ಟಿವಿ ನಿರೂಪಕರು ತಾವು ನಂಬಿದ ಪಕ್ಷವನ್ನೇ ಕುತ್ತಿಗೆಗೆ ಕಟ್ಟಿಕೊಂಡು ಕೆಲಸ ಮಾಡಬಾರದು!!
ಶ್ರೀಲಕ್ಷ್ಮಿ ಎನ್ನುವ ವಾಹಿನಿಯೊಂದರ ನಿರೂಪಕಿಯೊಬ್ಬರು ಟಿವಿ ಚಾನೆಲ್ ನಿಂದ ಹೊರಗೆ ಬಂದದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅದೇ ದೊಡ್ಡ ಸುದ್ದಿಯಾಯಿತು. ಎಲ್ಲ ಕಡೆ ಆಕೆಯ ಹೇಳಿಕೆ, ಫೋಟೋ ಹಾಕಿದ ಪೋಸ್ಟರ್ ಗಳೇ ಹರಿದಾಡುತ್ತಿದ್ದವು. ಬಲಪಂಥಿಯರು ಅವಳಿಗೆ ಹೊಗಳಿ ಪೋಸ್ಟರ್ ಮಾಡಿದರೆ ಉಳಿದವರು ಟೀಕೆ, ಅಪಸ್ವರ ಎತ್ತಿದ್ದಾರೆ. ಅಷ್ಟಕ್ಕೂ ನಿರೂಪಕಿ/ವರದಿಗಾರ್ತಿ/ಪತ್ರಕರ್ತೆ ಯೊಬ್ಬರು ಕೆಲಸ ಬಿಟ್ಟರೆ ಅಷ್ಟು ದೊಡ್ಡ ಸುದ್ದಿಯಾಗುವಂತದ್ದು ಏನಿದೆ ಎನ್ನುವುದೇ ಆಶ್ಚರ್ಯ. ಒಂದು ಕಾಲದಲ್ಲಿ ವಾರ್ತೆಗಳು ಎಂದರೆ ಅದು ಆವತ್ತು ನಡೆದ ಸುದ್ದಿಯನ್ನು ಆವತ್ತು ಅಥವಾ ಮರುದಿನ ಜನರಿಗೆ ತಿಳಿಸುವುದು ಮಾತ್ರ ಆಗಿತ್ತು. ಇವತ್ತಿಗೂ ಡಿಡಿಯಲ್ಲಿ, ಆಕಾಶವಾಣಿಯಲ್ಲಿ ಅದನ್ನು ಪಾಲಿಸಿಕೊಂಡು ಬರಲಾಗುತ್ತದೆ. ಪ್ರಧಾನಿ ಇಂತಹ ರಾಷ್ಟ್ರಕ್ಕೆ ಹೋದರು. ಇಂತಿಂತಹ ಒಪ್ಪಂದ ಆಯಿತು. ಮುಖ್ಯಮಂತ್ರಿಯವರು ಇಂತಹ ಅಭಿವೃದ್ಧಿ ಯೋಜನೆಗೆ ಚಾಲನೆ ಕೊಟ್ಟರು. ಹೀಗೆ ಸುದ್ದಿಗಳು ಬರುತ್ತಿದ್ದವು. ಜನರಿಗೆ ಅಷ್ಟೇ ಕೊಟ್ಟರೆ ಸಾಕು ಎಂದು ಅಂದುಕೊಳ್ಳಲಾಗಿತ್ತೋ ಅಥವಾ ದಿನದ 24 ಗಂಟೆಯೂ ಸುದ್ದಿಗಳನ್ನು ನೋಡಲು ಜನರು ಬಯಸುತ್ತಾರೆ ಎಂದು ಯಾರು ಮೊದಲು ಅಂದುಕೊಂಡರೋ ಯಾರಿಗೆ ಗೊತ್ತು. ಇಡೀ ದಿನ ಸುದ್ದಿ ಕೊಡುವ ವಾಹಿನಿಗಳು ಹುಟ್ಟಿಕೊಂಡವು. ಕೆಲವು ವಾಹಿನಿಗಳು ಅದರಲ್ಲಿ ತನಿಖಾ ಪತ್ರಿಕೋದ್ಯಮವನ್ನು ಆರಂಭಿಸಿದವು. ರಾಜಕಾರಣಿಗಳ ದೊಡ್ಡ ದೊಡ್ಡ ಭ್ರಷ್ಟಾಚಾರವನ್ನು ಬಯಲಿಗೆ ಎಳೆದವು. ಮೊದಲ ಬಾರಿಗೆ ಜನಸಾಮಾನ್ಯ ಅಂತಹ ಟಿವಿಗಳೆಡೆ ಕಣ್ಣು ಬಿಟ್ಟು ನೋಡಿದ. ಟಿವಿ ವಾಹಿನಿಗಳು ಹೊರಗೆಳೆದ ಭ್ರಷ್ಟಾಚಾರಗಳಿಂದ ಜನರಿಗೆ ಅಂತಹ ರಾಜಕಾರಣಿಯ ಮೇಲೆ ಅಸಹ್ಯ ಮೂಡಲು ಶುರುವಾಯಿತು. ಅದರ ನಂತರ ಮುಂದಿನ ಚುನಾವಣೆಯಲ್ಲಿ ಆ ರಾಜಕಾರಣಿ ಮತ್ತು ಅವನ ಪಕ್ಷ ಅಧಿಕಾರ ಕಳೆದುಕೊಳ್ಳುವ ತನಕ ಪರಿಸ್ಥಿತಿ ಹೋಯಿತು. ಈ ಮೂಲಕ ರಾಜಕಾರಣಿಗಳಿಗೆ ಟಿವಿ ಮಾಧ್ಯಮದ ಅಗಾಧ ಶಕ್ತಿಯ ಪರಿಚಯ ಆಯಿತು. ಕೆಲವು ರಾಜಕಾರಣಿಗಳೇ ಟಿವಿ ವಾಹಿನಿಯನ್ನು ಆರಂಭಿಸಿದರು. ಕೆಲವರು ಟಿವಿ ವಾಹಿನಿಗಳಲ್ಲಿ ಬಂಡವಾಳ ಅಥವಾ ಪಾಲುದಾರಿಕೆ ಮಾಡಿಕೊಂಡರು. ಕೆಲವು ಮಾಧ್ಯಮ ಲೋಕದ ದಿಗ್ಗಜ ಮಾಲೀಕರಿಗೆ ರಾಷ್ಟ್ರೀಯ ಪಕ್ಷಗಳು ರಾಜ್ಯಸಭಾ ಸ್ಥಾನ ನೀಡಿ ಅವನು ನಮ್ಮವ ಎಂದರು. ಹೀಗೆ ಟಿವಿಯೊಳಗೆ ರಾಜಕಾರಣ ಅಧಿಕೃತವಾಗಿ ಸಮ್ಮಿಳಿತವಾಯಿತು. ಒಂದು ವಾಹಿನಿ ಒಬ್ಬ ರಾಜಕಾರಣಿ ಅಥವಾ ಒಂದು ಪಕ್ಷದ ತಪ್ಪನ್ನು ಎತ್ತಿ ಹಿಡಿದರೆ ಇನ್ನೊಂದು ವಾಹಿನಿ ಆ ಪಕ್ಷವನ್ನು ಕೊಂಡಾಡಲು ಶುರು ಮಾಡಿತು. ತಮ್ಮ ತಪ್ಪುಗಳನ್ನು ಮುಚ್ಚಿಡಲು ಅಥವಾ ತಮ್ಮ ಇಮೇಜನ್ನು ವೈಭವಿಕರಿಸಲು ಟಿವಿ ವಾಹಿನಿ ಸುಲಭ ದಾರಿ ಎಂದು ರಾಜಕೀಯ ಲೋಕ ನಂಬಿಬಿಟ್ಟಿತು. ಪ್ರತಿಯೊಬ್ಬ ರಾಜಕಾರಣಿ ನಿತ್ಯ ಬೆಳಗ್ಗೆ ಏಳುವುದೇ ಮುಂದಿನ ಚುನಾವಣೆಗೆ ಇನ್ನೆಷ್ಟು ದಿನ ಇದೆ ಎಂದು ಲೆಕ್ಕ ಹಾಕುವ ಮೂಲಕ. ಅವನಿಗೆ ಎದುರಿಗೆ ಕಾಣಿಸುವುದೇ ಪ್ರಚಾರ. ಅದಕ್ಕೆ ದಾರಿ ಮಾಧ್ಯಮ. ಅದು ಟಿವಿಯಾದರೆ ಇನ್ನೂ ಉತ್ತಮ ಎಂದು ಅವನಿಗೆ ಗ್ಯಾರಂಟಿಯಾಗಿತ್ತು.
ಪ್ರತಿ ವಾಹಿನಿಯ ಮುಖ್ಯಸ್ಥರು ಮಾನಸಿಕವಾಗಿ ಯಾವುದೇ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡಿರಬಹುದು. ಅದೇ ರೀತಿಯಲ್ಲಿ ಒಬ್ಬ ನಿರೂಪಕ ಅಥವಾ ನಿರೂಪಕಿ ನಿರೂಪಣೆ ಮಾಡಿ ಮುಖ ತೊಳೆದು ಮನೆಗೆ ಹೋದ ನಂತರ ಯಾವುದೇ ಪಕ್ಷದ ಸಿದ್ಧಾಂತವನ್ನು ಅನುಸರಿಸಬಹುದು. ಹಾಗಂತ ಟಿವಿ ಡಿಬೇಟ್ ಶುರುವಾದ ನಂತರ ಅಥವಾ ಯಾವುದೇ ಸುದ್ದಿಯನ್ನು ವರದಿ ಮಾಡುವಾಗ ತಾನು ಒಪ್ಪಿದ ಪಕ್ಷವನ್ನೇ ಕುತ್ತಿಗೆಗೆ ಕಟ್ಟಿ ಕುಳಿತುಕೊಳ್ಳಬಾರದು. ಉದ್ಯೋಗದ ವೇಳೆಯಲ್ಲಿ ಸುದ್ದಿಗಳ ವಿಷಯ ಬಂದಾಗ ಯಾವುದು ತಪ್ಪು, ಯಾವುದು ಸರಿ ಎನ್ನುವುದು ಜನರ ಪರವಾಗಿರುವ ಸುದ್ದಿಗಳನ್ನೇ ಮುಂದಿಡಬೇಕೆ ವಿನ: ನನಗೆ ಆ ಶಾಸಕ ಕ್ಲೋಸ್, ಈ ಮಂತ್ರಿ ತೀರಾ ಪರಿಚಿತ, ಆ ಪಕ್ಷದ ಮುಖಂಡರ ಜೊತೆ ಕುಳಿತು ನೈಂಟಿ ಹಾಕಿದೆ, ಈ ಪಕ್ಷದ ಮುಖಂಡರು ಗಿಫ್ಟ್ ಕಳುಹಿಸಿಕೊಟ್ಟರು ಎಂದು ಅವರನ್ನು ಹೆಗಲ ಮೇಲೆ ಕುಳ್ಳಿರಿಸಿ ಕಿವಿಯೊಳಗೆ ಉಚ್ಚೆ ಹೊಯ್ಯಲು ಬಿಡಬಾರದು. ಆದರೆ ಟಿವಿ5 ಇತ್ತೀಚೆಗೆ ಯಾವ ರೀತಿಯಲ್ಲಿ ತನ್ನ ವರಸೆಯನ್ನು ತೋರಿಸುತ್ತಿತ್ತು ಎಂದರೆ ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡುತ್ತಿತ್ತು. ಪ್ರಧಾನಿಯನ್ನು ಬೈಯುವುದೇ ನಿರೂಪಕರ ಕೆಲಸ ಎಂದು ಅವರಿಗೆ ಹೇಳಲಾಗಿತ್ತು. ಕೆಲವು ನಿರೂಪಕರು ಅದನ್ನು ಒಪ್ಪಿ ಹೇಳಿದ್ದನ್ನು ತಮ್ಮ ಧಣಿಯ ಖುಷಿಗಾಗಿ ಮಾಡುತ್ತಿದ್ದರು. ಆದರೆ ಎಲ್ಲರಿಗೂ ಅದು ಸಾಧ್ಯವಾಗಿಲ್ಲ. ಯಾಕೆಂದರೆ ಆತ್ಮಸಾಕ್ಷಿ ಒಪ್ಪಬೇಕಲ್ಲ. ಮೋದಿಯವರ ಸರಕಾರವನ್ನೇ ಇಡೀ ದಿನ ಬೈಯುವಂತದ್ದು ಏನೂ ಇರಲು ಸಾಧ್ಯವಿಲ್ಲ. ಭ್ರಷ್ಟಾಚಾರ ಇಲ್ಲ, ಸ್ವಜನ ಪಕ್ಷಪಾತ ಇಲ್ಲ, ಆಡಳಿತ ವೈಫಲ್ಯ ಇಲ್ಲ, ಹಾಗಾದ ಮೇಲೆ ಬೈಯಲು ಏನು ಇದೆ. ಆದರೆ ಒಂದು ವಾಹಿನಿ ನಡೆಯಲು ತಿಂಗಳಿಗೆ ನೂರಾರು ಲಕ್ಷ ರೂಪಾಯಿಗಳು ಬೇಕು. ಅದನ್ನು ಗುಡ್ಡೆ ಹಾಕಿ ತಾನು ಲಾಭ ಮಾಡಿಕೊಳ್ಳಲು ನೇರ ಮಾರ್ಗದಿಂದ ಹೋದರೆ ಸಾಧ್ಯವಿಲ್ಲ ಎಂದು ಅಂದುಕೊಂಡ ಟಿವಿ5 ಮಾಲೀಕರು ಕಾಂಗ್ರೆಸ್ ಧುರೀಣರ ಬಳಿ ತಿಂಗಳಿಗೆ ಇಂತಿಷ್ಟು ಹಣದ ಡೀಲ್ ಕುದುರಿಸಿರಬಹುದು. ಆದರೆ ಧಣಿಗಳೇ ನ್ಯೂಸ್ ಓದಲು ಸಾಧ್ಯನಾ? ಅದಕ್ಕೆ ಸಂಬಳ ಕೊಟ್ಟು ನಿರೂಪಕರನ್ನು ಇಟ್ಟುಕೊಳ್ಳುತ್ತಾರೆ. ಆದರೆ ನಿರೂಪಕರು ರೋಬೋಟ್ ಗಳಲ್ಲ. ಅವರಿಗೂ ಮನಸ್ಸಿದೆ, ಹೃದಯ ಇದೆ ಮತ್ತು ಕಣ್ಣಿದೆ. ಇಡೀ ದಿನ ಮುಸುರೆ ತಿಕ್ಕು ಎಂದರೆ ಕೆಲಸದವಳು ಕೂಡ ಕೆಲಸ ಬಿಟ್ಟು ಹೋಗುತ್ತಾಳೆ. ಹಾಗಿರುವಾಗ ಇಡೀ ದಿನ ನಾವು ತೋರಿಸಿದವರಿಗೆ ಬೈಯುತ್ತಾ ಇರಬೇಕು ಎಂದರೆ ಒಪ್ಪಲು ನಿರೂಪಕರೇನು ಜೀತದ ಆಳುಗಳಲ್ಲ. ಆದ್ದರಿಂದ ಶ್ರೀಲಕ್ಷ್ಮಿ, ಚಂದನ್ ಶರ್ಮಾ ಹಾಗೂ ಇನ್ನೊಬ್ಬರು ಚಾನೆಲ್ ಬಿಟ್ಟಿದ್ದಾರೆ. ಅವರಿಗೆ ಬೇರೆ ವಾಹಿನಿಗಳಲ್ಲಿ ಕೆಲಸ ಸಿಗಬಹುದು. ಅದೇ ರೀತಿಯಲ್ಲಿ ಟಿವಿ5ಗೆ ಯಾವುದಾದರೂ ಕಾಂಗ್ರೆಸ್ ಕಾರ್ಯಕರ್ತರು ನಿರೂಪಕರಾಗಿ ಸಿಗಬೇಕು. ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗಕ್ಕೆ ಮಾತ್ರ ಇದು ಶೋಭೆಯಲ್ಲ!
Leave A Reply