ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ಸಿಗದಿದ್ದರೆ ಮುಂದಿನ ಚುನಾವಣೆ ಕುತೂಹಲ!!
ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಕೊಡಲು ಯಾಕೆ ರಾಜ್ಯ ಸರಕಾರ ಹಿಂದೆ ಮುಂದೆ ನೋಡುತ್ತಿದೆ ಎನ್ನುವುದೇ ಯಕ್ಷ ಪ್ರಶ್ನೆ. ಒಂದು ವೇಳೆ ರಾಜ್ಯ ಸರಕಾರಕ್ಕೆ ತುಳುಭಾಷೆಗೆ ಅಧಿಕೃತ ಸ್ಥಾನಮಾನ ಕೊಡಲು ಯಾವುದೇ ಹಿಂಜರಿಕೆ ಇಲ್ಲ, ಯಾವುದೇ ತಾಂತ್ರಿಕ ಸಮಸ್ಯೆಯಿಂದ ಇದು ತಡವಾಗುತ್ತಿದೆ ಎಂದಾದರೆ ಆ ತಾಂತ್ರಿಕ ಸಮಸ್ಯೆ ಏನು ಮತ್ತು ಅದು ಯಾವಾಗ ಸರಿಯಾಗುತ್ತದೆ ಎನ್ನುವುದು ಎರಡನೇ ಪ್ರಶ್ನೆ. ಒಂದು ವೇಳೆ ಕನ್ನಡಕ್ಕೆ ಮಾತ್ರ ಅಧಿಕೃತ ಭಾಷೆಯ ಸ್ಥಾನಮಾನ ಎನ್ನುವುದೇ ಆದರೆ ಅದನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸ್ಪಷ್ಟವಾಗಿ ಹೇಳಲಿ. ನಂತರ ಏನು ಮಾಡಬೇಕು ಎಂದು ಉಳಿದದ್ದನ್ನು ಕರಾವಳಿಯ ತುಳುವರು ನಿರ್ಧರಿಸುತ್ತಾರೆ. ಯಾಕೆಂದರೆ ಈ ಕುರಿತು ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಟ್ವಿಟ್ ಅಭಿಯಾನವನ್ನು ತುಳು ಸಂಘಟನೆಯವರು ನಡೆಸುತ್ತಾ ಬರುತ್ತಿದ್ದಾರೆ. ಅದಕ್ಕೆ ಕರಾವಳಿಯ ಶಾಸಕರ ಸಹಿತ ಎಲ್ಲ ಜನಪ್ರತಿನಿಧಿಗಳು ಬೆಂಬಲಿಸುತ್ತಾರೆ. ಮುಂಬೈಯಿಂದ ದೆಹಲಿ ತನಕ ಅಮೇರಿಕಾದಿಂದ ಆಸ್ಟ್ರೇಲಿಯಾ ತನಕ ದೇಶವಿದೇಶದಲ್ಲಿ ಇರುವ ಎಲ್ಲ ತುಳುವರು ಬೆಂಬಲಿಸುತ್ತಾರೆ. ಸುಮಾರು ನಾಲ್ಕು ಲಕ್ಷದಷ್ಟು ಟ್ವಿಟ್ ಆಗುತ್ತದೆ. ಪ್ರಪಂಚದ ಆರನೇ ಅತೀ ಹೆಚ್ಚು ಟ್ವಿಟ್ ಆದ ವಿಷಯ ಎಂದು ಜೂನ್ 13, 2021 ರಂದು ಇದು ದಾಖಲಾಗಿದೆ. ಈ ಕುರಿತು ಈ ಹಿಂದೆ ವಿಧಾನಸಭೆಯಲ್ಲಿ ಕರಾವಳಿಯ ಕಾಂಗ್ರೆಸ್ಸಿನ ಶಾಸಕರೊಬ್ಬರು ಮಾತನಾಡಿದ್ದರು. ಈ ಸಲ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೆಲವರು ಧ್ವನಿಗೂಡಿಸಿದ್ದಾರೆ. ಪಾಲಿಕೆಯಿಂದ ಕೇಂದ್ರದ ತನಕ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಎಲ್ಲಾ ಆಯಕಟ್ಟಿನ ಹುದ್ದೆಗಳಲ್ಲಿ ಕರಾವಳಿಯವರಿದ್ದಾರೆ. ಆದರೂ ಯಾಕೆ ತಡವಾಗುತ್ತಿದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಅಷ್ಟಕ್ಕೂ ನಾವು ಇಷ್ಟು ವರ್ಷಗಳ ತನಕ ಈ ಸ್ಥಾನಮಾನಕ್ಕೆ ಚಾತಕಪಕ್ಷಿಗಳಂತೆ ಕಾಯಬೇಕಾದ ಅಗತ್ಯವೇ ಇರಲಿಲ್ಲ. ಯಾಕೆಂದರೆ ಕರಾವಳಿಯಿಂದ ಇಬ್ಬರು ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ಡಿವಿ ಸದಾನಂದ ಗೌಡ ಹಾಗೂ ವೀರಪ್ಪ ಮೊಯಿಲಿಯವರು ಇಲ್ಲಿಯವರೇ ಆಗಿದ್ದರು. ಮನಸ್ಸು ಮಾಡಿದ್ದರೆ ಆಗಲೇ ಮಾಡಬಹುದಿತ್ತು. ಆದರೆ ಆಗ ನಮ್ಮ ಧ್ವನಿಯನ್ನು ಅಲ್ಲಿಯ ತನಕ ತಲುಪಿಸುವಷ್ಟು ಪ್ರಭಾವಿಗಳು ಯಾರೂ ಇದ್ದಿರಲಿಕ್ಕಿಲ್ಲ. ಈಗ ಇದ್ದಾರೆ. ಕರಾವಳಿಯ ಎರಡು ಜಿಲ್ಲೆಗಳಿಂದ ಹನ್ನೆರಡು ಜನ ಬಿಜೆಪಿ ಶಾಸಕರನ್ನು ನಾವು ಗೆಲ್ಲಿಸಿದ್ದೇವೆ. ಕರಾವಳಿಯ ಎರಡು ಲೋಕಸಭಾ ಕ್ಷೇತ್ರಗಳಿಂದ ನಮ್ಮ ಜನಪ್ರಿಯ ಸಂಸದರುಗಳಿದ್ದಾರೆ. ಪಕ್ಕದ ಚಿಕ್ಕಮಗಳೂರಿನಲ್ಲಿಯೂ ಸಾಕಷ್ಟು ತುಳುವರು ಇದ್ದಾರೆ. ಅವರ ಶಾಸಕರು ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಶಾಸಕರು ತುಳುವರು. ಹೀಗೆ ಮೇಲಿನಿಂದ ಕೆಳಗಿನ ತನಕ ತುಳುವರು ಇದ್ದಾಗಲೂ ಆಗಲ್ಲ ಎಂದರೆ ನಾಳೆ ಇದೇ ವಿಷಯವನ್ನು ಇಟ್ಟುಕೊಂಡು ನಮಗೆ ಮತ ನೀಡಿ ನಾವು ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡುತ್ತೇವೆ ಎಂದು ಕಾಂಗ್ರೆಸ್ಸಿಗರು ಪ್ರಚಾರ ಮಾಡಿದರೆ ತುಳುವರು ಏನು ಮಾಡಬೇಕು. ಹಿಂದೂತ್ವದ ಆಧಾರದ ಮೇಲೆ ಇಲ್ಲಿನ ಶಾಸಕರು ಗೆದ್ದಿರುವುದು ಹೌದು. ಇಲ್ಲಿ ಭಾಷೆಯ ಆಧಾರದ ಮೇಲೆ ರಾಜಕೀಯ ನಡೆದಿರುವುದೂ ಇಲ್ಲ. ಯಾಕೆಂದರೆ ಇಲ್ಲಿ ಕೊಂಕಣಿ ಮಾತೃಭಾಷೆಯವರು ಕೂಡ ಮನೆಯ ಹೊರಗೆ ವ್ಯವಹಾರಿಕವಾಗಿ ತುಳು ಮಾತನಾಡುತ್ತಾರೆ. ಮನೆ ಭಾಷೆ ಬ್ಯಾರಿ ಆದರೂ ಮುಸಲ್ಮಾನರ ಬಾಯಲ್ಲಿ ನಲಿದಾಡುವುದು ತುಳು ಭಾಷೆ. ಇಡೀ ಪ್ರಪಂಚದಲ್ಲಿ ತುಳು ಮಾತೃಭಾಷೆಯವರೇ ಕೋಟಿಯ ಮೇಲಿದ್ದಾರೆ. ತುಳುವಿಗೆ ಸಹಸ್ರ ವರ್ಷಗಳ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳುವನ್ನು ಪರಿಗಣಿಸಲಾಗುತ್ತದೆ. ಹೀಗಿದ್ದು ಕೂಡ ಯಾಕೆ ಕಡಗಣನೆ ಎಂದರೆ ತುಳುವರು ಯಾವುದೇ ಒಂದು ಪಕ್ಷದ ಮತಬ್ಯಾಂಕ್ ಆಗಿಲ್ಲ. ನಮ್ಮಲ್ಲಿ ಭಾಷೆಯ ಮೇಲೆ ರಾಜಕೀಯ ನಡೆದಿಲ್ಲ. ಈ ಭಾಷೆಯನ್ನು ಮಾತನಾಡುವವರು ಇಂತವರಿಗೆ ಮತ ಹಾಕುತ್ತಾರೆ ಎಂದು ಹೇಳಲು ಆಗುವುದಿಲ್ಲ. ಎಲ್ಲಕ್ಕಿಂತ ಕನ್ನಡಿಗರ ಲಾಬಿಯ ಎದುರು ನಮ್ಮವರ ಧ್ವನಿ ಕೇಳಿಸುತ್ತಿಲ್ಲ. ಈಗಾಗಲೇ ನಮ್ಮ ಧ್ವನಿ ಪ್ರಬಲವಾಗಿ ಕೇಳುತ್ತೇ ಎಂದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ವಿರುದ್ಧವಾಗಿ ಕಮೆಂಟ್ ಮಾಡುವವರು ಹುಟ್ಟಿಕೊಂಡಿದ್ದಾರೆ. ನೀವು ಇವತ್ತು ಭಾಷೆಗೆ ಅಧಿಕೃತ ಸ್ಥಾನಮಾನ ಕೇಳುತ್ತೀರಿ, ನಾಳೆ ಇನ್ನೊಂದು ಕೇಳುತ್ತೀರಿ, ನಾಡಿದ್ದು ಮತ್ತೊಂದು ಕೇಳುತ್ತೀರಿ ಹೀಗೆ ನಿಮ್ಮದು ಬೇರೆಯದ್ದೇ ಮಾಡುತ್ತೀರಿ ಎಂದು ಆಕ್ಷೇಪ ಎತ್ತುತ್ತಲೇ ಇದ್ದಾರೆ. ಮೊದಲನೇಯದಾಗಿ ತುಳುನಾಡು ಇಲ್ಲಿಯ ಜನರ ದೂರದೃಷ್ಟಿ ಮತ್ತು ಸ್ನೇಹಪರ ವಾತಾವರಣದಿಂದಲೇ ಅಭಿವೃದ್ಧಿ ಕಂಡಿದೆ ವಿನ: ಇಲ್ಲಿಗಾಗಿ ವಿಶೇಷವಾಗಿ ಸರಕಾರಗಳು ಚಿಂತಿಸಿದ್ದು ಕಡಿಮೆ. ನಮ್ಮ ಸಂಸದರು, ಶಾಸಕರು ನಿರಂತರ ಪ್ರಯತ್ನ ಮಾಡಿ ಅಭಿವೃದ್ಧಿ ಯೋಜನೆಗಳು ತಂದಿದ್ದಾರೆ. ಅದು ಬಿಟ್ಟರೆ ಈ ಪ್ರದೇಶವನ್ನು ಪ್ರವಾಸೋದ್ಯಮ ತಾಣವನ್ನಾಗಿ ರಾಜ್ಯ ಸರಕಾರ ವಿಶೇಷ ಕೆಲಸ ಮಾಡಿದ್ದು ಕಡಿಮೆ. ಇನ್ನು ತುಳುವಿಗೆ ಅಧಿಕೃತ ಸ್ಥಾನಮಾನ ಕೊಟ್ಟರೆ ಮಾತ್ರ ಅದರ ಗೌರವ ಹೆಚ್ಚಾಗುತ್ತದೆ ಎಂದಲ್ಲ. ತುಳುವರಿಗೆ ಇದು ಭಾಷೆಗಿಂತ ಭಾವನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸ್ವತ: ಲಿಪಿ ಇರುವ, ಸಂಕಟ ಬಂದಾಗ ಎಷ್ಟು ದೊಡ್ಡ ವ್ಯಕ್ತಿಯಾದರೂ ತುಳುನಾಡಿನ ದೇವಸ್ಥಾನಗಳಿಗೆ ಓಡೋಡಿ ಬರುವ, ವಿಶ್ವದಾದ್ಯಂತ ಭಾಷಿಗರನ್ನು ಹೊಂದಿರುವ ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ಕೊಡದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಅಗಬಹುದಾ? ಧೈರ್ಯ ಇದ್ದರೆ ಪರೀಕ್ಷಿಸಿ ನೋಡಲಿ!
Leave A Reply