ಮಂಗಳೂರಿನ ರಸ್ತೆಗಳ ಕಾಂಕ್ರೀಟಿಕರಣ ಮುಗಿಯುವುದು ತಡವಾಗುತ್ತಿದೆ, ಯಾಕೆ ಗೊತ್ತಾ??
ಸ್ಮಾರ್ಟ್ ಸಿಟಿ ಎಂದರೇನು ಮತ್ತು ಇವರು ಮಾಡುತ್ತಿರುವುದೇನು ಎನ್ನುವುದರ ಬಗ್ಗೆ ನಿನ್ನೆ ಪೀಠಿಕೆಯಲ್ಲಿ ಹೇಳಿದ್ದೆ. ಕೇವಲ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡುವುದೇ ಸ್ಮಾರ್ಟ್ ಸಿಟಿ ಎಂದು ಇವರು ತಿಳಿದುಕೊಂಡಿರುವುದರಿಂದ ಇಂತವರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೋಗಲಿ, ರಸ್ತೆಯನ್ನಾದರೂ ಸರಿಯಾಗಿ ಕಾಂಕ್ರೀಟಿಕರಣ ಮಾಡುತ್ತಿದ್ದಾರಾ ಎಂದು ನೋಡಿದರೆ ಅಲ್ಲಿಯೂ ಜಸ್ಟ್ ಪಾಸ್ ಮಾರ್ಕ್ ತೆಗೆದುಕೊಳ್ಳುವುದು ಡೌಟು. ಅದಕ್ಕೆ ಉದಾಹರಣೆಯನ್ನು ಇವತ್ತು ಕೊಡುತ್ತೇನೆ. ಸ್ಮಾರ್ಟ್ ಸಿಟಿಯ ವಿಷಯದಲ್ಲಿ ಮಂಗಳೂರಿನ ಅಷ್ಟೂ ರಸ್ತೆಗಳನ್ನು ಇವರು ಅಗೆದುಬಿಟ್ಟಿದ್ದಾರಲ್ಲ, ಅದರಲ್ಲಿ ವೇಗವಾಗಿ ಆಗಿರುವುದು ರಥಬೀದಿ ರಸ್ತೆ ಮಾತ್ರ. ಆದರೆ ಈಗ ಆ ಚೆಂದನೆಯ ರಸ್ತೆ ಅಕ್ಷರಶ: ದ್ವೀಪದ ತರಹ ಆಗಿ ಹೋಗಿದೆ. ಹೇಗೆ ಎಂದು ವಿವರಿಸುತ್ತೇನೆ. ರಥಬೀದಿಗೆ ಬಂದು ಸೇರುವ ಒಂದೊಂದೆ ರಸ್ತೆಗಳನ್ನು ತೆಗೆದುಕೊಳ್ಳೋಣ. ಮೊದಲನೇಯದಾಗಿ ಮಹಮ್ಮಾಯ ರಸ್ತೆ, ಇನ್ನೊಂದು ಡೊಂಗರಕೇರಿ ರಸ್ತೆ, ಮತ್ತೊಂದು ಸೆಂಟ್ರಲ್ ಮಾರ್ಕೆಟ್ ರಸ್ತೆ, ಮಗದೊಂದು ರಥಬೀದಿಗೆ ಸಂಪರ್ಕಿಸುವ ಹಂಪನಕಟ್ಟೆ ರಸ್ತೆ. ಈಗ ಡೊಂಗರಕೇರಿ ರಸ್ತೆಯನ್ನೇ ತೆಗೆದುಕೊಳ್ಳೋಣ. ಅದಕ್ಕೆ ಕಾಂಕ್ರೀಟ್ ಹಾಕಿ ನಾಲ್ಕು ತಿಂಗಳಾಯಿತು. ಆದರೆ ಪೂರ್ಣ ಆಗಿಲ್ಲ. ಸರಿಯಾಗಿ ಅರ್ಧ ಕೂಡ ಆಗಿಲ್ಲ. 500 ಮೀಟರ್ ರಸ್ತೆಯ 25% ಕೂಡ ಆಗಿಲ್ಲ. ಅದಕ್ಕೆ ತಾಗಿ ಮಹಾಮಾಯ ದೇವಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆ ಇದೆ. ಅಲ್ಲಿ ಮಳೆಗಾಲಕ್ಕೆ ನೀರು ಹೋಗುವ ಡ್ರೈನೇಜ್ ಕೂಡ ಇದೆ. ಇವರು ಇತ್ತ ರಸ್ತೆಗೆ ಕಾಂಕ್ರೀಟ್ ಹಾಕುವ ಮೊದಲು ಅದರ ಕೆಲಸವನ್ನು ಶುರು ಮಾಡಲೇ ಇಲ್ಲ. ಯಾವಾಗಲೂ ಮೊದಲು ರಸ್ತೆಯ ಮಧ್ಯದಲ್ಲಿ ಹಾದುಹೋಗುವ ಡೈನೇಜ್ ಗೆ ಎರಡೂ ಕಡೆ ಕಾಂಕ್ರೀಟ್ ಗೋಡೆಯಾಕಾರದ ತಡೆಯನ್ನು ಕಟ್ಟಬೇಕಾಗುತ್ತದೆ. ಯಾಕೆಂದರೆ ಎಲ್ಲಿ ರಸ್ತೆಯ ಮಧ್ಯದಲ್ಲಿ ತೋಡು ಇದೆಯೋ ಆ ತೋಡಿಗೆ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಾಣ ಮಾಡದೇ ಆ ಭಾಗದ ರಸ್ತೆಗೆ ಕಾಂಕ್ರೀಟ್ ಹಾಕಲು ಶುರು ಮಾಡಿದರೆ ಕೆಲಸ ನಿಧಾನವಾಗುವುದು ಪಕ್ಕಾ. ತೋಡಿನ ಎರಡೂ ಸೈಡಿನಲ್ಲಿ ಕಾಂಕ್ರೀಟ್ ವಾಲ್ ಗಳನ್ನು ನಿರ್ಮಿಸಿ ಅದರ ಕ್ಯೂರಿಂಗ್ ಕೆಲಸ ಮುಗಿಸಿ ನಂತರ ಅದರ ಮೇಲೆ ರಸ್ತೆಯ ಕಾಂಕ್ರೀಟ್ ಕೆಲಸ ಮಾಡಬೇಕು. ಇನ್ನು ರಸ್ತೆಯ ಕಾಂಕ್ರೀಟಿಕರಣ ಮಾಡುವಾಗ ಮೊದಲು ತೋಡಿನ ಕೆಲಸಗಳನ್ನು ಮಾಡಿ ಮುಗಿಸಬೇಕು. ಚರಂಡಿ ಅಥವಾ ತೋಡಿನಲ್ಲಿ ಮೆಸ್ಕಾಂ ಮತ್ತು ಅಂಡರ್ ಗ್ರೌಂಡ್ ಕೇಬಲ್ ಏನಾದರೂ ಕೆಲಸ ಇದ್ರೆ ಅದನ್ನು ಮೊದಲು ಮಾಡಿ ಮುಗಿಸಬೇಕು. ಈಗ ಮಂಗಳೂರಿನಲ್ಲಿ ಏನಾಗುತ್ತಿದೆ ಎಂದರೆ ಎಲ್ಲಾ ಇಲಾಖೆಯವರು ತಮ್ಮ ತಮ್ಮ ಖುಷಿ ಪ್ರಕಾರ ಕೆಲಸವನ್ನು ಮಾಡುತ್ತಾ ಹೋಗುತ್ತಿದ್ದಾರೆ. ನೀವು ಯಾವುದಾದರೂ ಒಂದು ರಸ್ತೆಯನ್ನೇ ತೆಗೆದುಕೊಳ್ಳಿ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಾಂಕ್ರೀಟಿಕರಣ ಶುರುವಾಗಿ ಅನೇಕ ದಿನಗಳು ಆಗುತ್ತಿದೆ, ಯಾಕೆ ಮುಗಿಯುತ್ತಿಲ್ಲ ಎಂದು ಶಾಪ ಹಾಕುತ್ತಾ ಕುಳಿತರೆ ಶಾಪ ಯಾರಿಗೆ ತಟ್ಟುತ್ತದೆ ಎನ್ನುವುದೇ ಸಸ್ಪೆನ್ಸ್. ಬೇಕಾದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳಲ್ಲಿ ಕೇಳಿ, ಯಾಕೆ ಸ್ವಾಮಿ ನಮ್ಮ ಕೆಲಸ ಇಷ್ಟು ನಿಧಾನವಾಗಿ ಆಗುತ್ತಿದೆಯಲ್ಲ, ಹೀಗೆ ಆದರೆ ಯಾವಾಗ ಮುಗಿಯುತ್ತದೆ, ನಮಗೆ ನಿತ್ಯ ಹೋಗಿ ಬರಲು ಎಷ್ಟು ಕಷ್ಟವಾಗುತ್ತದೆ, ಗೊತ್ತಾ, ನಮ್ಮ ವಾಹನಗಳನ್ನು ಎಲ್ಲೆಲ್ಲಿಯೋ ಇಡಬೇಕಾಗಿದೆ ಎಂದು ಹೇಳಿ ಅದಕ್ಕೆ ನಿಮಗೆ ಸಿಗುವ ಉತ್ತರ ಏನು ಗೊತ್ತಾ? ನಮ್ಮದೇನು ತಪ್ಪಿಲ್ಲ, ಅಲ್ಲಿ ಮೆಸ್ಕಾಂನವರು ರಸ್ತೆ ಅಗೆಯುತ್ತಿದ್ದಾರೆ. ನಾವೇನು ಮಾಡೋಕೆ ಆಗುತ್ತೆ, ನಮ್ಮದೇನು ತಪ್ಪಿಲ್ಲ ಎನ್ನುತ್ತಾರೆ. ನಂತರ ಇವರು ಅರ್ಧ ಕೆಲಸ ಮಾಡುವಾಗಲೇ ಇನ್ನೊಂದು ಇಲಾಖೆಯವರು ಬರುತ್ತಾರೆ, ಅವರು ತಮ್ಮ ಅಗೆಯುವ ಕೆಲಸ ಶುರು ಮಾಡುತ್ತಾರೆ. ಕೆಲವು ದಿನಗಳ ಬಳಿಕ ಟೆಲಿಫೋನ್ ಇಲಾಖೆಯವರು ಬರುತ್ತಾರೆ. ಅವರು ತಮಗೆ ಬೇಕಾದ ಕಡೆ ಅಗೆಯಲು ಆರಂಭಿಸುತ್ತಾರೆ. ಅದು ಮುಗಿಯುತ್ತಿದ್ದಂತೆ ಗೇಲ್ ನವರಿಗೆ ತಮ್ಮ ಪೈಪ್ ಲೈನ್ ಒಂದು ಹಾಕಲು ಇರುವುದು ನೆನಪಾಗುತ್ತದೆ. ಅವರು ಬಂದು ನಮ್ಮದು ಎಲ್ಲಿ ಇಡಲಿ ಎಂದು ಕೇಳುತ್ತಾರೆ. ಅವರಿಗೂ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲದೇ ಹೋದರೆ ನಾಳೆ ಅವರು ಎಲ್ಲವೂ ಮುಗಿದ ಬಳಿಕ ಮತ್ತೆ ಕಾಂಕ್ರೀಟ್ ರಸ್ತೆಯ ಪಕ್ಕದಲ್ಲಿ ಕೇಕ್ ಕಟ್ ಮಾಡಲು ಶುರು ಮಾಡಿಕೊಂಡರೆ ಏನು ಗತಿ? ಅವರು ಮುಗಿಸುತ್ತಿದ್ದಂತೆ ಕುಡ್ಸೆಂಪು ವಿಭಾಗದವರು ಬರುತ್ತಾರೆ. ಅವರಿಗೂ ಅಗೆಯುವ ಅವಕಾಶ ಮತ್ತು ತುಂಬುವ ಭಾಗ್ಯ ಸಿಗಬೇಕು. ಇಷ್ಟರ ಬಳಿಕ ಫುಟ್ ಪಾತ್, ಡ್ರೈನೇಜ್ ಎಲ್ಲವೂ ವ್ಯವಸ್ಥಿತವಾಗಿ ಮುಗಿಯುವಾಗ ಎಷ್ಟು ಕಾಲವಾಗುತ್ತೋ ಯಾರಿಗೆ ಗೊತ್ತು? ಇದು ಪ್ರತಿ ರಸ್ತೆಯ ಕಾಂಕ್ರೀಟಿಕರಣದ ಸಮಸ್ಯೆಯಾದರೆ ಇದಕ್ಕೆ ಪರಿಹಾರವಿಲ್ಲವೇ ಎಂದು ಕೇಳಬಹುದು. ಇದೆ. ಪರಿಹಾರ ಇದೆ. ಆದರೆ ಪರಸ್ಪರ ಸಂವಹನದ ಕೊರತೆಯಿಂದ ಯಾರಿಗೂ ಯಾವ ರಸ್ತೆಯಲ್ಲಿ ಎನು ನಡೆಯುತ್ತಿದೆ, ನಮ್ಮ ಇಲಾಖೆಯವರು ಯಾವಾಗ ಎಲ್ಲಿ ಹೋಗಿ ಅಗೆಯಬೇಕು ಮತ್ತು ಮುಚ್ಚಬೇಕು ಎಂದು ಅರ್ಥವೇ ಆಗಿರುವುದಿಲ್ಲ. ಅದಕ್ಕಾಗಿ ಮಾಡಬೇಕಾದ ಕಾರ್ಯ ಏನೆಂದರೆ ಯಾವುದೇ ಒಂದು ರಸ್ತೆಯ ಕಾಂಕ್ರೀಟಿಕರಣ ಶುರುವಾಗುವ ಒಂದು ತಿಂಗಳ ಮೊದಲೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಬಂಧಪಟ್ಟ ರಸ್ತೆಯ ಸ್ಕೆಚ್ ಮತ್ತು ವಿವರವಾದ ಮಾಹಿತಿ ಇರುವ ದಾಖಲೆಗಳನ್ನು ಸ್ಮಾರ್ಟ್ ಸಿಟಿ ಮಂಡಳಿಯವರು ನೀಡಬೇಕು. ಆ ಒಂದು ತಿಂಗಳಲ್ಲಿ ಆಯಾ ರಸ್ತೆಯಲ್ಲಿ ತಮ್ಮ ಕೆಲಸ ಏನು ಇದೆ ಎನ್ನುವುದು ಬೇರೆ ಬೇರೆ ಇಲಾಖೆಯವರು ಪರಿಶೀಲಿಸಿ ಅದನ್ನು ಮಾಡಿ ಮುಗಿಸಬೇಕು. ಇಲ್ಲದಿದ್ದರೆ ಹೀಗೆ, ಮಳೆಗಾಲದ ನೀರು ಹೋಗುವ ಡ್ರೈನೇಜ್ ತಡೆಗೋಡೆ ಕಟ್ಟಿ ಅದು 21 ದಿನ ಕ್ಯೂರಿಂಗ್ ಆಗಿ ಕಾಂಕ್ರೀಟಿಕರಣ ಆಗುವ ಬದಲು ಇವರು ಇನ್ನೇನೋ ಮಾಡಲು ಹೋಗುವುದರಿಂದ ಒಂದೆರಡು ತಿಂಗಳಲ್ಲಿ ಆಗುವ ಕೆಲಸ ಆರು ತಿಂಗಳು ಹಿಡಿಯುತ್ತದೆ.
Leave A Reply