ಸಿಎಂ ಬದಲಾವಣೆ ಎನ್ನುವ ವದಂತಿ ನಿಲ್ಲುವುದು ಯಾವಾಗ?
ದೇಶದಲ್ಲಿ ಅತ್ಯಂತ ಬಲಿಷ್ಟ ಹೈಕಮಾಂಡ್ ಎನ್ನುವುದು ಇತ್ತು ಎನ್ನುವುದಾದರೆ ಅದು ಎಪ್ಪತ್ತರ ದಶಕದಲ್ಲಿ ಇಂದಿರಾಗಾಂಧಿಯವರದ್ದು. ಅದರ ನಂತರ ಯಾರಾದರೂ ಸ್ಟ್ರಾಂಗ್ ಹೈಕಮಾಂಡ್ ಎನ್ನುವುದನ್ನು ನೋಡಿದ್ದಿರಿ ಎಂದರೆ ಅದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರದ್ದು. ಮೋದಿ-ಶಾ ಎದುರು ಯಾವುದೇ ರಾಜ್ಯದ ಯಾವುದೇ ಭಾರತೀಯ ಜನತಾ ಪಾರ್ಟಿಯ ಶಾಸಕರ, ಸಂಸದರ ಯಾವುದೂ ನಡೆಯುವುದಿಲ್ಲ ಎನ್ನುವುದು ನಿರ್ವಿವಾದ ಸಂಗತಿ. ಆದರೆ ಯಾಕೋ ಕರ್ನಾಟಕದ ವಿಷಯ ಬಂದಾಗ ಇದು ಯಾಕೆ ಇಲ್ಲಿ ಅನ್ವಯವಾಗಿಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಕಳೆದ ಎರಡು ವರ್ಷಗಳಿಂದ ಇವತ್ತಿನವರೆಗೂ ಮತ್ತು ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವ ತನಕವೂ ಸಿಎಂ ಬದಲಾಗುತ್ತಾರಂತೆ ಎಂಬ ವಾಕ್ಯ ವಿಧಾನಸಭೆಯ ಕಾರಿಡಾರ್ ನಲ್ಲಿ ಪ್ರತಿಧ್ವನಿಸುತ್ತಾ ಇರುತ್ತದೆ. ಅದನ್ನು ಮೊದಲ ಬಾರಿಗೆ ಯಾರು ಹೇಳಿದ್ದರೋ ಗೊತ್ತಿಲ್ಲ, ಆದರೆ ಒಮ್ಮೆ ಶುರುವಾದ ಪ್ರತಿಧ್ವನಿ ಇಂದಿನವರೆಗೂ ನಿಂತಿಲ್ಲ.
ಹಾಗಾದರೆ ಅದನ್ನು ನಿಲ್ಲಿಸುವ ಸಾಮರ್ತ್ಯ ಬಿಜೆಪಿಯ ಹೈಕಮಾಂಡಿಗೆ ಇಲ್ವಾ? ಇದೆ, ಖಂಡಿತ ಇದೆ. ಆದರೆ ನಿಲ್ಲಿಸುವ ಮನಸ್ಸು ಮಾತ್ರ ದೆಹಲಿಯಿಂದ ಯಾರೂ ಮಾಡುತ್ತಾ ಇಲ್ಲವೇನೋ ಎಂದು ರಾಜ್ಯದ ಪ್ರತಿ ಭಾಜಪಾ ಕಾರ್ಯಕರ್ತನಿಗೂ ಅನಿಸುತ್ತದೆ. ಹಾಗಾದರೆ ಯಡ್ಡಿ ಬಗ್ಗೆ ಬಿಜೆಪಿ ಹೈಕಮಾಂಡಿಗೂ ಅತ್ಯಂತ ಒಳ್ಳೆಯ ಅಭಿಪ್ರಾಯ ಇಲ್ವಾ? ಎನ್ನುವ ಪ್ರಶ್ನೆ ಮೂಡುತ್ತದೆ. ಇಲ್ಲದೇ ಹೋದರೆ ಬಸವನಗೌಡ ಯತ್ನಾಲ್ ಅಷ್ಟು ದಿನಗಳಿಂದ ಯಡ್ಡಿ ಮೇಲೆ ಮುರಕೊಂಡು ಬಿದ್ದಿದ್ದರೂ ಅವರ ವಿರುದ್ಧ ಯಾಕೆ ಯಾವುದೇ ಕ್ರಮವನ್ನು ಉನ್ನತ ನಾಯಕರು ಮಾಡುತ್ತಿಲ್ಲ. ಅವರನ್ನು ಹಾಗೆ ಮಾತನಾಡಲು ಬಿಟ್ಟಿದ್ಯಾಕೆ? ಅವರು ಹಾಗೆ ಮಾತನಾಡುವುದರಿಂದ ಬಿಜೆಪಿ ಬಗ್ಗೆ ಜನರಿಗೆ ಅಸಹ್ಯ ಉಂಟಾಗುವುದಿಲ್ಲವೇ? ಇನ್ನು ಒಂದು ಕಾಲದ ಯಡ್ಡಿ ಪರಮನಿಷ್ಟ ಯತ್ನಾಳ್ ಹಾಗೆ ಮಾತನಾಡುತ್ತಾರೆ ಎನ್ನುವುದೇ ಆಶ್ಚರ್ಯಕರ ಸಂಗತಿ. ಹಿಂದಿನ ಬಾರಿ ಪಕ್ಷದಿಂದ ಅಮಾನತುಗೊಂಡಿದ್ದ ಯತ್ನಾಳ್ ಬಿಜೆಪಿ ಅಭ್ಯರ್ಥಿಯ ವಿರುದ್ಧವೇ ನಿಂತು ವಿಧಾನಪರಿಷತ್ ಸ್ಥಾನವನ್ನು ಗೆದ್ದಿದ್ದರು. ಅವರನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡು ಬಂದದ್ದೇ ಈ ಯಡ್ಯೂರಪ್ಪ. ಕೇಂದ್ರ ಸಚಿವರೂ ಆಗಿದ್ದ ಯತ್ನಾಳ್ ಬಿಜೆಪಿಯ ನಿಷ್ಟಾವಂತ ನಾಯಕ. ಅವರು ಯಡ್ಡಿ ವೈಫಲ್ಯವನ್ನು ಬಹಿರಂಗವಾಗಿ ಪಟ್ಟಿ ಮಾಡುತ್ತಾರೆ. ಇನ್ನು ಶಾಸಕ ಬೆಲ್ಲದ, ಅವರ ತಂದೆ ಒಂದು ಕಾಲದಲ್ಲಿ ಯಡ್ಡಿಗಾಗಿ ರಾಜಕೀಯ ಜೀವನದ ಅನೇಕ ತ್ಯಾಗಗಳನ್ನು ಮಾಡಿದವರು. ಅಂತಹ ಕುಟುಂಬದ ಬೆಲ್ಲದ ಯಾಕೆ ಯಡ್ಡಿ ವಿರುದ್ಧ ಮಾತನಾಡುತ್ತಾರೆ. ಅವರಿಗೆ ಹೇಗೆ ದೆಹಲಿಯ ಹೈಕಮಾಂಡಿನ ನಾಯಕರು ಕರೆದು ಮಾತನಾಡಿಸುತ್ತಾರೆ. ಯೋಗೀಶ್ವರ್ ಯಾಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹೋಗಲಿ, ಕೊನೆಗೆ ಈಶ್ವರಪ್ಪ ಕೂಡ ರಾಜ್ಯಪಾಲರಿಗೆ ದೂರು ಕೊಟ್ಟರಲ್ಲ, ಅದು ಏನನ್ನು ಸೂಚಿಸುತ್ತದೆ. ಎಲ್ಲಿ, ಯಡ್ಡಿ ವೈಫಲ್ಯ ಕಾಣುತ್ತಿದ್ದಾರೆ? ಒಂದು ಕಾಲದಲ್ಲಿ ರಾಜ್ಯದ ಅತ್ಯಂತ ಬಲಿಷ್ಟ ವಿಪಕ್ಷ ನಾಯಕ ಎಂದು ಯಾರಾದರೂ ಇದ್ದಿದ್ದರೆ ಅದು ಯಡ್ಡಿಯೇ ಆಗಿದ್ದರು. ಯಡ್ಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಸುಮ್ಮನೆ ಹುಟ್ಟಿದ ಮಾತಲ್ಲ. ಯಡ್ಡಿ ಹಾಗೆ ಇದ್ದರು. ಆದರೆ ಮೂರು ಬಾರಿ ಸಿಎಂ ಆದ ಯಡ್ಡಿ, ಧೀರ್ಘ ಕಾಲ ವಿಪಕ್ಷ ನಾಯಕರಾಗಿದ್ದ ಯಡ್ಡಿ, ಸಂಸದರೂ ಆಗಿದ್ದ ಯಡ್ಡಿಯವರ ಹೆಸರು ಇತ್ತೀಚಿನ ವರ್ಷಗಳಲ್ಲಿ ಯಾಕೆ ಈ ಪರಿ ಹಳ್ಳ ಹಿಡಿಯಲು ಶುರುವಾಯಿತು. ಅವರು ಕಳೆದ ಬಾರಿ ಸಿಎಂ ಆದಾಗಲೂ ಅವರಿಗೆ ಭರ್ತಿ ಐದು ವರ್ಷ ಆ ಸ್ಥಾನದಲ್ಲಿ ಇರಲು ಸಾಧ್ಯವಾಗಿಲ್ಲ. ಒಂದಿಷ್ಟು ಸ್ವಯಂಕೃತ ಅಪರಾಧಗಳು ಮತ್ತು ಆಗ ಬಲಿಷ್ಟವಾಗಿದ್ದ ಲೋಕಾಯುಕ್ತದಿಂದ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ನಂತರ ಆ ಸ್ಥಾನಕ್ಕೆ ಏರಿದ್ದ ಡಿವಿ ಹಾಗೂ ಶೆಟ್ಟರ್ ಕೇವಲ ಟೈಂಪಾಸ್ ವಿನ: ಬೇರೆನೂ ಮಾಡಿರಲಿಲ್ಲ.
ಈಗ ಯಡ್ಡಿಯವರನ್ನು ಇಳಿಸಿದರೆ ಮುಂದಿರುವ ಇಪ್ಪತ್ತು ತಿಂಗಳು ಯಾರು ಸಿಎಂ ಆಗುತ್ತಾರೆ ಎನ್ನುವುದರ ಮೇಲೆ ಬಿಜೆಪಿ 2023ರಂದು ಮತ್ತೆ ಅಧಿಕಾರ ಹಿಡಿಯುತ್ತಾ ಅಥವಾ ಕಳೆದುಕೊಳ್ಳುತ್ತಾ ಎನ್ನುವುದು ನಿರ್ಣಯವಾಗುತ್ತೆ. ಯಡ್ಡಿಯನ್ನು ಹೀಗೆ ಮುಂದುವರೆಸಿಕೊಂಡು ಹೋದರೆ ಅವರ ನಾಯಕತ್ವದಲ್ಲಿ ಬಹುಮತ ಬರುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಆಗ ಯಡ್ಡಿಜಿಯವರಿಗೆ 80 ವರ್ಷ ತುಂಬಿರುತ್ತದೆ. ಅವರು ರಾಜ್ಯದಲ್ಲಿ ಎಷ್ಟು ಪ್ರಬಲ ನಾಯಕನಾದರೂ ದೇಹ ಅದಕ್ಕೆ ಒಪ್ಪಬೇಕಲ್ಲ. ಆ ಸಂದರ್ಭದಲ್ಲಿ ಕೊನೆಯ ಘಳಿಗೆಯಲ್ಲಿ ಹೊಸ ಮುಖವನ್ನು ತಂದು ಕೂರಿಸಿ ಅವರು ಚುಕ್ಕಾಣಿ ಹಿಡಿಯುವ ತನಕ ಕಾಂಗ್ರೆಸ್ಸಿನ ಡಿಕೆಶಿ, ಸಿದ್ಧು ಸುಮ್ಮನೆ ಕಡ್ಲೆಕಾಯಿ ತಿನ್ನುತ್ತಾ ಕೂರುವುದಿಲ್ಲ. ಈ ಹರಿತವಾದ ಹಲಗಿನ ಮುಂದೆ ದೆಹಲಿಯ ಹೈಕಮಾಂಡ್ ನಿಂತಿದೆ. ಯಡ್ಡಿ ಬೇಷರತ್ತಾಗಿ ಇಳಿದು ಹೊಸಬರಿಗೆ ಮಾರ್ಗದರ್ಶನ ನೀಡುತ್ತಾ, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಇದ್ದರೆ ಅದು ಅವರಿಗೂ ಒಳ್ಳೆಯದು. ಆದರೆ ಗವರ್ನರ್ ಮಾಡಿ, ಮಗನಿಗೆ ಡಿಸಿಎಂ ಮಾಡಿ ಎನ್ನುವುದು ಅಧಿಕಾರದಾಹ ಅನಿಸದೇ ಇರುವುದಿಲ್ಲ. ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಒಬ್ಬ ಮಗ ಸಂಸದ, ಇನ್ನೊಬ್ಬ ಮಗ ಸ್ವಸಾಮರ್ಥ್ಯದಿಂದ ಡಿಸಿಎಂ ಆದರೂ ಆಗಬಹುದು. ಆದರೆ ಯಡ್ಡಿ ತಮ್ಮ ಇಳಿವಯಸ್ಸಿನಲ್ಲಿ ದೇವೆಗೌಡರ ಕುಟುಂಬದಂತೆ, ಸೋನಿಯಾ ಕುಟುಂಬದಂತೆ ಅಧಿಕಾರ ಕುಟುಂಬದಲ್ಲಿಯೇ ಇರಬೇಕು ಎಂದು ಬಯಸದೇ ಹೋದರೆ ಮುಂದಿನ ತಲೆಮಾರಿಗೆ ಅವರು ಸೂಕ್ತ ಮಾದರಿ ಹಾಕಿಕೊಟ್ಟಂತೆ ಆಗುತ್ತದೆ. ಅದು ಬಿಟ್ಟು ಅಲ್ಲಿ ಮೋದಿ ತಾವೇ ಕೊಡೆ ಹಿಡಿದು ಪತ್ರಿಕಾಗೋಷ್ಟಿ ಮಾಡಿ ಬೇಷ್ ಎಂದು ಯುವಕರಲ್ಲಿ ಅನಿಸಿಕೊಳ್ಳುತ್ತಾ ಇದ್ದರೆ ಇತ್ತ ಯಡ್ಡಿ ತಮ್ಮ ಮುಂದಿನ ಉತ್ತರಾಧಿ ತಮ್ಮದೇ ಕುಟುಂಬದವರು ಆಗಲಿ ಎಂದು ಬಯಸುತ್ತಿರುವುದು ಒಂದೇ ಪಕ್ಷದಲ್ಲಿರುವ ಇಬ್ಬರು ನಾಯಕರ ಸ್ವಭಾವ ಎಷ್ಟು ವಿಭಿನ್ನವಾಗಿದೆ ಎಂದು ತೋರಿಸುತ್ತಿದೆ ಅಲ್ವಾ !!
Leave A Reply