹೊರಗೆ ಬಂದವರಿಗೆ ಯಾಕೆ ಹೀಗೆ ದೌರ್ಜನ್ಯ ಮಾಡುತ್ತಿದ್ದೀರಿ ಎನ್ನುವುದೇ ಈಗ ಸಭ್ಯ ಸಮಾಜದ ಪ್ರಶ್ನೆ. ಹಾಗಂತ ಇಡೀ ಮಂಗಳೂರು ಇಂತಹುದೇ ಪೊಲೀಸರಿಂದ ತುಂಬಿ ಹೋಗಿದೆ ಎಂದಲ್ಲ. ನಾರ್ಕೋಟಿಕ್ ವಿಭಾಗದ ಪೊಲೀಸ್ ಅಧಿಕಾರಿ ಶಿವರಾವ್ ಅವರು ಊಟ ಸಿಗದೆ ಪರಿತಪಿಸುತ್ತಿರುವ ಅನೇಕ ನಿರಾಶ್ರಿತರಿಗೆ ತಮ್ಮ ಕೈಯಿಂದ ಹಣ ಹಾಕಿ ಊಟದ ವ್ಯವಸ್ಥೆ ಮಾಡಿದ್ದಾರೆ. ಎಷ್ಟೋ ಪೊಲೀಸರು ವಿವಿಧ ರೀತಿಗಳಲ್ಲಿ ಜನಸಾಮಾನ್ಯರಿಗೆ ಸಹಾಯ ಮಾಡುತ್ತಾ ಇದ್ದಾರೆ. ಮಾನವೀಯತೆ ಇರುವ ಎಷ್ಟೋ ಪೊಲೀಸರ ನಡುವೆ ಬರ್ಕೆ ಠಾಣೆಯ ಪೊಲೀಸರು ಕಪ್ಪುಚುಕ್ಕೆಯಂತೆ ಕಾಣುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದರೆ ಇದು ಪಕ್ಕದ ಠಾಣೆಗೆ ಅಲ್ಲಿಂದ ಬಳ್ಳಿಯಂತೆ ಬೇರೆ ಬೇರೆ ಕಡೆ ಹಬ್ಬಿ ಪೊಲೀಸ್ ಕಮೀಷನರ್ ಕಚೇರಿಗೆ ವಿಷಯ ಮುಟ್ಟುವಾಗ ತಡವಾಗಿರುತ್ತದೆ. ಪ್ರತಿ ಬಾರಿ ಶಾಸಕರೇ ಹೋಗಿ ಠಾಣೆಯಲ್ಲಿ ಅಸಹಾಯಕರಿಗೆ ನ್ಯಾಯ ಕೊಡಿಸಲು ಆಗುವುದಿಲ್ಲ. ಪೊಲೀಸ್ ಕಮೀಷನರ್ ಆದಷ್ಟು ಬೇಗ ಈ ಬಗ್ಗೆ ಗಮನ ಹರಿಸಲಿ ಎನ್ನುವುದು ಅಪೇಕ್ಷೆ!
Leave A Reply