ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಲಾಕ್ಡೌನ್ ಕೊನೆಯ ಅಧ್ಯಾಯವಾ?
ರಾಜ್ಯ ಸರಕಾರ 11 ಜಿಲ್ಲೆಗಳ ಲಾಕ್ ಡೌನ್ ಅನ್ನು ಒಂದು ವಾರ ವಿಸ್ತರಿಸಿರುವುದು ಮತ್ತು ಉಳಿದ 19 ಜಿಲ್ಲೆಗಳ ಲಾಕ್ ಡೌನ್ ಅನ್ನು ಹಂತಹಂತವಾಗಿ ಸಡಿಲಿಕೆ ಮಾಡಲು ತೀರ್ಮಾನಿಸಿರುವುದು ನಿಮಗೆ ಗೊತ್ತೆ ಇದೆ. ಈಗ ದಕ್ಷಿಣ ಕನ್ನಡ ಜಿಲ್ಲೆಗೆ 20 ತಾರೀಕಿನ ತನಕ ಲಾಕ್ ಡೌನ್ ಇರಲಿದೆ. ಹಾಗಂತ ಪಕ್ಕದ ಉಡುಪಿ ಜಿಲ್ಲೆಯಲ್ಲಿ ಇರುವುದಿಲ್ಲ. ಹಾಗಾದರೆ ಯಾವ ಆಧಾರದ ಮೇಲೆ ಈ ವಿಸ್ತರಣೆ ಹಾಗೂ ವಿನಾಯಿತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ ಎನ್ನುವುದನ್ನು ನೋಡೋಣ. ಹತ್ತು ಶೇಕಡಾಗಿಂತ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ಆಗುವುದಾದರೆ ಬೆಂಗಳೂರು ಲಾಕ್ ಡೌನ್ ನಿಂದ ವಿನಾಯಿತಿ ಸಿಗುವ ಪಟ್ಟಿಯಲ್ಲಿ ಬರಲು ಸಾಧ್ಯವೇ ಇಲ್ಲ. ಹಾಗಾದರೆ ಬೆಂಗಳೂರಿಗೆ ಯಾಕೆ ವಿಶೇಷ ಪ್ರಾತಿನಿಧ್ಯ? ಯಾಕೆಂದರೆ ಆ ಭಾಗದ ಸಚಿವರ, ಶಾಸಕರ ಒತ್ತಡ ಅಷ್ಟು ಇರಬಹುದು. ಅಲ್ಲಿರುವ ಅನೇಕ ಕೈಗಾರಿಕೆಗಳ, ಉದ್ದಿಮೆಗಳ ಲಾಬಿಯೂ ಇರಬಹುದು. ನಮ್ಮ ಕರಾವಳಿಯ ಉಡುಪಿ ಜಿಲ್ಲೆಗೆ ವಿನಾಯಿತಿ ಸಿಕ್ಕಿದೆ. ಯಾಕೆಂದರೆ ಅಲ್ಲಿ ಪಾಸಿಟಿವಿಟಿ ರೇಟ್ ಹತ್ತಕ್ಕಿಂತ ಸ್ವಲ್ಪ ಕಡಿಮೆ ಇದೆ. ಆದ್ದರಿಂದ ಅವರು ಮೇಲೆ ಬಿದ್ದಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ವಾರದೊಳಗೆ ಹತ್ತಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇಳಿದರೆ ಇಲ್ಲಿಯೂ ಲಾಕ್ ಡೌನ್ ನಿಂದ ಬಿಡುಗಡೆ ಸಿಗಬಹುದು ಎಂದು ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಹಾಗಾದರೆ ಈಗ ಜವಾಬ್ದಾರಿ ಯಾರದ್ದು? ನಾಗರಿಕರದ್ದು ಕೂಡ ಇದೆ. ನಮ್ಮಲ್ಲಿ ಸರಕಾರಿ ನೌಕರಿಯವರು ಬಿಟ್ಟು ಉಳಿದವರು ಬಹುತೇಕ ಲಾಕ್ ಡೌನ್ ವಿರುದ್ಧ ಇದ್ದಾರೆ. ಯಾಕೆಂದರೆ ಇದು ಜೀವನದ ಆದಾಯವನ್ನು ಕಸಿಯುತ್ತಿದೆ. ಹಾಗಂತ ಸರಕಾರ ಹೇಳಿದ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವಾ? ಇಲ್ಲ.
ಇವತ್ತಿಗೂ ತರಕಾರಿ, ಜಿನಸಿ ಅಂಗಡಿಗಳಲ್ಲಿ ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಪ್ರತಿಯೊಬ್ಬರಲ್ಲಿಯೂ ತನಗೆ ಏನೂ ಆಗುವುದಿಲ್ಲ ಎಂಬ ಭಂಡ ಧೈರ್ಯ. ಹೀಗಿರುವಾಗ ಜಿನಸಿ, ತರಕಾರಿ ಅಂಗಡಿಗೆ ಬಂದವರಲ್ಲಿ ಒಬ್ಬರಿಗೆ ಕೊರೊನಾ ಇರಬಹುದು. ಅದರ ಯಾವುದೇ ಲಕ್ಷಣ ಇಲ್ಲದೆ ಇದ್ದ ಕಾರಣ ಆತನಿಗೆ ಅಥವಾ ಆಕೆಗೆ ಗೊತ್ತಿಲ್ಲದೇ ಇರಬಹುದು. ಅಂತವರು ಹೊರಗೆ ಬಂದು ಬಿಂದಾಸ್ ಆಗಿ ಜಿನಸಿ ಅಂಗಡಿಗೆ ಬಂದು ಒಂದು ಶಾಂಪೂ ಎಂದಿರಬಹುದು. ಅದರಿಂದ ಅವರ ಅಪಾಯ ಯಾರಿಗೆ? ನಮಗೆ ಲಾಕ್ ಡೌನ್ ಇಲ್ಲದೆ ಇದ್ದಾಗ ಹದಿನೈದು ದಿನಗಳಿಗೊಮ್ಮೆ ಜಿನಸಿ ಅಂಗಡಿಗೆ ಹೋಗಲು ಆಲಸ್ಯ. ಈಗ ಲಾಕ್ಡೌನ್ ಇದೆಯಲ್ಲ, ಆದ್ದರಿಂದ ಒಂದು ದಿನ ಸಾಬೂನು, ಇನ್ನೊಂದು ದಿನ ಶಾಂಪೂ ಮತ್ತೊಂದು ದಿನ ಬಿಸ್ಕಿಟ್. ಇಡೀ ದಿನ ಮನೆಯಲ್ಲಿ ಕುಳಿತು ಬೋರ್ ಆಗುತ್ತಿತ್ತು. ಹಾಗೆ ಒಂದು ಘಳಿಗೆ ಹೋಗಿ ಬರೋಣ ಎಂದು ಹೊರಗೆ ಬಂದೆವು ಎನ್ನುವಂತಹ ಮಾತೇ ಎಲ್ಲರ ಬಾಯಲ್ಲಿ ಇರುತ್ತದೆ. ಒಳಗೆ ಕುಳಿತು ಕುಳಿತು ಜೈಲ್ ತರಹ ಆಗುತ್ತದೆ. ಹಾಗೆ ಬೆಳಿಗ್ಗೆ ಒಮ್ಮೆ ಸುತ್ತಾಡಿಕೊಂಡು ಬರುವುದು, ಪೊಲೀಸರು ಕೇಳಿದ್ರೆ ಹಾಲಿಗೆ ಎನ್ನುವುದು ಎಂದು ಹೇಳಿ ಜೋರಾಗಿ ನಗುವಂತಹ ಎಷ್ಟೋ ಜನ ಇದ್ದಾರೆ. ಅವರ ಮನೆಗೆ ನಿತ್ಯ ಹಾಲು ಹಾಕುವವರು ಬರುತ್ತಾರೆ. ಸಾಮಾನ್ಯ ದಿನಗಳಲ್ಲಿ ಇವರು ಮನೆಗೆ ಹಾಲು ತರಲು ಹೋಗಿರುವುದಿಲ್ಲ. ಈಗ ಹಾಲು ತರಲು ಹೋಗುವುದು ಎಂದು ತಮಾಷೆ. ಮಾಸ್ಕ್ ಇವತ್ತಿಗೂ ಮುಖದ ಯಾವ ಭಾಗದಲ್ಲಿ ಹಾಕಬೇಕು ಎನ್ನುವುದು ಅನೇಕ ಅತೀ ಬುದ್ಧಿವಂತರಿಗೆ ಡೌಟ್ ಇದೆ.
ಇನ್ನು ಸಚಿವರಲ್ಲಿಯೇ ಲಾಕ್ಡೌನ್ ಬಗ್ಗೆ ಪರಸ್ಪರ ಪರ-ವಿರೋಧ ಇದೆ. ಕೆಲವು ಸಚಿವರು ಪರ ಇದ್ದರೆ ಕೆಲವರು ವಿರೋಧ ಇದ್ದಾರೆ. ಆದರೆ ಧೀರ್ಘಕಾಲೀನ ತನಕ ಜನರನ್ನು ಒಳಗೆ ಕುಳ್ಳಿರಿಸಿದರೆ ಸಮಸ್ಯೆ ಆಗುತ್ತದೆ ಎನ್ನುವುದು ಗೊತ್ತಿರುವುದರಿಂದ ಕೆಲವರು ಆದಷ್ಟು ಉದ್ದಿಮೆಗಳಿಗೆ ಕೆಲಸ ಆರಂಭಿಸಲು ಪರವಾನಿಗೆ ಸಿಗುವ ಹಾಗೆ ಮಾಡಿದ್ದಾರೆ. ಇಂತವರ ಮಾತುಗಳನ್ನು ಕೇಳಿಯೇ ಸಿಎಂ 19 ಜಿಲ್ಲೆಗಳಿಗೆ ಲಾಕ್ಡೌನ್ ಬಿಡುಗಡೆಯ ಭಾಗ್ಯ ನೀಡಿರುವುದು. ಹಾಗಾದರೆ ಲಾಕ್ಡೌನ್ ಮುಂದುವರೆದ ಜಿಲ್ಲೆಗಳ ನಾಗರಿಕರು ನಾವೇನು ತಪ್ಪು ಮಾಡಿದ್ದೇವೆ ಎಂದು ಕೇಳುತ್ತಿರಬಹುದು. ಇಲ್ಲಿ ಪ್ರತಿಯೊಬ್ಬರು ತಾನು ಏನು ತಪ್ಪು ಮಾಡಿದ್ದೇನೆ ಎಂದು ತಮ್ಮನ್ನು ತಾವು ಕೇಳಬೇಕು. ಆಗ ಮಾತ್ರ ಇದಕ್ಕೆ ಪರಿಹಾರ ಸಿಗಲು ಸಾಧ್ಯ. ಮೊದಲನೇಯದಾಗಿ ನಾವು ಸರಕಾರದ ಮಾರ್ಗಸೂಚಿ ಪಾಲಿಸಿದ್ದೇವಾ ಎಂದು ಕೇಳಬೇಕು. ಇಡೀ ದಿನ ಮನೆಯಲ್ಲಿದ್ದರೆ ಹೊಟ್ಟೆಪಾಡು ಏನು ಮಾಡುವುದು ಎಂದು ಹಲವರು ಹೇಳಬಹುದು. ಹೀಗೆ ಅರ್ಧ ಮಂಗಳೂರು ರಸ್ತೆಯಲ್ಲಿ ಇರುವುದರಿಂದ ಕೊರೊನಾ ಇಳಿಕೆ ಕಾಣುತ್ತಿಲ್ಲ. ಇದರಿಂದ ನಿಜವಾಗಿಯೂ ನಿಯಮ ಪಾಲಿಸಿ ಮನೆಯಲ್ಲಿಯೇ ಇರುವವರು ಏನೂ ತಪ್ಪು ಮಾಡದಿದ್ದರೂ ಉಳಿದವರು ಮಾಡುವ ತಪ್ಪಿಗೆ ತಾವು ಶಿಕ್ಷೆ ಅನುಭವಿಸುವಂತಾಗಿದೆ. ಈಗ ಬೆಂಗಳೂರಿನಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದ ಅಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಾಣಿಸುತ್ತಿದೆ. ಅಂದರೆ ಹಳ್ಳಿಗೆ ಹೋದ ಜನ ಮತ್ತೆ ಬೆಂಗಳೂರಿಗೆ ವಾಪಾಸು ಬರುತ್ತಿದ್ದಾರೆ. ಹೀಗೆ ಆಗಾಗ ಹೋಗುವುದು ಬರುವುದು ಮಾಡುವುದರಿಂದ ಅವರಿಗೂ ನೆಮ್ಮದಿ ಇಲ್ಲ. ಆಡಳಿತ ಮಾಡುವವರಿಗೂ ಸುಖವಿಲ್ಲದೆ ಹಾಗೆ ಆಗಿದೆ. ಈಗ ಮತ್ತೆ ಕೊರೊನಾ ಏರಿಕೆ ಆದರೆ ಬೆಂಗಳೂರು ಪುನ: ಲಾಕ್ಡೌನ್ಗೆ ಒಳಗಾಗಬೇಕಾಗುತ್ತದೆ. ಆಗ ಪುನ: ಅರ್ಧ ಬೆಂಗಳೂರು ಹಳ್ಳಿಯ ಹಾದಿ ಹಿಡಿಯುತ್ತದೆ. ಸಾಮಾಜಿಕ ಅಂತರ ಇಲ್ಲದೆ ಪ್ರತಿಭಟನೆ, ಉದ್ಯೋಗಕ್ಕಾಗಿ ಅಲೆದಾಟ ಮತ್ತು ಊರೀಡಿ ಸುಮ್ಮನೆ ತಿರುಗಾಟದ ನಡುವೆ ಕೋವಿಡ್ 19 ಜಾಲಿಯಾಗಿ ಸುತ್ತಾಡುತ್ತಾ ಇದೆ. ಅಮಾಯಕರು ಅದಕ್ಕೆ ಸಿಕ್ಕಿಕೊಂಡಿದ್ದಾರೆ!
Leave A Reply