ನಮ್ಮ ದೇಶದಲ್ಲಿ ವೈದ್ಯರ ಕೊರತೆ ಇದೆ. ಯಾಕೆ ಗೊತ್ತಾ?

ಈ ಕೊರೊನಾ ಅವಧಿಯಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ನಮ್ಮ ದೇಶ ಕಂಡುಕೊಂಡ ದೊಡ್ಡ ಸತ್ಯ ಎಂದರೆ ದೇಶದಲ್ಲಿ ವೈದ್ಯರ ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಬೇಕಾದಷ್ಟು ವೈದ್ಯರು ನಮ್ಮಲ್ಲಿ ಇಲ್ಲ. ಕೊರೊನಾದ ಈ ಕಾಲಘಟ್ಟದಲ್ಲಿ ಸಾವಿರಾರು ವೈದ್ಯರನ್ನು ನಾವು ಕಳೆದುಕೊಂಡಿದ್ದೇವೆ. ಕರ್ತವ್ಯ ನಿರ್ವಹಿಸುತ್ತಾ ಕೊರೊನಾ ಸೊಂಕಿತರಾಗಿ ಸತ್ತವರು ಅದೆಷ್ಟೋ ವೈದ್ಯರನ್ನು ನಿಜವಾಗಿಯೂ ನಾವು ಯಾವತ್ತೂ ಮರೆಯಬಾರದು. ಈ ನಡುವೆ ನಮ್ಮ ದೇಶದಲ್ಲಿ ವೈದ್ಯರ ಕೊರತೆ ಇದೆ ಎನ್ನುವ ವಾಸ್ತವವನ್ನು ನಮಗೆ ತೋರಿಸಿಕೊಟ್ಟದ್ದು ಕೋವಿಡ್ ವೈರಸ್. ಹಾಗಾದರೆ ನಮ್ಮ ರಾಷ್ಟ್ರದಲ್ಲಿ ಯುವಪೀಳಿಗೆ ಯಾಕೆ ಇತ್ತೀಚಿನ ವರ್ಷಗಳಲ್ಲಿ ವೈದ್ಯರಾಗಲು ಮನಸ್ಸು ಮಾಡುತ್ತಿಲ್ಲ. ಮೆಡಿಕಲ್ ಕಾಲೇಜುಗಳ ಸೀಟುಗಳು ಯಾಕೆ ಭರ್ತಿಯಾಗುತ್ತಿಲ್ಲ.
ಯಾಕೆಂದರೆ ನಮ್ಮಲ್ಲಿ ಎಲ್ಲಿ ಕೂಡ ರೋಗಿಯ ಸಂಬಂಧಿಕರು, ಗೆಳೆಯರು ವೈದ್ಯರ ಮೇಲೆ ಹಲ್ಲೆ ಮಾಡಿದರೆ ಅದಕ್ಕೆ ಪ್ರಬಲವಾದ ಕಾನೂನು ಕ್ರಮಗಳಿಲ್ಲ. ಇವತ್ತಿಗೂ ಸಾವು, ಬದುಕಿನ ಹೋರಾಟದಲ್ಲಿ ನಮ್ಮ ಪ್ರಾಣ ಉಳಿಸಲು ಹೋರಾಡುತ್ತಾ ತನ್ನ ಬದುಕು ಪಣಕ್ಕಿಟ್ಟಂತೆ ಕೆಲಸ ಮಾಡುವ ವ್ಯಕ್ತಿಗಳು ಇದ್ದರೆ ಅದು ಯೋಧ ಹಾಗೂ ವೈದ್ಯ ಮಾತ್ರ. ಸೇನೆಯಲ್ಲಿ ಯೋಧರು ನಮ್ಮ ಪ್ರಾಣವನ್ನು ಉಳಿಸಲು ಅವರ ಜೀವವನ್ನು ಪಣಕ್ಕೆ ಇಡುತ್ತಾರೆ. ವೈದ್ಯರು ಆಸ್ಪತ್ರೆಗಳಲ್ಲಿ ನಮ್ಮ ಪ್ರಾಣ ಉಳಿಸಲು ಅವರ ಜೀವ ಪಣಕ್ಕಿಡುವ ಪರಿಸ್ಥಿತಿ ಉದ್ಭವವಾಗಿದೆ. ಯಾಕೆಂದರೆ ಆಪರೇಶನ್ ಥಿಯೇಟರ್ ಹೊರಗೆ ತಾನು ಸುರಕ್ಷಿತವಾಗಿ ಕಾಲಿಟ್ಟು ಮನೆ ಸೇರಬೇಕಾದರೆ ಈ ರೋಗಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕು ಎನ್ನುವ ಒತ್ತಡ ವೈದ್ಯರ ಎದುರಿಗೆ ಇದೆ. ಅಂತಹ ಒತ್ತಡ ಇದ್ದಾಗ ಯಾವ ವೈದ್ಯ ತಾನೆ ಫ್ರೀ ಮೈಂಡ್ ನಲ್ಲಿ ಸೇವೆ ನೀಡಬಲ್ಲ. ನಮ್ಮ ದೇಶದಲ್ಲಿ ದ್ವಿಚಕ್ರ ವಾಹನ ಸವಾರರು ರಸ್ತೆ ಹೊಂಡಗಳಲ್ಲಿ ಬಿದ್ದು ಸತ್ತಂತಹ ಅನೇಕ ಉದಾಹರಣೆಗಳು ಇವೆ. ಹಾಗಂತ ಯಾವ ಮೃತನ ಕುಟುಂಬದವನು ಹೋಗಿ ಕಳಪೆ ರಸ್ತೆ ಮಾಡಿದ ಗುತ್ತಿಗೆದಾರನಿಗೆ ಹಲ್ಲೆ ಮಾಡಿದ ಉದಾಹರಣೆ ಇಲ್ಲ ಅಂದರೆ ಗುತ್ತಿಗೆದಾರನಿಗೆ ಹೊಡೆಯಬೇಕು ಎನ್ನುವ ಉದ್ದೇಶ ಅಲ್ಲ. ಆದರೆ ಅದೇ ಹೊಂಡಗುಂಡಿಗಳಲ್ಲಿ ಬಿದ್ದ ಬೈಕ್ ಸವಾರನನ್ನು ಆಸ್ಪತ್ರೆಯಲ್ಲಿ ಉಳಿಸಲು ಒದ್ದಾಡುವ ವೈದ್ಯನನ್ನು ನೀವು ಹೊಡೆಯುತ್ತಿರಲ್ಲ, ಇದು ನ್ಯಾಯವೇ ಎಂದು ಈಗ ಕಾಣುತ್ತಿರುವ ಪ್ರಶ್ನೆ. ಇನ್ನು ಎಷ್ಟೋ ಬಾರಿ ಸಹಾಯಕ ವೈದ್ಯರು ದುಷ್ಕರ್ಮಿಗಳ ಹೊಡೆತಕ್ಕೆ ಸಿಕ್ಕಿಬೀಳುವುದು ಜಾಸ್ತಿ.
ಪಶ್ಚಿಮ ಬಂಗಾಳದಲ್ಲಿ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಮಲಗಿರುವ ಡಾ|ಪರಿಭಾಹ ಮುಖ್ಯೋಪಾಧ್ಯಾಯ ಅವರಿಗೆ ಹೇಗೆ ಹೊಡೆದಿದ್ದಾರೆ ಎಂದರೆ ಸ್ಕಲ್ ಫ್ರಾಕ್ಚರ್ ಆಗಿದೆ. ಅವರಿಗೆ ಇಟ್ಟಿಗೆ, ಕಲ್ಲು ಸಿಕ್ಕಿದ ವಸ್ತುವಿನಿಂದ ಹೊಡೆಯಲಾಗಿತ್ತು. ಅವರು ಸಹಾಯಕ ವೈದ್ಯರಾಗಿದ್ದರು. ಇನ್ನು 2017 ಮಾರ್ಚ್ ನಲ್ಲಿ ಡ್ಯೂಟಿ ವೈದ್ಯರು ಸಿಗಲಿಲ್ಲ ಎನ್ನುವ ಕಾರಣಕ್ಕೆ ಡಾ|ರೋಹನ್ ಮಮ್ಮುನಕಾರ್ ಎನ್ನುವವರಿಗೆ ದುಲೆ ಸರಕಾರಿ ಆಸ್ಪತ್ರೆಯಲ್ಲಿ ಹೊಡೆದ ದುರುಳರ ತಂಡ ಯಾವ ರೀತಿಯಲ್ಲಿ ಹೊಡೆದ್ರು ಎಂದರೆ ಆ ವೈದ್ಯರ ಒಂದು ಕಣ್ಣು ಇವತ್ತಿಗೂ ಮಂಜುಮಂಜಾಗಿದೆ. ಇಂತಹ ಅಸಂಖ್ಯಾತ ಉದಾಹರಣೆಗಳು ಇವೆ. ಹೀಗೆ ನಿರಂತರವಾಗಿ ವೈದ್ಯರ ಮೇಲೆ ಹಲ್ಲೆಗಳಾದರೆ ಏನಾಗುತ್ತದೆ. ಮುಂದೊಂದು ದಿನ ವೈದ್ಯಕೀಯ ವೃತ್ತಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಸುಮ್ಮನೆ ಕೋಟಿ ಖರ್ಚು ಮಾಡಿ ನಂತರ ಪೆಟ್ಟು ತಿನ್ನುವ ವೃತ್ತಿ ಯಾಕೆ ಎಂದು ಹೆಚ್ಚಿನವರು ನಿರ್ಧರಿಸುತ್ತಾರೆ. ಅಷ್ಟಕ್ಕೂ ವೈದ್ಯರಾಗಲೇಬೇಕೆಂದು ಹಟ ಹಿಡಿದು ಕಲಿತು ಉನ್ನತ ವ್ಯಾಸಂಗ ಮಾಡಿದವರು ವಿದೇಶಕ್ಕೆ ಹೋಗುತ್ತಾರೆ. ಇದು ಪ್ರತಿಭಾ ಪಲಾಯನಕ್ಕೆ ಕಾರಣವಾಗುತ್ತದೆ.
ಹೀಗೆ ಹಲ್ಲೆಗಳು ಹೆಚ್ಚಾಗುತ್ತಾ ಹೋದರೆ ಎಮರ್ಜೆನ್ಸಿ ಸಮಯದಲ್ಲಿ ಗಾಯಾಳು ಅಥವಾ ರೋಗಿಯನ್ನು ದಾಖಲು ಮಾಡಿಕೊಳ್ಳಲು ಯಾವ ವೈದ್ಯ ಅಥವಾ ಆಸ್ಪತ್ರೆ ಮುಂದಾಗುವುದಿಲ್ಲ. ಮುಂದೊಂದು ದಿನ ಇಂತಹ ಪರಿಸ್ಥಿತಿ ಬಂದಾಗ ಯಾವುದೇ ಆಸ್ಪತ್ರೆಯವರು ದಾಖಲಾತಿ ಮಾಡದಿದ್ದರೆ ಆಗ ಕೆಲವು ಕೆಟ್ಟ ಹಲ್ಲೆಕೋರರಿಂದ ಸಜ್ಜನ ರೋಗಿಗಳಿಗೂ ಅನ್ಯಾಯವಾದಂತೆ ಆಗುವುದಿಲ್ಲವೇ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆಗಾಗಿ ತುರ್ತು ಸಂದರ್ಭದಲ್ಲಿ ಆಗಮಿಸುವ ಗರ್ಭೀಣಿಯರನ್ನು ಸೇರಿಸಿಕೊಳ್ಳಲು ಸರಕಾರಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ನೀವು ನಗರ ಆಸ್ಪತ್ರೆಗೆ ಹೋಗಿ ಎನ್ನುತ್ತೀವೆ. ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಅತ್ತ ಸಂಬಳ, ಸೌಲಭ್ಯವೂ ಕಡಿಮೆ, ಮತ್ತೊಂದೆಡೆ ಸರಿಯಾದ ವೈದ್ಯಕೀಯ ಸೌಲಭ್ಯವು ಇಲ್ಲದೆ ರೋಗಿಗಳಿಗೆ ಚಿಕಿತ್ಸೆಯೂ ಸರಿಯಾಗಿ ಕೊಡಲು ಆಗದೇ ಹತಾಶೆಯ ಪರಿಸ್ಥಿತಿ ಮತ್ತೊಂದೆಡೆ.
ಅಂತಿಮವಾಗಿ ಹೇಳುವುದೇನೆಂದರೆ ವೈದ್ಯಲೋಕ ಅವನತಿಯ ಕ್ಷೇತ್ರವಾಗಬಾರದು ಎಂದಾದರೆ ಸರಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಹೇಗೆ ಸರಕಾರಿ ಸೇವೆಯಲ್ಲಿರುವ ಪೊಲೀಸರನ್ನು, ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು ಕರ್ತವ್ಯ ನಿರ್ವಹಿಸಲು ಅಡ್ಡಿ ಎಂದು ಕಠಿಣಕ್ರಮ ಇರುವಂತೆ ಇಲ್ಲಿ ಕೂಡ ವೈದ್ಯರು ಪವಿತ್ರವಾದ ಜವಾಬ್ದಾರಿಯಲ್ಲಿರುತ್ತಾರೆ. ಅವರ ಮೇಲೆ ಹಲ್ಲೆ ಮಾಡುವುದು ಸರಿಯಾ? ಕನಿಷ್ಟ ಏಳು ವರ್ಷಗಳ ಶಿಕ್ಷೆಯನ್ನು ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ವಿಧಿಸಿದರೆ ಆಗ ಇಂತಹ ಪ್ರಕರಣಗಳಲ್ಲಿ ಜಾಮೀನು ಸಿಗುವುದು ಕೂಡ ನಿಲ್ಲುತ್ತದೆ. ಈಗ ಪೆಟ್ಟು ತಿಂದ ವೈದ್ಯ ಆಸ್ಪತ್ರೆಗೆ, ಹೊಡೆದವ ಹೊರಗೆ ಎನ್ನುವ ವಾತಾವರಣ ಇರುವುದರಿಂದ ಹಲ್ಲೆ ಮಾಡುವವರಿಗೆ ಹೆದರಿಕೆ ಇಲ್ಲದ ವಾತಾವರಣ ಸೃಷ್ಟಿಯಾಗಿದೆ. ಇನ್ನು ವೈದ್ಯರು ಸಾಮಾನ್ಯವಾಗಿ ಮೃದುಜೀವಿಗಳು. ಅವರು ಹೊಡೆದರೆ ಪೆಟ್ಟು ತಿನ್ನುತ್ತಾರೆ ವಿನ: ತಿರುಗಿ ಬೀಳಲ್ಲ ಎಂದು ಹಲ್ಲೆಗೆ ಇಳಿಯುವವರಿಗೆ ಗೊತ್ತಿದೆ. ಒಟ್ಟಿನಲ್ಲಿ ತನ್ನ ವೃತ್ತಿ, ಜೀವನವನ್ನು ರಿಸ್ಕಿಗೆ ಒಡ್ಡಿ ಬೇರೆಯವರ ಪ್ರಾಣ ಉಳಿಸುವ ಥ್ಯಾಂಕ್ ಲೆಸ್ ಜಾಬಿಗೆ ಬರುವುದೇ ಬೇಡಾ ಎಂದು ಹೆಚ್ಚಿನ ಪ್ರತಿಭಾವಂತ ಯುವಕ, ಯುವತಿಯರಿಗೆ ಅನಿಸಿದರೆ ಏನಾಗಬಹುದು. ಒಟ್ಟಿನಲ್ಲಿ ವೈದ್ಯರ ಕೊರತೆ ಎನ್ನುವ ವಾಸ್ತವವನ್ನು ಕೊರೊನಾ ತೋರಿಸಿಕೊಟ್ಟಿದೆ. ಉಳಿದದ್ದು ಸರಕಾರಕ್ಕೆ ಬಿಟ್ಟಿದ್ದು!
Leave A Reply