ಕೊರೊನಾಗೆ ದಕ್ಷಿಣ ಕನ್ನಡ ಬಿಟ್ಟು ಹೋಗಲು ಮನಸ್ಸಿಲ್ಲ, ಅಷ್ಟು ಇಷ್ಟ!!

ಶುಕ್ರವಾರ ಜೂನ್ 18 2021, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1006 ಪಾಸಿಟಿವ್ ಪ್ರಕರಣಗಳು ಮತ್ತು 15 ಸೋಂಕಿತರ ನಿಧನ. ಇತ್ತೀಚಿನ ದಿನಗಳಲ್ಲಿ ಇದು ದಾಖಲೆ. ಕರ್ನಾಟಕ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಆಗುತ್ತಿರುವ ಈ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊರೊನಾ ತವರು ಮನೆಯನ್ನಾಗಿ ಮಾಡಿಕೊಂಡಿದೆ ಎಂದು ಅನಿಸುತ್ತಿದೆ. ಯಾಕೆ ಹೀಗೆ, ಬುದ್ಧಿವಂತರ ಸ್ವಂತ ಜಿಲ್ಲೆಯಿಂದ ಕೊರೊನಾ ಗಂಟುಮೂಟೆ ಕಟ್ಟಿಕೊಳ್ಳಲು ಯಾಕೆ ತಯಾರಿಲ್ಲ. ಯಾಕೆಂದರೆ ನಾವು ಕೊರೊನಾವನ್ನು ತುಂಬಾ ಮುದ್ದಿನಿಂದ ನೋಡಿಕೊಳ್ಳುತ್ತಿದ್ದೇವೆ. ಕೊರೊನಾಗೆ ಏನು ಬೇಕು ಅದೆಲ್ಲವನ್ನು ಎರಡೂ ಕೈಗಳಿಂದ ಮಾಡುತ್ತಿದ್ದೇವೆ. ಕೊರೊನಾ ಹೇಗೆ ಪಸರಿಸುತ್ತಿದೆ ಎಂದು ಚೆನ್ನಾಗಿ ತಿಳಿದು ಅದಕ್ಕೆ ಬೇಕಾದ ಹಾಗೆ ನಡೆದುಕೊಳ್ಳುತ್ತಿದ್ದೇವೆ. ಮೊದಲನೇಯದಾಗಿ ಮನೆಯಿಂದ ಹೊರಗೆ ಬರಬೇಡಿ. ಅನಿವಾರ್ಯವಾದ್ದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಯೇ ಹೊರಗೆ ಬನ್ನಿ ಮತ್ತು ಮತ್ತೆ ಮನೆಯ ಒಳಗೆ ಹೋದ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಂದು ಸಾರಿ ಸಾರಿ ಹೇಳಿದರೂ ನಮ್ಮಲ್ಲಿ ಯಾರೂ ಈ ಮಾತನ್ನು ಕೇಳುತ್ತಿಲ್ಲ. ಹಿಂದೆ ಸಾಮಾನ್ಯ ದಿನಗಳಲ್ಲಿ ವಾರಕ್ಕೊಮ್ಮೆ ತರಕಾರಿ, ಮಾಂಸ, ಹಣ್ಣುಹಂಪಲು, ಜಿನಸಿ ವಸ್ತುಗಳನ್ನು ತರಲು ಹೋಗುತ್ತಿದ್ದವರು ಈಗ ದಿನಕ್ಕೊಮ್ಮೆಯಾದರೂ ಹೊರಗೆ ಬರಲೇಬೇಕು ಎಂದು ಹಟ ತೊಟ್ಟಂತೆ ಹೊರಗೆ ಬರುತ್ತಾರೆ. ಮುಂಚೆ ನೀನೆ ಹೋಗಿ ತಾ ಎಂದು ಹೆಂಡತಿ ಗಂಡನಿಗೆ ಅಥವಾ ಗಂಡ ಹೆಂಡತಿಗೆ ಹೇಳುತ್ತಿದ್ದರೆ ಈಗ ಗಂಡ ಹೆಂಡತಿ ಇಬ್ಬರೂ ಒಂದು ಕಟ್ಟು ಕೊತ್ತಂಬರಿ ಸೊಪ್ಪಿಗೆ ಹೊರಗೆ ಬರುತ್ತಿದ್ದಾರೆ. ಮರುದಿನ ಅರ್ಧ ಕಿಲೋ ಬಟಾಟೆಗೆ ಬರುತ್ತಾರೆ. ಒಂದೇ ದಿನ ಎಲ್ಲವನ್ನು ಖರೀದಿ ಮಾಡಿದರೆ ನಾಳೆ ಹೊರಗೆ ಬರಲು ಏನಾದರೂ ಕಾರಣಗಳನ್ನು ಹುಡುಕುತ್ತಾರೆ. ಎರಡನೇಯದಾಗಿ ಮಾಸ್ಕ್. ಗೊತ್ತಿಲ್ಲದವರಿಗೆ ಜೋರು ಮಾಡಿ ಹಾಕಬಹುದು. ಪ್ರಾಮುಖ್ಯತೆ ತಿಳಿಯದವರಿಗೆ ಬುದ್ಧಿ ಹೇಳಿ ಹಾಕಿಸಬಹುದು. ಆದರೆ ಎಲ್ಲ ಗೊತ್ತಿದ್ದು ಕಿಸೆಯಲ್ಲಿ ಮಾಸ್ಕ್ ಇಟ್ಟುಕೊಂಡು ಪೊಲೀಸರು ನಿಲ್ಲಿಸಿದಾಗ ಗತ್ತಿನಿಂದ ಕಿಸೆಯಿಂದ ತೆಗೆದು ತೋರಿಸುವವರಿಗೆ ಬುದ್ಧಿವಂತರು ಎಂದು ಹೇಳುವುದಾ? ಪೆಟ್ಟುಕಮ್ಮಿಗಳು ಎಂದು ಹೇಳುವುದಾ? ಇವರು ಬೇಕಾದರೆ ಪೊಲೀಸರಿಗೆ ದಂಡ ಕಟ್ಟುತ್ತಾರೆ. ಆದರೆ ಮಾಸ್ಕ್ ಮುಂದಿನ ಬಾರಿ ಧರಿಸಲು ಮರೆತುಹೋಗುತ್ತಾರೆ. ಅದೇ ದಂಡದ ಮೊತ್ತ ಜಾಸ್ತಿಯಾಯಿತು ಎಂದು ಗೊಣಗುತ್ತಾರೆ. ಆದರೆ ಕಿಸೆಯಿಂದ ಮಾಸ್ಕ್ ತೆಗೆದು ಧರಿಸಲು ಇವರಿಗೆ ಸಂಕಟ. ಇಂತವರನ್ನು ಕೊರೊನಾ ಪಸರಿಸುವವರು ಎಂದು ಕೇಸ್ ಬುಕ್ ಮಾಡಿ ನಾಲ್ಕು ದಿನ ಒಳಗೆ ಇಟ್ಟರೆ ಬುದ್ಧಿ ಬರುತ್ತದೆ.
ಅತ್ತ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಯುತ್ತಿದೆ. ದಕ್ಷಿಣ ಕನ್ನಡಕ್ಕೆ ತುಲನೆ ಮಾಡಿದರೆ ಬೆಂಗಳೂರಿನಲ್ಲಿ ನಮ್ಮ ನಾಲ್ಕೈದು ಪಾಲು ಜಾಸ್ತಿ ಸೋಂಕಿತರ ಸಂಖ್ಯೆ ಇರಬೇಕಿತ್ತು. ಆದರೆ ಅಲ್ಲಿ ಜನ ಪಾಠ ಕಲಿತಿದ್ದಾರೆ. ನಾವು ಹೀಗೆ ನಿರ್ಲಕ್ಷ್ಯ ಮಾಡುತ್ತಿದ್ದರೆ ಅಂಗಡಿ, ಮುಂಗಟ್ಟುಗಳು ಶಾಶ್ವತವಾಗಿ ಮುಚ್ಚಿಹೋಗುವ ಪರಿಸ್ಥಿತಿ ಬಂದುಬಿಡುತ್ತದೆ ಎಂದು ಹೆದರಿದ ಅಲ್ಲಿನ ಜನ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಆದರೆ ನಾವು ಸಾವಿರ ಸೋಂಕಿತರ ಸಂಖ್ಯೆ ದಾಟಿದರೂ ಇನ್ನು ಕೂಡ ಮುಂದಿನ ವಾರದಿಂದ ಲಾಕ್ ಡೌನ್ ಮುಗಿಯುತ್ತೆ ಎಂದು ಕಾಯುತ್ತಿದ್ದೇವೆ. ಲಾಕ್ ಡೌನ್ ಇದ್ದು ಕೂಡ ಬಸ್ಸುಗಳು ಇಲ್ಲ ಎನ್ನುವುದು ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆ ಮಾಮೂಲಿನಂತಿದೆ. ವಾಹನಗಳು ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯಲ್ಲಿ ಕಾಣಿಸುತ್ತಿವೆ. ಪೊಲೀಸ್ ಕಮೀಷನರ್ ಅವರು ಸುಮ್ಮನೆ ನಾಗರಿಕರಿಗೆ ಕಾಡುವುದು ಬೇಡಾ ಎಂದು ಪೊಲೀಸರಿಗೆ ಸೂಚನೆ ಕೊಟ್ಟಿರಬಹುದು. ಅದಕ್ಕೆ ಚೆಕಿಂಗ್ ಅಷ್ಟಾಗಿ ಇಲ್ಲ. ಅದೇ ಲಾಭ ಎಂದುಕೊಂಡ ಜನ ಬೇಕಾಬಿಟ್ಟಿ ಓಡಾಡಿಕೊಂಡಿದ್ದಾರೆ. ಕೇಳಿದರೆ ಎಲ್ಲರ ಬಳಿ ಏನಾದರೊಂದು ಕಾರಣ ಇದೆ. ಆದರೆ ಸೋಂಕಿತರ ಸಂಖ್ಯೆ ಈ ಪರಿ ಹೆಚ್ಚಾದರೆ ಹೇಗೆ ತಾನೆ ಲಾಕ್ ಡೌನ್ ಮುಗಿಯಲು ಸಾಧ್ಯ. ಇದು ಹೀಗೆ ಮುಂದುವರೆದರೆ ನಮ್ಮ ಅಂಗಡಿಗಳ ಒಳಗಿರುವ ವಸ್ತುಗಳಿಗೆ ಫಂಗಸ್ ಹಿಡಿದು ನಾವು ವಿಪರೀತ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದು ವ್ಯಾಪಾರಿಗಳ ಅಳಲು. ಬಟ್ಟೆ ಅಂಗಡಿಗಳು, ಶೂ ಅಂಗಡಿಗಳು, ಜೆರಾಕ್ಸ್ ನಿಂದ ಹಿಡಿದು ಬಂಗಾರದ ಅಂಗಡಿಯವರ ತನಕ ನಮಗೂ ವಿನಾಯಿತಿ ಕೊಡಿ ಎನ್ನುವುದೇ ಬೇಡಿಕೆ ಆಗಿದ್ದರೂ ಅದನ್ನು ಪರಿಶೀಲಿಸೋಣ ಎಂದು ಜಿಲ್ಲಾಡಳಿತ ಅಂದುಕೊಳ್ಳುವಷ್ಟರಲ್ಲಿ ಸೋಂಕಿತರ ಸಂಖ್ಯೆ ಗ್ರಾಫ್ ಏರಿದಂತೆ ಹೆಚ್ಚಾಗುತ್ತಲೇ ಇದೆ. ಅದರೊಂದಿಗೆ ಸಾವಿನ ಸಂಖ್ಯೆ ಕೂಡ ಸೊಂಕಿತರಿಗೆ ಸ್ಪರ್ಧೇ ಕೊಡುವಂತೆ ಹೆಚ್ಚಾಗುತ್ತಿದೆ. ಯಾರೋ ಕೆಲವರು ಮಾಡುವ ನಿರ್ಲಕ್ಷ್ಯದಿಂದ ಎಲ್ಲರೂ ಪರಿತಪಿಸುವಂತೆ ಆಗಿದೆ. ಚೆನ್ನಾಗಿ ದುಡಿಯುವ ಸೀಸನ್ ಇದ್ದಾಗ ದುಡಿದು ನಿಯಮಿತವಾಗಿ ಖರ್ಚು ಮಾಡಿ ಕೂಡಿಟ್ಟವರು ಈ ಸಮಯದಲ್ಲಿ ಅದನ್ನು ಸ್ವಲ್ಪ ಸ್ವಲ್ಪವೇ ಖರ್ಚು ಮಾಡಿ ನಿಶ್ಚಿಂತೆಯಿಂದ ಇದ್ದಾರೆ. ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ತೊಂದರೆ ಇಲ್ಲ. ಕೆಳ ಮಧ್ಯಮ ವರ್ಗದವರಿಗೆ, ಈಗ ತಾನೆ ಜೀವನ ಶುರು ಮಾಡಿದವರಿಗೆ, ಬ್ಯಾಂಕಿನಲ್ಲಿ ಸಾಲಗೀಲ ಮಾಡಿ ಆಕಾಶಕ್ಕೆ ಏಣಿ ಹಾಕಿದವರಿಗೆ ಇದು ಸಂಕಷ್ಟಮಯ ಕಾಲ. ಸಾಯುವವರ ಸಂಖ್ಯೆ 14 ದಾಟಿದ್ದು ಮಾತ್ರ ಎಚ್ಚರಿಕೆಯ ಕರೆಗಂಟೆ!
Leave A Reply